ಮಾನ್ವಿಯ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಸ್ಥೆಗೆ 18ನೇ ವಾರ್ಷಿಕೋತ್ಸವದ ಸಂಭ್ರಮ
e-ಸುದ್ದಿ ವಿಶೇಷ ಮಾನ್ವಿ
ಬದುಕಿನ ಸಾರ್ಥಕತೆ ಅಂದರೆ ಇದೇ ಅಲ್ಲವೇ?…
ಸರ್ಕಾರಿ ನೌಕರರಿಗೆ ತಮ್ಮ ವೃತ್ತಿಯ ಬದ್ಧತೆ ಜತೆಗೆ ಸಾಮಾಜಿಕ ಕಳಕಳಿ, ಇಚ್ಛಾಶಕ್ತಿ ಇದ್ದರೆ ಉತ್ತಮ ಸಾಧನೆ ಸಾಧ್ಯ ಎಂಬುದಕ್ಕೆ ಸಾಕ್ಷಿ ಮಾನ್ವಿಯ ಬಸವಶ್ರೀ ನೌಕರರ ಪತ್ತಿನ ಸಹಕಾರಿ ನಿಯಮಿತ.
ಇದು ಮಾನ್ವಿಯಲ್ಲಿ ಬಸವಶ್ರೀ ನೌಕರರ ಸಹಕಾರಿ ಎಂದೇ ಖ್ಯಾತಿ ಪಡೆದಿದೆ. 18 ವರ್ಷಗಳ ಹಿಂದೆ ಮಾನ್ವಿ ಪಟ್ಟಣದಲ್ಲಿ ಅಸ್ವಿತಕ್ಕೆ ಬಂದ ಈ ಸಹಕಾರಿ ಸಂಸ್ಥೆ ಇಂದು ಸ್ವಂತ ಸುಸಜ್ಜಿತ ಕಟ್ಟಡ ಹೊಂದಿ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವಹಿವಾಟು ಮಾಡುವ ಮಟ್ಟಿಗೆ ಬೆಳೆದಿರುವ ರೀತಿ ನಿಜಕ್ಕೂ ಅಚ್ಚರಿ, ಅಮೋಘ.
ಈ ಸಂಸ್ಥೆಯ ಯಶೋಗಾಥೆಯ ಹಿಂದಿರುವ ಸಮಾನ ಮನಸ್ಕ ನೌಕರರ ಪ್ರಾಮಾಣಿಕ ಸಂಕಲ್ಪ, ಸಮಾಜದ ಎಲ್ಲಾ ವರ್ಗಗಳ ಜನರಿಗಾಗಿ ಸೇವೆ ಸಲ್ಲಿಸಬೇಕೆನ್ನುವ ತುಡಿತ, ಸಿಬ್ಬಂದಿಯ ಪರಿಶ್ರಮ ಇತರರಿಗೆ ಮಾದರಿ. ಈ ಸಂಸ್ಥೆಯ ಅಧ್ಯಕ್ಷ ಮತ್ತು ಎಲ್ಲಾ ನಿರ್ದೇಶಕರು, ಸಿಬ್ಬಂದಿ ವರ್ಗದವರು ಅಭಿನಂದನಾರ್ಹರು.
ಸಂಸ್ಥೆಯ ಅಧ್ಯಕ್ಷರಾದ ಡಾ.ಶಂಕರಗೌಡ ಎಸ್.ಪಾಟೀಲ ಸರಳ ಸಜ್ಜನಿಕೆಯ, ಸದಾ ಹಸನ್ಮುಖಿ ಸ್ವಭಾವದ ವ್ಯಕ್ತಿ ಮತ್ತು ಸದಾ ಸ್ಪೂರ್ತಿಯ ಚಿಲುಮೆ. ತಾವೊಬ್ಬ ಜಿಲ್ಲಾ ಮಟ್ಟದ ವೈದ್ಯಾಧಿಕಾರಿ, ರಾಜ್ಯಮಟ್ಟದ ಪದಾಧಿಕಾರಿ, ಶ್ರೀಮಂತಿಕೆಯ ಹಿನ್ನೆಲೆ ಎಂಬುದರ ಹಮ್ಮಿಲ್ಲದ ಸರಳ ನಡೆ, ನುಡಿ ಹೊಂದಿರುವ ಡಾ.ಶಂಕರಗೌಡ ಎಸ್.ಪಾಟೀಲ್ ಸಂಸ್ಥೆಯ ಸಾಧನೆಗೆ ಪ್ರೇರಕ ಶಕ್ತಿ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಎಲ್ಲವನ್ನೂ ಸರಿದೂಗಿಸಿಕೊಂಡು ನಿಭಾಯಿಸುವ ಅವರ ಸದ್ಗುಣ, ಹೃದಯ ವೈಶಾಲ್ಯತೆ ಮೆಚ್ಚುವಂತದ್ದು. ಎಲ್ಲರೂ ಇಷ್ಟಪಡುವ ಡಾಕ್ಟರ್ ಶಂಕರಗೌಡರು ನನಗೂ ಅತ್ಮೀಯರು, ಪ್ರೀತಿಪಾತ್ರರು ಎಂಬುದೇ ನನ್ನ ಹೆಮ್ಮೆ.
