ಧನವಿದ್ದು ದಯವಿಲ್ಲ ದಿದ್ದಲ್ಲಿ ….
ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ
ನಾನಿದ್ದು ಫಲವೇನು ನಿಮ್ಮ
ಜ್ಞಾನವಿಲ್ಲದನ್ನಕ
–ಅಕ್ಕ ಮಹಾದೇವಿ
ದಾರಿ ಹೋಕರಿಗೆ, ಪಶು ಪ್ರಾಣಿಗಳಿಗೆ ನೆರಳನ್ನೂ ಕೊಡದಿದ್ದಲ್ಲಿ ಮರವಿದ್ದು ಫಲವೇನು? ವ್ಯಕ್ತಿಯ ಹತ್ತಿರ ಅಪಾರ ಧನವಿದ್ದೂ ದಯವಿಲ್ಲದಿದ್ದಲ್ಲಿ ಏನು ಪ್ರಯೋಜನ. ಹಯನವಿಲ್ಲದ ಹಸುವಿನಿಂದ ಏನು ಉಪಯೋಗ? ವ್ಯಕ್ತಿಯು ರೂಪವಂತನಾಗಿದ್ದು ಗುಣವಂತನಾಗಿಲ್ಲದ್ದಿದ್ದರೆ ಆ ರೂಪದಿಂದ ಏನು ಪ್ರಯೋಜನ? ತಟ್ಟೆ ಇದ್ದೂ ಅದರಲ್ಲಿ ಬಡಿಸಲು ಅನ್ನವಿಲ್ಲದಿದ್ದರೆ ಏನು ಫಲ? ಅದೇ ರೀತಿಯಾಗಿ ನನ್ನಲ್ಲಿ ಚೆನ್ನ ಮಲ್ಲಿಕಾರ್ಜುನನ ಜ್ಞಾನವಿಲ್ಲದಿದ್ದರೆ ನಾನಿದ್ದು ಫಲವೇನು ಎಂದು ಕೇಳುತ್ತಾಳೆ ಅಕ್ಕ ಮಹಾದೇವಿ.
ಈ ರೀತಿಯಾಗಿ ಅನೇಕ ಉದಾಹರಣೆಗಳನ್ನು ಕೊಟ್ಟು ಅಕ್ಕ, ಆಯಾ ಜೀವಿಗಳ ವಿಷೇಶತೆಯನ್ನು ಮತ್ತು ತಟ್ಟೆಯ ಸರಿಯಾದ ಉಪಯೋಗ ಯಾವಾಗ ಸಾಧ್ಯವಾಗುತ್ತದೆ ಎಂಬುದನ್ನು ಕುರಿತು ಹೇಳುತ್ತಾಳೆ. ಪ್ರಕೃತಿಯಲ್ಲಿ ಪ್ರತಿಯೊಂದು ವಸ್ತು ಅಥವಾ ಜೀವಿಗೂ ಅದರದೇ ಆದ ಒಂದು ವಿಶೇಷ ಗುಣ ಇರುತ್ತದೆ. ಆ ವಿಶೇಷ ಗುಣದಿಂದಾಗಿ ಅದು ಎಲ್ಲರಿಗೂ ಬೇಕಾಗಿ ಸಾರ್ಥಕ್ಯವನ್ನು ಪಡೆಯುತ್ತದೆ.
