ಫ.ಗು.ಹಳಕಟ್ಟಿ ಎಂಬ ನಿಜ ಶರಣರು
(೧೮೮೦-೧೯೬೪)
ಫ.ಗು.ಹಳಕಟ್ಟಿ ಅವರ ಹೆಸರನ್ನು ಕನ್ನಡ ನಾಡಿನಲ್ಲಿ ಕೇಳದವರು ಇರಲಿಕ್ಕಿಲ್ಲ. ಆದರೆ ಅವರು ಬದುಕಿದ ರೀತಿ ಮಾಡಿದ ಸಾಧನೆ ನೆನೆದರೆ ಮೈ ಜುಂ ಎನ್ನುತ್ತದೆ. ಲೋಕದ ಉದ್ದರಕ್ಕಾಗಿ ಆಗಾಗ ಶರಣರು, ಸಂತರು, ಜ್ಞಾನಿಗಳು ಭೂಲೋಕದಲ್ಲಿ ಜನ್ಮ ತಾಳುತ್ತಾರೆ.
ಅಂತವರ ಸಾಲಿನಲ್ಲಿ ನಿಲ್ಲುವವರು ಫ.ಗು.ಹಳಕಟ್ಟಿ ಅವರು.
ಫ.ಗು.ಹಳಕಟ್ಟಿಯವರು 2ನೇ ಜುಲೈ,1880ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ “ವಾಗ್ಭೂಷಣ”ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.
ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.
೧೯೦೧ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು ೧೯೦೪ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಅಲ್ಲಿನ ತಂಪು ವಾತವರಣ ಇವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಕೆಲವು ತಿಂಗಳುಗಳಲ್ಲೇ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ವಿಜಯಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು.ಅದೇ ವರ್ಷ ಅವರ ದಕ್ಷ ವಕೀಲಿ ವೃತ್ತಿ ನೆನೆದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೇಡರರೆಂದು ನೇಮಿಸಿತು. ಅವರು ಅಧ್ಯಯನದಲ್ಲಿ ಎಂ.ಎ. ಮಾಡಿದ್ದರೂ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಹೊತ್ತಿಗೆ ಕರ್ನಾಟಕದ ಕೃಷಿಕ-ಉದ್ದಾರದ ವೀರಶೈವ ತತ್ವಾರಾಧಕ ದಾನಿಗಳೆನಿಸಿದ ಸಿರಸಂಗಿ ಲಿಂಗರಾಜರು ವೀರಶೈವ ಮಹಾಸಭಾದ ಅಧಿವೇಶನದ ಅಧ್ಯಕ್ಷರಾದರು. ಅವರ ವಿಚಾರ ಧಾರೆ ಕೇಳಿ, ಫಕ್ಕೀರಪ್ಪನವರ ಮನಸ್ಸು ಸಾಕಷ್ಟು ಗಟ್ಟಿಗೊಂಡಿತು.
ಕಷ್ಟ ಮತ್ತು ಸಾವುಗಳು ಹಳಕಟ್ಟಿಯವರಿಗೆ ಬೆನ್ನಿಗಂಟಿದ್ದವು. ಬಾಲ್ಯದಲ್ಲಿ ೩ ವರ್ಷದವರಾಗಿದ್ದಾಗಲೇ ತಾಯಿ ಯನ್ನು ಕಳೆದುಕೊಂಡರು. ಇವರಿಗೆ 3 ಜನ ಸೋಹದರರು, 3 ಜನ ಸಹೋದರಿಯರು ಅವರೆಲ್ಲರೂ ಇವರ ಕಣ್ಣು ಮುಂದರೆಯೇ ಮರಣ ವಾದರು.
ಹಳಕಟ್ಟಿಯವರು ಸುಖ ಜೀವನ ಮಾಡಲಿಲ್ಲ.ಹೊಟ್ಟೆ ತುಂಬ ಹುಣ್ಣಲಿಲ್ಲ. ಸಾವು- ಬಡತನ- ರೋಗ ಇವುಗಳನ್ನು ಮೆಟ್ಟಿನಿಂತ ಮಹಾಪುರುಷ.
