ಅಹಂಕಾರದ ಗೋಡೆ

ಅಹಂಕಾರದ ಗೋಡೆ

(ಕತೆ)

ಮನೆ ಕೆಲಸದ ಜೊತೆಗೆ ಅಡಿಗೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಶಿವಣ್ಣ ಸಂಬಂಧಿಕರ ಮದುವೆಯೆಂದು ಎರಡು ದಿನ ಊರಿಗೆ ಹೋಗಿದ್ದರಿಂದ ಅರುಣನಿಗೆ ಬ್ರೇಕ್ ಪಾಸ್ಟ್ಗೇ ಆಫಿಸ್ ಹತ್ತಿರದ ಶ್ರೀ ಸಾಯಿ ರಿಪ್ರೆಶ್‌ಮೆಂಟ್ ರ‍್ಯಾಯವಾಗಿತ್ತು. ಮನೆಯಿಂದ ಅರ್ಧ ಗಂಟೆ ಬೇಗ ಹೊರಟು ಆಫೀಸ್ ಮುಂದುಗಡೆ ಕಾರ ಪಾರ್ಕ ಮಾಡಿ ರೆಸ್ಟೊರೆಂಟ್ ಕಡೆಗೆ ಹೊರಟಿದ್ದ ಅರುಣ.

ಪರಿಚಿತವಾದ ಧ್ವನಿ ಕಿವಿಗೆ ಅಪ್ಪಳಿಸಿ ಗಮನ ಅತ್ತ ಹರಿಯಿತು. ತನ್ನ ನೆಚ್ಚಿನ ನೆರಳೆ ಬಣ್ಣದ ಜಾರ್ಜೆಟ್ ಸೀರೆ ಉಟ್ಟ ಮಹಿಳೆ ಆಟೋ ಇಳಿದು ಬಾಲಕನ ಜೊತೆಗೆ ಮಾತನಾಡುತ್ತಿದ್ದಳು. ಯಾವುದೊ ಪರಿಚಿತ ಭಾವ ಆತನ ಕಣ್ನೋಟವನ್ನು ಹಿಡಿದಿಟ್ಟುಕೊಂಡಿತು. ಆಕೆ ಪರ್ಸ ತೆಗೆದು ಚಾಲಕನಿಗೆ ದುಡ್ಡು ನೀಡಿ ತಿರುಗಿದಾಗ ಬಂದು ಕ್ಷಣ ಹೃದಯದ ಬಡಿತ ನಿಂತ ಅನುಭವ! ರಶ್ಮಿ! ನಾಲ್ಕು ವರ್ಷಗಳ ಹಿಂದೆ ತನ್ನಿಂದ ದೂರವಾದ ರಶ್ಮಿ, ಯಾರ ಜೊತೆ ತನ್ನ ವಿವಾಹ ಬಂದು ಜೀವನದ ದೊಡ್ಡ ತಪ್ಪು ಎನಿಸಿತ್ತು, ಯಾರ ಮುಖ ನೋಡುವುದು ಅಸಹನೀಯ ವೆನಿಸಿತ್ತು, ಆ ರಶ್ಮಿಯನ್ನು ನೋಡಿ ಇಂದು ಹೃದಯದ ಬಡಿತ ಹೆಚ್ಚಾಗಿತ್ತು. ಎರಡು ಹೆಜ್ಜೆ ಮುಂದೆ ಬಂದ ಆಕೆ ಅಲ್ಲಿ ಅರುಣನನ್ನು ನೋಡಿ ನಿಧಾನಿಸಿದಳು. ಕಣ್ಣುಗಳು ಸಣ್ಣಗೆ ಅರಳಿದವು. ಆಕೆಯ ಹಿಂಜರಿಕೆಯನ್ನು ಗಮನಿಸಿದ ಅರುಣ ಒಂದು ಹೆಜ್ಜೆ ಮುಂದೆ ಬಂದು ಕೇಳಿದ.
“ಹಾಯ್ ರಶ್ಮಿ ಹೇಗಿದ್ದಿಯಾ?” ಆಕೆ ಸಾವರಿಸಿಕೊಂಡು ಮೃದುವಾಗಿ ತೆಲೆ ಅಲ್ಲಾಡಿಸಿದಳು. “ಚೆನ್ನಾಗಿದ್ದೆನೆ ನೀವು?”
