ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳು

ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳು

ಮನುಕುಲದ ಉಗಮದೊಂದಿಗೆ ನಮ್ಮ ವೈಚಾರಿಕತೆಯೂ ಜನ್ಮತಾಳಿತು. ತಮ್ಮ ಸಾಮರ್ಥ್ಯ, ಪರಿಸರ, ಪರಿಕರಗಳಿಗೆ ಅನುಗುಣವಾಗಿ ಮಾನವ ತನ್ನ ಸುಖ ಮತ್ತು ಬದುಕಿನ ಹೋರಾಟಕ್ಕಾಗಿ.. ವೈಚಾರಿಕತೆಯನ್ನು ಬೆಳೆಸಿಕೊಳ್ಳುತ್ತಲೇ ಬಂದ. ಅದರ ಪ್ರತಿಫಲವೇ..ಹಳೆಯ ಶಿಲಾಯುಗ, ಹೊಸ ಶಿಲಾಯುಗ ಮತ್ತು ತಾಮ್ರಯುಗ. ತನ್ನ ವೈಚಾರಿಕತೆಯ ಪರೀಧಿಯಲ್ಲಿಯೇ..ತನ್ನ ಜೀವನವನ್ನು ಉತ್ತಮಗೊಳಿಸುವಲ್ಲಿ ಸಫಲನಾಗುತ್ತಲೇ ಸಾಗಿದ ಮಾನವನು ಕೆಲ ಸ್ತರಗಳಲ್ಲಿ ಏನನ್ನೂ ಸಾಧಿಸದೇ ಹಿಂದೆ ಉಳಿದ. ಮಾನ ಮುಚ್ಚಿಕೊಳ್ಳುವುದರ ಜೊತೆಗೆ ಹೊಟ್ಟೆ ತುಂಬಿಕೊಳ್ಳಲು ಕಲಿತ. ತನ್ನ ಆಹಾರವನ್ನು ತಾನೇ ಉತ್ಪಾದಿಸಿ ತಿನ್ನಲು ಕಲಿತ. ಇದರೊಂದಿಗೆ ಲಿಂಗ ತಾರತಮ್ಯ, ಬಲಿಷ್ಠ ಕನಿಷ್ಠ , ರಂಗಬೇಧ ಇವುಗಳನ್ನು ಮೈಮನಗಳ ತುಂಬ ಬೆಳೆಸಿಕೊಂಡನು. ಮಾನವರಲ್ಲಿಯೇ ಚ್ಯುತ ಅಚ್ಯುತ, ನೀಚ ಉಚ್ಛ, ಇವುಗಳೊಂದಿಗೆ ಶಾರೀರಿಕವಾಗಿ ಬಲಹೀನಳಾದ ಸ್ತ್ರೀಯರ ಬಗ್ಗೆ ಅನಾದರ, ತುಚ್ಛತೆ ನಮ್ಮ ಸಮಾಜದಲ್ಲಿ ಕಂಡುಬಂದವು. ಅದಕ್ಕೆ ಪೂರಕವಾಗಿ ಮನುಸ್ಮೃತಿ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ನ ಸ್ತ್ರೀ ಸ್ವಾತಂತ್ಯ್ರಂ ಅರ್ಹತಿ ಇಷ್ಟು ಸಾಕಾಗಿತ್ತು.. ನಮ್ಮ ಪುರುಷ ಪುಂಗವರಿಗೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಹಿಳೆಯರನ್ನು ಕೇವಲ ಜೀತದಾಳಾಗಿ ಕಂಡರು. ಮನೆಯಲ್ಲಿ ಕೇವಲ ಮಕ್ಕಳನ್ನು ಹೆರುವ..ಲಾಲನೆ ಪಾಲನೆ ಮಾಡುವ ಯಂತ್ರದಂತೆ ಮೂಲೆಗಿಟ್ಟರು.