ಹಳಕಟ್ಟಿ ಯವರು ಮನಸ್ಸು ಮಾಡಿದ್ದರೆ ತಮ್ಮ ವಕೀಲ ವೃತ್ತಿಯಿಂದ ಕೋಟ್ಯಾಧೀಶರಾಗಬಹುದಿತ್ತು. ಕಾರು ಬಂಗಲೆಗಳ ಸರದಾರನಾಗ ಬೇಕಿತ್ತು. ಆದರೆ ಹಳಕಟ್ಟಿಯವರು ಹಣದ ಆಸೆಗೆ ಬಲಿಯಾಗಲಿಲ್ಲ. ತಮ್ಮ ಉಸಿರು ಇರುವವರೆಗೂ ವಚನ ಸಾಹಿತ್ಯದ ಉಳಿವು, ಅವುಗಳ ಸಂಗ್ರಹ, ಮುದ್ರಣ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಗಂಧದಂತೆ ಸವೆಸಿದರು.
ಅಕ್ಷರಶಃ ವಿಜಯಪುರ ಜಿಲ್ಲೆಗೆ ಬರಗಾಲ ಶಾಪದಂತೆ ಇಲ್ಲಿನ ಜನರ ಬದುಕನ್ನು ಮುರಾಬಟ್ಟೆ ಮಾಡಿತ್ತು. ವಿಜಯಪುರದ ತ್ರಿವರ್ಣ ರತ್ನಗಳೆಂದರೆ ಫ.ಗು.ಹಳಕಟ್ಟಿ, ಹರ್ಡೆಕರ ಮಂಜಪ್ಪ ಮತ್ತು ಬಂಥನಾಳ ಶಿವಯೋಗಿಗಳು.೧೮೮೬ ರಲ್ಲಿ ಧಾರವಾಡದಿಂದ ಫ.ಗು.ಹಳಕಟ್ಟಿಯವರು, ಬನವಾಸಿಯಿಂದ ಹರ್ಡೆಕರ ಮಂಜಪ್ಪನವರು ವಿಜಯಪುರಕ್ಕೆ ಬಂದರು.
ಫ.ಗು.ಹಳಕಟ್ಟಿಯವರು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಓದಿದ್ದರು. ನಂತರ ಎಲ್.ಎಲ್.ಬಿ ಮಾಡಿ ವಕೀಲರಾದರು. ಉಪ ಜೀವನಕ್ಕಾಗಿ ವಕೀಲರಾಗಿದ್ದರು ಅವರ ಜೀವ ಮಿಡಿಯುತ್ತಿದುದ್ದು ವಚನ ಶಾಸ್ತ್ರದ ಮೇಲೆ.
೧೯೦೧ ರಿಂದ ಶರಣ ಧರ್ಮದ ಆಸಕ್ತಿ ಇತ್ತು. ಇಂದಿನ ಬಾಗಲಕೋಟೆ ಜಿಲ್ಲೆಯ ಗೋಟೆ ಗ್ರಾಮ ಎಂಬ ಸಣ್ಣ ಹಳ್ಳಿಯಲ್ಲಿ ವಚನ ಶಾಸ್ತ್ರದ ಕಟ್ಟು ಫ.ಗು.ಹಳಕಟ್ಟಿಯವರ ಕಣ್ಣಿಗೆ ಬಿತ್ತು. ಅಂದಿನಿಂದ ತಮ್ಮ ಜೀವಿತದ ಕೊನೆಯವರೆಗೂ ವಚನ ಕಟ್ಟುಗಳ ಸಂಗ್ರಹ, ಅವುಗಳಿಗೆ ಟೀಕು ಅರ್ಥ ಬರೆಯುವದು. ಪ್ರಕಟಿಸುವ ಕಾರ್ಯವನ್ನು ತಪ್ಪಸ್ಸಿನಂತೆ ಮಾಡಿದರು.