“ಪರವಾಗಿಲ್ಲ ಎನು ಇಲ್ಲಿ?” ಎಂದು ಪ್ರಶ್ನಿಸಿದ. ಕುತೂಹಲದಿಂದ ಎದುರುಗಡೆಯ ಕಾಲೇಜ ಕಟ್ಟಡ ತೋರಿಸಿ “ಹತ್ತು ಗಂಟೆಗೆ ಅಲ್ಲೊಂದು ಪ್ರಸೆಂಟೆಶನ್ ಇದೆ ಎಂದಳು. ಯಾವುದೊ ಭಾವ ಆಕೆಯ ಹೆಜ್ಜೆಯನ್ನು ಹಿಡಿದಿಟ್ಟಿತ್ತು. ಆಕೆಯ ಮುಖವನ್ನು ದಿಟ್ಟಿಸುತ್ತ ಅರುಣ ಕೇಳಿದ್ದ
“ಹೇಗೊ ಅರ್ಧ ಗಂಟೆ ಸಮಯವಿದೆ ಕಾಪಿ?”
ಆಕೆ ವಾಚ ನೋಡಿಕೊಂಡು ಸರಿ ಎಂದು ಹಿಂಬಾಲಿಸಿದಳು. ವೆಟರ್ ಬಂದಾಗ ಅರುಣ ಹೇಳಿದ್ದ
“ಅವರಿಗೆ ಒಂದು ಪಿಲ್ಟರ್ ಕಾಫಿ ನನಗೆ ಮಸಾಲಾ ಚಾಯ್” ಆಕೆಯ ಹೃದಯದ ಬಡಿತ ತಪ್ಪಿತ್ತು ಅರುಣನಿಗೆ ಇನ್ನೂ ನನಗೆ ಪಿಲ್ಟರ್ ಕಾಫಿ ಇಷ್ಟು ಎಂದು ನೆನಪಿದೆ! ಆತನನ್ನು ತಡೆದು ಹೇಳಿದ್ದಳು
“ಬೇಡಾ ನನಗೂ ಚಾಯ್” ಕುತೂಹಲದಿಂದ ಕಣ್ಣರಳಿಸಿದ ಅರುಣನನ್ನು ಉದ್ದೇಶಿಸಿ ಹೇಳಿದ್ದಳು. “ನಾನೂ ಈಗ ಚಾಯ್ ಕುಡಿಯುತ್ತಿದ್ದೆನೆ”.
“ಬ್ರೇಕ್‌ಪಾಸ್ಟ್” ಎಂದಾಗ “ಬೇಡ ಆಗಲೇ ಆಗಿದೆ” ಎಂದು ತಲೆ ಅಲ್ಲಾಡಿಸಿದ್ದಳು. ಮನಸ್ಸು ನಾಲ್ಕು ವರ್ಷ ಹಿಂದಕ್ಕೊಡಿ ಮನೆಯಲ್ಲಿ ಚಾಯ್ ಕಾಫಿಗಾಗಿ ಆಗುತ್ತಿದ್ದ ವಾಗ್ವಾದಗಳನ್ನು ನೆನೆಯುತ್ತಿತ್ತು. ಯಾವತ್ತೂ ಚಹಾದ ವಾಸನೇ ಸಹ ಸಹಿಸದ ರಶ್ಮಿ ಈಗ ಬರಿ ಚಹಾ ಕುಡಿಯುತ್ತಿದ್ದಳು. ಮಾತು ಮೂತಿಗೆ ವಾದಕ್ಕಿಳಿಯುತ್ತಿದ್ದ ಆಕೆಯ ಗಂಟಲದಲ್ಲಿ ಮಾತುಗಳು ಹುಗಿದುಕೊಂಡಿದ್ದವು. ಆತ ಕೇಳುತ್ತಿದ್ದ