ಉದಾಹರಣೆಗೆ: ಮರ. ಅನೇಕ ಮರಗಳು ಒಂದು ವೇಳೆ ಫಲ ಕೊಡದಿದ್ದರೂ ಕನಿಷ್ಠ ಪಕ್ಷ ನೆರಳು ಕೊಡುತ್ತವೆ. ಹೀಗೆ ಅವು ಲೋಕದ ದೃಷ್ಟಿಯಲ್ಲಿ ಸಾರ್ಥಕತೆಯನ್ನು ಪಡೆಯುತ್ತವೆ. (ಈ ವಚನದಲ್ಲಿ ಹೇಳಿದ ಜೀವಿಗಳನ್ನು, ಕೇವಲ ಲೋಕದ ದೃಷ್ಟಿಯಿಂದ ಮಾತ್ರ ನೋಡಲಾಗಿದೆ. ಅನೇಕ ಜೀವಿಗಳು ಲೋಕದ ದೃಷ್ಟಿಯಿಂದ ಉಪಕಾರಿಗಳಲ್ಲದಿದ್ದರೂ ಪ್ರಕೃತಿಯ ಜೀವಜಾಲದಲ್ಲಿ (web of life) ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿಯೇ ಇರುತ್ತವೆ. ಹಾಗಾಗಿ ಅವು ಮಾನವರಿಗೆ ಪ್ರತ್ಯಕ್ಷವಾಗಿ ಉಪಕಾರ ಮಾಡದಿದ್ದರೂ ಅವುಗಳ ಉಪಕಾರವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಆ ವಿಷಯ ಇಲ್ಲಿ ಅಪ್ರಸ್ತುತ.) ನೆರಳೂ ಕೊಡದಿದ್ದರೆ ಲೋಕದ ದೃಷ್ಟಿಯಲ್ಲಿ ಮರಗಳಿಗೆ ಬೆಲೆ ಇರುವುದಿಲ್ಲ ಎನ್ನುತ್ತಾಳೆ ಅಕ್ಕ.
ವ್ಯಕ್ತಿಯ ಜೀವನ ಆತನ ದಯೆಯ ಗುಣದಿಂದ ಅರ್ಥಪೂರ್ಣವಾಗುತ್ತದೆ. ಅಪಾರ ಹಣವಿದ್ದೂ ಕಷ್ಟದಲ್ಲಿದ್ದವರ ಪರ ಕರುಣೆಯಿಲ್ಲದವನ, ಅತ್ಯಾವಶ್ಯಕತೆಯಿದ್ದವರಿಗೆ ಕೈಯೆತ್ತಿ ಕೊಡುವ ಗುಣವಿಲ್ಲದಿದ್ದವನ ಜೀವನಕ್ಕೆ ಯಾವ ಅರ್ಥವಿರುತ್ತದೆ? ಹಣವಿರುವುದೇ ಉಪಯೋಗಕ್ಕಾಗಿ. ಒಬ್ಬ ವ್ಯಕ್ತಿ, ತನ್ನಲ್ಲಿ ಇದ್ದುದೆಲ್ಲವನ್ನೂ ಸ್ವಂತಕ್ಕೆ ಮಾತ್ರ ಉಪಯೋಗಿಸಿದರೆ ಏನಾಗುತ್ತದೆ? ಆತನಲ್ಲಿ ಆಸೆಗಳು ಕೊನೆಯಿಲ್ಲದೆ ಚಿಗುರತ್ತಲೆ ಇರುತ್ತವೆ. ಆತನು ಸಂಪೂರ್ಣವಾಗಿ ಆಸೆಗಳ ದಾಸನಾಗುತ್ತಾನೆ. ಹಣವಿಲ್ಲದೆ ಕಷ್ಟಪಡುತ್ತಿರುವವರಿಗೆ ಅವನು ಅಸಹ್ಯನಾಗುತ್ತಾನೆ, ಅವರ ಮನದಲ್ಲಿ ಅವನ ಪರ ಹೊಟ್ಟೆಕಿಚ್ಚು ಹುಟ್ಟುವಂತಾಗುತ್ತದೆ. ಇಂತಹವನಿಂದ ಸಮಾಜಕ್ಕೆ ಏನು ಪ್ರಯೋಜನ? ಲೋಕದ ದೃಷ್ಟಿಯಲ್ಲಿ ಅವನಿಗೆ ಯಾವ ಬೆಲೆಯೂ ಇರುವುದಿಲ್ಲ, ಎನ್ನುತ್ತಾಳೆ ಅಕ್ಕ.
