ನಿಂತಂತಾಯ್ತು ಉಸಿರು
ನಿನ್ನೆ ಭೂಮಿ ಮೇಲೆ ಇದ್ದ
ಮಂದಿ ಇಂದು ಇಲ್ಲ
ನಾಳೆ ಎಷ್ಟು ಜನರು ಏನೋ
ಯಾರು ತಾನೆ ಬಲ್ಲ ||
ಹುಟ್ಟು ಸಾವು ನಡುವೆ ಇಹುದು
ಬೆತ್ತಲಾದ ಬದುಕು
ನಿತ್ಯದಲ್ಲಿ ಖಾಲಿ ಖಾಲಿ
ತುಂಬದ ಸಂದೂಕು ||
ಹತ್ತು ಹಲವು ಬಯಕೆಯಲ್ಲ
ನೀರ ಮೇಲಿನ ಬುರುಡೆ
ನಿಲ್ಲದಂತೆ ಓಟದಾಟ
ಸೋಲಿನಾಟ ಪಗಡೆ ||
ಕೈಯ ತಟ್ಟಿ ಕೇಕೆ ಹಾಕಿ
ಕುಣಿವೆ ಏಕೆ ಹುಚ್ಚಾ
ಕಣ್ಣಾ ಮುಚ್ಚೆ ಕಾಡೇಗೂಡೆ
ಬಟ್ಟ ಬಯಲೊ ಬಚ್ಚಾ ||
ಮತ್ತೆ ಮತ್ತೆ ಹುಟ್ಟಿ ಬರುವ
ಆಸೆ ಯಾಕೆ ಕೂಸೇ
ನುಡಿದ ಮಾತು ನಡೆಸದಾದೆ
ತಪ್ಪಿ ಹೋಯ್ತು ಭಾಸೇ ||
ಕತ್ತಲಲ್ಲಿ ಕರಡಿ ಕುಣಿತ.
ಕಾಣದಾಯ್ತು ಚಿತ್ರ
ನೂತ ನೂಲ ಎಳೆಯು ಸರಿದು
ಹರಿದು ಹೋಯ್ತು ವಿಚಿತ್ರ ||
ಉರಿವಬೆಂಕಿ ಸುರಿವಮಳೆಯು
ಇಳೆಯ ತುಂಬ ಗೋಳು
ಗಾಳಿ ಎಲ್ಲ ಘಾಟು ಘಾಟು
ಮಲಿನವಾಯ್ತು ಬಾಳು ||
ಮರವು ಗಿಡವು ಹಸಿರು ಬಳ್ಳಿ
ಎಲ್ಲ ಧೂಳು ಧೂಳು
ಗಗನ ಗಿರಿ ನದಿಯು ಝರಿಯು
ಆಗಿ ಹೋಯ್ತು ಹಾಳು ||
ಯಾರೋ ಕೂಗಿ ಕರೆದಂತಾಯ್ತು
ಕಣ್ಗೆ ಬಂತು ಮಂಪರು
ಏನೂ ಕಾಣದಂತಾಯ್ತು
ನಿಂತಂತಾಯ್ತು ಉಸಿರು ||
✍️ ಅಯ್ಯಪ್ಪಯ್ಯ ಹುಡಾ
ಬಸವನಗರ ರಾಯಚೂರು
ಹುಟ್ಟು ಸಾವಿನ ನಡುವೆ ಬೆತ್ತಲಾದ ಬದುಕಿಗೆ, ಕತ್ತಲು ತೋರಿಸುತಿದೆ ಪ್ರಕೃತಿ. ತಾವು ಹೇಳಿದಂತೆ, ಮರ ಗಿಡ ಹಸಿರು ಬಳ್ಳಿ, ಗಗನ ಗಿರಿ ನದಿಗಳನ್ನು ಹಾಳುಗೆಡವಿದ ಮಾನವನಿಗೆ ಉಸಿರು ನಿಂತ ಅನುಭವ ಸಹಜವಾದದ್ದೆ ಸರ್. ತಮ್ಮ ಕವಿತೆ ಮನುಷ್ಯನ ದಾರ್ಷ್ಟ್ಯತನವನ್ನು ತೋರಿಸಿದೆ. ನೂತ ನೂಲಿನ ಒಂದು ಎಳೆಯು ಸರಿದರೆ, ಪೂರ್ತಿ ಕಾರ್ಯವೇ ನಿಷ್ಪ್ರಯೋಜಕ ಎಂಬಮಾತು ಸತ್ಯ ಸರ್….