ನಾಟಕಾಲಂಕಾರ ಗರುಡ ಸದಾಶಿವರಾಯರು
ರಂಗಭೂಮಿಯ ಆದರ್ಶ ಪುರುಷನ ಅನುಪಮ ರಂಗ ಪಯಣ
ಆಯಾಸಗೊಂಡ ಮನಸ್ಸಿಗೆ ತಂಪಿನ ಸಿಂಚನವನ್ನೆರೆದು ಜೀವಕ್ಕೆ ಮುದ ನೀಡುವ ಒಂದು ಕಲಾ ಮಾಧ್ಯಮವಾದ ರಂಗಭೂಮಿ, ಜನಪದ ಮತ್ತು ಜನ-ಜೀವನದ ಮೂಲಸೆಲೆ. ಇಂಗ್ಲೀಷ್ ನಾಟಕಕಾರ ಸರ್ ವಿಲಿಯಮ್ ಶೇಕ್ಸಪೀಯರ್ ಹೇಳುವ ಹಾಗೆ “the whole world is a stage. men& women are actors and actresses. they play their part accordingly” . ಜಗವೇ ಒಂದು ನಾಟಕರಂಗ. ಇದರಲ್ಲಿ ಜನರೆಲ್ಲರೂ ಪಾತ್ರಧಾರಿಗಳು. ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿ ಹೋಗತಾರೆ. ಸರ್ ವಿಲಿಯಮ್ ಶೇಕ್ಸಪಿಯರ್ ಅವರ ಈ ಸಾಲುಗಳು ಯಾಕೆ ನೆನಪಾದವು ಅಂದರ ಈ ಲೇಖನದ ಕೇಂದ್ರಬಿಂದು ಓರ್ವ ಅನುಪಮ ಮತ್ತು ಅಪ್ರತಿಮ ನಾಟಕಕಾರರು ಮತ್ತು ರಂಗಭೂಮಿ ಕಲಾವಿದರಿಗೆ ಇಂದಿಗೂ ಆದರ್ಶಪ್ರಾಯವಾಗಿರುವ ಮಹಾನ್ ಕಲಾವಿದರು.
ರಂಗಭೂಮಿ ಅತ್ಯಂತ ಪ್ರಾಚೀನವಾದದ್ದು. ಸರಿ ಸುಮಾರು 3,000 ವರ್ಷಗಳ ಇತಿಹಾಸ ಹೊಂದಿರುವ ಗ್ರೀಕ್ ರಂಗಭೂಮಿ ಪ್ರಾಚೀನವಾದದ್ದು. ಅಲ್ಲಿಂದ ಇವತ್ತಿನವರೆಗೆ ರಂಗಭೂಮಿ ನಡೆದು ಬಂದ ದಾರಿಯನ್ನು ನೋಡಿದರೆ ಕಾಣುವ ವೈವಿಧ್ಯತೆಯ ಲೋಕ ಬೆರಗು ಹುಟ್ಟಿಸುತ್ತದೆ. ವೃತ್ತಿ ಮತ್ತು ಹವ್ಯಾಸಿ ಹೀಗೆ ಎರಡೂ ವಿಭಿನ್ನ ದಿಕ್ಕುಗಳಲ್ಲಿ ರಂಗಭೂಮಿಯ ಸಾಧನೆ ಅವಿಸ್ಮರಣೀಯ ಮತ್ತು ಅಸಾಧಾರಣ.
ರಂಗಭೂಮಿಗೆ ಸಂಬಂಧಿಸಿದಂತೆ ಧಾರವಾಡದ ಹತ್ತಿರವಿರುವ ಮುಗದ (ಅಂದಿನ ಮುಗುಂದ) ಗ್ರಾಮದಲ್ಲಿ ದೊರೆತ ಪಶ್ಚಿಮ ಚಾಲುಕ್ಯರ ಅರಸು ಒಂದನೇ ಸೋಮೇಶ್ವರನ ಕಾಲಘಟ್ಟದ ನಾಡಗೌಡ (ನಾಳ್ಗಾವುಂಡ) ನಿಂದ ಬಸದಿಯ ಜೀರ್ಣೋದ್ಧಾರ ಮತ್ತು ನಾಟಕ ಶಾಲೆಯ ರಚನೆಯ ಉಲ್ಲೇಖವಿರುವ ಶಿಲಾಶಾಸನವಿದೆ.
“ಅಭಿನವಮಲ್ಲ” ಮತ್ತು “ತ್ರಿಲೋಕಮಲ್ಲ” ಎಂದು ಬಿರುದಾಂಕಿತನಾಗಿದ್ದ ಒಂದನೇ ಸೋಮೇಶ್ವರ ತನ್ನ ತಂದೆ ಇಮ್ಮಡಿ ಜಯಸಿಂಹನ ನಂತರ ಕ್ರಿ. ಶ. 1042 ರಲ್ಲಿ ಸಿಂಹಾಸನವನ್ನೇರಿ ಕ್ರಿ. ಶ. 1068 ರವರೆಗೆ ಆಡಳಿತವನ್ನು ನಡೆಸುತ್ತಾನೆ. ಪಶ್ಚಿಮ ಚಾಲುಕ್ಯರಲ್ಲಿಯೇ ಅತ್ಯಂತ ಶ್ರೇಷ್ಠ ರಾಜನೆಂದು ಪ್ರಖ್ಯಾತಿಯನ್ನು ಪಡೆದವನು. ಹೊಯ್ಸಳ ವಂಶದ ರಾಜಕುಮಾರಿ “ಹೊಯ್ಸಳಾದೇವಿ” ಒಂದನೆ ಸೋಮೇಶ್ವರನ ಪಟ್ಟದ ರಾಣಿ. ಒಂದನೆ ಸೋಮೇಶ್ವರನು ಕಲ್ಯಾಣ (ಬೀದರ ಜಿಲ್ಲೆಯ ಇಂದಿನ ಬಸವ ಕಲ್ಯಾಣ) ವೆಂಬ ಪಟ್ಟಣವನ್ನು ನಿರ್ಮಿಸಿದನೆಂದು ತಿಳಿದು ಬರುತ್ತದೆ. ಈ ಕಲ್ಯಾಣವೇ ಪಶ್ಚಿಮ ಚಾಲುಕ್ಯರ ರಾಜಧಾನಿಯಾಗಿ ಮುಂದುವರೆಯಿತು. ಇದರಿಂದ ಪಶ್ಚಿಮದ ಚಾಲುಕ್ಯರಿಗೆ ಕಲ್ಯಾಣದ ಚಾಲುಕ್ಯರೆಂದೂ ಹೆಸರಾಯಿತು. ಇವನ ಆಡಳಿತದಲ್ಲಿ ಕಲ್ಯಾಣವೆಂಬ ಪಟ್ಟಣವು ಶಾಂತಿ, ಸಮೃದ್ಧಿ, ಸಂಪದ್ಭರಿತವಾಗಿ ವೈಭವದ ದಿನಗಳನ್ನು ಕಂಡಿತು. ಸಾಹಿತ್ಯ ಸಂಸ್ಕೃತಿ ಕಲೆಗಳ ಬೀಡಾಗಿ ಅನೇಕ ಕವಿಗಳಿಗೆ ಮತ್ತು ಕಲಾವಿದರಿಗೆ ಆಶ್ರಯವನ್ನು ನೀಡಿತು. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯಿಂದ ಬಸವಾದಿ ಶರಣರು ಈ ನಾಡಿನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು.
ಕ್ರಿ. ಶ. 1045 ರಲ್ಲಿ ಕಲ್ಯಾಣ ಚಾಲುಕ್ಯರ ಅರಸು ಒಂದನೇ ಸೋಮೆಶ್ವರನ ಕಾಲಘಟ್ಟದ ಶಾಸನವೆಂದು ಧೃಢಪಟ್ಟಿದೆ. ಇದರಲ್ಲಿ ಕೆತ್ತಲಾದ ಬರಹವನ್ನು ಇಲ್ಲಿ ನೀಡಲಾಗಿದೆ.
“ಶ್ರೀಮನ್ಮಹಾಸಾಮನ್ತಂ ಮಾರ್ತಾನ್ಡಯ್ಯಂ ತಮ್ಮ ಮುತ್ತಯಂ ಮಾಡಿಸಿದ ಬಸದಿಯಂ ಪಡಸಲಿಸಿ ನಾಟಕಶಾಲೆಯಂ ಮಾಡಿಸಿ ತನ್ನ ಕೀರ್ತಿ ಶಿಲಾಸ್ಥಂಭಮಂ ಅಚಂದ್ರಾರ್ಕತಾರಂಭರಂ ನಿಲಿಸಿದಂ”
ಈ ಶಿಲಾಶಾಸನದಿಂದ ತಿಳಿದು ಬರುವುದೇನೆಂದರೆ ಕರ್ನಾಟಕದಲ್ಲಿ 11 ನೇ ಶತಮಾನದಿಂದಲೇ ನಾಟಕಗಳನ್ನು ಆಡಲಾಗುತ್ತಿತ್ತು ಎಂದು. ಆದರೆ ಅವುಗಳ ಸ್ವರೂಪ, ಚಿತ್ರಣಗಳು ಅಷ್ಟಾಗಿ ಇತಿಹಾಸದಲ್ಲಿ ದಾಖಲಾಗಿಲ್ಲ ಅಥವಾ ಇನ್ನೂ ಸ್ಪಷ್ಟ ಉಲ್ಲೇಖಗಳು ದೊರೆತಿಲ್ಲ.
ಕರ್ನಾಟಕದ ರಂಗಭೂಮಿಯ ಇತಿಹಾಸ ನಿಜಕ್ಕೂ ರೋಚಕವಾದದ್ದು. ವೈಭಯುತವಾಗಿ ರಾಜ್ಯಭಾರವನ್ನು ಮಾಡಿದ ವಿಜಯನಗರ ಸಾಮ್ರಾಜ್ಯದ ಅರಸನಾದ ಕೃಷ್ಣದೇವರಾಯನ ಕಾಲಘಟ್ಟದಲ್ಲಿ ನಾಟಕ ಮತ್ತು ನಾಟ್ಯಶಾಲೆಗಳು ಇದ್ದದ್ದು ಕಂಡು ಬರುತ್ತದೆ. ಕ್ರಿ. ಶ. 1582 ರಿಂದ ಕ್ರಿ. ಶ. 1620 ರ ವರೆಗೆ ರಾಜನಾಗಿದ್ದ ಇಕ್ಕೇರಿ ಕೆಳದಿ ಸಂಸ್ಥಾನದ ವೆಂಕಟಪ್ಪ ನಾಯಕನ ಆಡಳಿತಾವಧಿಯಲ್ಲಿ ನಾಟಕ ಶಾಲೆಯಿತ್ತು ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಮೈಸೂರು ರಾಜ್ಯವನ್ನು ಕ್ರಿ. ಶ. 1638 ರಿಂದ ಕ್ರಿ. ಶ. 1659 ರ ವರೆಗೆ ಆಡಳಿತ ನಡೆಸಿದ ರಾಜ ಕಂಠೀರವ ನರಸರಾಜ ಅವರ ಅರಮನೆಯಲ್ಲಿಯೂ ಸಹ ನಾಟಕ ಶಾಲೆಯಿತ್ತು ಎಂದು ತಿಳಿದು ಬರುತ್ತದೆ.
17 ನೇ ಶತಮಾನದ ಅಂತ್ಯಭಾಗದಲ್ಲಿ ರಚನೆಯಾದಂಥ ಸಂಸ್ಕೃತದ “ಶ್ರೀಹರ್ಷನ ರತ್ನಾವಳಿ” ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ “ಮಿತ್ರವೃಂದ ಗೋವಿಂದ” ಎನ್ನುವುದು ಕನ್ನಡದಲ್ಲಿ ದೊರೆತ ಮೊಟ್ಟ ಮೊದಲನೇ ನಾಟಕ. ಇದನ್ನು ಚಿಕ್ಕದೇವರಾಜ (1672-1704) ರ ಆಸ್ಥಾನಕವಿ ಸಿಂಗರಾರ್ಯರು ರಚನೆ ಮಾಡಿದರು. ನಾಟಕ ಸಾಹಿತ್ಯದ ಇತಿಹಾಸದಲ್ಲಿ ಪದೇ ಪದೇ ಪ್ರಸ್ತಾಪವಾಗಿದ್ದರಿಂದ ಇದು ಮೊದಲನೇ ಕನ್ನಡ ನಾಟಕ ಎನ್ನುತ್ತಾರೆ. 1764 ರಲ್ಲಿ ಧಾರವಾಡದ ಶುಕ್ರವಾರ ಪೇಟೆಯಲ್ಲಿ ದಶಾವತಾರ ನಾಟಕ ನಡೆಸಲು ರಾಮಭಟ್ ಜೋಯಿಸ್ ಅವರಿಗೆ ಮರಾಠಾ ಪೇಶ್ವೆಯವರು ವಾರ್ಷಿಕ ಅನುದಾನ ನೀಡುತ್ತಿದ್ದರೆಂದು ಕರ್ನಾಟಕ ಸರ್ಕಾರದ ಕರುನಾಡು ಪತ್ರಿಕೆಯಿಂದ ತಿಳಿದು ಬರುತ್ತದೆ.