ಲೋಕದ ದೃಷ್ಟಿಯಲ್ಲಿ ಹಸುವಿನ ಸಾರ್ಥಕತೆ ಹಾಲು ಕೊಡುವುದರಲ್ಲಿದೆ. ಅದು ತನ್ನ ಕರುವಿಗೆ ಮಾತ್ರವಲ್ಲದೆ ಇತರರಿಗೂ ಹಾಲು ಕೊಟ್ಟು ಧನ್ಯವೆನಿಸಿಕೊಳ್ಳುತ್ತದೆ. ಹಸುವನ್ನು ಎತ್ತಿನಂತೆ ಉಳುವುದಕ್ಕೆ ಉಪಯೋಗಿಸುವುದಿಲ್ಲ. ಆದ್ದರಿಂದ ಲೋಕದ ದೃಷ್ಟಿಯಲ್ಲಿ, ಹಸು ಹಾಲು ಕೊಡದೆ ಇದ್ದಲ್ಲಿ ಅದರಿಂದ ಯಾವ ಪ್ರಯೋಜನವೂ ಇಲ್ಲ.
ವ್ಯಕ್ತಿಯು ರೂಪವಂತನಾಗಿದ್ದರೆ ಸಾಲದು, ಆತನಲ್ಲಿ ಒಳ್ಳೆಯ ಗುಣಗಳಿರಬೇಕಾದದ್ದು ಮುಖ್ಯ. ರೂಪ ಇತರರನ್ನು ಆಕರ್ಷಿಸುತ್ತದೆ ನಿಜ. ಆದರೆ ಅದು ತಾತ್ಕಾಲಿಕ. ಅದು ಶಾಶ್ವತವೂ ಅಲ್ಲ ಮತ್ತು ಆಳವಾದದ್ದೂ ಅಲ್ಲ. ಆದ್ದರಿಂದ ಬಲು ಬೇಗ ಅದು ಮಾಸಿ ಹೋಗುತ್ತದೆ ಮತ್ತು ಅದರ ಟೊಳ್ಳುತನ ತಿಳಿದು ಬರುತ್ತದೆ. ಅದರಿಂದ ಬೇರೇನೂ ಪ್ರಯೋಜನವಿಲ್ಲ. ಒಳ್ಳೆಯ ಗುಣಗಳಿಗೆ ನಿಜವಾದ ಆಕರ್ಷಣೆಯಿರುತ್ತದೆ. ಒಳ್ಳೆಯ ಗುಣಗಳು ಮಂಗಳವನ್ನುಂಟು ಮಾಡುವುದರಿಂದ ಅವುಗಳ ಆಕರ್ಷಣೆ ಕುಂದುವುದಿಲ್ಲ. ಆದ್ದರಿಂದ ಕೇವಲ ರೂಪದಿಂದ ಯಾವ ಫಲವೂ ಇಲ್ಲ. ಒಳ್ಳೆಯ ಗುಣಗಳಿಂದಲೇ ರೂಪಕ್ಕೆ ಸಾರ್ಥಕತೆಯುಂಟಾಗುತ್ತದೆ, ಅಲ್ಲದಿದ್ದಲ್ಲಿ ರೂಪಕ್ಕೆ ಯಾವ ಬೆಲೆಯೂ ಇಲ್ಲ.
ಊಟದ ತಟ್ಟೆ ಇದ್ದು ಅದರಲ್ಲಿ ನೀಡಲು ಅನ್ನವೇ ಇಲ್ಲದಿದ್ದಲ್ಲಿ ಆ ತಟ್ಟೆಯಿದ್ದು ಫಲವೇನು. ಅನ್ನವನ್ನು ಬಡಿಸಿಕೊಂಡು ಊಟಮಾಡಿದರೇನೇ ಆ ತಟ್ಟೆಗೆ ಸಾರ್ಥಕತೆ ಬರುತ್ತದೆ. ಇಲ್ಲದಿದ್ದರೆ ಆ ತಟ್ಟೆ ಒಂದು ಪ್ರದರ್ಶನದ ವಸ್ತುವಾಗುತ್ತದೆ ಅಷ್ಟೆ.
