ನಾನೊಂದು ಪುಸ್ತಕ
–
ನಾನೊಂದು ಪುಸ್ತಕ
ನನ್ನನ್ನು ಓದುವವರು ಇನ್ನೂ
ಓದುತ್ತಲೇ ಇದ್ದಾರೆ
ಕೆಲವರಿಗೆ ಅರ್ಥವಾಗಿಲ್ಲ
ಕೆಲವರಿಗೆ ಅರ್ಥವಾದರೂ
ಪ್ರತಿಕ್ರಿಯೆ ನೀಡಿಲ್ಲ
ಅರ್ಥ ಮಾಡಿಕೊಂಡವರು
ಬೇರೆಯವರೆದುರು ಹೇಳಿದರೂ
ಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲ
ನಾನೊಂದು ಪುಸ್ತಕ
–
ಕೆಲವರಿಗೆ ನನ್ನ ಪ್ರತಿಯೊಂದು
ವಿಷಯವನ್ನೂ ಓದುವ ತವಕ
ಕೆಲವರಿಗೆ ಓದಿದ್ದನ್ನು ಒರೆಗೆ ಹಚ್ಚುವ ಕೆಲಸ
ಮತ್ತೆ ಕೆಲವರಿಗೆ ಇದೂ
ಒಂದು ಪುಸ್ತಕವಾ ಎಂಬ ಉದಾಸೀನ ಭಾವ
ನಾನೊಂದು ಪುಸ್ತಕ
–
ಕೆಲವರು ವಿಷಯವನ್ನು ಓದಿ
ಕದಿಯಲು ಯತ್ನಿಸಿದರೆ
ಕೆಲವರು ನಕಲು ಮಾಡಿದರು
ಇನ್ನೂ ಕೆಲವರಂತೂ
ಇದು ಸರಿಯಿಲ್ಲ, ಅದು ಸರಿಯಿಲ್ಲ
ಎಂದು ತಮ್ಮ ವಿಷಯವನ್ನೂ
ಸೇರಿಸಲು ಯತ್ನಿಸಿ
ಪುಸ್ತಕಕ್ಕೆ
ತನ್ನ ವಿಷಯ ಯಾವುದೋ
ಬೇರೆಯವರು ಬರೆದದ್ದು ಯಾವುದೋ
ಎಂದು ಗೊಂದಲ ಮೂಡಿಸಿದರು
ನಾನೊಂದು ಪುಸ್ತಕ
–
ಪುಸ್ತಕದ ಪುಟಗಳು ಇನ್ನೂ
ಮುಗಿದಿಲ್ಲ,
ಬದುಕು ಇನ್ನೂ ಬರೆಯುತ್ತಲೇ ಇದೆ
ಕಂಡದ್ದು, ಅನುಭವಿಸಿದ್ದು
ಎಲ್ಲವೂ ಅಕ್ಷರಗಳಲಿ ಅಡಕಗೊಳ್ಳುತಿವೆ
ಪುಸ್ತಕದ ಕೊನೆ ಹೇಗೆಂಬುದು
ಬರೆಯುವವನಿಗೇ
ನಂತರ ಓದುವುವರಿಗೆ
ಮಾತ್ರ ಗೊತ್ತು
–
ಮುದ್ರಣವಿಲ್ಲದ
ಅಕ್ಷರಗಳಿಲ್ಲದ
ಏನೆಲ್ಲವೂ ಒಳಗೊಂಡಿರುವ
ಈ ಪುಸ್ತಕ ಪೂರ್ಣಗೊಂಡನಂತರ
ಮಸಣದಲ್ಲಿ ಇದರ ಬಿಡುಗಡೆ
ಭುವಿಯ ಗ್ರಂಥಾಲಯದಲ್ಲಿ
ಇದೂ ಒಂದು ಕಾಣದ ಪುಸ್ತಕವಾಗಿ
ಸೇರ್ಪಡೆ
ನಾನೊಂದು ಪುಸ್ತಕ
– ಸಿದ್ಧರಾಮ ಕೂಡ್ಲಿಗಿ
ವಾವ್, ನಮ್ಮ ತನಕ್ಕೆ ಪುಸ್ತಕದ ಹೋಲಿಕೆ. ಸೊಗಸಾಗಿದೆ ಸರ್…. ಈ ಪುಸ್ತಕವನ್ನು ಓದುವವರು ವಿಭಿನ್ನ ವ್ಯಕ್ತಿತ್ವದವರು… ಅವರ ವ್ಯಕ್ತಿತ್ವಕ್ಕೆ ಊರುಗೋಲಾಗಿ ಅವರು ಓದಿ ಅರ್ಥೈಸಿಕೊಳ್ಳುತ್ತಾರೆ, ವಿಮರ್ಶಿಸುತ್ತಾರೆ, ವಿಡಂಬನೆಯನ್ನೂ ಮಾಡುತ್ತಾರೆ. ಸಾತ್ವಿಕ ಓದುಗರು ನಮ್ಮ ಸತ್ವವನ್ನು ಅಧ್ಯಯನ ಮಾಡಿದರೆ, ಮಿಕ್ಕವರು ಹೀನತೆಯೆಡೆಗೆ ಕಣ್ಣಾಡಿಸುತ್ತಾರೆ.
“ನಾನೊಂದು ಪುಸ್ತಕ” ನನನ್ನು ಬಳಸಿಕೊಳ್ಳಿ, ನನ್ನಿಂದ, ನನ್ನ ಬದುಕನ್ನು ಓದಿ ನಾಲ್ಕು ಜನರ ಮನಸುಗಳು ಬದಲಾದರೆ ಸಾರ್ಥಕ…..
ಸೂಪರ್ ಸರ್