ಕರ್ನಾಟಕದ ರಂಗಭೂಮಿಗೆ ಒಂದು ಸ್ಪಷ್ಟ ಚಿತ್ರಣ ಬಂದಿದ್ದು ಸುಮಾರು 1860 ರಿಂದ 1885 ರ ವರ್ಷಗಳಲ್ಲಿ ಎನ್ನುವುದು ನಾಟಕ ಇತಿಹಾಸಕಾರರ ಅಭಿಪ್ರಾಯ. 1869 ರಲ್ಲಿ ಬೆಳಗಾವಿ ಜಿಲ್ಲೆಯ “ಹಲಸಿ ನಾಟಕ ಕಂಪನಿ”, 1872 ರಲ್ಲಿ ಧಾರವಾಡದಲ್ಲಿ “ಶರತಪುರ ನಾಟಕ ಮಂಡಳಿ”, 1877 ರಲ್ಲಿ ಶ್ರೀ ಸಕ್ಕರಿ ಭಾಳಾಚಾರ್ಯರು (ಶಾಂತಕವಿ) ಗದಗಿನ ಕೆಲವು ಮಿತ್ರರೊಂದಿಗೆ ಸೇರಿಕೊಂಡು “ಶ್ರೀವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ” ಯನ್ನು ಸ್ಥಾಪನೆ ಮಾಡಿದರು. 1882 ರಲ್ಲಿ ಶ್ರಿ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ “ಚಾಮರಾಜೇಂದ್ರ ನಾಟಕ ಸಭಾ” ಆರಂಭಿಸಿದರು. ಈ ಮಹನೀಯರೆಲ್ಲರೂ ಆಧುನಿಕ ಕನ್ನಡ ರಂಗಭೂಮಿಗೆ ಚಾಲನೆ ದೊರೆಕಿಸಿ ಕೊಟ್ಟರು ಎನ್ನುವುದನ್ನು ನಾಟಕದ ಇತಿಹಾಸಕಾರರು ದಾಖಲಿಸುತ್ತಾರೆ.
ಬಾಗಲಕೋಟೆ ತಾಲೂಕಿನ ಶ್ರೀ ಶ್ರೀಕಾಂತ ಬಿಲಕೇರಿಯವರ ಸಾರಥ್ಯದಲ್ಲಿ ಮೂಡಿ ಬರುವ “ಎಲ್ಲ ಕಲಾವಿದರು” ಎನ್ನುವ ” facebook -live” ಕಾರ್ಯಕ್ರಮದಲ್ಲಿ ಕವಿಗಳು ಮತ್ತು ನಾಟಕಕಾರರಾದ ಬನಹಟ್ಟಿಯ ಶ್ರೀ ಬಿ ಆರ್ ಪೋಲೀಸ್ ಪಾಟೀಲ ಅವರು “ರಂಗಭೂಮಿ ಬೆಳೆದು ಬಂದ ದಾರಿ” ಉಪನ್ಯಾಸದಲ್ಲಿ ವಿವಿಧ ಪ್ರಕಾರಗಳಲ್ಲಿ ರಂಗಭೂಮಿಯ ವಿಕಾಸವಾದ ಮಾಹಿತಿ ನೀಡಿದ್ದನ್ನು ಇಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸುತ್ತೇನೆ.
ಮನುಷ್ಯನ ಶಿಕ್ಷಣ ಮತ್ತು ಆಧ್ಯಾತ್ಮ ಚಿಂತನೆಗಾಗಿ ಮನರಂಜನೆಯ ಜೊತೆ ಜೊತೆಗೆ ಜನರಂಜನೆ, ಜನಶಿಕ್ಷಣ ಮತ್ತು ಜನಕಲ್ಯಾಣಕ್ಕಾಗಿ ಈ ನಾಟಕ ಕಲೆ ಹುಟ್ಟಿಕೊಂಡಿತು. dram is manifold activity. the play upholds the life artistically ಅಂತ ಶ್ರೀ ಬಿ ಆರ್ ಪೋಲೀಸ್ ಪಾಟೀಲರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಮಾತು, ಅಭಿನಯ ಎಲ್ಲವೂ ಒಳಗೊಂಡಿದೆ. ನಿರ್ದೇಶಕ, ನೇಪಥ್ಯ ಕಲಾವಿದರು, ಪರದೆ ಬರೆಯುವವರು, ವೇಷಭೂಷಣಗಳನ್ನು ಸಿದ್ಧಪಡಿಸುವವರು, ರಂಗಸಜ್ಜಿಕೆಯನ್ನು ತಯಾರು ಮಾಡುವವರು ಮುಂತಾದವರೆಲ್ಲರೂ ಸೇರಿ ಒಂದು ಸಮೂಹ ಕಲೆಯನ್ನು ಪ್ರದರ್ಶನ ಮಾಡುತ್ತಾರೆ. ಈ ಕಲೆಗೊಂದು ಸಂಸ್ಕೃತಿ ಮತ್ತು ಪರಂಪರೆ ಇದೆ. ರಂಗಭೂಮಿಯನ್ನು 4 ವಿವಿಧ ಪ್ರಕಾರಗಳಲ್ಲಿ ವಿಂಗಡಣೆ ಮಾಡಲಾಗಿದೆ.
1) ಜನಪದ ರಂಗಭೂಮಿ, 2) ವೃತ್ತಿ ರಂಗಭೂಮಿ, 3) ಹವ್ಯಾಸಿ ರಂಗಭೂಮಿ, 4) ಜನ ರಂಗಭೂಮಿ (ಬೀದಿ ನಾಟಕಗಳು)
ಜನಪದರಲ್ಲಿದ್ದ ಮೌಖಿಕವಾದ ಸಂಪ್ರದಾಯಗಳು ಜನಪದ ರಂಗಭೂಮಿಗೆ ಪ್ರಾರಂಭಿಕ ಹಂತದ ಮಜಲುಗಳು. ಅಭಿವ್ಯಕ್ತಿಗೆ ಮೂಲಸೆಲೆಯಾದ ಸಂಜ್ಞೆಗಳೊಂದಿಗೆ ಭಾವನೆಗಳು ವ್ಯಕ್ತವಾದವು. ಭಾವನೆಯಿಂದ ಭಾಷೆ ಉತ್ಪನ್ನವಾಯಿತು. ಭಾಷೆಯಿಂದ ಲಿಪಿಯ ಉಗಮವಾಯಿತು. ಇದು ನಾಟಕದ ಸ್ವರೂಪ ಪಡೆಯಲು ಕ್ರಮಿಸಿದ ದಾರಿ. ಹೀಗೆ ಜನ್ಮ ತಳೆದ ರಂಗಭೂಮಿಯಲ್ಲಿ ಹಲವಾರು ಪ್ರಕಾರಗಳ ವರ್ಣನೆ ಬರುತ್ತದೆ.
ಮೂಡಲಪಾಯ ದಾಸರ ಆಟ ಸೂತ್ರದ ಬೊಂಬೆಯಾಟ ತೊಗಲು ಗೊಂಬೆಯಾಟ
ದೊಡ್ಡಾಟ ಸಣ್ಣಾಟ • ಡಪ್ಪಿನಾಟ ಶ್ರೀಕೃಷ್ಣ ಪಾರಿಜಾತ
ರಾಧಾನ ಆಟ
ಯಕ್ಷಗಾನ (ಏರಡು ಪ್ರಮುಖ ಭೇದಗಳು: ತೆಂಕುತಿಟ್ಟು, ಬಡಗುತಿಟ್ಟು)
• ತಾಳೆಮದ್ದಳೆ
• ಬಯಲಾಟ
ಘಟ್ಟದ ಕೋರೆ ಕೇಳಿಕೆ
ಕುಣಿತಗಳು
• ಮಲೆ ಕುಡಿಕೆಯರ ಕುಣಿತ
• ಪುರವಂತರ ಕುಣಿತ
• ರಾಣಿಯರ ಕೋಲಾಟ
• ಬೀರದೇವರ ಕುಣಿತ
• ವೀರಭದ್ರನ ಕುಣಿತ
ಗರುಡ ಸದಾಶಿವರಾಯರ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಚಳುವಳಿ ಗಂಭೀರ ಮತ್ತು ಉಗ್ರರೂಪ ತಾಳಿತ್ತು. ಇದರ ಬಗ್ಗೆ ಇಲ್ಲಿ ಉಲ್ಲೇಖ ಮಾಡುವ ಅವಶ್ಯಕತೆಯಿದೆ. ಯಾಕಂದರೆ ಎಲ್ಲ ಸವಾಲುಗಳ ಗಡಿ ಸೀಮೆಗಳನ್ನನ್ನೂ ಮೀರಿ ಗರುಡ ಸದಾಶಿವರಾಯರು ಬೆಳೆದು ನಿಂತದ್ದು. ಅವರು ರಂಗಭೂಮಿಗೆ ನೀಡಿದ ಕೊಡುಗೆ ವಿಸ್ಮಯ ಮತ್ತು ಕ್ರಾಂತಿಕಾರಿಕ. ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ಕರ್ನಾಟಕ ಸರ್ಕಾರ ಹೊಡಿಸಿದ ಧಾರವಾಡ ಜಿಲ್ಲೆಯ ಗೆಝೆಟೀಯರ್ “ Dharwada chpater 02 hist0ry” ಅಧ್ಯಾಯದಲ್ಲಿ ಕಾಣಬಹುದು.
ಮುಂಬೈ ಪ್ರಾಂತ್ಯದಲ್ಲಿ ಪ್ಲೇಗ್ ಹಾವಳಿ ಹೆಚ್ಚಾದಾಗ, ಉಗ್ರ ಪ್ರತಿಭಟನೆಗಳು ನಡೆಯುತ್ತವೆ. ಇದಕ್ಕೆ ಹಿಂಸಾತ್ಮಕವಾಗಿ ಪ್ರತಿಕ್ರಯಿಸಿದ ಬ್ರಿಟೀಷ್ ಸರ್ಕಾರಕ್ಕೆ ಬುದ್ಧಿ ಕಲಿಸಲು ಪುಣೆಯಲ್ಲಿ ಚಾಪೇಕರ ಸಹೋದರರು ಖಚಿಟಿಜ & Iಥಿeಡಿಣ ಎನ್ನುವ ಅಧಿಕಾರಿಗಳನ್ನು ಕೊಂದು ಹಾಕುತ್ತಾರೆ. ಇದರ ಜೊತೆಗೆ 1881 ರಲ್ಲಿ ಲೋಕಮಾನ್ಯ ಟಿಳಕರು “ಕೇಸರಿ” ಪತ್ರಿಕೆಯ ಮೂಲಕ ಜನಜಾಗೃತಿಯನ್ನು ಮೂಡಿಸಲು ಪ್ರಾರಂಭ ಮಾಡುತ್ತಾರೆ. ಈ ಪ್ಲೇಗ್ ಮಹಾಮಾರಿ 1897 ಅಕ್ಟೋಬರನಲ್ಲಿ ಹುಬ್ಬಳ್ಳಿಗೂ ತಲುಪುತ್ತದೆ. ಇದರ ಜೊತೆಗೆ ಬರಗಾಲ ಬಂದು ಜನಜೀವನ ಅಸ್ತವ್ಯಸ್ತವಾಗುತ್ತದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಶ್ರೀ ಆಲೂರು ವೆಂಕಟರಾಯರು ಮತ್ತಿತರರು ಸೇರಿ ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಕರ್ನಾಟಕದ ಏಕೀಕರಣ ಚಳುವಳಿಯನ್ನು ಪ್ರಾರಂಭ ಮಾಡುತ್ತಾರೆ.
ಇದಕ್ಕೆ ಪುಟವಿಟ್ಟಂತೆ 26.01.1930 ರಂದು ಲಾಹೋರ್ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ಹಾರಿಸುವುದಕ್ಕೆ ಕರೆ ನೀಡಿದಾಗ ಇದರ Shಚಿಜoತಿ ಇಜಿಜಿeಛಿಣ ನಿಂದ ಧಾರವಾಡದ ಕಲಘಟಗಿಯಲ್ಲಿ ಧ್ವಜಾರೋಹಣ ಮಾಡಲಾಯಿತು. 16.04.1930 ರಂದು ಸೊಲ್ಲಾಪುರದ ನಗರಸಭೆಯ ಮೇಲೆ ಧ್ವಜಾರೋಹಣ ಮಾಡಿದ್ದಕ್ಕಾಗಿ ಶ್ರೀ ಮಲ್ಲಪ್ಪ ಧನಶೆಟ್ಟಿಯವರನ್ನು 12.01.1931 ರಂದು ಗಲ್ಲಿಗೆ ಏರಿಸಲಾಯಿತು. 26.01.1932 ರಲ್ಲಿ ಧ್ವಜಾರೋಹಣ ಮಾಡಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ ಶ್ರೀಮತಿ ಉಮಾಬಾಯಿ ಕುಂದಾಪೂರ ಅವರನ್ನು, ಗದಗಿನಲ್ಲಿ ಶ್ರೀ ಮಧ್ವರಾವ್ ಶಿರಹಟ್ಟಿ ಮತ್ತು ಶ್ರೀ ಕೃಷ್ಣಾಚಾರ್ಯ ಹುಯಿಲಗೋಲ ಅವರನ್ನು ಬಂಧಿಸಲಾಯಿತು. ಉಪ್ಪಿನ ಸತ್ಯಾಗ್ರಹದ ಕಾವೂ ಸಹ ಧಾರವಾಡದಲ್ಲಿ ಬಡಿದದ್ದನ್ನು ಕಾಣಬಹುದು. ಮುಂದೆ ಮಹಾತ್ಮಾ ಗಾಂಧೀಜಿಯವರು 01.03.1934 ರಂದು ಹಾವೇರಿಗೆ ಬಂದರು. 05.03.1934 ರಂದು ಗದಗಿಗೆ ಭೇಟಿ ಕೊಡುತ್ತಾರೆ.