೧೯೨೧ ರಲ್ಲಿ ತಾವು ಸಂಗ್ರಹಿಸಿದ್ದ ವಚನ ಶಾಸ್ತ್ರದ ಕುರಿತು ಪುಸ್ತಕ ಮುದ್ರಿಸಲು ಮಂಗಳೂರಿನ ಜರ್ಮನ್ ಮೂಲದ ಕ್ರೈಸ್ತ ಮಶನರಿ ಸಂಸ್ಥೆಗೆ ಕಳಿಸಿದರು. ಅಲ್ಲಿನ ಪಾದ್ರಿಗಳು ಈ ಪುಸ್ತಕ ಓದಿ ಮುದ್ರಿಸದೆ ೬ ತಿಂಗಳು ತಮ್ಮ ಬಳಿ ಇಟ್ಟುಕೊಂಡು ಹಳಕಟ್ಟಿ ಅವರಿಗೆ ಹಸ್ತಪ್ರತಿಯೊಂದಿಗೆ ೫೦೦ ರೂ. ವಾಪಸ್ಸು ಕಳಿಸಿ ಮುದ್ರಿಸಲು ಸಾಧ್ಯವಾಗುವುದಿಲ್ಲ. ಇದು ಮುದ್ರಣವಾದರೆ ನಮ್ಮ ಕ್ರೈಸ್ತ ಧರ್ಮ ಬೆಳೆಯುವುದಿಲ್ಲ ಎಂದು ಕೈ ಚಲ್ಲುತ್ತಾರೆ.
ನಂತರ ಬೆಳಗಾವಿಯಲ್ಲಿರುವ ಚೌಗಲೇ ಪ್ರಿಂಟಿಂಗ್ ಪ್ರೇಸ್ ನಲ್ಲಿ ಮುದ್ರಿಸಿ ಪ್ರಚಾರ ಮಾಡುತ್ತಾರೆ. ವಚನ ಶಾಸ್ತ್ರದ ಪುಸ್ತಕ ಮುದ್ರಿಸಲು ಇರುವ ತೊಂದರೆ ಅರಿತು ವಿಜಯಪುರದಲ್ಲಿದ್ದ ತಮ್ಮ ಮನೆಯನ್ನು ೧೯೨೫ ರಲ್ಲಿ ಮಾರಿ ವಚನಗಳ ಪುಸ್ತಕಗಳನ್ನು ಮುದ್ರಿಸುವದಕ್ಕಾಗಿ ಮುದ್ರಣ ಯಂತ್ರ ಖರೀದಿಸುತ್ತಾರೆ.
ಹಳಕಟ್ಟಿಯವರು ಮಾಡುತ್ತಿರುವ ಕೆಲಸವನ್ನು ಗಮನಿಸಿದ ಮೈಸುರು ಅರಸರು ಇವರನ್ನು ಕರೆಸಿಕೊಂಡು ನಿಮಗೆ ಏನೂ ಬೇಕು ಕೇಳಿ ಎಂದಾಗ ( ನಾವು-ನೀವಾಗಿದ್ದರೆ ಎನೂ ಕೇಳುತ್ತಿದ್ದೇವು ಉಹಿಸಿಕೊಳ್ಳಿ) ಬೊಗಸೆಯಷ್ಟು ಮುದ್ರಣ ಯಂತ್ರಕ್ಜೆ ಬೇಕಾಗುವ ಅಕ್ಷರದ ಮೊಳೆಗಳನ್ನು ಕೊಡಿಸಿ ಎಂದು ಕೇಳುತ್ತಾರೆ.
೧೯೨೬ ರಲ್ಲಿ ಶಿವಾನುಭವ ಪತ್ರಿಕೆ ವಚನ ಸಾಹಿತ್ಯದ ಪ್ರಚಾರಕ್ಕಾಗಿ ಪತ್ರಿಕೆ ಆರಂಭಿಸಿ ಸತತ೩೫ ವರ್ಷ ಪತ್ರಿಕೆಯನ್ನು ನಡೆಸುವ ಮೂಲಕ ಜೀವಂತವಿಡುತ್ತಾರೆ. ೧೯೨೭ ರಲ್ಲಿ ನವ ಕರ್ನಾಟಕ ಎಂಬ ಇನ್ನೊಂದು ಪತ್ರಿಕೆ ಪ್ರಾರಂಭಿಸಿ ಕರ್ನಾಟಕ ಏಕೀಕರಣಕ್ಕಾಗಿ ಪ್ರಾರಂಭಿಸಿ ೨೫ ವರ್ಷ ಪ್ರಕಟಿಸುತ್ತಾರೆ.