ಈ ಎಲ್ಲ ಉದಾಹರಣೆಗಳನ್ನು ಕೊಟ್ಟು ಅಕ್ಕ ಕೊನೆಗೆ ತನ್ನನ್ನೇ ಒರೆಗೆ ಹಚ್ಚಿ ನೋಡುತ್ತ ನನ್ನಲ್ಲಿ ಚೆನ್ನಮಲ್ಲಿಕಾರ್ಜುನನ ಜ್ಞಾನ ವಿಲ್ಲದಿದ್ದರೆ ನಾನಿದ್ದು ಏನು ಪ್ರಯೋಜನ? ಎನ್ನುತ್ತಾಳೆ. ಮರ, ಧನಿಕ, ಹಸು, ರೂಪವಂತ ಮತ್ತು ತಟ್ಟೆಯನ್ನು ಲೋಕದ ದೃಷ್ಟಿಯಿಂದ ನೋಡಿದ ಅಕ್ಕ ತನ್ನನ್ನು ಮಾತ್ರ ಲೋಕದ ದೃಷ್ಟಿಯನ್ನು ಮೀರಿ ನೋಡಿಕೊಳ್ಳುತ್ತಾಳೆ. ಲೋಕದ ದೃಷ್ಟಿಯಲ್ಲಿ, ವ್ಯಕ್ತಿಯು, ಸಾಮಾನ್ಯವಾದ ಒಳ್ಳೆಯ ಗುಣಗಳನ್ನು ಹೊಂದಿ, ಸಮಾಜಕ್ಕಾಗಿ ನಾಲ್ಕು ಒಳ್ಳೆಯ ಕೆಲಸ ಮಾಡಿದರೆ ಸಾಕು. ಅದಕ್ಕಿಂತ ಹೆಚ್ಚಿನದೇನನ್ನು ಸಮಾಜ ಕೇಳುವುದಿಲ್ಲ್ಲ. ಆದರೆ ಅಕ್ಕ, ತನಗಾಗಿ ಅದಕ್ಕಿಂತ ಹೆಚ್ಚಿನ ಮಟ್ಟವನ್ನು, ವ್ಯಕ್ತಿಯ ವಿಕಾಸದ ತುತ್ತ ತುದಿಯನ್ನು ನಿಗದಿಪಡಿಸಿಕೊಳ್ಳುತ್ತಾಳೆ. (she sets highest level for herself) ಲೋಕದ ಮನುಜರೆಲ್ಲರಿಗೂ ಆ ಪರಶಿವನ ಜ್ಞಾನದಿಂದಲೇ ಸಾರ್ಥಕ್ಯ ಪ್ರಾಪ್ತವಾಗುತ್ತದೆಯೇ ವಿನಃ ಬೇರೆ ಯಾವುದರಿಂದಲೂ ಸಾಧ್ಯವಿಲ್ಲವೆಂದು ಹೇಳುತ್ತಾಳೆ.
ಇಲ್ಲಿ ಅತನನ್ನು ಅರಿಯುವುದು ಎಂದರೇನು ಎಂಬುದನ್ನು ನಾವು ನಮ್ಮ ನಮ್ಮ ಮಿತಿಯಲ್ಲಾದರೂ ಸರಿಯೆ, ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಜನ್ಮವೂ ನಿರರ್ಥಕ.
ಆತನನ್ನು ಅರಿಯುವುದು ಎಂದರೆ ತನನ್ನು ತಾನು ಅರಿಯುವುದು. ತನ್ನನ್ನು ಅರಿಯುವುದು ಎಂದರೆ: ತಾನು ಹೇಗೆ ನಡೆದುಕೊಳ್ಳುತ್ತೇನೆ? ಮತ್ತು ಏಕೆ? ಆ ನಡತೆ ಇತರರನ್ನು ಮೆಚ್ಚಿಸಲು ಮಾತ್ರವೇ? ತನ್ನ ನಡತೆ ಎಲ್ಲರೊಂದಿಗೂ ಒಂದೇ ರೀತಿಯಾಗಿರುವುದಿಲ್ಲ. ಏಕೆ? ತನ್ನಲ್ಲಿ ಕೋಪ, ಭಯ, ಅಹಂಕಾರ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಹುಟ್ಟುತ್ತವೆ. ಅವುಗಳಿಂದ ತಾನು ನರಳುತ್ತೇನೆ. ಅವುಗಳಿಂದ ಬಿಡುಗಡೆ ಹೇಗೆ? ತಾನು ಸಮಾಜ ಮೆಚ್ಚುವಂತೆ ನಡೆದುಕೋಡರೆ ಸಾಕೆ? ಅಥವಾ ಅದಕ್ಕಿಂತ ಹೆಚ್ಚಿನ ಅರ್ಥ ಈ ಜೀವನಕ್ಕಿದೆಯೆ? ಇದ್ದರೆ ಅದು ಏನು? ಎಂಬಂತಹುದನ್ನು ಕಂಡುಕೊಳ್ಳುವುದು ಮೊದಲನೆಯ ಹಂತ.