ಗದಗಿನಲ್ಲಿ 05.09.1942 ರಂದು 10 ವಿದ್ಯಾರ್ಥಿಗಳನ್ನು ಬಂಧಿಸಿ ಬಿಡುಗಡೆ ಮಾಡಿದಾಗ 08.09.1942 ರಂದು ಮೆರವಣಿಗೆಯನ್ನು ಮಾಡಲಾಯಿತು. ಇದಕ್ಕಾಗಿ ವಿದ್ಯಾರ್ಥಿಗಳು ಈ ದಿನವನ್ನು ಸ್ವಾತಂತ್ರ್ಯ ದಿನವೆಂದೇ ಆಚರಿಸಿದರು. ಹೈದರಾಬಾದ ನಿಝಾಮರ ಆಡಳಿತಕ್ಕೊಳಪಟ್ಟಿದ್ದ ಕೆಲ ಹಳ್ಳಿಗಳನ್ನು ಶ್ರೀ ಜನಾರ್ಧನರಾವ್ ದೇಸಾಯಿ ಮತ್ತು ಶ್ರೀ ಶಿವಮೂರ್ತಿಸ್ವಾಮಿ ಆಳವಂಡಿಯವರ ನೇತೃತ್ವದಲ್ಲಿ ಬಿಡುಗಡೆ ಮಾಡಿದ್ದರು. ಈ ಮುಖಂಡರು ಒಂದು ಕಛೇರಿಯನ್ನು ಗರುಡ ಸದಾಶಿವರಾಯರ ಮನೆಯಲ್ಲಿಯೇ ತೆರೆದು ಅಲ್ಲಿಯೇ ವಾಸ ಮಾಡುತ್ತಿದ್ದರು. ಆಹಾರ ಊಟ ಉಪಚಾರಗಳ ವ್ಯವಸ್ಥೆಯನ್ನು ಬಸರಿಗಿಡದ ವೀರಪ್ಪನವರು ಮಾಡಿದ್ದರು.
ಧಾರವಾಡ, ಬೆಳಗಾವಿ, ಬಿಜಾಪೂರನ್ನು ಒಳಗೊಂಡಂತೆ ಈ ಪ್ರದೇಶವನ್ನು “Souಣheಡಿಟಿ ಒಚಿಡಿಚಿಣhಚಿ ಅouಟಿಣಡಿಥಿ” ಎಂದು ಬ್ರಿಟೀಷರು ಕರೆಯುತ್ತಿದ್ದರು. ಸಹಜವಾಗಿ ಈ ಪ್ರದೇಶದಲ್ಲಿ ಮರಾಠಿ ಪ್ರಭಾವ ಇತ್ತು. ಮರಾಠಿ ಮತ್ತು ಇಂಗ್ಲೀಷ್ನಲ್ಲಿ ವಿದ್ಯಾಭ್ಯಾಸದಿಂದಾಗಿ ಕನ್ನಡಕ್ಕೆ ಪ್ರಾಶಸ್ತ್ಯವಿರದ ವಾತಾವರಣವಿತ್ತು. ಇದನ್ನು ಹತ್ತಿಕ್ಕುವ ಸಲುವಾಗಿ ಡಾ. ದ ರಾ ಬೇಂದ್ರೆ, ಶ್ರೀ ಸಿ ಸಿ ಬಸವನಾಳ, ಶ್ರೀ ಗದ್ದಗಿಮಠ, ಡಾ. ಹರ್ಡೇಕರ ಮಂಜಪ್ಪ, ಡಾ. ಫ ಗು ಹಳಕಟ್ಟಿ ಮುಂತಾದವರು ಹುಟ್ಟು ಹಾಕಿದ ಶೈಕ್ಷಣಿಕ ಮತ್ತು ಸಾಹಿತ್ಯ ಕ್ರಾಂತಿಯೂ ಸೇರಿ ಧಾರವಾಡ ಒಂದು ಕೇಂದ್ರ ಬಿಂದುವಾಗಿ ಮಾರ್ಪಾಡಾಯಿತು. ಕನ್ನಡದಲ್ಲಿ ವಿಪುಲವಾದ ಸಾಹಿತ್ಯ ರಚನೆಯಾಯಿತು. ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ಶೈಕ್ಷಣಿಕ ಕೇಂದ್ರವಾಗಿ ಬೆಳೆದು ಲೇಖಕರು, ನಾಟಕಕಾರರು ಮತ್ತು ನಟ-ನಟಿಯರು ನೆಲೆಯೂರಿದರು.
20 ನೇ ಶತಮಾನದ ಆದಿಭಾಗದಲ್ಲಿ ಅಂದರೆ ಸುಮಾರು 1900 ರಿಂದ 1940 ರ ಆಸುಪಾಸಿನಲ್ಲಿ ಕನ್ನಡ ವೃತಿ ರಂಗಭೂಮಿಯ ಉಚ್ಛ್ರಾಯ ಅವಧಿ. ನರಗುಂದ ಬಂಡಾಯ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಎರಡನೇ ಬಾಜೀರಾವ್ ಮುಂತಾದ ನಾಟಕಗಳು ಜನಮಾನಸದಲ್ಲಿ ಸ್ವಾತಂತ್ರ್ಯದ ಕಿಡಿ ಹತ್ತಿಸುವಲ್ಲಿ ಯಶಸ್ವಿಯಾದವು. ಈ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದವರು ಗರುಡ ಸದಾಶಿವರಾಯರು, ಬಸವನಗೌಡ ಅಬ್ಬಿಗೇರಿ, ಶ್ರೀ ಸಕ್ಕರಿ ಬಾಳಾಚಾರ್ಯರು (ಶಾಂತಕವಿ), ವಾಮನರಾವ್ ಮಾಸ್ತರ ಮುಂತಾದವರು.
ಕೋಲ್ಕತ್ತಾದ ಮೂಲಕ ಭಾರತವನ್ನು ಪ್ರವೇಶಿಸಿದ ಬ್ರಿಟೀಷರು ತಮ್ಮ ನಾಟಕ ಪರಂಪರೆಯನ್ನು ಬೆಳೆಸುತ್ತಾರೆ. ಆಗಿನ ಕಾಲಕ್ಕೆ ಕೋಲ್ಕತ್ತಾ ಬಿಟ್ಟರೆ ರಂಗಭೂಮಿಗೆ ನೆಲೆ ಸಿಕ್ಕಿದ್ದು ಮುಂಬೈನಲ್ಲಿ. ಮುಂಬೈನಲ್ಲಿ ಸಕ್ರೀಯವಾಗಿದ್ದ ಮರಾಠಿ ನಾಟಕಗಳು ಕ್ರಮೇಣ ಉತ್ತರ ಕರ್ನಾಟಕದಲ್ಲಿ ತಮ್ಮ ಛಾಪನ್ನು ಮೂಡಿಸುವ ಪ್ರಯತ್ನ ಮಾಡಿದವು. ವಿಠಲಭಕ್ತ ಪರಂಪರೆಯ ಕೀರ್ತನಕಾರರ ಮೂಲಕ ಮರಾಠಿ ನಾಟಕಗಳ ಪ್ರವೇಶವಾಯಿತು. ಸುಮಾರು 1850 ರಿಂದ 1880 ರ ವರೆಗೆ ಮೂರು ದಶಕಗಳಲ್ಲಿ ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಮರಾಠಿಮಯವಾದ ಸಂದರ್ಭದಲ್ಲಿ ಕೆಲ ಕನ್ನಡ ನಾಟಕಕಾರರು ಕನ್ನಡ ನಾಟಕಗಳನ್ನು ಬೆಳೆಸುವಲ್ಲಿ ಮತ್ತು ಹೊಸತನವನ್ನು ತುಂಬುವುದಕ್ಕೆ ಛಲ ತೊಟ್ಟರು. ಇದರ ಪರಿಣಾಮವಾಗಿ 1869 ರಲ್ಲಿ ಬೆಳಗಾವಿ ಜಿಲ್ಲೆಯ ಹಲಸಿ ಗ್ರಾಮದಲ್ಲಿ ಪ್ರಪ್ರಥಮ ವೃತ್ತಿ ನಾಟಕ ಕಂಪನಿ ಪ್ರಾರಂಭವಾಯಿತು.
ಮುಂದುವರೆದಂತೆ ನಾಟಕ ಕಂಪನಿಗಳು ಗಣನೀಯ ಪ್ರಮಾಣದಲ್ಲಿ ಪ್ರಾರಂಭವಾದವು. ಆಗಿನ ಕಾಲಕ್ಕೆ ಸುಮಾರು 125 ರಿಂದ 150 ನಾಟಕ ಕಂಪನಿಗಳು ಸಕ್ರೀಯವಾಗಿದ್ದವು. ಅವುಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಕೆಲವನ್ನು ಇಲ್ಲಿ ನಮೂದಿಸುವ ಪ್ರಯತ್ನವನ್ನು ಮಾಡಿದ್ದೇನೆ.
1869 : ಹಲಸಗಿ ನಾಟಕ ಕಂಪನಿ, ಖಾನಾಪೂರ ತಾ. ಬೆಳಗಾವಿ ಜಿಲ್ಲೆ (ವೆಂಕಣ್ಣಾಚಾರ್ಯ ಅಗಳಗಟ್ಟಿ).
1872 : ಶರತಪುರ ನಾಟಕ ಮಂಡಳಿ, ಧಾರವಾಡ.
1877 : ಶ್ರೀ ವೀರನಾರಾಯಣ ಪ್ರಾಸಾದಿಕ ಕೃತಪುರ ನಾಟಕ ಮಂಡಳಿ, ಗದಗ. (ಶಾಂತಕವಿ)
1899 : ಶ್ರೀ ಕಾಡಸಿದ್ಧೇಶ್ವರ ನಾಟಕ ಮಂಡಳಿ, ತೊಣ್ಣೂರ (ಶಿವಮೂರ್ತಿಸ್ವಾಮಿ ಕಣಬರಗಿಮಠ)
1911 : ಶ್ರೀ ಮಹಾಲಕ್ಷ್ಮಿ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ, ಶಿರಹಟ್ಟಿ (ವೆಂಕೋಬರಾಯ)
1912 : ಸ್ತ್ರೀ ನಾಟಕ ಮಂಡಳಿ, ಲಕ್ಷ್ಮೇಶ್ವರ (ಬಚ್ಚಾಸಾನಿ ದೊಡ್ಡಮನಿ)
1912 : ಶ್ರೀ ಶಂಕರಲಿಂಗೇಶ್ವರ ಸಂಗೀತ ನಾಟಕ ಮಂಡಳಿ, ಹೊಂಬಳ (ಶಂಕರಗೌಡರು)
1914 : ಶ್ರೀ ವಿಶ್ವ ಗುಣಾದರ್ಶ ಸಂಗೀತ ನಾಟಕ ಮಂಡಳಿ (ವಾಮನರಾವ್ ಮಾಸ್ತರ)
1919 : ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ, ಗದಗ (ಗರುಡ ಸದಾಶಿವರಾಯರು)
1925 : ಶ್ರೀ ಕೃಷ್ಣ ಸಂಗೀತ ನಾಟಕ ಮಂಡಳಿ, ಗುಳೇದಗುಡ್ಡ (ಗಂಗೂಬಾಯಿ)
1928 : ಶ್ರೀ ಶಿರಶಿ ಮಾರಿಕಾಂಬಾ ನಾಟಕ ಮಂಡಳಿ (ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು)
1928 : ಕನ್ನಡ ಸಾಹಿತ್ಯ ಸೇವಾ ಸಂಗೀತ ನಾಟಕ ಮಂಡಳಿ (ಬಸನಗೌಡ ಅಬ್ಬಿಗೇರಿ)
1928 : ಲೋಕಸೇವಾ ಸಂಗೀತ ನಾಟಕ ಮಂಡಳಿ, ಸಂಪಗಾವಿ (ಶಿವಪ್ಪ ಯೋಗಪ್ಪ ವಾಲಿ)
1928 : ಶ್ರೀ ಗುರು ಕೆ ಬಿ ಅರ್ ಡ್ರಾಮಾ ಕಂಪನಿ (ಚಿಂದೋಡಿ ಶಾಂತ ವೀರಪ್ಪನವರು)
1928 : ಶ್ರೀ ಖುದಾವಂದ ನಾಟಕ ಸಂಘ, ಅಣ್ಣಿಗೇರಿ (ಹುಸೇನಸಾಬ್ ಅಲ್ಲಾಭಕ್ಷ)
1929 : ಶ್ರೀ ವಾಣಿವಿಲಾಸ ಸಂಗೀತ ನಾಟಕ ಮಂಡಳಿ (ಯರಾಸಿ ಭರಮಪ್ಪನವರು)
1930 : ಶ್ರೀ ಶಿವಾನಂದ ಸಂಗೀತ ನಾಟಕ ಮಂಡಳಿ (ಲಕ್ಷ್ಮಣರಾವ್ ಅಸುಂಡಿ)
1933 : ಶ್ರೀ ಲಲಿತ ಕಲೋದ್ಧಾರಕ ನಾಟಕ ಮಂಡಳಿ (ಕಂದಗಲ್ ಹನುಮಂತರಾಯರು)
1933 : ಶ್ರೀ ಗುರುಸೇವಾ ಸಂಗೀತ ನಾಟಕ ಮಂಡಳಿ (ಸೂಡಿ ಹುಚ್ಚಪ್ಪ ಮತ್ತು ಏಣಗಿ ಬಾಳಪ್ಪ)