೧೯೧೦ ರಲ್ಲಿ ಮೊದಲ ಬಾರಿಗೆ ವಿಜಯಪುರದ ಅಡತಿ ಅಂಗಡಿಯ ಅಟ್ಟದಲ್ಲಿ ಕುಳಿತು ಕೆಲವರೊಂದಿಗೆ ಚರ್ಚಿಸಿ ಪ್ರಾರಂಭಿಸುತ್ತಾರೆ. ಆದರೆ ಶಾಲೆ ನಡೆಸಲು ಸಾಧ್ಯವಾಗುವುದಿಲ್ಲ. ನಾಲ್ಕು ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಬಿ.ಎಲ್.ಡಿ ಸಂಸ್ಥೆ ಯಿಂದ ಪುರಸ್ಕಾರ ಕೊಡುವ ಕಾರ್ಯಮಾಡಿ ೧೯೧೪ ರಲ್ಲಿ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆರಂಭಿಸುತ್ತಾರೆ. ಅಂದು ೮೫ ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ೮೫ ವಿದ್ಯಾ ಸಂಸ್ಥೆಗಳು ತಲೆ ಎತ್ತಿವೆ. ೪ ಸಾವಿರ ಸಿಬ್ಬಂದಿ, ೩೦ ಸಾವಿರ ವಿದ್ಯಾರ್ಥಿಗಳಿಗಳು ಕಲಿಯುತ್ತಿದ್ದಾರೆ. ಫ.ಗು.ಹಳಕಟ್ಟಿಯವರು ನೆಟ್ಟ ಸಸಿಯ ಫಲ ಹೆಮ್ಮರವಾಗಿ ಬೆಳದಿದೆ. ಫ.ಗು.ಹಳಕಟ್ಟಿಯವರು ಹುಟ್ಟು ಹಾಕಿದ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಲವರ ಬದಕನ್ನೇ ಬಂಗಾರ ಮಾಡಿದೆ.
ಫ.ಗು.ಹಳಕಟ್ಟಿ ಯವರ ಸೋದರ ಮಾವನ ಮಗಳನ್ನು ಮದುವೆಯಾಗಿದ್ದರು. ಇವರ ಹಿರಿಯ ಮಗ ಚಂದ್ರಶೇಖರ ಆ ಕಾಲಕ್ಕೆ ಬಿ.ಟೆಕ್ ಟೆಕ್ಸ್ ಟೈಲ್ ಇಂಜಿನಿಯರಿಂಗ್ ಪದವಿ ಪಡೆದು ವಿದೇಶದಲ್ಲಿ ಅಭ್ಯಾಸ ಮಾಡಿ ಭಾರತಕ್ಕೆ ಬಂದಾಗ ದೆಹಲಿಯಲ್ಲಿ ಮಾತ್ರ ಬಿ.ಟೆಕ್ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವ ಸಂಸ್ಥೆ ಇತ್ತು. ಚಂದ್ರಶೇಖರ ದೆಹಲಿಗೆ ಬಂದು ೯ ದೇಶಗಳ ವಿವಿಧ ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಿದ್ದರು. ಚಂದ್ರಶೇಖರ ತಮ್ಮ ೪೪ ನೇ ವರ್ಷದಲ್ಲಿ ಲಿಂಗದೊಳಗೆ ಬಯಲಾಗುತ್ತಾರೆ. ಹಳಕಟ್ಟಿಯವರಿಗೆ ವಿಷಯಗೊತ್ತಾಗಿ ” ಶಿವನ ಸೊಲ್ಲು ಶಿವನಿಗೆ ಸೇರಿತು” ಎಂದು ಧೃತಿಗೆಡದೆ ಮತ್ತೆ ವಚನ ಪುಸ್ತಕ ಕಾರ್ಯದಲ್ಲಿ ತೊಡುಗುತ್ತಾರೆ. ೩೫೦ ಕ್ಕೂ ಹೆಚ್ಚು ವಚನಕಾರರನ್ನು ಗುರುತಿಸಿ ಅವರ ವಚನಗಳನ್ನು ತಾಳೆಗರಿಯಲ್ಲಿರುದನ್ನೆಲ್ಲ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಮುದ್ರಿಸಿ ವಚನಗಳನ್ನು ಉಳಿಸಿದ ಬಸವಣ್ಣನವರ ಎರಡನೇ ಅವತಾರಿಗಳಾಗಿದ್ದಾರೆ ಫ.ಗು.ಹಳಕಟ್ಟಿಯವರು.