“ನಿನ್ನ ಜಾಬ್ ಹೇಗೆ ನಡೆದಿದೆ?” ಯಾಂತ್ರಿಕವಾಗಿ ತಲೆ ಅಲ್ಲಾಡಿಸಿ
“ಪರವಾಗಿಲ್ಲ. ಈಗ ಸ್ಟಾಫ್ ಹೆಚ್ಚಾಗಿದ್ದರಿಂದ ಕೆಲಸ ಕಡಿಮೆಯಾಗಿದೆ” ಎಂದು ಉತ್ತರಿಸಿದಳು. ಅದೇ ಜಾಬ್‌ಗಾಗಿಯೇ ಅಲ್ಲವೇ ಅಷ್ಟೊಂದು ರಾದ್ಧಾಂತ ನಡೆದಿದ್ದು ನಿಮಗೆ ನೌಕರಿ ಮಾಡುವ ಅವಶ್ಯಕತೆ ಎನಿದೆ. ನಾನು ಗಳಿಸಿದ್ದು ಸಾಕಾಗುವುದಿಲ್ಲವೇ. ನಾನು ನಿನಗೆ ಏನು ಕಡಿಮೆ ಮಾಡಿದ್ದೇನೆ ಎಂದೆಲ್ಲ ಹಾರಾಡಿದ್ದ. ನಂತರವೂ ಮನೆಗೆ ಬರಲು ತಡವಾದಾಗ, ಯಾವುದೇ ಪುರುಷ ಸಿಬ್ಬಂದಿಯ ಪೋನ್ ಬಂದಾಗ ಅಥವಾ ವಿದ್ಯಾರ್ಥಿಗಳ ಅಸೈನ್ಮೆಂಟ ತಿದ್ದಲು ಮನೆಗೆ ತಂದಾಗ ರಂಪಾಟ ಮುಂದುವರೆದಿತ್ತು. ಆಕೆಯ ಉತ್ಸಾಹದ ಮತ್ತಿನಲ್ಲಿ ಅದೇಲ್ಲ ಪುರುಷ ಶೋಷಣೆಯಂತೆ ಕಂಡಿತ್ತು. ನಂತರ ಅರಿವಾಗಿದ್ದು ಮನೆ ಹಾಗೂ ಉದ್ಯೋಗದ ಸಮತೋಲನದಲ್ಲಿ ತಾನು ಸೋತಿದ್ದೆನೆಂದು. ಪುರುಷರಲ್ಲಿರುವ ಸಹಜವಾದ ಸಂರಕ್ಷಣಾ ಪ್ರವೃತ್ತಿ ಅರ್ಥವಾಗಿತ್ತು. ತಾನು ತೊರಿಸುತ್ತಿದ್ದ ‘ನನಗೆ ಯಾರ ಅವಶ್ಯಕತೆಯೂ ಇಲ್ಲ’ ಎನ್ನುವ ಮನೋಭಾವ ಆತನ ಮನ ಕದಡುತ್ತಿತ್ತು ಎಂದು ಅರಿವಾಗಿತ್ತು. ಆದರೆ ಸಮಯ ಮೀರಿದ ಮೇಲೆ!
ನಿಧಾನವಾಗಿ ಚಹಾ ಹೀರುತ್ತ ಕೇಳಿದಳು. “ಅಮ್ಮ ಹೇಗಿದ್ದಾರೆ?”
