ನನ್ನ ಅಪ್ಪ
ನನ್ನ ಅಪ್ಪ ಮಹಾದೇವಪ್ಪ. ನಿಜ ಅರ್ಥದಲ್ಲಿ ಮಹಾ ದೇವನೆ ಸರಿ. ಬಾಲ್ಯದಲ್ಲಿ ಜಗಲಿಯ ಮೇಲಿದ್ದ ಮೂರ್ತಿಗಳು, ಪೋಟೋ ಗಳನ್ನೆ ದೇವರೆಂದು ತಿಳಿದಿದ್ದೆ. ನನ್ನವ್ವ ದಿನಾಲು ಸ್ನಾನ ಮಾಡಿಸಿ ಜಗುಲಿಯ ಮೇಲಿರುವ ದೇವರ ಮೂರ್ತಿಗಳಿಗೆ ಪೂಜೆ ಮಾಡಿಸುತ್ತಿದ್ದಳು. ಅದನ್ನೆ ನಿಜವೆಂದು ನಂಬಿ ಅನೇಕ ವರ್ಷಗಳ ವರೆಗೆ ಪೂಜೆಯನ್ನು ವ್ರತ ದಂತೆ ಮಾಡಿಕೊಂಡು ಬಂದೆ. ಆದರೆ ನನ್ನ ತಂದೆ ಪೂಜೆ ಮಾಡಿದ್ದನ್ನು ನೋಡಿದ್ದು ಕಡಿಮೆ. ನನ್ನ ತಾಯಿ ಮತ್ತು ನಾನು ಇಬ್ಬರಲ್ಲಿ ಒಬ್ಬರು ಪೂಜೆ ಮಾಡುತ್ತಿದ್ದೆವು.
ಆದರೆ ನನ್ನ ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಕೈಂಕರ್ಯವೇ ಪೂಜೆಯಂತೆ ಮಾಡಿಕೊಂಡ ಬಂದಂತ ಪರಿಪೂರ್ಣ ಕಾಯಕ ನಿಷ್ಠ. ನನ್ನ ತಾಯಿ ಸಂಪ್ರದಾಯ ನಿಷ್ಟೆ ಮನೆತನದಿಂದ ಬಂದವಳು. ಹೆಚ್ಚು ಹೆಚ್ಚು ಪೂಜೆ ಜಪ ತಪ, ದೇವರು ದಿಂಡಿರು ಅಂದರೆ ಅವ್ವನಿಗೆ ಅಧಮ್ಯ ಪ್ರೀತಿ. ಅಪ್ಪ ಇದರಿಂದ ದೂರ. ಅಪ್ಪ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನದ ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಮೆಚ್ಚಿನ ಶಿಕ್ಷಕನಾಗಿದ್ದ. ಶಾಲೆಯಲ್ಲಿ ಕಲಿಸುವಾಗ ವಿದ್ಯಾರ್ಥಿಗಳು ಸರಿಯಾಗಿ ಕಲಿಯದಿದ್ದರೆ ನರಸಿಂಹನ ಅವತಾರ ಎತ್ತುತ್ತಿದ್ದರು. ಛಡಿ ಚಮ್ ಚಮ್.ವಿದ್ಯೆ ಘಮ್ಮ ಘಮ್ಮ ಎನ್ನುವುದು ಅವರ ತತ್ವವಾಗಿತ್ತು.
ನನ್ನ ತಂದೆ ಕೂಡ ಮಸ್ಕಿಯ ಅಮರಯ್ಯ ಸಾಲಿಮಠ ಮಾಸ್ತಾರ ಅವರಿಂದ ಬಡಿಸಿಕೊಂಡೆ ವಿದ್ಯೆ ಕಲಿತವರು. ತಮ್ಮ ಶಿಷ್ಯರು ಸರಿಯಾಗಿ ಕಲಿಯದಿದ್ದಾಗ ಚಡಿ ಬೀಸುತ್ತಿದ್ದರು. ಅಪ್ಪನ ಕೈಯಲ್ಲಿ ಕಲಿತ ಅನೇಕರು ಇಂದಿಗೂ ಅಪ್ಪನನ್ನು ನೆನೆಪಿಸಿಕೊಳ್ಳುವದನ್ನು ನೋಡಿದ್ದೇನೆ. ಕೇಳಿದ್ದೇನೆ. ಅಪ್ಪನನ್ನು ಅವರ ಶಿಷ್ಯರು ನೆನಪಿಸಿಕೊಳ್ಳುವಾಗಲೆಲ್ಲ ನನ್ನ ಕಣ್ಣಂಚಿನಲ್ಲಿ ಆನಂದ ಭಾಷ್ಪ ನನಗರಿವಿಲ್ಲದೆ ಇಳಿದು ಬರುತ್ತವೆ.
ಅಪ್ಪ ಒಂದು ರೀತಿಯಲ್ಲಿ ಮುಗ್ದ. ಕಪಟತನ ಇರಲಿಲ್ಲ. ಮನೆಯಲ್ಲಿ ಮಹಾ ಮೌನಿ. ದಿನ ಪತ್ರಿಕೆಯ ಸುದ್ದಿ, ಲೇಖನ, ಪುಸ್ತಕ, ಕಥೆ ಓದುವಾಗ ತುಂಬಾ ಸ್ವಾರಸ್ಯ. ಅಪ್ಪನ ಧ್ವನಿ ಕಂಚಿನ ಕಂಠ. ಸುಶ್ರಾವ್ಯ ವಾಗಿ ಓದುವ ಕಲೆ ಅಪ್ಪನಿಗೆ ಕರಗತವಾಗಿತ್ತು. ಅಪ್ಪ ಓದುತ್ತಿದ್ದನ್ನು ಕೇಳುವದೆ ನನಗೆ ಮಹಾದಾನಂದ.
ಪ್ರಾಮಾಣಿಕತೆ ಕಲಿಸಿದ
೫ ನೇ ತರಗತಿಯಲ್ಲಿದ್ದೆ ಅಪ್ಪನ ಜೇಬಿನಿಂದ ೫ ರೂ ಕದ್ದು ಅಂಗಡಿಗೆ ಹೋಗಿ ೫ ರೂ. ಮಿಠಾಯಿ ಖರಿದೀಸಲು ಮುಂದಾಗಿದ್ದೆ. ಅಂಗಡಿಯ ಮಾಲಿಕ ನನ್ನಪ್ಪನಿಗೆ ಬೇಕಾಗಿದ್ದವರು. ನನ್ನನ್ನು ಬೈಯ್ದು ಒಂದು ರೂ. ಮಿಠಾಯಿ ಕೊಟ್ಟು ನಾಲ್ಕು ರೂಪಾಯಿ ಮರಳಿ ಕೊಟ್ಟು ಕಳಿಸಿದ್ದರು. ಇಷ್ಟೆ ಆಗಿದ್ದರೇ ಏನಾಗುತ್ತಿತ್ತೋ. ನನ್ನಪ್ಪನಿಗೆ ಅಂಗಡಿ ಮಾಲಿಕರು ನಾನು ಮಿಠಾಯಿ ಖರೀದಿಸಿದ್ದು ತಿಳಿಸಿದ್ದರು.
ಅಪ್ಪ ಅವ್ವನ ಸಮ್ಮುಖದಲ್ಲಿ ನನ್ನ ವಿಚಾರಣೆ ನಡೆಸಿದರು. ಮೊದಲಿಗೆ ನಾನು ತಪ್ಪು ಒಪ್ಪಿಕೊಳ್ಳಲಿಲ್ಲ. ಅಪ್ಪನಿಗೆ ಸಿಟ್ಟು ಬಂದಿದ್ದೆ ತಡ ಕೈಗೆ ಸಿಕ್ಕ ಬಾವಿಯೊಳಗೆ ನೀರು ಸೇದುವ ಹಗ್ಗದಿಂದ ಕೈ ಕಾಲು ಕಟ್ಟಿದರು. ದರದರನೆ ಎಳೆದು ಕಪಾಳಕ್ಕೆ ಬಾರಿಸಿದರು. ನನ್ನ ಕಪಾಳದ ಮೇಲೆ ಅಪ್ಪನ ಕೈ ಚಿತ್ರ ಯಥವತ್ತಾಗಿ ರಕ್ತ ಕಾಣುವಂತೆ ಮೂಡಿತ್ತು. ಕಣ್ಣಿನಲ್ಲಿ ಮಿಂಚೊಂದು ಹೊಳೆದು ಚಕ್ರಬಂದಂತಾಗಿ ನೆಲೆಕ್ಕೆ ಉರುಳಿದೆ. ಅವ್ವನ ಹೆತ್ತ ಕರಳು ಕಸಿವಿಸಿಗೊಂಡು ನನ್ನನ್ನು ಬಿಡಿಸಿಕೊಂಡಳು. ಎಲ್ಲಿಯಾದರು ಈ ರೀತಿ ಬಡಿದು ಮಗನನ್ನು ಸಾಯಿಸಿರಿ ಎಂದು ಅಪ್ಪನಿಗೆ ಸಣ್ಣಗೆ ಗದರಿದಳು.
ಅಪ್ಪನ ಹೊಡೆತಕ್ಕೆ ತತ್ತರಿಸಿ ಹೋಗಿದ್ದೆ. ಒಂದು ತಾಸಿನ ವರೆಗೆ ಬಿಕ್ಕುತ್ತಲೇ ಇದ್ದೆ. ಬಿಕ್ಕುವದರಿಂದ ಎದೆ ನೋವು ಬಂದಿತ್ತು. ಪಕ್ಕೆ ಎಲುಬುಗಳು ಡೊಳ್ಳು ಬಾರಿಸಿದಂತೆ ಬಡಿದುಕೊಳ್ಳುತ್ತಿದ್ದವು. ಸಂಜೆ ಅಪ್ಪ ನನ್ನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಕೆಂಪಾದ ಕಪಾಳಕ್ಕೆ ತುಪ್ಪ ಸವರಿ ಕಳುವು ಮಾಡಬಾರದು. ಬೇಕಿದ್ದರೆ ಕೇಳಿ ತೆಗೆದುಕೊ ಎಂದು ಪ್ರಾಮಾಣಿಕತೆಯ ಪಾಠ ಮಾಡಿದ್ದರು.
ಮೊದಲ ನನ್ನ ಸಂಪಾದನೆ
೧೯೮೩ ರಲ್ಲಿ ಹತ್ತನೇ ತರಗತಿಯಲ್ಲಿದ್ದೆ. ನನ್ನ ವಾರಿಗೆಯವರೆಲ್ಲ ಆಗ ಬಂಧು ಎಂಬ ಮಾಸಿಕ ಪತ್ರಿಕೆ ಪರೀಕ್ಷೆಗಾಗಿ ತರಿಸುತ್ತಿದ್ದರು. ಅದರಲ್ಲಿ ಎಲ್ಲಾ ವಿಷಯಗಳ ಪ್ರಶ್ನೋತ್ತರ ಇರುತ್ತಿದ್ದವು. ವಾರ್ಷಿಕ ಚಂದಾ ೩೦ ರೂ. ನಾನು ತರಿಸುವ ಆಸೆಯಿಂದ ಅಪ್ಪನನ್ನು ಹಣ ಕೇಳಿದೆ. ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದರು. ನನ್ನ ಆಸೆಗೆ ತಣ್ಣೀರು ಎರಚಿದಂತಾಯಿತು. ಗೈಡ್ ಓದಬೇಡ. ಪುಸ್ತಕ ಓದು ಎಂಬುದು ಅವರ ನಿಲುವಾಗಿತ್ತು. ಹಣ ಕೊಡದಿದ್ದಕ್ಕೆ ಅಪ್ಪನ ಮೇಲೆ ಸಿಟ್ಟು ಬಂದಿತ್ತು.