ಫ.ಗು.ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸದಿದ್ದರೆ ಲೋಕಪ್ರೀಯವಾದ ಬದುಕಿನ ಸಾರಕ್ಕೆ ಬೇಕಾದ ವಚನಗಳು ಹಾಳಾಗಿ ಹೋಗುತ್ತಿದ್ದವು. ನೂರಾರು ವಚನಕಾರರು ಬೆಳಕಿಗೆ ಬರುತ್ತಿರಲಿಲ್ಲ.
ಫ.ಗು.ಹಳಕಟ್ಟಿಯವರು ಸ್ಥಾಪಿಸಿದ ಸಂಸ್ಥೆಗಳು
೧೯೧೦ರಲ್ಲಿ ವಿಜಯಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು ೧೯೧೨ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ಮಹತ್ತರ ಪಾತ್ರ ವಹಿಸಿದ್ದರು.
ಮಹತ್ವದ ಘಟನೆಗಳು
ಫ.ಗು.ಹಳಕಟ್ಟಿಯವರದು ಎರಡು ಘಟನೆಗಳನ್ನು ನೋಡಿದರೆ ಸಾಕು ಅವರು ಎಂತಹ ವ್ಯಕ್ತಿ ಎಂದು ಗೊತ್ತಾಗುತ್ತದೆ. ಧಾರವಾಡದಲ್ಲಿ ಫ.ಗು.ಹಳಕಟ್ಟಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಾಧಾನ ಸಮಾರಂಬ. ಇವರಿಗೆ ಪದವಿ ಪ್ರಧಾನವಾದ ನಂತರ ಊಟದ ವ್ಯವಸ್ಥೆ ನಡೆದಿರುತ್ತದೆ. ಉಪಕುಲಪತಿಗಳು ಹಳಕಟ್ಟಿಯವರಿಗೆ ಧರಿಸಿದ್ದ ಕೋಟು ಕಳಚಿ ಊಟಕ್ಕೆ ಬನ್ನಿ ಎಂದು ಭಿನ್ನವಿಸುತ್ತಾರೆ. ಹಳಕಟ್ಟಿಯವರು ಕೋಟು ಧರಿಸಿಕೊಂಡೇ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಉಪಕುಲಪತಿಗಳು ಮತ್ತೆ ಮತ್ತೆ ಕೋಟು ಕಳಚಲು ವಿನಂತಿಸಿದಾಗ ಹಳಕಟ್ಟಿಯವರು ಉಪಕುಲಪತಿಗಳನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಕೋಟು ಕಳಚದಿರುವ ಕಾರಣ ತಿಳಿಸುತ್ತಾರೆ. ಒಳಗಿದ್ದ ಅಂಗಿ ತುತೂಗಳಿಂದ ತುಂಬಿರುತ್ತದೆ. ಆಗ ಹಳಕಟ್ಟಿಯವರು ಹೇಳುತ್ತಾರೆ ನಾನು ಸೆಕೆಯನ್ನಾದರು ತಡೆದುಕೊಳ್ಳಬಲ್ಲೆ. ಅಪಮಾನ ತಡೆದುಕೊಳ್ಳಲಾರೆ ಎಂದು ಕೋಟು ಬಿಚ್ಚದಿರುವ ಕಾರಣ ತಿಳಿಸುತ್ತಾರೆ.
