ಅಪ್ಪ ಮುತ್ತಿನ ಚಿಪ್ಪ
ಅಪ್ಪನಿಲ್ಲದ ಬಾಳು
ಒಲುಮೆ ಇರದ ಹೋಳು
ಏನಿದ್ದರೇನು ?
ಶಬ್ದದ ಓಳು .
ಅವನಿರದ ಪ್ರತಿಕ್ಷಣವೂ
ತೊಳಲಾಟ ಗೋಳು
ಅಪ್ಪನಿಲ್ಲದ ಆಟ
ಉಪ್ಪಿಲ್ಲದ ಊಟ
ಸಪ್ಪೆ ಎನಿಸಿದೆ
ಎನಗೆ ನನ್ನ ಬಾಳು
ಅವನಿಲ್ಲದ ನಾಡು
ಅರ್ಥವಿರದ ಹಾಡು
ಬಾಳ ನೂಕುವ ಜಾಡು
ಮೌನ ಕೂಡಿದ ಗೂಡು
ಬಣ್ಣ ಬಣ್ಣದ ಬಟ್ಟೆ
ಊರ ಕೇರಿಯ ಜಾತ್ರೆ
ಏರಿದೆ ನಾನು
ಅಪ್ಪನ ಹೆಗಲ ಯಾತ್ರೆ.
ಅಮ್ಮನ ಕರುಣೆ
ಅಪ್ಪನ ಪ್ರೀತಿ
ಇಲ್ಲಿಲ್ಲ ಅದಕೆ
ಯಾವ ಸಾಟಿ
ಅವನ ನೆನಹುವಿನಲಿ
ಆಗುತಿರುವೆ ಗಟ್ಟಿ
ನಾನು ಈಗ ಒಂಟಿ
ಒಮ್ಮೊಮ್ಮೆ ಒಬ್ಬಳೆ
ಅಳಬೇಕೆಂದಿರುವೆ .
ಅತ್ತ ಇತ್ತ ಅಣ್ಣ
ಅತ್ತಿಗೆ ಬಂಧು ಬಳಗ
ಆದರೆ ಇಲ್ಲ ನನ್ನ ಅಪ್ಪ .
ಅಲ್ಲ ಆವ ಬರಿ ಅಪ್ಪ
ಎನಗೆ ಮುತ್ತಿನ ಚಿಪ್ಪ
—ಪ್ರೊ ವಿಜಯಲಕ್ಷ್ಮಿಪುಟ್ಟಿ ಬೆಳಗಾವಿ