1933 : ಶ್ರೀ ಭಾಗ್ಯೋದಯ ನಾಟಕ ಮಂಡಳಿ, ಅಥಣಿ (ಭೀಮಪ್ಪ ಹೂಗಾರ)
1933 : ಹಾಲಸಿದ್ಧೇಶ್ವರ ನಾಟಕ ಮಂಡಳಿ, ಹಲಗೇರಿ (ಲಿಂಗನಗೌಡ್ರ ಪಾಟೀಲ ಮತ್ತು ಜಟ್ಟೆಪ್ಪ)
1934 : ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ, ಗೋಕಾಕ (ತುಕಾರಾಮಪ್ಪ)
1935 : ಜಯ ಕರ್ನಾಟಕ ನಾಟಕ ಮಂಡಳಿ (ಹುಲಿಮನೆ ಸೀತಾರಾಮ ಶಾಸ್ತ್ರಿಗಳು)
1935 : ನೂತನ ಸಂಗೀತ ನಾಟಕ ಮಂಡಳಿ (ಸೋನೂಬಾಯಿ ದೊಡ್ಡಮನಿ)
1937 : ವಿಶ್ವ ಕಲಾರಂಜನ ನಾಟಕ ಮಂಡಳಿ, ಹಂದಿಗನೂರು (ಸಿದ್ಧರಾಮಪ್ಪನವರು)
1939 : ಕಲಾಪ್ರಕಾಶ ನಾಟಕ ಮಂಡಳಿ (ಬಸವರಾಜ ಮನಸೂರ)
1940 : ಪಂಡಿತ ಪುಟ್ಟರಾಜ ಗವಾಯಿಗಳ ನಾಟಕ ಮಂಡಳಿ, ಗದಗ (ಪುಟ್ಟರಾಜ ಗವಾಯಿ)
1942 : ಚಿತ್ತರಗಿ ಕುಮಾರ ವಿಜಯ ನಾಟ್ಯಸಂಘ (ಗಂಗಾಧರ ಶಾಸ್ತ್ರಿಗಳು)
1942 : ಶ್ರೀ ಮಹೇಶ ನಾಟ್ಯಸಂಘ (ನ್ಯಾಮತಿ ಶಾಂತಪ್ಪನವರು)
1942 : ವೈಭವಶಾಲಿ ನಾಟ್ಯಸಂಘ (ಏಣಗಿ ಬಾಳಪ್ಪ ಮತ್ತು ಎಲ್ ಎಸ್ ಇನಾಮದಾರ)
1947 : ಕಲಾ ವೈಭವ ನಾಟ್ಯಸಂಘ (ಏಣಗಿ ಬಾಳಪ್ಪ)
1943 : ಶ್ರೀ ಮಲ್ಲಿಕಾರ್ಜುನ ನಾಟ್ಯಸಂಘ (ಅಮ್ಮಣಗಿ ದೇಸಾಯಿ)
1943 : ವಸಂತಕಲಾ ನಾಟ್ಯಸಂಘ, ಹುಬ್ಬಳ್ಳಿ (ವಸಂತಸಾ ನಾಕೋಡ ಸಹೋದರರು)
1950 : ಶ್ರೀ ಲಲಿತಕಲಾ ನಾಟ್ಯಸಂಘ (ರೆಹಮಾನವ್ವ ಕುಕನೂರ)
1950 : ಕಲಾಪ್ರಕಾಶ ನಾಟಕ ಮಂಡಳಿ, ಬ್ಯಾಡಗಿ (ಕವಲಿ ಚೆನ್ನಬಸಪ್ಪ)
1951 : ಸಮಾಜ ವಿಕಾಸ ನಾಟಕ ಮಂಡಳಿ (ಸಿದ್ಧರಾಜ ಉಜ್ಜಯನಿ ಮಠ)
1959 : ಶ್ರೀ ವೀರಭದ್ರೇಶ್ವರ ನಾಟಕ ಸಂಘ (ಸಂಗಪ್ಪ ಬೆಳವಣಕಿ)
1960 : ಸಿದ್ಧಲಿಂಗೇಶ್ವರ ನಾಟ್ಯಸಂಘ, ಪಡೇಸೂರ (ಚನ್ನಬಸಯ್ಯ ನರೇಗಲ್ಲ)
1961 : ಶ್ರೀ ಹುಚ್ಚೇಶ್ವರ ನಾಟ್ಯಸಂಘ (ಬಿ ಆರ್ ಅರಿಷಿಣಗೋಡಿ)
1961 : ವಿಜಯ ಮಹಾಂತೇಶ್ವರ ನಾಟ್ಯಸಂಘ, ಅಣ್ಣಿಗೇರಿ (ಅಬ್ದುಲಸಾಬ ಅಣ್ಣಿಗೇರಿ)
1963 : ಶ್ರೀ ಸಂಗಮೇಶ್ವರ ನಾಟ್ಯಸಂಘ, ಗುಡಗೇರಿ (ಎನ್ ಬಸವರಾಜ)
1963 : ಶ್ರೀ ಗುರುಪ್ರಸಾದ ನಾಟ್ಯಸಂಘ, ಜಮಖಂಡಿ (ಶಂಕರಯ್ಯಸ್ವಾಮಿ ಕಡಪಟ್ಟಿ)
1965 : ಶ್ರೀ ಓಂಕಾರೇಶ್ವರ ನಾಟ್ಯಸಂಘ, ರಾಣಿಬೆನ್ನೂರ (ಬಿ ಓಬಳೇಶ)
1966 : ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ (ಮಲ್ಲನಗೌಡ ದೇಸಾಯಿ)
1968 : ಕರ್ನಾಟಕ ಕಲಾಸಂಘ, ಯಂಕಂಚಿ (ಸಿ ಕೆ ಜೋಶಿ)
1969 : ಶ್ರೀ ಭಾರತಿ ನಾಟ್ಯಸಂಘ (ಪುಡಿ ಶೇಖರಯ್ಯ)
1975 : ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ (ಬಿ ಎಸ್ ಪಟ್ಟಣಶೆಟ್ಟಿ)
1977 : ರಾಘವೇಂದ್ರ ವಿಜಯ ನಾಟ್ಯಸಂಘ, ವರವಿ (ಫಕ್ಕೀರಪ್ಪ ವರವಿ)
1982 : ಶ್ರೀ ಸಂಗಮೇಶ್ವರ ನಾಟ್ಯಸಂಘ, ಆಶಾಪುರ (ವೀರನಗೌಡ ಪಾಟೀಲ)
1985 : ವೀರೇಶ್ವರ ನಾಟ್ಯಸಂಘ, ಗದಗ (ವೀರೇಶ್ವರ ಹಿರೇಮಠ)
1986 : ಶ್ರೀ ಮಂಜುನಾಥ ನಾಟ್ಯಸಂಘ, ರಾಣಿಬೆನ್ನೂರ (ನಾಗರತ್ನಮ್ಮ ಚಿಕ್ಕಮಠ)
1990 : ಲೋಚನೇಶ್ವರ ನಾಟ್ಯಸಂಘ, ಕಮಡೊಳ್ಳಿ (ಚಿಟ್ಟಿಯವರು)
1993 : ಪಕ್ಕಣ್ಣ ಅರಗೋಳ ಮಿತ್ರ ಮಂಡಳಿ (ಪಕ್ಕಣ್ಣ ಅರಗೋಳ)
ಸಂಗೀತ ಪ್ರಧಾನವಾಗಿದ್ದ ನಾಟಕಗಳು ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಕನ್ನಡ ರಂಗಭೂಮಿಗೆ ಹೊಸಕಳೆ ನೀಡಿ, ಗಟ್ಟಿಯಾದ ಚೌಕಟ್ಟನ್ನು ಒದಗಿಸಿ, ವೃತ್ತಿರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಅನೇಕ ಮಹನೀಯರುಗಳು ಆಗಿ ಹೋಗಿದ್ದಾರೆ. ಅವರಲ್ಲಿ ಶ್ರೀ ವರದಾಚಾರ್ಯರು, ಶ್ರೀ ಗುಬ್ಬಿ ವೀರಣ್ಣನವರು, ಶ್ರೀ ಸುಬ್ಬಯ್ಯ ನಾಯ್ಡುರವರು, ಶ್ರೀ ಕೆ ಹಿರಣ್ಣಯ್ಯನವರು, ಶ್ರೀ ಸಕ್ಕರಿ ಬಾಳಾಚಾರ್ಯರು, ಶ್ರೀ ವಾಮನರಾವ್ ಮಾಸ್ತರರು, ಶ್ರೀ ಶಿರಹಟ್ಟಿ ವೆಂಕೋಬರಾಯರು, ಶ್ರೀ ಹಲಗೇರಿ ಜಟ್ಟೆಪ್ಪನವರು, ಶ್ರೀ ಕಂದಗಲ್ ಹನುಮಂತರಾಯರು, ಶ್ರೀ ಪಿ ಬಿ ಧುತ್ತರಗಿಯವರು, ಶ್ರೀ ಏಣಗಿ ಬಾಳಪ್ಪನವರು ಮುಂತಾದವರು ಪ್ರಮುಖರು. ಇವರ ಪಟ್ಟಿ ಬಹಳ ದೊಡ್ಡದಿದೆ. ನನಗೆ ತಿಳಿದಷ್ಟು ಇಲ್ಲಿ ಉಲ್ಲೇಖ ಮಾಡಿದ್ದೇನೆ. ಇಂಥ ಪ್ರಮುಖರಲ್ಲಿ ಗಟ್ಟಿಯಾಗಿ ನಿಲ್ಲುವಂಥ ಇನ್ನೊಂದು ಹೆಸರು ಗರುಡ ಸದಾಶಿವರಾಯರು.
ಸರಿ ಸುಮಾರು ಅರ್ಧ ಶತಮಾನಗಳ ಕಾಲ ರಂಗಭೂಮಿಯನ್ನು ಅನಭಿಷಿಕ್ತ ದೊರೆಯಂತೆ ಆಳಿದ ಗರುಡ ಸದಾಶಿವರಾಯರನ್ನು ನಾಟಕಾಲಂಕಾರ, ಅಭಿನಯ ಕೇಸರಿ, ನಾಟ್ಯಾಚಾರ್ಯ ಎಂಬ ಬಿರುದುಗಳಿಂದ ಗೌರವದಿಂದ ಕರೆಯುತ್ತಾರೆ. ಇವರು ರಂಗಭೂಮಿಯನ್ನು ಒಂದು ಪವಿತ್ರವಾದ ಮಂದಿರದಂತೆ ಕಂಡವರು. ತಮ್ಮ ಅಸ್ಖಲಿತ ಹಾಗೂ ಭೋರ್ಗರೆಯುವ ಮಾತುಗಳಿಂದ ವೃತ್ತಿ ರಂಗಭೂಮಿಗೆ ವಿಶ್ವ ವಿದ್ಯಾಲಯದಂತೆ ಶಿಸ್ತನ್ನು ತಂದುಕೊಟ್ಟು ಇಡೀ ಕರ್ನಾಟಕವನ್ನೇ ರಂಗಭೂಮಿಯನ್ನಾಗಿಸಿದ ಕೀರ್ತಿ ಗರುಡ ಸದಾಶಿವರಾಯರಿಗೆ ಸಲ್ಲುತ್ತದೆ. ವೃತ್ತಿ ರಂಗಭೂಮಿಯ ಮೇರು ಕಲಾವಿದರಾದ ಗರುಡ ಸದಾಶಿವರಾಯರ ಮನೆತನದ ಮೂರನೇ ತಲೆಮಾರಿನವರಾದ ಡಾ. ಪ್ರಕಾಶ ಗರುಡ ಅವರು ನೀಡಿದ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ಸಂಸ್ಕೃತ ಪಂಡಿತರಾಗಿದ್ದಂಥ ವೈದ್ಯ ಮನೆತನದವರಾದ ಶ್ರೀ ಗುರುನಾಥ ಭಟ್ಟರು ಮತ್ತು ಸುಭಧ್ರಾಬಾಯಿಯವರ ಜ್ಯೇಷ್ಠ ಪುತ್ರರಾಗಿ 18.08.1882 ರಲ್ಲಿ ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ಸದಾಶಿವರಾಯರು ಜನಿಸಿದರು. ಶ್ರೀ ಗುರುನಾಥ ಭಟ್ಟರು ವೇದ, ಶಾಸ್ತ್ರಗಳ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಂಥ ಸುಸಂಸ್ಕೃತರು, ಜೊತೆಗೆ ಸಂಗೀತದಲ್ಲಿ ಅಭಿರುಚಿಯಿದ್ದಂಥವರು. ಗರುಡ ಸದಾಶಿವರಾಯರ ಅಜ್ಜ ಕಾಶಿನಾಥ ಶಾಸ್ತ್ರಿಗಳು (ಶ್ರೀ ಗುರುನಾಥ ಭಟ್ಟರ ಚಿಕ್ಕಪ್ಪ) ವೈದಿಕ ಮಂತ್ರಗಳನ್ನು ಕಲಿಸುತ್ತಾರೆ. ಇವರಿಗೆ ಒಬ್ಬ ಸಹೋದರ ಸಂಭಾಜಿರಾಯರು ಮತ್ತು ಸಹೋದರಿ ರಾಧಾಬಾಯಿಯವರು.