ಇನ್ನೊಂದು ಘಟನೆ
ಹಳಕಟ್ಟಿಯವರ ಬಳಿ ಒಂದು ಸೈಕಲ್ ಇತ್ತು. ಅವರು ಯಾವುದೇ ಊರಿಗೆ ಹೋಗಲಿ ಸೈಕಲ್ ಒಯ್ಯೂತ್ತಿದ್ದರು. ಸೈಕಲ್ ನ್ನು ತಮ್ಮ ಆಸರೆಗೆ ಮತ್ತು ವಚನ ಶಾಸ್ತ್ರದ ಕಟ್ಟುಗಳ ಸಂಗ್ರಹಗಳನ್ನು ಟ್ರಂಕ್ ನಲ್ಲಿ ಇಟ್ಟುಕೊಂಡು ಸೈಕಲ್ ಮೇಲೆ ತರುತ್ತಿದ್ದಾರಗಾಲಿ ಸೈಕಲ್ ಹೊಡೆಯುತ್ತಿರಲಿಲ್ಲ. ಅಂತಹ ಸೈಕಲ್ ಹಳತಾಗಿತ್ತು. ರೀಪೇರಿಗೆ ಬಂದಿತ್ತು. ಕೆಲವರು ಹಣ ಸೇರಿಸಿ ಹೊಸ ಸೈಕಲ್ ಕೊಡಿಸಲು ಹಳಕಟ್ಟಿಯವರಿಗೆ ತಿಳಿಸಿದರು. ಹಳಕಟ್ಟಿಯವರು ಹೇಳಿದರಂತೆ. ನಮ್ಮ ತಾಯಿಗೆ ವಯಸ್ಸಾಗಿದೆ ದೂರ ಇಡಲು ಆಗುತ್ತದಯೇ ? ಎಂದು ಪ್ರಶ್ನಿಸಿದರಂತೆ.
ಹಳಕಟ್ಟಿಯವರು ಕೊನೆಯ ದಿನಗಳಲ್ಲಿ ಅಪರೂಪಕ್ಕೆ ತಮ್ಮ” ಹಿತ ಚಿಂತಕ” ಪ್ರಿಂಟಿಂಗ್ ಪ್ರೆಸ್ ಗೆ ಬಂದು ಅಲ್ಲಿ ಮೇನೆಜರ್ ಕೆಲಸಕ್ಕಿದ್ದ ಕುಲಕರ್ಣಿಯವರನ್ನು ಕೇಳುತ್ತಾರೆ. ಗಲ್ಲಾ ಪೆಟ್ಟಿಗೆಯಲ್ಲಿ ೨೦ ರೂ.ಗಳು ಇವೆಯೇ ಎಂದು. ಆಗ ಕುಲಕರ್ಣಿಯವರು ಹೇಳುತ್ತಾರೆ ಇಲ್ಲ ರಾವ ಬಹುದ್ದರ್ ನಿಮ್ಮ ಮಗ ಗುರುಬಸಪ್ಪ ನಿನ್ನೆ ರಾತ್ರಿ ಹೋಗುವಾಗ ಹಣ ತೆಗೆದುಕೊಂಡು ಹೋಗಿದ್ದಾನೆ ಎಂದು. ಬರಿಗೈಯಲ್ಲಿ ಹಳಕಟ್ಟಿ ಹೋಗುವಾಗ ಕುಲಕರ್ಣಿಯವರು ಕೇಳುತ್ತಾರೆ ಹಣ ಯಾಕೆ ಬೇಕಾಗಿತ್ತು. ಹಳಕಟ್ಟಿಯವರು ಹೇಳುತ್ತಾರೆ ನಿನ್ನೆ ಮಧ್ಯಾಹ್ನ ದಿಂದ ನಾನು ಮತ್ತು ಹೆಂಡತಿ ಊಟ ಮಾಡಿಲ್ಲ. ಬರೀ ನೀರು ಕುಡಿದಿದ್ದೇವೆ. ೨೦ ರೂ ಇದ್ದರೆ ಅಕ್ಕಿ, ಜೋಳ ತಂದು ಅಡುಗೆ ಮಾಡಲು