ಕಸುಬುಗಳ ಮೇಲೆ ಜಾತಿ ನಿರ್ಧಾರವಾದರೂ ಅವು ಮಾನವೀಯ ಸಂಬಂಧಗಳನ್ನು ಕೊಲ್ಲುವ ಹತಾರುಗಳಾದವು. ಕೆಳಸ್ತರದ ಜಾತಿ ಪಂಗಡದ ಜನರ ಸ್ಥಿತಿ ಪ್ರಾಣಿಗಳಿಗಿಂತಲೂ ಕಡೆಯಾಗಿತ್ತು. ನೆರಳನ್ನು ಸಹ ಸೋಕಿದರೂ ಪಾಪ ಸುತ್ತಿಕೊಳ್ಳುವ ಭೀತಿಯಲಿ ಮೇಲ್ಸ್ತರದ ಬುದ್ಧಿಜೀವಿಗಳು ಫರ್ಲಾಂಗು ದೂರ ಜಿಗಿಯುತ್ತಿದ್ದರು.
ಹೀಗಿರುವಾಗ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವೈಚಾರಿಕತೆಯ ಗಾಳಿ ಬೀಸತೊಡಗಿದ್ದೇ ವಚನಯುಗದಲ್ಲಿ. ಧಾರ್ಮಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ಗಮನಾರ್ಹ ಬದಲಾವಣೆಗಳು ಮೂಡಿದ್ದು ಹನ್ನೆರಡನೆಯ ಶತಮಾನದಲ್ಲಿ. ಅಸಮ ಸಮಾಜ, ಸಾಮಾಜಿಕ ಕಟ್ಟುಪಾಡುಗಳು, ಲಿಂಗ ತಾರತಮ್ಯ.. ಈ ಎಲ್ಲಾ ವಿಷಯಗಳು ಆಗಿನ ವಚನಕಾರರ ನಾಲಿಗೆಗೆ ಆಹಾರವಾದವು. ಹನ್ನೆರಡನೆಯ ಶತಮಾನದ ಯುಗಪ್ರವರ್ತಕ ಚೇತನ, ಬಸವಣ್ಣನವರ ಹುಟ್ಟು ಇದಕ್ಕೆಲ್ಲಾ ನಾಂದಿಯಾಯಿತು. ಅವರ ಕಲ್ಯಾಣ ಕ್ರಾಂತಿಯ ಕಿಡಿಗಳು..ಎಲ್ಲಾ ಅಬದ್ಧತೆಗಳನು ಸುಟ್ಟು ಬೂದಿಮಾಡುವ ಮಟ್ಟಕ್ಕೆ ಭುಗಿಲೆದ್ದವು. ಬಸವಣ್ಣನವರ ಕ್ರಾಂತಿಗೆ ಬೆನ್ನೆಲುಬಾಗಿ.. ಸಮಸ್ತ ಸ್ತ್ರೀ ಕುಲದ ರಾಯಭಾರಿ ಅಕ್ಕಮಹಾದೇವಿ ಅವರು ನಿಂತರು. ಅಕ್ಕ, ಕನ್ನಡದ ಮೊದಲ ಸ್ತ್ರೀ ಪರ ಚಿಂತಕಿ. ಹೆಣ್ಣು ಯಾರ ತೊತ್ತೂ ಅಲ್ಲ, ಅವಳಿಗೂ ತನ್ನದೇ ಆದ ವೈಚಾರಿಕತೆ..ಬದುಕುವ ಹಕ್ಕು ಹುಟ್ಟಿನಿಂದಲೇ ಬಂದಿದೆ. ಯಾವತ್ತೂ ಅಬಲೆ ಅಲ್ಲ..ಸಬಲೆ ಎಂದು..ಸ್ವತಃ ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸಿ.. ಸಾಬೀತುಗೊಳಿಸಿದರು.
ಪ್ರಜಾಪ್ರಭುತ್ವ ಅಂದರೆ, ಪ್ರಜೆಗಳಿಂದ,ಪ್ರಜೆಗಳಿಗಾಗಿ ಇರುವ ಪ್ರಭುತ್ವ. ಪ್ರಜೆಗಳೇ ಪ್ರಭುಗಳು.. ಈ ನಿಟ್ಟಿನಲ್ಲಿ ವಚನಕಾರರು ತಮ್ಮ ಹರಿತ ವಚನಗಳ ಮೊನಚಿನಿಂದ ಆ ಸಂಕ್ರಮಣ ಕಾಲದಲ್ಲಿ ಜಾತಿ ಪದ್ಧತಿಯ ಅಸಮಾನತೆಯನ್ನು ತೊಲಗಿಸಲು ಪ್ರಯತ್ನಿದರು. *ಕುಲಕುಲವೆಂದು ಬಡಿದಾಡದಿರಿ, ಕುಲದ ನೆಲೆಯನು ಬಲ್ಲಿರಾ* ಎನ್ನುತ್ತಾ ಜಾತಿ ರಹಿತ ಸಮ ಸಮಾಜದ ಕನಸು ಕಂಡರು.