ಆತ ಹೇಳಿದ “ಚೆನ್ನಾಗಿದ್ದಾರೆ ಊರಲ್ಲಿ ಅಣ್ಣನ ಜೊತೆಗೆ ಇದ್ದಾರೆ”
ಸಂದೇಹದಿಂದ ಆಕೆಯ ಕಣ್ಣುಗಳಲ್ಲಿ ಇಣುಕಿದ. ಅದೇನು ಕಾಳಜಿಯೋ ಅಥವಾ ವ್ಯಂಗವೂ! ಅಮ್ಮನನ್ನು ಕಂಡರೆ ರಶ್ಮಿಗೆ ಇಷ್ಟವಿರಲಿಲ್ಲ ವೆಂಬ ಭಾವನೆ ಯಾವಾಗಲೂ ಆತನನ್ನು ಕಾಡುತ್ತಿತ್ತು. ಅಮ್ಮನಿಗೆ ಇಷ್ಟವೆಂದು ಹೇಳಿದ ಯಾವ ಕೆಲಸವನ್ನೂ ಆಕೆ ಮಾಡುತ್ತಿರಲಿಲ್ಲ. ಅದು ಆತನನ್ನು ರೇಗಿಸುತ್ತಿತ್ತು. ಅಮ್ಮನಿಗೆ ಆಕೆ ಜೀನ್ಸ್ ಹಾಕುವುದು ಇಷ್ಟವಿರಲಿಲ್ಲ. ಆದರೂ ಆಕೆ ಬಂದಾಗ ಬೇಕೆಂದೇ ಜೀನ್ಸ್ ಹಾಕಿಕೊಂಡು ಹೊರಡುತ್ತಿದ್ದಳು. ಕಿವಿ ಕೈ ಕೊರಳು ಬರಿದಾಗಿಟ್ಟುಕೊಂಡರೆ ಅಮ್ಮ ರೇಗುತ್ತಿದ್ದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಒಡಾಡುತ್ತಿದ್ದಳು. ಇವತ್ತು ಸೀರೆಯುಟ್ಟು, ಕಿವಿಯಲ್ಲಿ ಉದ್ದದ ಕಿವಿಯೊಲೆ ತೊಟ್ಟು ತನ್ನ ಎದುರಿಗೆ ಕುಳಿತಿದ್ದಾಳೆ. ತುಂಬ ಬದಲಾಗಿದ್ದಾಳೆ ಎಂದುಕೊಂಡ.
ಬ್ರೇಕಫಾಸ್ಟ್ ನೆನಪಾಗಿ ಇರಲಿ ನಂತರ ಬಂದರಾಯಿತು ಎಂದುಕೊಳ್ಳುತ್ತ ಕೇಳಿದ
“ಪ್ರಸಾದ ಹೇಗಿದ್ದಾರೆ” ಆಕೆ ಆಶ್ಚರ್ಯದಿಂದ ಕಣ್ಣರಳಿಸಿ “ಯಾವ ಪ್ರಸಾದ ಎಂದಳು”. ಆತ ಸ್ವಲ್ಪ ಹಿಂಜರಿಯುತ್ತ “ಎಂಗೇಜಮೆಂಟ ಆಯ್ತು ಎಂದು ಕೇಳಿದೆ!” ಎಂದಾಗ. ಆಕೆ ಹಿಂದೆ ಚೆರ್‌ಗೆ ಒರಗಿ ಕಿಟಕಿಯಿಂದ ಹೊರಗೆ ನೋಡುತ್ತ ಹೇಳಿದಳು.
“ಇಲ್ಲ ಅದು ಸರಿಹೊಂದಲಿಲ್ಲ.” ಮನಸ್ಸು ಮುಂದುವರಿಸಿತ್ತು ನಿಮ್ಮ ಹೊರತಾಗಿ ಬಹುಶಃ ಯಾರ ಜೊತೆಯಲ್ಲಿಯೂ ಹೊಂದಿಕೆ ಸಾಧ್ಯವಿಲ್ಲ ಎಂದು ಅರ್ಥವಾಗಿದೆ. ದೈಹಿಕವಾಗಿ ಮಾತ್ರ ದೂರವಾಗಿದ್ದಿರಿ. ಆದರೆ ಮಾನಸಿಕವಾಗಿ ಇನ್ನೂ ನನ್ನ ಜೊತೆಯಲ್ಲಿಯೇ ಇದ್ದಿರಿ. ನಿಮಗೆ ಗೊತ್ತೆ? ಈಗಲೂ ನಾನು ಮನೆಯಿಂದ ಹೊರಗೆ ಹೋಗುವಾಗ ದೇವರ ಮುಂದೆ ದೀಪ ಬೆಳಗಿಯೇ ಹೊರಡುತ್ತೇನೆ. ಅದು ಶುಭ ಎಂದು ನಿಮ್ಮ ಅಭಿಪ್ರಾಯ ಅಲ್ಲವೇ? ಯಾವ ನಿರ್ಧಾರ ತೆಗೆದುಕೊಳ್ಳುವಾಗಲೂ ಮೊದಲು ಯೋಚನೆ, ‘ಅವರಿದ್ದರೆ ಎನು ಮಾಡುತ್ತಿದ್ದರು’ ಎಂದು. ಬೇಗ ಏಳುತ್ತೇನೆ, ಬೇಗ ಮಲಗುತ್ತೆನೆ. ನಿಮಗೆ ಅಸ್ತವ್ಯಸ್ತ ಮನೆ ಸಿಟ್ಟು ತರಿಸುತ್ತದೆ ಅಲ್ಲವೇ? ಈಗ ಬಂದು ನೋಡಿ ಮನೆಯಲ್ಲಿ ಯಾವ ವಸ್ತುವೂ ತಮ್ಮ ಜಾಗದಿಂದ ಕದಲಿರುವುದಿಲ್ಲ. ಕರಗಿ ಹರಿಯುತ್ತಿದ್ದ ಮನವನ್ನು ತನ್ನ ಮಾತುಗಳಿಂದ ತಡೆಯಲು ಪ್ರಯತ್ನಿಸುತ್ತ ಕೇಳಿದಳು.
