ಮಸ್ಕಿ: ಶಾಸಕ ಆರ್, ಬಸನಗೌಡರಿಂದ ಸುಳ್ಳು ಹೇಳಿಕೆ
ಪ್ರತಾಪಗೌಡ ಪಾಟೀಲ ಆರೋಪ
e-ಸುದ್ದಿ, ಮಸ್ಕಿ
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟ ಅನುಧಾನವನ್ನು ನಾನು ತಂದಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಶಾಸಕ ಆರ್. ಬಸನಗೌಡ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ನನ್ನ ಕ್ಷೇತ್ರದ ನೀರಾವರಿ ಯೋಜನೆ, ರಸ್ತೆ ಕಾಮಗಾರಿ ಸೇರಿದಂತೆ ಬಿಜೆಪಿ ಸರ್ಕಾರ ಸಾಕಷ್ಟು ಹಣ ನೀಡಿದೆ. ಆರ್. ಬಸನಗೌಡ ಶಾಸಕರಾಗಿ ಒಂದು ತಿಂಗಳಾಗಿದೆ, ನಾನೇ ಅನುದಾನ ತಂದಿದ್ದೇವೆ ಎಂದು ಪತ್ರಿಕಾ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ.
ಮಸ್ಕಿ ಸೇರಿದಂತೆ ತಾಲ್ಲೂಕಿನ ಐದು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕ ಮಾಡುವಂತೆ ಆರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆ, ಮನವಿ ಸ್ಪಂದಿಸಿ ಸರ್ಕಾರ ವೈದ್ಯರ ನೇಮಕ ಮಾಡಿದೆ ಹೊರತು ಶಾಸಕರಿಂದ ಅಲ್ಲ ಎಂದರು.
ಈಗಾಗಲೇ ಒಂದು ನೋರು ಕೋಟಿ ರೂಪಾಯಿಗೂ ಹೆಚ್ಚು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಶಾಸಕರು ಕೆಲವೊಂದು ಕಾಮಗಾರಿಗೆ ತಡೆ ಮಾಡುತ್ತಿದ್ದಾರೆ. ಕೆಲವೊಂದು ಕಾಮಗಾರಿಗಳು ಟೆಂಡರ್ ಆಗಿದ್ದರೂ ಶಾಸಕರು ಅವುಗಳ ಚಾಲನೆಗೆ ಸಮಯ ಕೊಡದ ಕಾರಣ ನೆನೆಗುದಿಗೆ ಬಿದ್ದಿವೆ ಎಂದರು. ಶಾಸಕರು ಬೇಗನೆ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಶಾಸಕರ ಸಹೋದರ ನನ್ನ ಅವದಿಯಲ್ಲಿ ಮುಂಜೂರಾದ ಕಾಮಗಾರಿ ಕೆಲಸದ ಮೇಲೆ ನಿಂತು ತಾವೇ ಅನುದಾನ ತಂದಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ಹಾಕಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಪುರಸಭೆ ಆಸ್ತಿಕರ ಶೇ. 50 ಕ್ಕೆ ಇಳಿಕೆ
ಪಟ್ಟಣದಲ್ಲಿಯ ಆಸ್ತಿ ತೆರಿಗೆಯನ್ನು ಪುರಸಭೆ ಆಡಳಿತ ಶೇ. 50 ಕ್ಕೆ ಇಳಿಸಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಆಸ್ತಿ ತೆರಿಗೆ ಹೆಚ್ಚಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಸಚಿವರೊಂದಿಗೆ ಮಾತನಾಡಿ ಕಾನೂನು ಪ್ರಕಾರ ಆಸ್ತಿ ತೆರಿಗೆಯನ್ನು ಶೇ. 50 ಇಳಿಸಲಾಗಿದೆ. ಈಗಾಗಲೇ ಪುರಸಭೆ ಕೂಡಾ ಪ್ರಕಟಣೆ ನೀಡಿದೆ ಎಂದು ಅವರು ಹೇಳಿದರು
ಆಸ್ತಿ ತೆರಿಗೆ ಶೇ. 50 ರಷ್ಟು ಇಳಿಸಿದ್ದರಿಂದ ಸಾರ್ವಜನಿಕರು ಪುರಸಭೆಗೆ ತೆರಿಗೆ ತುಂಬುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು