ಸಿಸ್ತಿನ ಸಿಪಾಯಿ ನನ್ನಪ್ಪ
ನಮ್ಮ ತಂದೆ ಹುಟ್ಟಿದ್ದು 24.2. 1941 ಹರಮಘಟ್ಟ.ಶಿವಮೊಗ್ಗ ತಾಲ್ಲೂಕು.ತುಂಬು ಕುಟುಂಬದ 7 ಮಕ್ಕಳಲ್ಲಿ ಎರಡನೆಯವರು.
7 ನೆಯವರೆ ನಮ್ಮ ಅತ್ತೆ.ಒಬ್ಬಳೇ ಹೆಣ್ಣು ಮಗಳು..
ಎಲ್ಲಾ ಹೆಣ್ಣು ಮಕ್ಕಳು ಕೂಡ ತನ್ನ ತಂದೆಯನ್ನು ಇಷ್ಟ ಪಡುವಂತೆ ನಾನು ಕೂಡಾ ಇಷ್ಟ ಪಡುತ್ತಿದ್ದೆ.ನನ್ನಪ್ಪನೇ ನನಗೆ ಹೀರೋ…
ದೊಡ್ಡಪ್ಪ ಇದ್ದರೂ ಕೂಡಾ ಅಪ್ಪನಿಗೆ ಇಡೀ ಮನೆತನದ ಜವಾಬ್ದಾರಿ ಹೆಗಲೇರಿತ್ತು.ನಮ್ಮ ತಾತನೂ ಶಿಕ್ಷಕರಾಗಿ ಸೇವೆ ಸಲ್ಲಿಸಿ 1973 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರಿಂದ ಅಪ್ಪನಿಗೆ ತಮ್ಮಂದಿರ ಹಾಗೂ ಒಬ್ಬಳೇ ತಂಗಿಯ ಜವಾಬ್ದಾರಿ ಇತ್ತು…
ಅಪ್ಪ ದೊಡ್ಡಪ್ಪ ಒಂದೇ ಮನೆಯಲ್ಲೇ, ಇದ್ದೂರಿನಲ್ಲೇ ಅಕ್ಕ ತಂಗಿಯರನ್ನು 1965ರಲ್ಲಿ ಮದುವೆಯಾಗಿದ್ದರು.
ನಮ್ಮ ತಾಯಿ ಇನ್ನೂ ಮೈನೆರೆಯದ ಹುಡುಗಿ.ಮದುವೆಯ ನಂತರ ಅಪ್ಪ ಹೊಸನಗರಕ್ಕೆ ಮೊದಲ ಸಲ ಶಿಕ್ಷಕರಾಗಿ ಹೋದರು.ಅಮ್ಮ 8 ನೇ ತರಗತಿಗೆ ತಾಳಿಯನ್ನು ಹಾಕಿಕೊಂಡೇ ಶಾಲೆಗೆ ಹೋದರು. 9 ನೇ ತರಗತಿಯ ಪರೀಕ್ಷೆ ಬರೆದ ನಂತರ ಅಮ್ಮ ಋತುಮತಿ ಆಗಿದ್ದರಿಂದ ಮುಂದೆ ಶಾಲೆಗೆ ಕಳುಹಿಸಲಿಲ್ಲ.
ವಾರಕ್ಕೊಮ್ಮೆ ಅಪ್ಪ ಬಂದು ಹೋಗುತ್ತಿದ್ದರು.ಅಮ್ಮ ಇನ್ನೂ ಆಡಿ ಕುಣಿಯುವ ವಯಸ್ಸಿನಲ್ಲೇ ನಾನು ಹುಟ್ಟಿದ್ದೆ. ಒಟ್ಟು ಕುಟುಂಬವಾದ್ದರಿಂದ ನಾನು ಎಲ್ಲರ ಕೈಯಲ್ಲೂ ಬೆಳೆದೆ.ತಂದೆಯ ಪ್ರೀತಿ ಎಷ್ಟೂ ಸಿಗದೆ ನಿರಾಸೆಯಾಗುತ್ತಿತ್ತು.ಅವರು ಹೋದಕಡೆ ನಮ್ಮನ್ನು ಎಂದೂ ಕರೆದುಕೊಂಡು ಹೋಗಲಿಲ್ಲ.ಒಂದಷ್ಟು ಪುಸ್ತಕಗಳು,ನೋಟ್ ಬುಕ್, ಪೆನ್ನು ಪೆನ್ಸಿಲ್ ಹಾಗೂ ವರ್ಷಕ್ಕೊಂದು ಜೊತೆ ಬಟ್ಟೆ ಹೊಲೆಸಿದರೆ ಮುಗಿಯತು ಅವರ ಕೆಲಸ..