“ಯಾಕೋ ಸ್ವಲ್ಪ ಸಣ್ಣಗಾಗಿದ್ದಿರಲ್ಲ? ಊಟ ಸರಿಯಾಗಿ ಮಾಡುವುದಿಲ್ಲವೇ?”
“ಹಾಗೇನೂ ಇಲ್ಲ ಸ್ವಲ್ಪ ವ್ಹೆಟ್ ಮೆಂಟೆನ್ ಮಾಡಬೇಕಲ್ಲ. ಅದಕ್ಕೆ ವಾರಕ್ಕೆ ಮೂರು ದಿನ ಜಿಮ್ ಹೋಗುತ್ತಾ ಇದ್ದೆನೆ” ಎಂದು ಸ್ವಲ್ಪ ನಾಚುತ್ತ. ಆತನಿಗೆ ನೆನಪಿಗೆ ಬಂದಿತ್ತು. ಮದುವೆಯಾಗಿ ಒಂದು ವರ್ಷದಲ್ಲಿ ಸಂಭೃಧ್ಧಿಯ ಹೊಟ್ಟೆ ಕಾಣಿಸಿದಾಗ ಆಕೆ ‘ಈ ತರ ಹೊಟ್ಟೆ ಬಿಟ್ಟುಕೊಂಡು ಬಂದರೆ ನಾನು ನಿಮ್ಮ ಜೊತೆ ಎಲ್ಲಿಗೂ ಬರುವುದಿಲ್ಲ’ ಎಂದು ಶುರು ಹಚ್ಚಿದ್ದಳು. ಆದರೆ ಮೂಲತಃ ಸ್ವಲ್ಪ ಆಲಸಿಯಾಗಿದ್ದ ಅರುಣನಿಗೆ ಯಾವುದೇ ದೈಹಿಕ ಚಟುವಟಿಕೆ ಹಿಂಸೆ ಎನಿಸುತ್ತಿತ್ತು. ಆಕೆ ಪದೆ ಪದೆ ಹೇಳಿದಾಗ ರೇಗುತ್ತಿತ್ತು. ಎಷ್ಟೊ ಸಲ ಸಿಟ್ಟಿನಲ್ಲಿ ಆಕೆಯನ್ನು ಬಿಟ್ಟು ಒಬ್ಬನೇ ಹೊರಟಿದ್ದು ಉಂಟು. ಆದರೆ ಈಗ ಪ್ರತಿ ಸಲ ಬೆಳಿಗ್ಗೆ ಎದ್ದು ಜಿಮ್ ಹೋಗುವಾಗ ಯಾವ ಪ್ರೇರಣೆ ಎಂದು ಅರ್ಥವಾದರೂ ಅರ್ಥವಾಗದ ಹಾಗಿತ್ತು. ತನ್ನ ನೆಚ್ಚಿನ ನೆರಳೆ ಬಣ್ಣದ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣುತ್ತಿದ್ದ ಆಕೆಯನ್ನು ನೊಡುತ್ತ ಹೇಳಿದ
“ಸೀರೆ ತುಂಬ ಚೆನ್ನಾಗಿದೆ. ನಿನಗೆ ಸೀರೆ ತುಂಬ ಒಪ್ಪುತ್ತದೆ.” ಆಕೆ ಬೆರಳಿನಿಂದ ಸೆರಗು ಸರಿ ಮಾಡಿಕೊಳ್ಳುತ್ತ ಹೇಳಿದಳು. “ಈಗ ಸೀರೆಯನ್ನು ಹೆಚ್ಚಾಗಿ ಉಡುತ್ತಿದ್ದೆನೆ. ಕಂಫರ್ಟೆಬಲ್ ಎನಿಸುತ್ತದೆ” ತುಂಬು ಮನದಿಂದ ಬಂದಿತ್ತು ಮಾತು. ಸೀರೆಯನ್ನು ದಾಸ್ಯದ ಸಂಕೇತವೆAದು ಬಿಂಬಿಸುವ, ವಿಮೋಚಕರೆಂದು ಕರೆದು