ಗರುಡ ಸದಾಶಿವರಾಯರು ನಾಲ್ಕು ವರ್ಷ ಪ್ರಾಯದವರಿದ್ದಾಗ, ಅವರ ತಾಯಿ ಸುಭಧ್ರಾಬಾಯಿಯವರು ಮೂರನೇಯ ಹೆರಿಗೆಯ ಸಂದರ್ಭದಲ್ಲಿ ನಿಧನರಾಗುತ್ತಾರೆ. ತದನಂತರ ಸದಾಶಿವರಾಯರು ಅವರ ಚಿಕ್ಕಮ್ಮ ರಾಧಾಬಾಯಿಯವರಲ್ಲಿ ಆಶ್ರಯ ಪಡೆಯುತ್ತಾರೆ. ರಾಧಾಬಾಯಿಯವರು ಸಂಪ್ರದಾಯಸ್ಥ ಹಿನ್ನೆಲೆಯುಳ್ಳ ಗದಗಿನ ಗಿಣಿಗೇರಿ ಮತ್ತು ಸುತ್ತಮುತ್ತಲಿನ ಆರೇಳು ಹಳ್ಳಿಗಳಿಗೆ ಶಾನುಭೋಗರಾಗಿದ್ದ ಕುಲಕರ್ಣಿ ಕೃಷ್ಣರಾಯರ ಧರ್ಮಪತ್ನಿ. ರಾಧಾಬಾಯಿಯವರು ತಮ್ಮ ಅಕ್ಕನ ಮಕ್ಕಳಾದ ಸದಾಶಿವರಾಯರು, ಸಂಭಾಜಿರಾಯರು ಮತ್ತು ರಾಧಾಬಾಯಿಯವರನ್ನು ಬಹಳ ಅಕ್ಕರೆಯಿಂದ, ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ನೀಡುತ್ತಾ ಬೆಳೆಸುತ್ತಾರೆ. ಅಜ್ಜಿ ಅಂಬಮ್ಮ (ಶ್ರೀ ಗುರುನಾಥಶಾಸ್ತ್ರಿಗಳ ತಾಯಿ) ನವರ ಮುದ್ದಿನ ಮೊಮ್ಮಗ ಗರುಡ ಸದಾಶಿವರಾಯರು.
ಮುಂದೆ ತಾಯಿ ಶ್ರೀಮತಿ ಸುಭದ್ರಾಬಾಯಿಯವರ ಸಹೋದರ ಶ್ರೀ ಭೀಮಸೇನರಾಯರೊಂದಿಗೆ ರಾಯಚೂರಿಗೆ ಹೋಗುತ್ತಾರೆ. ಹಾಗಾಗಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ರಾಯಚೂರಿನಲ್ಲಿ ಆಗುತ್ತದೆ. ಇಂಟರ್ವರೆಗಿನ ವಿದ್ಯಾಭ್ಯಾಸದ ಸಮಯದಲ್ಲಿ ಶಿಕ್ಷಕರಾದ ಶ್ರೀ ಪಂಢರಿನಾಥ ಅವರ ಪ್ರಭಾವದಿಂದ ಸಾಹಿತ್ಯ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ವಿದ್ಯಾಭ್ಯಾಸದ ಜೊತೆಗೆ ಶಾಸ್ತ್ರೀಯ ಸಂಗೀತ ಮತ್ತು ರಂಗ ತಾಲೀಮನ್ನು ಪಡೆಯುತ್ತಾರೆ.
ಮನೋಹರ ಗ್ರಂಥಮಾಲಾ, ಧಾರವಾಡದವರ ಪ್ರಕಾಶನದಲ್ಲಿ ಮೂಡಿಬಂದ “ಗರುಡ ಸದಾಶಿವರಾಯರ ಸಮಗ್ರ ನಾಟಕ ಸಂಪುಟ 1 ಮತ್ತು 2” ರಲ್ಲಿ ಅವರ 16 ನಾಟಕಗಳನ್ನು ಪ್ರಕಟಿಸಲಾಗಿದೆ. ಈ ಪುಸ್ತಕಗಳ ಮುನ್ನುಡಿಯಲ್ಲಿ ಗರುಡ ಸದಾಶಿವರಾಯರ ಜೀವನದ ಪ್ರಮುಖ ಘಟ್ಟಗಳನ್ನು ದಾಖಲಿಸಿದ್ದಾರೆ.
ಕಲಬುರ್ಗಿ ಸುತ್ತಮುತ್ತಲಿನ ನಗರಗಳಲ್ಲಿ ಗಣೇಶೋತ್ಸವ, ಶಿವಾಜಿ ಜಯಂತಿ ಹಾಗು ಇನ್ನಿತರ ಸಾರ್ವಜನಿಕ ಉತ್ಸವ ಕಾರ್ಯಕ್ರಮಗಳಲ್ಲಿ ನಾಟಕವನ್ನು ಆಡುವುದರಿಂದ ಗರುಡ ಸದಾಶಿವರಾಯರು ಹೈದರಾಬಾದ ಕರ್ನಾಟಕದ ಮೂಲಕ ತಮ್ಮ ರಂಗ ಪಯಣವನ್ನು ಪ್ರಾರಂಭಿಸುತ್ತಾರೆ. 1897 ರಲ್ಲಿ ಕಲಬುರ್ಗಿಯ “ಪಾಂಡುರಂಗ ಕೃಷ್ಣ ಮಂಡಳಿ” ಯನ್ನು ಸೇರಿದ ಗರುಡ ಸದಾಶಿವರಾಯರು ಲೋಕಮಾನ್ಯ ಟಿಳಕರ ಸ್ವಾತಂತ್ರ್ಯ ಹೋರಾಟದ ಕಥಾನಕವಾದ “ಬಂಧ ವಿಮೋಚನೆ” ಎನ್ನುವ ನಾಟಕದಲ್ಲಿ ಪಾತ್ರವಹಿಸುತ್ತಾರೆ. ತದನಂತರ 1899 ರಲ್ಲಿ ಕೀಲಿ ದತ್ತೋಪಂತ ಅವರ “ಶಿವಸುತ ಪ್ರಾಸಾದಿತ ನಾಟಕ ಮಂಡಳಿ” ಯಲ್ಲಿ ಮುಖ್ಯ ನಟರಾಗಿ ಕೆಲಸ ಮಾಡುತ್ತಾರೆ. ಈ ಮಂಡಳಿಯು ಸುಮಾರು ನಾಲ್ಕು ವರ್ಷಗಳ ಕಾಲ ಹೈದರಾಬಾದ ಕರ್ನಾಟಕದಲ್ಲಿ ನಾಟಕಗಳನ್ನು ಪ್ರದರ್ಶಿಸಿತು. ಕಾರಣಾಂತರಗಳಿಂದ ಶಿವಸುತ ಪ್ರಾಸಾದಿತ ನಾಟಕ ಮಂಡಳಿಯನ್ನು ಮುಚ್ಚಿದ್ದರಿಂದ ಗರುಡ ಸದಾಶಿವರಾಯರು ಕೊಪ್ಪಳದ ದೇಸಾಯಿ ರಾಮರಾಯರ ಸಂಗೀತ ನಾಟಕ ಮಂಡಳಿಯನ್ನು ಸೇರಿದರು.
ಕಾಡಸಿದ್ಧೇಶ್ವರ ನಾಟಕ ಮಂಡಳಿ ಹಾಗು ಹೊಂಬಳದ ಶ್ರೀ ಶಂಕರಲಿಂಗೇಶ್ವರ ಸಂಗೀತ ನಾಟಕ ಮಂಡಳಿಗಳಲ್ಲಿ ನಾಟ್ಯಾಚಾರ್ಯರಾಗಿ ಕೆಲವು ಕಾಲ ಕೆಲಸ ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟ ಮತ್ತು ಚಳುವಳಿಯ ವಿಷಮ ಕಾಲಘಟ್ಟದಲ್ಲಿ ಗರುಡ ಸದಾಶಿವರಾಯರು ಗದಗಿನಲ್ಲಿ 16.11.1919 ರಲ್ಲಿ “ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ” ಯನ್ನು ಸ್ವತಂತ್ರವಾಗಿ ಸ್ಥಾಪನೆ ಮಾಡುತ್ತಾರೆ.
1905 ರಿಂದ 1940 ರ ಅವಧಿಯಲ್ಲಿ ರಂಗಭೂಮಿಗೆ ಉತ್ಕೃಷ್ಠ ಕೊಡುಗೆ ನೀಡಿ ಶ್ರೀಮಂತಗೊಳಿಸಿದ ಮಹನೀಯರಲ್ಲಿ ಗರುಡ ಸದಾಶಿವರಾರದ್ದು ಅಗ್ರಸ್ಥಾನ. ತಮ್ಮ ನಾಟಕಗಳ ಮೂಲಕ ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ವಸಾಹತುಶಾಹಿ ಬ್ರಿಟೀಷ್ ಸರ್ಕಾರವನ್ನು ಪ್ರತಿಭಟಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದವರು ಗರುಡ ಸದಾಶಿವರಾಯರು. ತಮ್ಮ ನಾಟಕ ಮಂಡಳಿಯ ಮೂಲಕ ಕಂಸವಧೆ, ಕೃಷ್ಣಲೀಲಾ, ಲಂಕಾದಹನ ಮುಂತಾದ ನಾಟಕಗಳನ್ನು ಪ್ರದರ್ಶನ ಮಾಡುತ್ತಾರೆ. ಇಲ್ಲಿ ಗಮನಿಸಬೇಕಾದ ವಿಶೇಷತೆಯೆಂದರೆ ನಾಟಕದಲ್ಲಿನ ಪಾತ್ರಗಳು ಬ್ರಿಟೀಷರ ವಿರುದ್ಧ ಘೋಷಣೆ ಕೂಗುತ್ತಿರುವಂತೆ ಕಾಣುತ್ತಿದ್ದವು. ಪ್ರೇಕ್ಷಕರು ರೋಮಾಂಚನಗೊಂಡು ಎಷ್ಟು ಭಾವ ಪರವಶರಾಗುತ್ತಿದ್ದರೆಂದರೆ “ಭಾರತ ಮಾತಾ ಕಿ ಜೈ” ಎಂದು ಜಯಘೋಷ ಮಾಡುತ್ತಿದ್ದರು. ದಿನಾಂಕ 05.03.1934 ರಂದು ಗದಗಿನಲ್ಲಿ ಮೊಕ್ಕಾಂ ಮಾಡಿದ್ದ ಮಹಾತ್ಮಾ ಗಾಂಧೀಜಿಯವರು, ಗರುಡ ಸದಾಶಿವರಾಯರು ರಚಿಸಿ, ನಿರ್ದೇಶಿಸಿ, ನಟಿಸಿದ ನಾಟಕ “ಸತ್ಯ ಸಂಕಲ್ಪ” ವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾದ ಅವಿಸ್ಮರಣೀಯ ಸಂಗತಿ. ಸ್ವಾತಂತ್ರ್ಯ ಸಂಗ್ರಾಮದ ಕಾಳ್ಗಿಚ್ಚಿನಲ್ಲಿ ನಾಟಕಗಳ ಮೂಲಕ ರಾಷ್ಟ್ರೀಯತೆ ಮತ್ತು ಸಾಮಾಜಿಕ ಅವ್ಯವಸ್ಥೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಗರುಡ ಸದಾಶಿವರಾಯರು ಮಾಡಿದ ಸಾಹಸ ಗಾಥೆ ಅದ್ಭುತ.
ಅತ್ಯಂತ ಪ್ರಭುದ್ಧ ನಾಟಕಗಳ ರಚನೆಯನ್ನು ಮಾಡಿ ಪ್ರದರ್ಶಿಸಿದ ಕೀರ್ತಿ ಗರುಡ ಸದಾಶಿವರಾಯರದ್ದು. ಇವುಗಳು ಚಾರಿತ್ರಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತವೆ. ಮರಾಠಿ, ಇಂಗ್ಲೀಷ, ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಭುದ್ಧರು ಹಾಗೂ ಪರಿಣಿತರಾಗಿದ್ದರಿಂದ ಮತ್ತು ಸ್ವತಃ ನಟರಾಗಿದ್ದರಿಂದ ಗರುಡ ಸದಾಶಿವರಾಯರು ತಮ್ಮೆಲ್ಲ ಅನುಭವಗಳನ್ನು ಮೇಳೈಸಿ ವೃತಿರಂಗಭೂಮಿಗೆ ಹೊಂದುವಂಥ ಅಮೂಲ್ಯ ನಾಟಕಗಳನ್ನು ರಚಿಸಿದ್ದಾರೆ. ಗರುಡ ಸದಾಶಿವರಾಯರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ.