ಚಿಕ್ಕವಳಿದ್ದಾಗ ಅವರ ಜೊತೆ ಎಂದೂ ಮಾತನಾಡಿದ ನೆನಪಿಲ್ಲ.ತಮ್ಮಂದಿರನ್ನು ಓದಿಸುವ ಜವಾಬ್ದಾರಿ ಅವರಿಗಿತ್ತು. ನನ್ನನ್ನು ಅದೇ ಊರ ಶಾಲೆಗೆ ಅಪ್ಪ ಸೇರಿಸಿದರು.ಅವರ ಎರಡು ಗಂಡು ಮಕ್ಕಳೂ ಕೂಡ ಇಲ್ಲೇ ಸೇರೀದರು…ಪುಟ್ಟ ಮನೆಯಾದ್ದರಿಂದ 1972 ರಲ್ಲಿ 5 ಅಂಕಣದ ಮನೆ ಕಟ್ಟಿಸಿದರು.. ನಮ್ಮ ತಂದೆ ಶೀಘ್ರ ಕೋಪಿ, ಸ್ವಲ್ಪವೂ ವ್ಯತ್ಯಾಸವಾಗುವಂತಿರಲಿಲ್ಲ.
ಮನೆ ತುಂಬಾ ಆಳುಕಾಳುಗಳಿದ್ದರು.ಅವರಿಗೆ ಕೆಲಸವನ್ನು ಹೇಳಿ ಕೊಡುತ್ತಿದ್ದರು.ತಮ್ಮಂದಿಗರಿಗೆ ನೌಕರಿ ಕೊಡಿಸಿ,ತಂಗಿಯನ್ನೂ ಕೂಡಾ ಹೈಸ್ಕೂಲ್ ಶಿಕ್ಷಕರಿಗೆ ಕೊಟ್ಟಿದ್ಜರು.. ನಾನು 5 ತರಗತಿಯಲ್ಲಿದ್ದಾಗ ಅಪ್ಪ ನಮ್ಮೂರಿಗೆ ಟ್ರಾನ್ಸ್ ಫಾರ್ಮ್ ಮಾಡಿಸಿಕೊಂಡಿದ್ದರು.. 1979 ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನು ಶಾಲೆಯ ಆವರಣದಲ್ಲಿ ತುಂಬಾ ಚೆನ್ನಾಗಿ ನಡೆಸಿಕೊಟ್ಟರು…
ದಸರಾ ರಜಾ ಬಂದರೆ ನಮ್ಮನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು.ದಿನವಿಡೀ ಮೆಣಸಿನ ಹಣ್ಣು ಬಿಡಿಸಬೇಕಿತ್ತು….
1981 ರಲ್ಲಿ ನಾನು 8ನೇ ತರಗತಿ ವಿದ್ಯಾರ್ಥಿನಿ.9 ನೇ ತರಗತಿಯಲ್ಲಿದ್ದಾಗ ನಾನು ನಮ್ಮತ್ತೆಯ ಜೊತೆಗೆ ಬೇರೆ ಊರಿಗೆ ಹೋಗಿ ಸೇರಿದೆ.ಅಲ್ಲಿಗೆ ಅಪ್ಪನ ಪ್ರೀತಿ ಮುಗಿಯಿತು.