ಎಲ್ಲಾ ಭಾಗ್ಯಗಳಿಂದ ವಂಚಿತ ದಲಿತ ಸಮುದಾಯಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಾಮಾಜಿಕ ದಿಗ್ಬಂಧನದಿಂದ ಮುಕ್ತಿಗಾಗಿ ಬಸವಣ್ಣನವರ ಕನಸಿನ ಕೂಸಾದ ಕಲ್ಯಾಣ ಮಂಟಪದಲ್ಲಿ ಸಭೆಗಳು ನಡೆಯತೊಡಗಿದವು. ಅಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ.. ಮತ್ತು ತಮ್ಮ ವಚನಗಳನ್ನು ಮಂಡಿಸಲು ಅವಕಾಶ ನೀಡವಾಯಿತು.
ಪ್ರಕೃತಿ ಮತ್ತು ದೇವರಿಗೆ ಜಾತಿ, ಪಂಗಡ, ಅಂತಸ್ತಿನ ಹಂಗಿಲ್ಲದಿರುವಾಗ..ಹುಲುಮಾನವರಿಗೇಕೆ ಈ ಗೊಂದಲ ಎನ್ನುವ ಅರ್ಥದಲ್ಲಿ ರಚಿತವಾದ ಬೊಂತಾದೇವಿಯ ಒಂದು ವಚನ ಹೀಗಿದೆ.
*ಹೊರಗಡೆ ಹೊಲೆ ಬಯಲುಂಟೆ*?
ಎಲ್ಲಿ ನೋಡಿದರೂ ಬಯಲೊಂದೆ
ಭಿತ್ತಿಯೆಂಬ ಒಳಹೊರಗೆಂಬ ನಾವಾವೈಸೆ
ಎಲ್ಲಿ ನೋಡಿದರೆ ಕರೆದೆಡೆ ಓ ಎಂಬಾತನೇ ಬಿಡಾಡಿ
ಈ ವಚನದಲ್ಲಿ ಅಂದಿನ ಕಾಲದ ವೈಚಾರಿಕತೆಯ ಸೆಳಕು ಕಾಣಬಹುದು.

ದೇಹಾರವ ಮಾಡುವ ಅಣ್ಣಗಳಿರಾ
ಆಹಾರವನಿಕ್ಕೆರೇ
ಒಂದು ತುತ್ತು ಆಹಾರವನಿಕ್ಕಿರೇ
ದೇಹಾರಕ್ಕೆ ಆಹಾರವೇ ನಿಚ್ಚಣಿಕೆ
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ
ಆ ಹರನಿಲ್ಲೆಂದನಞಮಬಿಗ ಚೌಡಯ್ಯ

ಇಲ್ಲಿ ಹಸಿದವರಿಗೆ ಅನ್ನ ಹಂಚದೇ ಬರೀ ದೇವಾಲಯ ಕಟ್ಟಿಸುತ್ತೇನೆ ಎನ್ನುವಂಥವರಿಗೆ ದೇವಾಲಯ ಮಾಡುವ ಅಣ್ಣಗಳಿರಾ ಅದರ ಬದಲಾಗಿ ಹಸಿದವರಿಗೆ ಒಂದು ತುತ್ತು ಅನ್ನವನ್ನಿಕ್ಕಿ,ದೇಹ ಉಳಿಸಲು ಇದೇ ಆಧಾರ ಸುಮ್ಮನೇ ದೇವಾಲಯ ಕಟ್ಟಿ ಆಹಾರವನ್ನು ದಾನ ನೀಡದಿದ್ದರೆ ನಿಮ್ಮ ಗುಡಿಯೊಳಗೆ ಆ ಹರನೂ ಇರಲಾರ ಎನ್ನುತ್ತಾನೆ.