ಬಂಧು ಪುಸ್ತಕ ಪಡೆಯುವದಕ್ಕಾಗಿ ಹಣ ಹೊಂದಿಸಿಕೊಳ್ಳುವದು ನನಗೆ ಅನಿವಾರ್ಯ ಆಗಿತ್ತು. ಅಪ್ಪನಿಗೆ ಹೇಳದೆ ಸಂಜೆ ಹೊತ್ತಿನಲ್ಲಿ ಕೆಲಸ ಮಾಡಿ ೧೦೦ ರೂ ಸಂಪಾದಿಸಿ ಬಂಧು ತರಿಸಿ ಕೊಂಡಿದ್ದೆ
ಅಪ್ಪ ೧೯೬೪ ರಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡಾಗ ೯೦ ರೂಪಾಯಿ ಸಂಬಳ. ಅಷ್ಟರಲ್ಲಿ ಮನೆ ನಡೆಸುವ ಜವಬ್ದಾರಿ. ಅವರು ನಿವೃತ್ತಿಯ ಅಂಚಿನಲ್ಲಿದ್ದಾಗ ಅಂದಾಜು ೨೦ ಸಾವಿರದಷ್ಟು ಆಗಿತ್ತು. ದೊಡ್ಡ ಕುಟುಂಬ ೬ ಜನ ಮಕ್ಕಳು ಅವರೆಲ್ಲರನ್ನು ಸಾಕಿ ಶಿಕ್ಷಣ ಕೊಡಿಸುವದಕ್ಕಾಗಿ ಅಪ್ಪ ಹೈರಾಣುಗುತ್ತಿದ್ದರು. ಪ್ರಾಪಂಚಿಕ ಜೀವನದ ಮಜುಲುಗಳಲ್ಲಿ ಅಕ್ರಮ ಸಂಪಾದನೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಮನೆ ಪಾಠ ಮಾಡುತ್ತಿದ್ದರೂ ಹಣ ಕೇಳುತ್ತಿರಲಿಲ್ಲ. ಕೆಲವು ಪಾಲಕರು ತಾವು ಬೆಳೆದ ಧವಸ ಧಾನ್ಯ, ಹಾಲು ಮೊಸರು, ತರಕಾರಿ ಕೊಡುತ್ತಿದ್ದರು.
ಅಪ್ಪನ ಬಗ್ಗೆ ನನಗೆ ಒಮ್ಮೊಮ್ಮೆ ಸಿಟ್ಟು ಸೆಡುವು ಇದ್ದರೂ. ಅಪ್ಪ ಅಪ್ಪನೇ. ಆತ ನನ್ನ ಪಾಲಿನ ದೇವರು ಅಷ್ಟೆ. ಆತನು ಮನುಷ್ಯನಾಗಿದ್ದ ಆಗಾಗ ತಪ್ಪು ಮಾಡುತ್ತಿದ್ದ. ಆತನಿಗೂ ಕೆಲವು ದೌರ್ಬಲ್ಯ ಗಳಿದ್ದವು. ಅದು ಆತನಿಗೆ ಬಿಟ್ಟಿದ್ದವು. ನನಗೆ ತಿದ್ದುವ ಶಕ್ತಿ ಇರಲಿಲ್ಲ. ಆದರೆ ನನ್ನನ್ನು ತಿದ್ದೀ ತೀಡಿದ. ಪ್ರಾಮಾಣಿಕವಾಗಿ ಇರುವದು. ಒಳ್ಳೆಯದನ್ನೆ ಮಾಡುವದು. ಎಲ್ಲರನ್ನು ಪ್ರೀತಿಸುವದು. ಬಂಧು ಬಾಂಧವರೊಂದಿಗೆ ಬದಕುವದನ್ನು ಅಪ್ಪನಿಂದ ಕಲಿತಿದ್ದೇನೆ.
ಅಪ್ಪ ಇದ್ದಾಗ ಆತ ನನಗೆ ಕಾಡಲಿಲ್ಲ. ಅಪ್ಪ ನಿಲ್ಲದ ಈ ಇಪ್ಪತ್ತು ವರ್ಷ ಕಳೆದರು ದಿನಾಲು ನೆನಪಾಗುತ್ತಾನೆ. ಅಪ್ಪನ ನೆನೆಹುವಿನಲ್ಲಿ ಬದುಕುತ್ತಿದ್ದೇನೆ.
ಅಪ್ಪ ಎಂದರೆ ಅಪ್ಪ ಮಹಾದೇವಪ್ಪ.ನನ್ನಪ್ಪ.
–ವೀರೇಶ ಸೌದ್ರಿ ಮಸ್ಕಿ