ಬಸವಣ್ಣನವರು ಒಂದು ಕಡೆ ಹೇಳುತ್ತಾರೆ, “ಪಶುವಾನು ಪಶುಪತಿ ನೀನು” ಎಂದು. ಈ ಮಾತು ನಮ್ಮಂತಹ ಸಾಮಾನ್ಯರಿಗಿಂತ ಇನ್ನಾರಿಗೆ ಹೆಚ್ಚು ಅನ್ವಯವಾಗುತ್ತದೆ? ಇಂದ್ರಿಯಗಳಿಗೆ ದಾಸರಾಗಿ ಪಶುಗಳಂತೆ ವರ್ತಿಸುತ್ತೇವೆ. ಒಳಿತು ಕೆಡಕುಗಳ ಬಗ್ಗೆ ಯೋಚಿಸದೆ ಇಂದ್ರಿಯಗಳು ಎಳೆದುಕೊಂಡು ಹೋದತ್ತ ವಿವೇಚನಾರಹಿತರಾಗಿ ಓಡುತ್ತೇವೆ. ನಾವು ಅವುಗಳ ದಾಸ್ಯದಿಂದ ಬಿಡುಗಡೆ ಪಡೆದು ಒಡೆಯರಾಗುವುದು ಯಾವಾಗ? ಮತ್ತು ಹೇಗೆ? ನಮ್ಮಲ್ಲಿ ಎಷ್ಟೋ ಜನರಿಗೆ ಇಂದ್ರಿಯಗಳ ದಾಸರಾಗಿದ್ದೇವೆ ಎನ್ನುವುದರ ಅರಿವೂ ಇರುವುದಿಲ್ಲ. ನಾವು ದಾಸರಾಗಿದ್ದೇವೆಯೆ? ಮತ್ತು ಏಕೆ? ಅವುಗಳಿಂದ ಬಿಡಿಸಿಕೊಳ್ಳುವ ಬಗೆ ಹೇಗೆ? ಅವುಗಳನ್ನು ಪೂರ್ತಿಯಾಗಿ ತುಳಿದು ಹಾಕಬೇಕೆ? ತುಳಿದು ಬಿಟ್ಟರೆ ಅವು ಮತ್ತೆ ತಲೆ ಎತ್ತುವುದಿಲ್ಲವೆ? ಅವುಗಳನ್ನು ವಶದಲ್ಲಿಟ್ಟುಕೊಳ್ಳಬೇಕೆ? ಹೇಗೆ? ಈ ಎಲ್ಲವನ್ನು ಸ್ವತಃ ಗಮನಿಸಿ ತಿಳಿದುಕೊಳ್ಳುವುದು, ತನನ್ನು ತಾ ಅರಿಯುವುದರ ಮೊದಲ ಹಂತ. ಕೇವಲ ಇಂದ್ರಿಯಗಳಲ್ಲದೆ ಮನಸ್ಸು, ಬುದ್ಧಿ, ಅಹಂಕಾರ ಇತ್ಯಾದಿಗಳನ್ನೂ, ಕಾಮ, ಕ್ರೋಧ, ಮದ, ಲೋಭ, ಮೋಹ , ಮತ್ಸರಗಳನ್ನೂ ಅರಿಯಬೇಕು. ಅರಿಯುತ್ತ ಹೋದಂತೆ ತನ್ನ ಸ್ವರೂಪ ಅನಾವರಣಗೊಳ್ಳುತ್ತದೆ. ತನ್ನ ತಾ ಅರಿಯುವುದೇ ಆ ದೇವನನ್ನು ಅರಿಯುವುದು ಎಂದು ಶರಣರು ಹೇಳುತ್ತಾರೆ.
-ಪ್ರೋ.ವಿಜಯಲಕ್ಷ್ಮಿ ಪುಟ್ಟಿ
ಬೆಳಗಾವಿ