ಕೊಳ್ಳುವವರ ಮಾತಿನ ಪ್ರಭಾವಕ್ಕೆ ಒಳಗಾಗಿದ್ದಕ್ಕಾಗಿ ಖೇದವೆನಿಸಿತ್ತು. ಸೀರೆ ಉಟ್ಟಾಗ ತನ್ನನ್ನು ಆರಾಧಿಸುತ್ತಿದ್ದ ಅರುಣನ ಕಣ್ಣುಗಳು ಪದೇ ಪದೇ ಕಾಡ ತೊಡಗಿದ್ದವು. ಯಾರಿಗಾಗಿ ಉಡುತ್ತಿದ್ದೇನೆ ಎನ್ನುವ ಸ್ಪಷ್ಟವಾದ ಕಲ್ಪನೆ ಮೂಡಿರದಿದ್ದರು ಸೀರೆಯ ಕಡೆಗೆ ಮನವಾಲಿತ್ತು. ಅದೂ ಕಂಪರ್ಟೆಬಲ್ ಎನ್ನುವ ಮಟ್ಟಿಗೆ!

ಕಪ್ಪನಲ್ಲಿ ಚಹಾ ಖಾಲಿಯಾಗುತ್ತಿದ್ದಂತೆ ಮನಸ್ಸು ಖಾಲಿಯಾಗತೊಡಗಿತ್ತು. ಏನೊ ಅಮೂಲ್ಯವಾದದ್ದು ಕಳೆದು ಹೋಗುತ್ತಿರುವಂತೆ ಮನಸ್ಸು ಆ ಕ್ಷಣವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿತ್ತು. ಗಡಿಯಾರದ ಮುಳ್ಳುಗಳನ್ನು ಕಿತ್ತು ಹಾಕಲು ಬಯಸುತ್ತಿತ್ತು. ಮೌನ ಮಾತನಾಡುತ್ತಿತ್ತು. ನನಗೆ ನನ್ನ ಮನೆ ಬೇಕು ಅರುಣ. ನಮ್ಮ ಬೆಡ್‌ರೂಮ ಇಗಲೂ ಮಿಸ್‌ಮಾಡಿಕೊಳ್ಳುತ್ತೇನೆ. ಬೆಳಿಗ್ಗೆ ಎಚ್ಚರವಾದಾಗ ನಿಮ್ಮ ಮುಖ ನೋಡ ಬಯಸುತ್ತೇನೆ. ನನಗೆ ಗೊತ್ತಿದೆ ನೀವು ನನ್ನನ್ನು ತುಂಬ ಹಟಮಾರಿ ಎಂದುಕೊAಡಿದ್ದಿರಿ. ಆದರೆ ನಾನು ಬದಲಾಯಿಸಿದ್ದೆನೆ ನನಗೆ ಅರ್ಥವಾಗಿದೆ. ನನ್ನನ್ನು ನಾನು ಸಂತೋಷಪಡಿಸಿಕೊಳ್ಳುವ ಭರದಲ್ಲಿ ನಿಮಗೆ ತುಂಬ ನೊವು ಕೊಟ್ಟಿದ್ದೆನೆ. ಒಂದು ಸಲ, ಒಂದೇ ಒಂದು ಸಲ ನನ್ನ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಿ…. ಆದರೆ ಮೌನದ ಮಾತಿಗೆ ಧ್ವನಿ ಹೇಗೆ ಇರಲು ಸಾಧ್ಯ! ಕಣ್ಣು ಮಂಜಾಗ ತೊಡಗಿದ್ದವು. ಎದುರಿಗಿದ್ದ ಆತನ ಮುಖಭಾವವನ್ನು ಅರಿಯಲು ಅಸಮರ್ಥವಾಗಿದ್ದವು.