ಬಸವಣ್ಣನವರ ಅನುಭವ ಮಂಟಪದಲ್ಲಿ ಹೊಸ ಜಗತ್ತು ಸೃಷ್ಟಿಯಾಗಿತ್ತು. ಹೆಣ್ಣು ಗಂಡೆನ್ನದೆ, ಮೇಲು ಕೀಳೆನ್ನದೆ ಉಚ್ಛ ನೀಚನೆನ್ನದೆ ಮಂಟಪದಲ್ಲಿ ಪ್ರವೇಶವಿತ್ತು. ಮತ್ತು ತಮಗನಿಸಿದ್ದನ್ನು ವಚನಗಳ ರೂಪದಲ್ಲಿ ಧಾಖಲಿಸಿ ಸಮಸ್ತರ ಮುಂದೆ ಓದುವ ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ತು. ಇಂದಿಗೂ ನಮ್ಮ ಪಕ್ಕದಲ್ಲಿ ಸಹಿಸದ ಒಬ್ಬ ವೈಶ್ಯೆಗೂ..ಬಸವಣ್ಣನವರು ತನ್ನ ಮನದಾಳದ ದುಃಖವನ್ನು ಅನುಭವ ಮಂಟಪದಲ್ಲಿ ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದರೆಂದರೆ..ಅವರ ವೈಚಾರಿಕತೆಯ ದೃಷ್ಟಿಕೋನ ಎಷ್ಟು ಹಿರಿದಾಗಿರಬಹುದು. ಕೇವಲ ಮಾನವ ಸಮಾಜವನ್ನು ನಿರ್ಮಿಸುವ ಕನಸು ನಮ್ಮ ವಚನಕಾರರದ್ದಾಗಿತ್ತು. ಈ ಜಾತಿ ಪಾತಿಯ ಕಟ್ಟಳೆ..ಹೆಣ್ಣು ಗಂಡೆಂಬ ಬೇಧ ಯಾವುದೂ ಅವರಿಗೆ ಬೇಡವಾಗಿತ್ತು.
ಬಸವಣ್ಣನವರೊಡನೆ ಅವರ ಸಮಕಾಲೀನ ಸಾವಿರಾರು ಶರಣರು ತಮ್ಮ ವಚನದ ಮುಖೇನ ಸಮಾಜದ ಅನಿಷ್ಟ ಪದ್ಧತಿಗಳ ರದ್ಧತಿಗಾಗಿ ಹೋರಾಡಿದರು. ಹನ್ನೆರಡನೆಯ ಶತಮಾನದಲ್ಲಿ ಪ್ರಜಾಪ್ರಭುತ್ವ ಕಲ್ಪನೆಯ ಕೂಸು ಬಸವಣ್ಣನವರ ಅನುಭವ ಮಂಟಪದಲ್ಲೇ ಕಣ್ಣು ಬಿಟ್ಟಿತ್ತು. ಯಾವುದೇ ಅಂತರ, ತಾರತಮ್ಯದ ಸೋಂಕಿಲ್ಲದೆ.. ಮಾನವಕುಲದ ಎಲ್ಲಾ ಬಂಧುಗಳು ಯಾವುದೇ ಅಳುಕು ಭಯವಿಲ್ಲದೆ ಅನುಭವ ಮಂಟಪದ ಮೆಟ್ಟಿಲನ್ನು ಮೆಟ್ಟಿ ತಮ್ಮ ಮನದ ಮಾತುಗಳನ್ನು ಎಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು..ಅಂದರೆ ವಚನಕಾರರ ವೈಚಾರಿಕತೆಯ ಹರಿವು ನಮಗೆಲ್ಲ ವೇದ್ಯವಾಗದೇ ಇರದು. ಮಾನವ ಧರ್ಮದ ಬಗೆಗೆ ಬಸವಣ್ಣ ಹಲವಾರು ವಚನಗಳಲ್ಲಿ ಹೇಳಿದ್ದಾರೆ.

ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತಲ್ಲದೊಲ್ಲ ಕಂಡಯ್ಯ

ಕಾಗೆಯಂದುಗಳ ಕಂಡರೆ
ಕರೆಯದೆ ತನ್ನ ಬಳಗವನ್ನು
ಕೋಳಿಯೊಂದು ಕುಟುಕ ಕಂಡರೆ
ಕೂಗಿ ಕರೆಯದೆ ತನ್ನ ಕುಲವನ್ನು
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ

ಏನು ಬಂದಿರಿ ಹದುಳವಿದ್ದಿರೆ ? ಎಂದರೆ
ನಿಮ್ಮ ಮೈಸಿರಿ ಹಾರಿ ಹೋದುದೆ ?
ಕುಳ್ಳಿರೆಂದರೆ ನೆಲ ಕುಳಿಹೋಹುದೆ ?
ಒಡನೆ ನುಡಿದರೆ ಶಿರ-ಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಕಡಹಿ ಮೂಗ ಕೊಯ್ಯದೆ.ಮಾಣ್ವನೆ ಕೂಡಲ ಸಂಗಮ ದೇವನು ?