18 ವರ್ಷಗಳ ಹಿಂದೆ ಡಾ.ಶಂಕರಗೌಡರು ಮತ್ತವರ ಗೆಳೆಯರ ದೂರದೃಷ್ಟಿಯ ಫಲವಾಗಿ ಇಂದು ಬಸವಶ್ರೀ ನೌಕರರ ಸಹಕಾರಿ ಸಂಘ ಜಿಲ್ಲೆಯಲ್ಲಿಯೇ ಗಮನಾರ್ಹ ಸಾಧನೆ ಮಾಡಿದ ಸಂಸ್ಥೆಯಾಗಿದೆ. ಈ ಯಶಸ್ಸಿಗೆ ಎಲ್ಲಾ ಗ್ರಾಹಕರ ಸಹಕಾರವೂ ಇದೆ. ಮಾನ್ವಿ, ಸಿರವಾರ, ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ನಗರಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ ತನ್ನ ಶಾಖೆಗಳಲ್ಲಿ ನೂರಾರು ಯುವಕರಿಗೆ ನೌಕರಿ ಮಾಡುವ ಅವಕಾಶ ನೀಡಿದೆ. ಎಲ್ಲಾ ಜಾತಿ, ವರ್ಗಗಳ ಅಸಂಖ್ಯಾತ ಯುವಕರು, ಸಣ್ಣಪುಟ್ಟ ವ್ಯಾಪಾರಸ್ಥರು, ಮಧ್ಯಮವರ್ಗದವರು ಈ ಸಂಸ್ಥೆಯಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಿದ್ದಾರೆ.
ಈ ಸಹಕಾರಿ ಸಂಸ್ಥೆಯ ಮೂಲಕ ವಿವಿಧ ಆರ್ಥಿಕ ಯೋಜನೆ ಹಾಗೂ ಗ್ರಾಹಕ ಸ್ನೇಹಿ ಚಟುವಟಿಕೆಗಳ ಜತೆಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಅರವಟಿಗೆಗಳನ್ನು ವಿವಿಧೆಡೆ ಅರಂಭಿಸುವುದು ಕೂಡ ಶ್ಲಾಘನೀಯ ಕೆಲಸವಾಗಿದೆ.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾಗುವ ಈ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಪ್ರತಿ ವರ್ಷ ನೂರಾರು ಮಕ್ಕಳಿಗೆ ನೀಡಲಾಗುವ ಈ ಸಂಸ್ಥೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೋಡಿ ಇತರ ಸಹಕಾರಿ ಸಂಸ್ಥೆಗಳು ಅನುಸರಿಸಿದ್ದೂ ಉಂಟು. ಹೀಗೆ ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಏಳಿಗೆಯ ಜತೆಗೆ ಇತರರಿಗೂ ಮಾದರಿಯಾಗುತ್ತವೆ. ಪರಸ್ಪರ ಸಹೋದರತೆ, ಸಹಾಯ, ಸಹಕಾರ, ಸಹಬಾಳ್ವೆಯ ಗುಣಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ.
ಈ ನಿಟ್ಟಿನಲ್ಲಿ ಬಸವಶ್ರೀ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಮಹೋನ್ನತ ಸಾಧನೆಯ ಹಾದಿಯಲ್ಲಿದ್ದಾರೆ. ಬಸವಶ್ರೀ ನೌಕರರ ಸಹಕಾರಿ ಸಂಸ್ಥೆ ಭವಿಷ್ಯದಲ್ಲಿ ನೂರಾರು ವಸಂತಗಳನ್ನು ಕಾಣಲಿ, ಈ ಸಂಸ್ಥೆಯ ಪದಾಧಿಕಾರಿಗಳು ಸಮಾಜಮುಖಿಯಾಗಿ ಇನ್ನೂ ಹೆಚ್ಚು ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಲಿ ಎಂದು ಹಾರಿಸುವೆ.
ಈ ಸಂಸ್ಥೆಯ ಎಲ್ಲರ ಸಾಧನೆ ನೋಡಿ ನನಗೆ ಕೊನೆಗೆ ಅನ್ನಿಸಿದ್ದು #ಬದುಕಿನ_ಸಾರ್ಥಕತೆ_ಅಂದರೆ_ಇದೇ_ಅಲ್ಲವೇ?…’
ಎಲ್ಲರಿಗೂ ಮತ್ತೊಮ್ಮೆ ಆಲ್ ದಿ ಬೆಸ್ಟ್..
–ಬಸವರಾಜ ಭೋಗಾವತಿ