ಆತನ ಮುಖಭಾವ ಸ್ಪಷ್ಟವಾಗಿ ಹೇಳುತ್ತಿತ್ತು. ನಾನು ನಿನ್ನನ್ನು ಮರೆಯಲಾಗುತ್ತಿಲ್ಲ ರಶ್ಮಿ ನೀನಿಲ್ಲದೇ ಮನೆ ಮನೆಯೇ ಅಲ್ಲ. ಅದೊಂದು ಕಟ್ಟಡ ಮಾತ್ರ. ಎಲ್ಲವೂ ಶೂನ್ಯ. ಯಾವ ಸಾಧನೆಯೂ ನೀನಿಲ್ಲದೇ ಅಪೂರ್ಣ. ಸಾವಿರ ಜನರ ಚಪ್ಪಾಳೆಯೂ ನಿನ್ನ ಒಂದು ಮುಗುಳನಗೆಯ ಸ್ವೀಕಾರಕ್ಕೆ ಸಮನಲ್ಲವೆಂದು ಅರಿವಾಗಿದೆ. ಚಿಕ್ಕ ಚಿಕ್ಕ ವಿಷಯಕ್ಕೆ ರೇಗಾಡಿ ನಿನಗೆ ನೊವನ್ನುಂಟು ಮಾಡುತ್ತಿದ್ದೆ. ಈಗ ಯಾವ ವಿಷಯಕ್ಕೂ ಸಿಟ್ಟು ಬರುತ್ತಿಲ್ಲ. ಜೀವಂತಿಕೆಯ ಭಾವವನ್ನು ಕಳೆದುಕೊಂಡ ಹಾಗೆನಿಸುತ್ತದೆ. ಮರಳಿ ಭಾ ರಶ್ಮಿ. ಇನ್ನು ಯಾವತ್ತೂ ಯಾವ ಕಾರಣಕ್ಕೂ ಯಾವದೇ ಕಹಿ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನನಗೆ ನೀನು ಬೇಕು ರಶ್ಮಿ ನೀನು ಬೇಕು…
ಎರಡು ಕಪ್ಪಗಳಲ್ಲಿಯ ಚಹಾ ಬರಿದಾಗಿತ್ತು. ಗಡಿಯಾರದಲ್ಲಿ ಹತ್ತು ಗಂಟೆಗೆ ಇನ್ನೂ ಐದು ನಿಮಿಷ ಸಮಯ ತೋರಿಸುತ್ತಿತ್ತು. ರಶ್ಮಿ ಗಡಿಯಾರವನ್ನು ನೋಡಿಕೊಂಡು
“ಸರಿ ಹೊರಡುತ್ತೇನೆ” ಎನ್ನುತ್ತ ಎದ್ದಳು. ಹೃದಯ ರೋಧಿಸುತ್ತಿತ್ತು. ಅರುಣ, ನನ್ನನ್ನು ತಡೆಯ ಬಾರದೇ ಒಂದು ಸಲ ನನ್ನನ್ನು ನಿಮ್ಮ ಬಾಹುಗಳಲ್ಲಿ ಬಂದಿಸಬಾರದೇ. ಮನಸಾರೆ ಕ್ಷಮೆ ಕೇಳುತ್ತೇನೆ. ಎಲ್ಲವೂ ಸರಿಯಾಗುವುದು. ಪ್ಲೀಸ್ ಅರುಣ… ಆಕೆಗೆ ಆತನ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ.