ಮೇಲಿನ ಎಲ್ಲ ವಚನಗಳು ಮಾನವೀಯತೆಯನ್ನು ಎತ್ತಿ ಹಿಡಿದಿವೆ. ದಯೆಯೇ ಧರ್ಮ. ಅದನ್ನು ಬಿಟ್ಟು ಢಂಭಾಚಾರದ ಆಚರಣೆಗಳನ್ನು ಒಲೆಯಲ್ಲಿ ಹಾಕಿ ಸುಟ್ಟು ಬಿಡಿ ಎಂದಿರುವರು ದಾರ್ಶನಿಕರು. ಎಲ್ಲವೂ ತಮಗೇ ಬೇಕೆಂದು ಮಾಡುವ ಸ್ವಾರ್ಥ ತ್ಯಜಿಸಿ, ಇದ್ದುದರಲ್ಲಿ ಅವಶ್ಯಕತೆ ಇದ್ದವರೊಂದಿಗೆ ಹಂಚಿತಿನ್ನುವ ಮನುಜ ಗುಣ..ಪ್ರಾಣಿ ಪಕ್ಷಿಗಳಿಂದ ಕಲಿಯಬೇಕಿದೆ ಎಂಬ ವಿಡಂಬನೆ ಕೂಡ ವ್ಯಕ್ತವಾಗಿದೆ. ತನ್ನದೇ ಆದ ಹಮ್ಮುಬಿಮ್ಮುಗಳನು ಬಿಟ್ಟು, ಎಲ್ಲರೊಳಗೊಂದಾಗಿ..ಸವಿಮಾತುಗಳನಾಡುವ ಉಪದೇಶವನ್ನು ಬಸವಣ್ಣನವರ ಬಹುತೇಕ ವಚನಗಳು ಕೊಡುತ್ತವೆ. ಇವರೊಂದಿಗೆ ಇನ್ನೂ ಅನೇಕ ಮಹನೀಯರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಮಾಜ ಸುಧಾರಣೆಗೆ ಸಹಾಯವಾಗಿದ್ದು ಇತಿಹಾಸದ ಪುಟಗಳಲ್ಲಿ ಓದಬಹುದು. ಪ್ರಜಾಸತ್ತಾತ್ಮಕ ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಮೂಡಿಸುವಲ್ಲಿ.. ವಚನಯುಗದ ದಾರ್ಶನಿಕರು ಹನ್ನೆರಡನೆಯ ಶತಮಾನದಲ್ಲಿ ಬಹುವಾಗಿ ಶ್ರಮಿಸಿದ್ದು ಕಂಡುಬರುತ್ತದೆ.. ಆದರೆ, ಫಲಿತಾಂಶ ಮಾತ್ರ ಸೊನ್ನೆ. ಬಸವ ಬುದ್ಧ ಬಾಬಾರ ಕನಸುಗಳು ಇನ್ನೂ ವರೆಗೂ ಸಂಪೂರ್ಣ ಅರ್ಥದಲ್ಲಿ ಸಾಕಾರವಾಗಿರದ ದೊಡ್ಡ ದುಃಖ ನಮ್ಮ ನಿಮ್ಮೆಲ್ಲರ ಎದೆಯಲ್ಲಿ ಮಡುಗಟ್ಟಿದ್ದು ಸುಳ್ಳಲ್ಲ. ರಾಮ ಮತ್ತು ಗಾಂಧೀಜಿ ಅವರ ರಾಮರಾಜ್ಯ, ಬಸವ ಬುದ್ಧ ಬಾಬಾರ ಜಾತಿರಹಿತ ಸಮಾನತೆಯ ದೇಶ..ಎಂದು ಉದಯಿಸುವುದೋ..ಎಂಬ ಜಿಜ್ಞಾಸೆ.. ನಮ್ಮನಿಮ್ಮೆಲ್ಲರನ್ನು ಸುಡುವ ಕೆಂಡದಂತೆ ಸದಾ ಕಾಡುತ್ತಲೇ ಇರುತ್ತದೆ.. ಆ ದಿಶೆಯಲಿ ಹೋರಾಡುವುದನ್ನು ನೆನಪಿಸಲು.

ಶಮಾ. ಜಮಾದಾರ.
ಯರಗಟ್ಟಿ.
ತಾ. ಯರಗಟ್ಟಿ.
9108695320.

One thought on “ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳು

Comments are closed.

Don`t copy text!