ಗಜಲ್
ಆರಿದ ಉಸಿರು ಅಂಗಳದಲಿ ಬೀಸಣಿಕೆ ಬೀಸಿದರೇನು ಪ್ರಯೋಜನ
ನಡೆದಾಡದ ಕಾಲುಗಳಿಗೆ ಹಗ್ಗದ ಕುಣಿಕೆ ಬಿಗಿದರೇನು ಪ್ರಯೋಜನ
ನಿನ್ನೊಲವು ಮಾಸದ ಮಡಿ ಉಡಲು ಹಂಬಲಿಸಿ ಬಾಳಿದವಳು ಅವಳು
ಕರಿ ಕಂದಿದ ಕಾಯಕೆ ಹೊಸ ಸೀರೆ ಉಡಿಸಿದರೇನು ಪ್ರಯೋಜನ
ಒಲವಿಂದ ಮುಡಿಗೆ ಮಲ್ಲಿಗೆ ಮುಡಿಸುವಿರೆಂದು ಕಾದವಳು ಅವಳು
ಹೊಗೆ ಹಾಕಿ ತಲೆಗೆ ಹೂ ದಂಡೆ ಕಟ್ಟಿದರೇನು ಪ್ರಯೋಜನ
ಜನ್ಮ ಪೂತಿ೯ ಅವನ ತನು ಕಂಪಲಿ ಬೆರೆಯ ಬಯಸಿದವಳು ಅವಳು
ಊದು ಹಚ್ಚಿ ಅತ್ತಾರ ಸಿಂಪಡಿಸಿ ಬಿಕ್ಕಿದರೇನು ಪ್ರಯೋಜನ
ಮನೆಯ ಒಳಹೊರಗೆ ಹೊನ್ನಕಿರಣ ಹರಡಲು ಆಶಿಸಿದವಳು ಅವಳು
ಸಮಾಧಿಯ ಒಳಗೆ ಹಣತೆ ಇಟ್ಟು “ಪ್ರಭೆ”ಯ ಹುಡುಕಿದರೇನು ಪ್ರಯೋಜನ
–
–ಪ್ರಭಾವತಿ ಎಸ್. ದೇಸಾಯಿ ವಿಜಯಪುರ