ಪೌರಾಣಿಕ ಕೃತಿಗಳು (30 ನಾಟಕಗಳು):
1. ಅಜ್ಞಾತವಾಸ
2. ಅನುಸೂಯಾ
3. ಕಚ ದೇವಯಾನಿ
4. ಗಿರಿಜಾ ಕಲ್ಯಾಣ
5. ಗೋಪಿಚಂದ (ಸಂತ ಹೃದಯ)
6. ಚವತಿಯ ಚಂದ್ರ
7. ದುರಾತ್ಮ ರಾವಣ
8. ದ್ರೌಪದಿ ಸ್ವಯಂವರ
9. ಧರ್ಮ ಸಾಮ್ರಾಜ್ಯ
10. ಪಂಚಗವ್ಯ
11. ಭಸ್ಮಾಸುರ ಮೋಹಿನಿ
12. ಮಾತೃಬಂಧ ವಿಮೋಚನ
13. ಮಾಯಾ ಬಜಾರ
14. ರುಕ್ಮಿಣಿ ಸ್ವಯಂವರ
15. ಲಂಕಾ ದಹನ (ಸ್ವಜನೋದ್ಧಾರ)
16. ಶಕ್ತಿ ವಿಲಾಸ
17. ಶ್ರೀ ಕೃಷ್ಣ ಪರಂಧಾಮ
18. ಶ್ರೀ ಕೃಷ್ಣ ಲೀಲಾ
19. ಶ್ರೀ ಕೃಷ್ಣ ಸುಧಾಮ
20. ಶ್ರೀನಿವಾಸ ಕಲ್ಯಾಣ
21. ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ
22. ಸತ್ಯ ಹರಿಶ್ಚಂದ್ರ
23. ಸತ್ಯಾಗ್ರಹಿ ಪ್ರಹ್ಲಾದ
24. ಸಂಪೂರ್ಣ ರಾಮಾಯಣ
25. ಸಾವಿತ್ರಿ ಸತ್ಯವಾನ್
26. ಮಾರ್ಕಾಂಡೇಯ
27. ಕೀಚಕ ವಧೆ
28. ಸೌಭಧ್ರ
29. ಹಿಡಿಂಬಿ
30. ಹೇಮರೆಡ್ಡಿ ಮಲ್ಲಮ್ಮ
ಐತಿಹಾಸಿಕ (4 ನಾಟಕಗಳು):
1. ಉಗ್ರ ಕಲ್ಯಾಣ
2. ಎಚ್ಚಮ ನಾಯಕ (ಕನ್ನಡ ಕಡುಗಲಿ)
3. ವಿದ್ಯಾರಣ್ಯ ವಿಜಯ
4. ಸಿರಸಂಗಿ ದೇಸಾಯರು (ತ್ಯಾಗವೀರ ಲಿಂಗರಾಜ)
ಸಾಮಾಜಿಕ (7 ನಾಟಕಗಳು):
1. ಕಾಲ ಚಕ್ರ
2. ಕ್ರಾಂತಿ
3. ನಮ್ಮ ಭಾಗ್ಯೋದಯ
4. ನಾನು ಒಕ್ಕಲಿಗ
5. ನಾನು ಕನ್ನಡಿಗ
6. ವಿಷಮ ವಿವಾಹ (ಪಶ್ಚಾತ್ತಾಪ)
7. ಸತ್ಯ ಸಂಕಲ್ಪ
ಕಾಲ್ಪನಿಕ ಸಾಮಾಜಿಕ ನಾಟಕಗಳು (6 ನಾಟಕಗಳು):
1. ಆದರ್ಶ ಕನ್ಯಾ
2. ಆಶಾಭಂಗ
3. ಪ್ರಭಾವತಿ
4. ಬಲಸಿಂಹ ತಾರಾ
5. ವಿಕ್ರಮ ಶಶಿಕಲಾ
6. ವಿವೇಕ ವಿಜಯ
ಸಾಧು ಸಂತರ ಕುರಿತ ನಾಟಕಗಳು (11 ನಾಟಕಗಳು):
1. ಅಕ್ಕ ಮಹಾದೇವಿ
2. ತುಕಾರಾಮ
3. ದಾಮಾಜಿ ಪಂತ
4. ಪುರಂಧರದಾಸರು
5. ಮಹಾತ್ಮಾ ಏಸುಕ್ರಿಸ್ತ
6. ಮಹಾವಿಭೂತಿ ಬಸವಣ್ಣ
7. ಮಹಾಸಾಧು ಕಬೀರ
8. ರಾಮ ರಹೀಮ
9. ಶರಣ ಬಸವ
10. ಸದ್ಧರ್ಮ ವಿಜಯ
11. ಸಿದ್ಧ ರಾಮೇಶ್ವರ
ಮಕ್ಕಳ ನಾಟಕ (1 ನಾಟಕ):
1. ಪ್ರೇಮ ವಿವಾಹ
ಗರುಡ ಸದಾಶಿವರಾಯರು ರಚಿಸಿದ ನಾಟಕಗಳು ಪಾತ್ರಪೋಷಣೆ, ದೃಶ್ಯಾಲಂಕಾರ, ಪೂರಕವಾದ ರಂಗಸಜ್ಜಿಕೆ ಹೀಗೆ ವೃತ್ತಿ ರಂಗಭೂಮಿಯ ಎಲ್ಲ ಇತಿಮಿತಿಗಳನ್ನು ಒಳಗೊಂಡಿದ್ದವು. ಅಭಿವ್ಯಕ್ತಿಯ ಮೂರ್ತರೂಪಕಗಳಾದ ಅವರ ನಾಟಕಗಳಲ್ಲಿ ಅನವಶ್ಯಕವಾದ ಗಾಯನ, ಸಂಗೀತ ಅಥವಾ ಹಾಸ್ಯದ ಪ್ರಯೋಗಗಳು ಇರುತ್ತಿರಲಿಲ್ಲ. ಇದ್ದರೂ ಅವುಗಳು ಸನ್ನಿವೇಶಕ್ಕೆ ತಕ್ಕಂತೆ ಇರುತ್ತಿದ್ದವು. ಇಡೀ ನಾಟಕವು ತನ್ನತನವನ್ನು ಬಿಡದೇ ಪಾತ್ರಗಳ ಮೂಲಕವೇ ಪೊಷಿಸಿಕೊಂಡು ಹೋಗುತ್ತಿದ್ದವು. ಇಂಥ ಅಮೂಲ್ಯ ತತ್ವಗಳನ್ನು ಮೇಳೈಸಿದ ಗರುಡ ಸದಾಶಿವರಾಯರ ನಾಟಕಗಳು ಮನರಂಜನೆಯ ಜೊತೆಗೆ ವೀಕ್ಷಕರ ಸಂವೇದನೆಯನ್ನೂ ಮುಟ್ಟಿ ಶ್ರೇಷ್ಠ ನಾಟಕಗಳು ಎಂದು ಇಂದಿಗೂ ಜನ ಜನಿತವಾಗಿವೆ.
ಗರುಡ ಸದಾಶಿವರಾಯರ ನಾಟಕಗಳಲ್ಲಿ ಅಭಿನಯವೇ ಪ್ರಮುಖ ಸ್ಥಾನ. ಅದಕ್ಕೆ ಬೇಕಾಗುವಂಥ ಶಕ್ತಿಯುತ ವೇದಿಕೆಯನ್ನು ತಮ್ಮ ನಾಟಕಗಳಲ್ಲಿ ಒದಗಿಸಿದ್ದಾರೆ. ಪೌರಾಣಿಕ ನಾಟಕಗಳಲ್ಲಿ ಪ್ರಮುಖವಾಗಿ ಕಂಡು ಬರುವ ಅಂಶ ಅಂದರೆ ಮೌಲ್ಯಗಳು ಮಸುಕಾಗದಂತೆ ಎಲ್ಲಿಯೂ ಹೊಂದಾಣಿಕೆಯನ್ನು ಮಾಡಿಲ್ಲ ಮತ್ತು ಉತ್ಪ್ರೇಕ್ಷೆಗೆ ಆಸ್ಪದವನ್ನು ನೀಡಿಲ್ಲ. ದೇವಾನು ದೇವತೆಗಳ ಪಾತ್ರವಾಗಿದ್ದರೂ ಕೂಡ, ಸಾಮಾನ್ಯ ಜನರಿಗೆ ಹೊಂದುವಂತೆ ಪ್ರಸ್ತುತ ಮಾಡಿ, ಪೌರಾಣಿಕ ನಾಟಕಗಳಿಗೆ ಸಮಕಾಲೀನ ಸಾಮಾಜಿಕ ವಿಮರ್ಶೆಯ ಣouಛಿh ಕೊಡುವ ಮೂಲಕ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು. ರಾಷ್ಟ್ರಪ್ರೇಮ ಮತ್ತು ರಾಷ್ಟ್ರಸೇವೆಯನ್ನು ಬಿಂಬಿಸುವ ಸಾಮಾಜಿಕ ನಾಟಕಗಳಲ್ಲಿ ಪ್ರತಿಭಟಿಸುವ ಸಾಮಾಜಿಕ ಕಳಕಳಿಯನ್ನು ಹದವಾಗಿ ಬಿಂಬಿಸಿರುವ ಗರುಡ ಸದಾಶಿವರಾಯರು ಧರ್ಮ, ಜಾತಿ, ಜನಾಂಗಗಳ ಮೇಲೆ ಆಗುತ್ತಿರುವ ನಿಂದನೆ ಮತ್ತು ದಬ್ಬಾಳಿಕೆಗಳನ್ನು ಖಂಡಿಸಿದ್ದಾರೆ.
ತಮ್ಮ ನಾಟಕಗಳಲ್ಲಿ ಗರುಡ ಸದಾಶಿವರಾಯರು ಪಾಶ್ಚಾತ್ಯ ಇನ್ನೂ ನಿಖರವಾಗಿ ಹೇಳಬೇಕೆಂದರೆ ಯುರೋಪ್‌ನ ರೋಮ್‌ನ ರಂಗ ಸಜ್ಜಿಕೆ Proscenlum atage ಪರಿಕಲ್ಪನೆಯ ಹಿನ್ನೆಲೆಯಲ್ಲಿ ಬರೆದಿದ್ದಾರೆ ಎಂದು ನಾಟಕದ ತಂತ್ರಜ್ಞರ ಅಭಿಪ್ರಾಯ. ತಾಂತ್ರಿಕತೆಯಲ್ಲೂ ಗರುಡ ಸದಾಶಿವರಾಯರು ಉನ್ನತ ಪ್ರಜ್ಞೆ ಉಳ್ಳವರಾಗಿದ್ದರು. ಈ ವಿವಿಧ ರಂಗ ಸಜ್ಜಿಕೆಗಳ ಬಗ್ಗೆ ಒಂದಿಷ್ಟು ವಿವರಗಳನ್ನು ನೋಡಿಕೊಂಡು ಮುಂದೆ ಹೋಗೋಣ.
ಕಲಾತ್ಮಕವಾಗಿ ರೂಪಿಸಿ ನಾಟಕವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಂಗ ಸಜ್ಜಿಕೆ ಪ್ರಮುಖ ಕೆಲಸ ಮಾಡುತ್ತದೆ. ರಂಗಮಂಟಪ ಅಥವಾ ರಂಗ ಸಜ್ಜಿಕೆಗಳ ವಿನ್ಯಾಸಗಳನ್ನು ಸ್ಥೂಲವಾಗಿ ಹತ್ತು ಪ್ರಕಾರಗಳಿಂದ ಗುರುತಿಸಬಹುದು. ಈ ವಿವಿಧ ರಂಗಸ್ಥಳಗಳಿಗೆ ಕನ್ನಡದಲ್ಲಿ ಸಮಾನಾಂತರ ಶಬ್ದ ನನಗೆ ಸಿಗಲಿಲ್ಲ. ಹಾಗಾಗಿ ಅವನ್ನು ಇಂಗ್ಲೀಷಿನಲ್ಲಿಯೇ ಬರೆದಿದ್ದೇನೆ.
1. ಸರಳ ಆಥವಾ ಸಾಂಕೇತಿಕ ರಂಗಸ್ಥಳ ( Found stages):
ಎತ್ತರದಲ್ಲಿರುವ ಸ್ಥಳವನ್ನೇ ವೇದಿಕೆಯನ್ನಾಗಿ ಸರಳವಾಗಿ ರೂಪಿಸಿಕೊಂಡು ನಾಟಕವಾಡುವುದು ಈ ರಂಗಸ್ಥಳದ ವಿಶೇಷತೆ. ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಉಪಯೋಗಿಸುವುದು ಬಹಳ ಕಡಿಮೆ. ಸಾಮಾನ್ಯವಾಗಿ ಇಂತಹ ರಂಗಸ್ಥಳಗಳು ತಾತ್ಕಾಲಿಕ ಮತ್ತು ಆಯಾ ಸಂದರ್ಭಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ನಾಟಕವಾಡುವುದು ಇದರ ಪ್ರಮುಖ ಗುರುತು.
2. ಪ್ರೊಸೀನಿಯಮ್ ರಂಗಸ್ಥಳ (Proscenlum stages):
ಸಾಮಾನ್ಯವಾಗಿ ವೃತಿರಂಗಭೂಮಿಯಲ್ಲಿ ಕಂಡು ಬರುವ ರಂಗಸ್ಥಳದ ಮಾದರಿ. ಎತ್ತರದಲ್ಲಿರುವ ಸ್ಥಳವನ್ನೇ ವೇದಿಕೆಯನ್ನಾಗಿ ಸರಳವಾಗಿ ರೂಪಿಸಿಕೊಂಡು ನಾಟಕವಾಡುವುದು ಈ ರಂಗಸ್ಥಳದ ವಿಶೇಷತೆ. ಆಕರ್ಷಕ ರಂಗ ವಿನ್ಯಾಸ, ಕಣ್ಣು ಕೋರೈಸುವ ಪರದೆಗಳ ಬಳಕೆ, ಝಗಮಗಿಸುವ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಇರುವ ದೊಡ್ಡ ವೇದಿಕೆ ಇದರ ವೈಶಿಷ್ಠ್ಯತೆ. ಪರದೆಯ ಹಿಂದೆ ಮತ್ತು ಮುಂದೆ ವಿಶಾಲ ಸ್ಥಳವಿರುತ್ತದೆ. ಏಕ ಕಾಲಕ್ಕೆ ಬಹಳಷ್ಟು ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವುದು ಇದರ ವಿಶೇಷತೆ.