ನಂತರದ ದಿನಗಳಲ್ಲಿ ಹೈಸ್ಕೂಲ್ ಕಾಲೇಜು ಶಿಕ್ಷಣ ಮುಗಿಸಿ ನಾನು ಊರಿಗೆ ಮರಳಿದೆ.ನೋಡಲು ಮುಂಗೋಪಿಯಾದರೂ ಕೂಡ ಒಳಗಡೆ ತಾಯಿಯಂತಹ ಮನಸ್ಸಿತ್ತು, ಆದರೆ ತೋರಿಸಿಕೊಡುತ್ತಿರಲ್ಲ..
ಒಲ್ಲದ ಮನಸ್ಸಿನಿಂದ ಅಪ್ಪನ ಹೆದರಿಕಿಗೆ ಮದುವೆಯನ್ನು ಮಾಡಿಕೊಂಡೆ,ಎಲ್ಲವೂ ಅವರು ಹೇಳಿದಂತೆಯೇ ನಡೆಯಬೇಕು
ಮದುವೆಯಾದ ನಂತರ ನನ್ನ ಪರಿಸ್ಥಿತಿ ಅಪ್ಪನಿಗೆ ಗೊತ್ತಾಯಿತು.. ನಾನು ಸೋದರ ಮಾವನಿಗೆ ಕೊಡುವುದು ಬೇಡವೆಂದರೂ ಹಠ ಮಾಡಿ ಮದುವೆ ಮಾಡಿದ್ದರು.ನಾನು ತುಂಬಾ ಅಳುತ್ತಿದ್ದೆ.ನಮ್ಮ ತಂದೆಗೆ ತನ್ನ ತಪ್ಪಿನ ಅರಿವಾಗಿತ್ತು.ನಮ್ಮ ತಂದೆ ತುಂಬಾ ಒಳ್ಳೆಯವರು ಸಮಾಜ, ಊರು, ಮನೆತನ, ಜಮೀನು ಖರೀದಿ ಮಾಡುವುದು ತಮ್ಮಂದಿರ ಮಕ್ಕಳ ಮದುವೆಗೆ ಹೆಚ್ಚು ಸಮಯ ಕೊಡುತ್ತಿದ್ದರು. ತನ್ನ ಕುಟುಂಬನ್ನು ಕಡೆಗಾಣಿಸಿದರು.ಅವರೆಷ್ಟೇ ಬೈದರೂ ಕೂಡ ಅಪ್ಪನ ವ್ಯಕ್ತಿತ್ವ ನನಗೆ ತುಂಬಾ ಇಷ್ಟ.ಅವರ ಪ್ರಾಮಾಣಿಕತೆಯೇ ಇಂದು ನಮ್ಮನ್ನು ಕಾಪಾಡಿದೆ.2010 ಆಗಷ್ಟ 17 ಅಪ್ಪ ಲೋ,ಬಿಪಿಯಾಗಿ ನಮ್ಮನ್ನಗಲಿದರು.ಬೇರೆಯವರಿಗಾಗಿ ಜೀವ ಸವೆಸಿದ ನನ್ನಪ್ಪ ತನ್ನ ಹೆಂಡತಿ ಮಕ್ಕಳಿಗೆ ಏನೂ ಪ್ರೀತಿ ಕೊಡದೆ ಹೋದರು. ಆದರೂ ನನ್ನಪ್ಪ ನನಗೆ ಇಷ್ಟ. ಉಸಿರಿರುವ ತನಕ ತುಂಬಾ ಹೆಸರು ಮಾಡಿದರು…
ಅಪ್ಪಾ .. ಮುಂದಿನ ಜನ್ಮದಲ್ಲಿ ಮತ್ತೆ ನಿನ್ನ ಮಗಳಾಗಿ ಹುಟ್ಟುತ್ತೇನೆ, ಆಗಲಾದರೂ ನನ್ನನ್ನು ಮಮತೆಯಿಂದ ನೋಡಿಕೋ..
–ಗೀತಾ. ಜಿ .ಎಸ್
ಹರಮಘಟ್ಟ ಶಿವಮೊಗ್ಗ