ಅರುಣ ಕುಳಿತಲ್ಲೆ ಕುಳಿತಿದ್ದ. ಆತನ ಮುಖಭಾವ ಇನ್ನೂ ಹಾಗೆಯೇ ಇದ್ದಿತು. ಕೂಗಿ ಕೂಗಿ ಹೇಳುತ್ತಿತ್ತು ಹೋಗ ಬೇಡ ರಶ್ಮಿ ಪ್ಲೀಸ್ ಮರಳಿ ಬಾ, ಒಂದೇ ಒಂದು ಸಲ ಹೊರಳಿ ನೋಡು, ನೀನು ಮೊದಲು ನೋಡುತ್ತಿದ್ದ ಹಾಗೆ. ನನಗೆ ಅರ್ಥವಾಗುತ್ತದೆ… ಆತನ ನೋಟ ಆಕೆ ಎದ್ದು ಹೋದ ಖುರ್ಚಿಯ ಮೇಲೆ ನೆಟ್ಟಿತ್ತು, ಆಕೆಯನ್ನು ಅಲ್ಲಿ ಹುಡುಕುತ್ತಿರುವ ಹಾಗೆ.
ಆಕೆ ಬಾಗಿಲು ದಾಟಿ ಹೊರಟು ಹೋಗಿದ್ದಳು, ಅಳುತ್ತಿದ್ದ ಹೃದಯವನ್ನು ಒತ್ತಿಹಿಡಿದು ಅದರ ಬಿಕ್ಕಳಿಕೆ ಹೊರಗೆ ಕೇಳಿಸದ ಹಾಗೆ. ನಂತರ ತನ್ನ ಕೈವಸ್ತ್ರದಿಂದ ಕಣ್ಣಿನಿಂದ ಜಾರುತ್ತಿದ್ದ ಕಂಬನಿಯನ್ನು ಒರಸಿ, ಆತ್ಮ ವಿಶ್ವಾಸದ ಮುಖವಾಡವನ್ನು ಧರಿಸಿ, ತೆಲೆ ಎತ್ತಿ ನಡೆದಳು.

ಅಹಂನ ಸೂಕ್ಷ್ಮ ಪರದೆ ಕಣ್ಣುಗಳನ್ನು ಕಿವಿಗಳನ್ನು ಆವರಿಸಿ, ಹೃದಯಗಳ ರೋಧನ ಕಾಣದ ಹಾಗೆ ಕೇಳದ ಹಾಗೆ ಇಬ್ಬರನ್ನೂ ಕುರುಡ ಹಾಗೂ ಕಿವುಡರನ್ನಾಗಿಸಿತ್ತು. ಕಣ್ಣಿಗೆ ಕಾಣದ ಅಹಂಕಾರದ ಗೋಡೆ ಎರಡು ಪ್ರೀತಿಸುವ ಹೃದಯಗಳನ್ನು ಬೇರ್ಪಡಿಸಿತ್ತು.


ಶ್ರೀಮತಿ. ರಾಜನಂದಾ ಘಾರ್ಗಿ
ಸಹಾಯಕ ಉಪನ್ಯಾಸಕರು (ನಿವೃತ್ತ) ಕೆ.ಎಸ್.ಆರ್ ಶಿಕ್ಷಣ ವಿದ್ಯಾಲಯ,
ಬೆಳಗಾವಿ.

One thought on “ಅಹಂಕಾರದ ಗೋಡೆ

  1. super ma’am.. best article

    ಯುವ ಪಿಳಿಗೆಗೆ ಜೀವನದದೂದ್ದಕ್ಕೂ ಅಹಂಕಾರ ಎಂಬ ವಿಷಯವನ್ನು ಕಿತ್ತು ಹಾಕಿದರೆ ಸುಖಮಯ ಹಂಪತ್ತಬರಿತ ಜೀವನ ಸಾಧ್ಯವಿದೆ ಎಂದು ತಿಸಿಕೊಟ್ಟಿದಿರಿ tq so much ma’am ನಿಮ್ಮ ವಿದ್ಯಾರ್ಥಿ ಆಗಿರುವುದು ಸಂತೋಷ ಎನಿಸುತ್ತದೆ

Comments are closed.

Don`t copy text!