3. ಎಂಡ್ ರಂಗಸ್ಥಳ (End stages):
ಆಯತಾಕಾರದ ವೇದಿಕೆಯಿರುವ ಈ ರಂಗಸ್ಥಳದ ಮಾದರಿಯಲ್ಲಿ ಕಲಾವಿದರು ನೇರವಾಗಿ, ಏಕಮುಖವಾಗಿ ವೀಕ್ಷಕರನ್ನು ನೋಡುವದು ಪ್ರಮುಖ ಆಕರ್ಷಣೆ. ವಿಕ್ಷಕರ ಚಿತ್ರಶಾಲೆಯನ್ನು ಘಂಟೆಯ ಆಕಾರದಲ್ಲಿ ನಿರ್ಮಾಣವಾಗಿರುವುದು ಇದರ ವಿಶೇಷತೆ.
4. ಥ್ರಸ್ಟ್ ರಂಗಸ್ಥಳ (Thrust stages):
ರಂಗಸ್ಥಳದ ಮೂರುಕಡೆ ವಿಕ್ಷಕರ ವ್ಯವಸ್ಥೆ ಇರುವುದು ಥ್ರಸ್ಟ್ ರಂಗಸ್ಥಳದ ವೈಶಿಷ್ಠ್ಯತೆ. ಸಾಕಷ್ಟು ವೀಕ್ಷಕರಿಗೆ ಸ್ಥಳವಿರುತ್ತದೆ ಮತ್ತು ಕಲಾವಿದರಗೂ ಮತ್ತು ವೀಕ್ಷಕರಿಗೂ ಅವಿನಾಭಾವ ಸಂಬಂಧ ಮತ್ತು ಪರಸ್ಪರ ಸಂಭಾಷಣೆಯನ್ನು ಮಾಡಲು ಅನುಕೂಲವಾಗಿರುತ್ತದೆ.
5. ಅರೇನಾ ರಂಗಸ್ಥಳ (Arena stage):
ರಂಗಸ್ಥಳದ ಸುತ್ತಲೂ ಅಂದರೆ ನಾಲ್ಕೂ ಕಡೆ ವಿಕ್ಷಕರ ವ್ಯವಸ್ಥೆ ಇರುವುದು ಅರೇನಾ ರಂಗಸ್ಥಳದ ವೈಶಿಷ್ಠ್ಯತೆ. ಪರದೆಯ ಅವಶ್ಯಕತೆ ಇಲ್ಲದಿರುವುದು ಈ ರಂಗಸ್ಥಳದ ಮಾದರಿಯ ವಿಶೇಷತೆ.
6. ಥೀಯೇಟರ್ಸ್-ಇನ್-ದಿ-ರೌಂಡ್ (Theraters in the round):
ರಂಗಸ್ಥಳದ ಸುತ್ತಲೂ ಅಂದರೆ ನಾಲ್ಕೂ ಕಡೆ ವಿಕ್ಷಕರ ವ್ಯವಸ್ಥೆ ಇರುವುದು ಮತ್ತು ಸಾಮಾನ್ಯವಾಗಿ ಆಯತಾಕಾರ ಅಥವಾ ಚೌಕಾಕಾರದ ವೇದಿಕೆ ಥೀಯೇಟರ್ಸ್-ಇನ್-ದಿ-ರೌಂಡ್ ರಂಗಸ್ಥಳದ ವೈಶಿಷ್ಠ್ಯತೆ.
7. ಫ್ಲೆಕ್ಷಿಬಲ್ ರಂಗಸ್ಥಳ (Flexibale theatres):
ಫ್ಲೆಕ್ಷಿಬಲ್ ರಂಗಸ್ಥಳಕ್ಕೆ ಸ್ಟುಡಿಯೋ, ಬ್ಲ್ಯಾಕ್ ಬಾಕ್ಸ್ ಎಂತಲೂ ಕರೆಯುತ್ತಾರೆ. ರಂಗಸ್ಥಳವನ್ನು ಮತ್ತು ಪ್ರೇಕ್ಷಕರ ಸ್ಥಳವನ್ನು ಸೂಕ್ತ ವಿಷಯಕ್ಕೆ ಸಂಬಂಧಿಸಿದಂತೆ ತಯಾರು ಮಾಡಿಕೊಳ್ಳುವುದು ಈ ಮಾದರಿಯ ವಿಶೇಷತೆ. ಈ ರಂಗಸ್ಥಳವನ್ನು ಸ್ಥಿರವಾಗಿರುವುದಿಲ್ಲ. ಪ್ರೇಕ್ಷಕರ ಸ್ಥಳ ಮತ್ತು ರಂಗಸ್ಥಳವನ್ನು ಕೆಲವೇ ಸಮಯದಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು.
8. ಪ್ಲ್ಯಾಟ್ ಫಾರ್ಮ್ ರಂಗಸ್ಥಳ (Platforms stages):
ಪ್ರೇಕ್ಷಕರಿಗೆ ಕಾಣುವ ಹಾಗೆ ವೇದಿಕೆಯನ್ನು ಎತ್ತರ ಸ್ಥಳದಲ್ಲಿ ನಿರ್ಮಾಣ ಮಾಡುವುದು ಈ ರಂಗಸ್ಥಳದ ವಿಶೇಷತೆ. ಪರದೆಗಳನ್ನು ಉಪಯೋಗಿಸುವುದು ಕಡಿಮೆ. ಕಡಿಮೆ ಸಮಯವಿರುವ ಸಂದರ್ಭಗಳಲ್ಲಿ ಇಂಥ ವೇದಿಕೆಗಳನ್ನು ನಿರ್ಮಿಸುವುದು ಸರ್ವೇ ಸಾಮಾನ್ಯ.
9. ಹಿಪ್ಪೋಡ್ರೋಮ್ಸ್ ರಂಗಸ್ಥಳ (Hippodrome):
ಈ ರಂಗಸ್ಥಳದ ಮಾದರಿಯನ್ನು ಗ್ರೀಕರು ಉಪಯೋಗಿಸುತ್ತಿದ್ದರು. ರೋಮನ್ನರು ಸರ್ಕಸ್ ಸರ್ಕಸ್ಗಳಲ್ಲಿ ಉಪಯೋಗಿಸುತ್ತಿದ್ದುದು ಕಂಡು ಬರುತ್ತದೆ. ವೇದಿಕೆಯನ್ನು ಎತ್ತರದ ಸ್ಥಳದಲ್ಲಿ ನಿರ್ಮಿಸುತ್ತಾರೆ.
10. ಬಯಲು ರಂಗಸ್ಥಳ (Open air theaters or amphitheaters):
ಬಯಲಿನಲ್ಲಿ ವೇದಿಕೆಯನ್ನು ಸಿದ್ಧಪಡಿಸುವುದು ಈ ರಂಗಸ್ಥಳದ ವಿಶೇಷತೆ. ಇಂಥದ್ದೇ ವೇದಿಕೆಯೆಂದು ನಿರ್ದಿಷ್ಠವಾಗಿರುವುದಿಲ್ಲ. Iಟಿ ಣhe ಟಿuಣ sheಟಟ, ಬಯಲಿನಲ್ಲಿರುವುದು ಇದರ ವೈಶಿಷ್ಠ್ಯತೆ.
ಗರುಡ ಸದಾಶಿವರಾಯರು ಮೇಲೆ ತಿಳಿಸಿರುವ ಎಲ್ಲ ರಂಗಸಜ್ಜಿಕೆಗಳ ಮಾದರಿಗಳನ್ನು ಬಲ್ಲವರಾಗಿದ್ದರು. ಪರದೆಗಳ ವಿನ್ಯಾಸ, ದೃಶ್ಯಗಳ ಚಿತ್ರಣ ಮತ್ತು ಅದರಲ್ಲಿ ಬಳಸುವ ಬಣ್ಣಗಳ ಮೇಳೈಸುವಿಕೆಯಿಂದ ಅವರ ನಾಟಕಗಳಲ್ಲಿ ಒಂದು ವಿಭಿನ್ನತೆ ಎದ್ದು ಕಾಣುತ್ತಿತ್ತು. ನಾಟಕದ ಕಥೆಗೆ ತಕ್ಕ ಹಾಗೆ ಪಾತ್ರ ಪೋಷಣೆ, ಪಾತ್ರಗಳಲ್ಲಿ ಮೌಲ್ಯಗಳನ್ನು ತುಂಬುವುದು, ಅದಕ್ಕೆ ತಕ್ಕಂತೆ ಹಿತಮಿತವಾದ ಹಾಸ್ಯ, ಸಂಗೀತ ಸಂಯೋಜನೆಯ ಹೊಂದಾಣಿಕೆ ಮತ್ತು ಅತ್ಯುತ್ತಮ ಸಂಭಾಷಣೆಗಳಲ್ಲಿ ಪ್ರೌಢಿಮೆಯೊಂದಿಗೆ ರಚಿಸಿದ್ದು ವಿಶೇಷತೆ.
ಡಾ. ಹೆಚ್ ಕೆ ರಂಗನಾಥ ಅವರು ಬರೆದ “ಕರ್ನಾಟಕ ರಂಗಭೂಮಿ” ಎನ್ನುವ ಪುಸ್ತಕದಲ್ಲಿ ಗರುಡ ಸದಾಶಿವರಾಯರ ವೃತ್ತಿ ರಂಗಭೂಮಿಯ ಕೊಡುಗೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ.
ವೃತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದು ಕೊಟ್ಟವರು ಗರುಡ ಸದಾಶಿವರಾಯರು. ಇವರ ಗರಡಿಯಲ್ಲಿ ಪಳಗಿದ ನಟರ ದೊಡ್ಡ ಪಟ್ಟಿಯೇ ಇದೆ. ಅವರಲ್ಲಿ ಮುರುಗೋಡು ಗಂಗಾಧರಪ್ಪ, ಸೀತಾರಾಮ ಭಟ್ಟ, ಎಲ್ ಪಾವಂಜೆಪ್ಪ, ಗಣೇಶ್ ಸುಂದರ, ನೀಲಕಂಠ ಬುವಾ, ಜಗನ್ನಾಥರಾವ್ ಕುಲಕರ್ಣಿಮುಂತಾದವರು. ಇವರಿಗೆ ತರಬೇತಿಯನ್ನು ಸ್ವತಃ ಗರುಡ ಸಾದಾಶಿವರಾಯರೇ ನೀಡುತ್ತಿದ್ದುದು ವಿಶೇಷ. ಶಿಸ್ತು ಪಾಲಿಸುವುದರಲ್ಲಿ ಗರುಡ ಸದಾಶಿವರಾಯರದು ಅಮೋಘ ವ್ಯಕ್ತಿತ್ವ. ಒಂದು ಉದಾಹರಣೆಯನ್ನು ಇಲ್ಲಿ ಮೆಲುಕು ಹಾಕಬಹುದು.
ಗರುಡ ಸದಾಶಿವರಾಯರ ನಿರ್ದೇಶನದ ನಾಟಕ ಎಚ್ಚಮ ನಾಯಕದ ತಾಲೀಮು ನಡೆಯುತ್ತಿತ್ತು. ನಾಯಕ ನಟನಿಗೆ “ನನಗೀಗ ರೋಮಾಂಚನವಾಗುತ್ತಿದೆ” ಎನ್ನುವ ಸಂಭಾಷಣೆಯನ್ನು ಹೇಳಿಸುವ ಸಂದರ್ಭ. ನಟನ ಮುಂದೆ ನಿಂತು “ನನಗೀಗ ರೋಮಾಂಚನವಾಗುತ್ತಿದೆ” ಎಂದು ಭೋರ್ಗರೆವ ಧ್ವನಿಯಲ್ಲಿ ಹೇಳಿದಾಗ ನಾಯಕ ನಟನ ಮೈ ಬೆವರಿಳಿದಂತಾಗಿತ್ತು. ಅದು ಗರುಡ ಸದಾಶಿವರಾಯರ ರಂಗತಾಲೀಮಿನ ವೈಭವಯುತ ಶೈಲಿ. ಇಂಥ ಹಲವಾರು ದೃಶ್ಯಗಳನ್ನು ಅವರ ಶಿಷ್ಯರು ನೆನಪಿನಲ್ಲಿಟ್ಟುಕೊಂಡಿದ್ದರು.
ಇಂಥ ಅಭೂತಪೂರ್ವ ನಟ ಸಮ್ರಾಟರಿಗೆ ಶಿವಮೊಗ್ಗೆಯಲ್ಲಿ “ಅಭಿನಯ ಕೇಸರಿ” ಎಂದು ಬಿರುದು ನೀಡಿ ಸನ್ಮಾನಿಸಲಾಗಿದೆ. 1925 ರಲ್ಲಿ ಬೆಳಗಾವಿಯಲ್ಲಿ ನಡೆದ 11 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ನಾಟಕಾಲಂಕಾರ” ಎಂದು ಬಿರುದು ನೀಡಿ ಗೌರವಿಸಲಾಗಿದೆ. 1948 ರಲ್ಲಿ ಬಳ್ಳಾರಿ ಜಿಲ್ಲೆಯ ಜೋಳದರಾಶಿಯಲ್ಲಿ ಕನ್ನಡ ನಾಟಕ ಕಲಾ ಪರಿಷತ್ತು ವತಿಯಿಂದ ನಡೆದ ಪ್ರಥಮ ನಾಟ್ಯ ಸಮಾವೇಶದ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಲಾಗಿದೆ.
