ಮಾಜಿ ಮಂತ್ರಿ ಸಿ.ಎಂ ಉದಾಸಿ ಲಿಂಗೈಕ್ಯ

ಮಾಜಿ ಮಂತ್ರಿ ಸಿ.ಎಂ ಉದಾಸಿ ಲಿಂಗೈಕ್ಯ

e- ಸುದ್ದಿ ಬೆಂಗಳೂರು

ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ (84) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉದಾಸಿ ಅವರು ಕೆಲವು ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಾಳೆ ಹಾವೇರಿಯ ಹಾನಗಲ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಅವರ ಪುತ್ರ ಸಂಸದ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ.

6 ಬಾರಿ ಶಾಸಕರಾಗಿ ಆಯ್ಕೆ:
ಆರು ಬಾರಿ ಶಾಸಕರಾಗಿ ಗೆದ್ದಿದ್ದ ಉದಾಸಿ ಅವರು, 1983 ರಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪಕ್ಷೇತರರಾಗಿ ಪ್ರವೇಶಿಸಿದ್ದರು. 1985 ರಲ್ಲಿ ಜನತಾ ಪಕ್ಷದಿಂದ ಗೆಲುವು ಸಾಧಿಸಿದ್ದರು. 1994 ರಲ್ಲಿ ಜನತಾದಳದಿಂದ ಆಯ್ಕೆಯಾಗಿದ್ದರು. ದಳ ಇಬ್ಭಾಗ ಆದ ನಂತರ ಅವರು ಬಿಜೆಪಿ ಸೇರಿದ್ದರು. 2004, 2008 ಮತ್ತು 2018 ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು.

2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಹಿಂದೆ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಾರಿಗೆ, ಲೋಕೋಪಯೋಗಿ ಖಾತೆಯನ್ನು ನಿರ್ವಹಿಸಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ದಾಖಲಿಸುವ ಮೂಲಕ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿ.ಎಂ. ಉದಾಸಿ ನಿಧನಕ್ಕೆ ಮುಖ್ಯ ಮಂತ್ರಿಗಳ ಸಂತಾಪ:
ಹಿರಿಯ ಶಾಸಕ ಸಿ.ಎಂ. ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿ.ಎಂ ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ” ಎಂದು ಯಡಿಯೂರಪ್ಪ ಅವರು ಟ್ವಿಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ

Don`t copy text!