ಸಹಾಯವಾಗುತ್ತಿತ್ತು ಎಂದು ಹೇಳಿ ಹೋಗುತ್ತಾರೆ. ಅಷ್ಟೊಂದು ಬಡತನ ಹಳಕಟ್ಟಿಯವರಿಗೆ. ಅವರು ಹೋದ ನಂತರ ಅಂಚೆ ಇಲಾಖೆಯ ಪೋಸ್ಟ್ ಮನ್ ಬರುತ್ತಾನೆ. ಹಳಕಟ್ಟಿಯವರಿಗೆ ೨೦ ರೂ. ಮನಿ ಆರ್ಡರ್ ಬಂದಿದೆ ಎಂದು ತಿಳಿಸಿದಾಗ ಕುಲಕರ್ಣಿಯವರು ಪೋಸ್ಟ್ ಮನ್ ಗೇ ಬೇಗ ಹೋಗು ಹಳಕಟ್ಟಿಯವರು ಮನೆಗೆ ಹೋರಟಿದ್ದಾರೆ ಎಂದಾಗ ಪೋಸ್ಟ್ ಮನ್ ಹಳಕಟ್ಟಿ ಅವರಿಗೆ ಭೇಟ್ಟಿ ಆಗಿ ಮನಿ ಆರ್ಡರ್ ಹಣ ಕೊಡುತ್ತಾನೆ. ಖುಷಿಯಿಂದ ಕಿರಾಣಿ ಸಾಮಾನು ಒಯ್ದು ಗಂಡ ಹೆಂಡತಿ ಊಟ ಮಾಡುತ್ತಾರೆ.
೧೨ ನೇ ಶತಮಾನ ಬಸವಣ್ಣನವರದು ಆದರೆ, ೨೧ ಶತಮಾನ ಹಳಕಟ್ಟಿಯವರದು.
೧೯೬೪ ಜೂನ್ ೨೯ ರಂದು ಫ.ಗು.ಹಳಕಟ್ಟಿಯವರು ಲಿಂಗೈಕ್ಯರಾದರು.
ಈ ಲೇಖನದ ವಿಚಾರಗಳು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಮಹಾಲಿಂಗಪ್ಪ ಮಾದಬಾವಿ ಅವರ ಉಪನ್ಯಾಸದ ಮಾತುಗಳಿಂದ ಆಯ್ದ ವಿಷಯಗಳಾಗಿವೆ.
ಇಂದು ೬-೬-೨೦೨೧ ಭಾನುವಾರ ಅಕ್ಕನ ಅರಿವು ತಂಡದಿಂದ ಗೂಗಲ್ ಮೀಟ್ ನಲ್ಲಿ ಆಯೋಜಿಸಿದ್ದ ೩೧ ನೇ ಉಪನ್ಯಾಸ ಕಾರ್ಯಕ್ರಮದ ವರದಿ
ಶ್ರೀ ರುದ್ರಮೂರ್ತಿ ಸರ್ ಸ್ವಾಗತಿಸಿದರು. ಕು.ಗ್ರೀಷ್ಮಾ ವಚನ ಗಾಯನ ಮಾಡಿ ವಚನ ಪ್ರಾರ್ಥನೆ ಸಲ್ಲಿಸಿದಳು. ಆಯೋಜಕರಾದ ಶ್ರೀ ಶಶಿಕಾಂತ ಪಟ್ಟಣ ಪ್ರಾಸ್ತಾವಿಕ ಮಾತಾಡಿದರು. ಶ್ರೀಮತಿ ಆಶಾ ಎಸ್ ಯಮಕನಮರಡಿ ವಚನ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಿದರು.
– ವೀರೇಶ ಸೌದ್ರಿ ಮಸ್ಕಿ