1915 ರಲ್ಲಿ ಅವರ ತಂದೆ ಶ್ರೀ ಗುರುನಾಥ ಶಾಸ್ತ್ರಿಗಳ ಸಹೋದರಿ ಶ್ರೀಮತಿ ಲಲಿತಮ್ಮನವರ ಪುತ್ರಿ ಶ್ರೀಮತಿ ಭೀಮಾಬಾಯಿಯವರನ್ನು ವಿವಾಹವಾದ ಗರುಡ ಸದಾಶಿವರಾಯರಿಗೆ ನಾಲ್ಕು ಜನ ಗಂಡು ಮಕ್ಕಳು ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು. ಕಳೆದ 40 ವರ್ಷಗಳಿಂದ ಗರುಡ ಸದಾಶಿವರಾಯರ ಕಲಾ ಪ್ರಪಂಚವನ್ನು ಜೀವಂತ ಇಡುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಗದಗಿನಲ್ಲಿ ಗರುಡ ಸದಾಶಿವರಾಯರ ಸ್ಮರಣಾರ್ಥವಾಗಿ ಅವರ ಮಕ್ಕಳು “ಗರುಡ ನಾಟ್ಯ ಸಂಘ (ರಿ)” ವನ್ನು ಸ್ಥಾಪನೆ ಮಾಡಿ ಅವರ ಹೆಸರನ್ನು ಹಸಿರಾಗಿಸುವ ನಿಟ್ಟಿನಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಸಧ್ಯ ಗರುಡ ನಾಟ್ಯ ಸಂಘ ಬೆಂಗಳೂರಿನಲ್ಲಿ ಸಕ್ರೀಯವಾಗಿದೆ.
ಪುತ್ರರಾದ ಪಂಡಿತ ದತ್ತಾತ್ರೇಯ ಗರುಡ ಅವರು ಪ್ರಸಿದ್ಧ ತಬಲಾ ವಾದಕರು ಹಾಗೂ ಗಾಯಕರು. ಬಾಲ್ಯದಲ್ಲಿಯೇ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಪಂಡಿತ ದತ್ತಾತ್ರೇಯ ಗರುಡ ಅವರು ತಂದೆಯವರ ಹೆಸರನ್ನಾಗಲಿ ಅಥವಾ ಅಂಗವಿಕಲನೆಂಬ ಅನುಕಂಪವನ್ನಾಗಲೀ ತಮ್ಮ ಏಳಿಗೆಗೆ ಬಳಸಿಕೊಳ್ಳಲಿಲ್ಲ ಎನ್ನುವುದೇ ಅವರ ಹಿರಿಮೆ ಮತ್ತು ಗರಿಮೆಗೆ ಸಾಕ್ಷಿ. ಸಂಗೀತವನ್ನು ಕಲಿಸುವುದರಲ್ಲಿ ಸಾರ್ಥಕ್ಯ ಕಂಡುಕೊಂಡ ಪಂಡಿತ ದತ್ತಾತ್ರೇಯ ಗರುಡ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ “ಸಂಗೀತ ಕಲಾಭವನ” ಎನ್ನುವ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಶಾಸ್ತ್ರೀಯ ಸಂಗೀತ ಕಲಿಸುವುದರಲ್ಲಿ ಮಗ್ನರಾಗಿದ್ದರು. ಅವರು ಗಳಿಸಿದ ಕೀರ್ತಿ, ಅಪಾರ ಶಿಷ್ಯವೃಂದ, ಕಟ್ಟಿ ಬೆಳೆಸಿದ ಸಂಗೀತ ಶಾಲೆ ಕಲಾ ಪ್ರಪಂಚದಲ್ಲಿ ಅಪೂರ್ವವಾದದ್ದು.
ದ್ವಿತೀಯ ಪುತ್ರರಾದ ಶ್ರೀಪಾದರಾವ್ ಗರುಡ ಅವರು ರಂಗಭೂಮಿ ಕಲಾವಿದರಾಗಿ ಕಳೆದ ನಾಲ್ಕು ದಶಕಗಳಿಂದ ಕಲಾಸೇವೆಯನ್ನು ಮಾಡಿದವರು. ಗದಗಿನಲ್ಲಿ ಗರುಡ ನಾಟ್ಯಸಂಘ (ರಿ) ವನ್ನು ಸ್ಥಾಪನೆ ಮಾಡಿ ಅದನ್ನು ಬೆಳೆಸುವಲ್ಲಿ ಶ್ರೀಪಾದರಾವ್ ಗರುಡ ಅವರ ಪಾತ್ರ ಅಮೂಲ್ಯವಾದದ್ದು. ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗರುಡ ಸದಾಶಿವರಾಯರ ಹಾಗೆ ರಂಗಭೂಮಿಯ ಶಿಸ್ತನ್ನು ಪಾಲಿಸಿಕೊಂಡು ಬಂದವರು ಶ್ರೀಪಾದರಾಯರು.
ಸಂಗೀತ, ನೃತ್ಯ ಹಾಗೂ ವೃತಿ ರಂಗಭೂಮಿಗೆ ಅಪಾರ ಕೊಡುಗೆಯನ್ನು ನೀಡಿದ ಗರುಡ ಸದಾಶಿವರಾಯರ ಕುಟುಂಬ ಕಲಾ ಇತಿಹಾಸವುಳ್ಳ ಕುಟುಂಬ. ಕುಟುಂಬದ ಮೂರು ತಲೆಮಾರಿನವರೂ ಸಹ ಕಲಾ ಸೇವೆಗೆ ಸಮರ್ಪಿಸಿಕೊಂಡಂಥ ಉದಾಹರಣೆ ಬಹುಶಃ ಕರ್ನಾಟಕದಲ್ಲಿ ಗರುಡ ಸದಾಶಿವರಾಯರ ಕುಟುಂಬ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹದ್ದು ಅಂತ ಅನಿಸುತ್ತೆ.
ಗರುಡ ಸದಾಶಿವರಾಯರು ನಿಧನರಾಗಿ ಒಂದು ವರ್ಷದೊಳಗೆ ಜನಿಸಿದ “ಅಣ್ಣಯ್ಯ” ಎಂದು ಕರೆಯಲ್ಪಡುವ ಶ್ರೀ ಸದಾಶಿವ ಗರುಡ ಅವರು ಶ್ರೀಪಾದರಾವ್ ಗರುಡ ಅವರ ಪುತ್ರರು. ವೃತಿಯಲ್ಲಿ ಬಟ್ಟೆ ವ್ಯಾಪಾರಿಗಳಾದ ಶ್ರೀ ಸದಾಶಿವ ಗರುಡ ಅವರು ತಾವು ಪ್ರಯಾಣಿಸಿದ ರಾಜ್ಯಗಳ ಪ್ರಾದೇಶಿಕ ಕಲೆ, ಸಂಸ್ಕೃತಿಗಳ ಅಧ್ಯಯನದ ಮೂಲಕ ಗರುಡ ಸದಾಶಿವರಾಯರ ಕಲಾ ಪೋಷಣೆಯನ್ನು ಮುಂದುವರೆಸಿದಂಥವರು. ಬಿಡುವಿಲ್ಲದ ವ್ಯಾಪಾರ-ವಹಿವಾಟಿನ ಮಧ್ಯೆಯೂ ಗುಜರಾತಿ, ಮರಾಠಿ ಭಾಷೆಗಳ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಾರೆ. ಹೀಗೆ ಮೂಡಿಬಂದ ನಾಟಕಗಳು ಸಖಾರಾಮ ಬೈಂಡರ, ತೀನ್ ಪೈಜಾಮಾ, ತಮಾಶಾ, ಮಿತ್ರ, ಗಗನ ಭೇದಿ, ಮೀ ಮಾಝಾ ಮುಲಾಂಚಾ, ಆತೀ ಕ್ಯಾ ಮಲೇಶಿಯಾ ಮತ್ತು ಐನಸ್ಟೈನ್ ಪ್ರಮುಖವಾದವು.
ಡಾ. ಪ್ರಕಾಶ ಗರುಡ ಅವರು ಶ್ರೀಪಾದರಾವ್ ಅವರ ಕಿರಿಯ ಪುತ್ರ. ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ನಾಟಕಗಳ ನಿರ್ದೇಶನ, ಕಲಾ ಶಿಕ್ಷಣ, ಗೊಂಬೆಯಾಟ ಮತ್ತು ಸಂಘಟನೆ ಹೀಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಂಗಾಯಣ-ಧಾರವಾಡದ ನಿರ್ದೇಶಕರಾಗಿ ಮತ್ತು ಭಾರತೀಯ ರಂಗ ಶಿಕ್ಷಣ-ಮೈಸೂರಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಧರ್ಮಪತ್ನಿ ಶ್ರೀಮತಿ ರಜನಿ ಗರುಡ ಅವರ ಜೊತೆಗೂಡಿ ಧಾರವಾಡದಲ್ಲಿ “ಗೊಂಬೆಮನೆ” ಸಾಂಸ್ಕೃತಿಕ ಸಂಸ್ಥೆಯ ಮೂಲಕ ಕಲಾ ಪ್ರಪಂಚದಲ್ಲಿ ಸಕ್ರೀಯರಾಗಿದ್ದಾರೆ.
ನವಂಬರ-2019 ರಲ್ಲಿ ನಿಧನರಾದ ಶ್ರೀ ಯೋಗೇಶ ಗರುಡ ಅವರು ಶ್ರೀ ವಲ್ಲಭರಾವ್ ಅವರ ಕಿರಿಯ ಪುತ್ರ. ಅವರು ಭರತನಾಟ್ಯ ಮತ್ತು ರಂಗ ಕಲಾವಿದರಾಗಿ ಸಕ್ರಿಯರಾಗಿದ್ದರು. ಕವಿ, ಕಲಾವಿದ, ನೃತ್ಯಪಟು, ರಂಗ ನಿರ್ದೇಶಕರಾಗಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀ ಯೋಗೇಶ ಗರುಡ ಅವರು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದರು.
ಕಿರುತೆರೆ ಮಾಧ್ಯಮದಲ್ಲಿ ನಟಿಯಾಗಿ ಮತ್ತು ಭರತನಾಟ್ಯ ಕಲಾವಿದರಾಗಿ ಹೆಸರು ಮಾಡಿರುವ ಶೋಭಾ ಲೋಲನಾಥ ಅವರು ಗರುಡ ಕಲಾ ಸಂಘದ ಮೂಲಕ ಗರುಡ ಸದಾಶಿವರಾಯರ ಕಲಾ ಮಾಧ್ಯಮವನ್ನು ಹಸಿರಾಗಿಸುವ ನಿಟ್ಟನಲ್ಲಿ ನಿರತರಾಗಿದ್ದಾರೆ.
ಗರುಡ ಸದಾಶಿವರಾಯರ ಮೊಮ್ಮಕ್ಕಳಾದ ವೇದಾ, ಗೀತಾ, ಲಲಿತಾ, ಅಪರ್ಣಾ, ಗುರುಚರಣ್, ವಸುಧಾ ಮತ್ತು ಮರಿಮಕ್ಕಳಾದ ನಿವೇದಿತಾ, ಉಲೂಪಿ, ಮಿಥಾ, ಪರಿಮಳಾ ಮತ್ತು ದೀಪಾಲಿಯವರು ಕಲಾ ಪ್ರಪಂಚದಲ್ಲಿ ತೊಡಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಗರುಡರ ಮೊಮ್ಮಕ್ಕಳಲ್ಲಿ ಒಬ್ಬರಾದ ಅಪರ್ಣಾ ನಾಗಶಯನ ಅವರು ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ.
ಹೊತ್ತಾರೆ ಎದ್ದು | ಅಗ್ಘವಣೆ ಪತ್ರೆಯ ತಂದು ||
ಹೊತ್ತು ಹೋಗದ ಮುನ್ನ | ಪೂಜಿಸು ಲಿಂಗವ ||
ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು? ||
ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ ||
ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)
“ಜಾತಸ್ಯ ಮರಣಂ ಧೃವಂ” ಎನ್ನುವ ನಾಣ್ಣುಡಿಯಂತೆ ನಾವೆಲ್ಲರೂ ಒಂದು ದಿನ ನಿರ್ಗಮಿಸುವವರೆ. ಆದರೆ ಹೋಗುವ ಮುನ್ನ ಸಮಾಜಕ್ಕೆ ಮತ್ತು ಸಮಷ್ಠಿಯಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕೆ ಏನಾದರೂ ಸಾಧನೆಯನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡಿ ಹೋಗಬೇಕೆಂಬುದು ಈ ವಚನದ ಸದಾಶಯ. ಇದರಂತೆ ಶ್ರೇಷ್ಠ ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ ಕನ್ನಡದ ವೃತಿ ರಂಗಭೂಮಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಗರುಡ ಸದಾಶಿವರಾಯರು ತಮ್ಮ 74 ನೇ ವಯಸ್ಸಿನಲ್ಲಿ 1954 ರಲ್ಲಿ ಕಲಾ ಪ್ರಪಂಚದಿಂದ ದೂರವಾದರು.
ಸರಿ ಸುಮಾರು ಅರ್ಧ ಶತಮಾನ ರಂಗಭೂಮಿಯಲ್ಲಿ ತಮ್ಮ ಉಸಿರಿರುವವರೆಗೂ ದುಡಿದ ಗರುಡ ಸದಾಶಿವರಾಯರ ಜ್ಞಾಪಕಾರ್ಥವಾಗಿ ಸ್ಮಾರಕವನ್ನು ನಿರ್ಮಿಸುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುವಂತಾಗಬೇಕೆಂದು ಮನವಿ ಮಾಡುತ್ತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಲೇಖನ:ವಿಜಯಕುಮಾರ ಕಮ್ಮಾರ
ಮೋಬೈಲ್ ನಂ : 9741 357 132