ಅಪ್ಪನದು ಕೊಡುವ ಕೈ
ಅಪ್ಪ ಅಂದರೆ ಆಲದ ಮರ, ಅಪ್ಪ ಅಂದರೆ ನೆರಳು, ಅಪ್ಪ ಅಂದರೆ ಶಿಖರ,ರಕ್ಷಕ. ಅಪ್ಪನೇ ಹೀರೋ, ಅಪ್ಪನೇ ಆದರ್ಶ, ಅಪ್ಪನೇ ಗಾಡ್ ಫಾದರ್. ಹೀಗೆ ಅಪ್ಪ ಅಂದ ಕೂಡಲೆ ಇವೆಲ್ಲ ಸರಣಿಯಂತೆ ಬರುವ ಆಲೋಚನೆಗಳು. ಅಪ್ಪನ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೆ. ಅಪ್ಪನನ್ನು ಬಹುಬೇಗ ಕಳೆದುಕೊಳ್ಳುವವರು ನತದೃಷ್ಟರು. ಅಂಥವರಲ್ಲಿ ನಾನೂ ಒಬ್ಬಳು. ಅತ್ಯಂತ ಶ್ರೀಮಂತ ಕುಟುಂಬ ದಲ್ಲಿ 9 ಜನ ಮಕ್ಕಳಲ್ಲಿ ಕೊನೆಯವರು ನನ್ನ ಅಪ್ಪ ಹೀಗಾಗಿ ಎನೂ ಅರಿಯದ ಮುಗ್ಧ ತೆಯಲ್ಲೇ ಬೆಳೆದವರು. ಅಪ್ಪ ನನ್ನ ನೆನಪಿನಕೋಶಗಳಲ್ಲಿ ಭದ್ರವಾಗಿರುವರು ಒಬ್ಬ ಆದರ್ಶ ಮಯ ವ್ಯಕ್ತಿಯಾಗಿ.
ಎಷ್ಟೋ ಬಾರಿ ಅವರು ಮನೆಯಿಂದ ಹೊರಡುವಾಗ ಇದ್ದ ಶರ್ಟು ಮರಳಿ ಮನೆ ಸೇರಿದಾಗ ಇರತಿರಲಿಲ್ಲ. ಕಾರಣ ಅರ್ಥವಾಗತಿತ್ತು ಯಾರೊ ಅವಶ್ಯವಿದ್ದವರು ಬೇಡಿರತಾರೆ ಅವರ ನೋವು ನೋಡಲಾಗದೆ ಮೈಮೇಲಿನ ಶರ್ಟು ಬಿಚ್ಚಿಕೊಟ್ಟಿರತಾರೆ. ನಂತರ ಬೇರೆಯದನ್ನು ಹೊಲೆಸಿ ಹಾಕಿಕೊಂಡು ಬಂದಿರತಾರೆ ಅಂತ. ಆಗ ನಮ್ದು ಬಟ್ಟೆ ಅಂಗಡಿ ಇತ್ತು. ಆ ಅಂಗಡಿ ಮುಂದೆ ಇಬ್ಬರು ದರ್ಜಿಗಳು ದ್ವಾರಪಾಲಕರಂತೆ ಯಾವತ್ತೂ ಕುಳಿತುಕೊಳ್ಳುತ್ತಿದ್ದರು. ಬಟ್ಟೆ ತೆಗೆದೂಕೊಂಡವರೆಲ್ಲ ಅಲ್ಲೇ ಹೊಲಿಸಿಕೊಂಡು ಹೋಗೋರು. ಹೀಗೆ ನನ್ನ ತಂದೆಯವರೂ ಒಂದು ಗಂಟೇಲಿ ಹೊಲಿಸಿ ಮತ್ತೆ ಹಾಕೊಂಡು ಮನೆಗೆ ಬರೋರು. ಆದರೆ ಮನೆಗೆ ಬಂದ ಮೇಲೆ ಆ ವಿಷಯ ತುಟಿ ಪಿಟಕ್ ಅಂತಿದ್ದಿಲ್ಲ. ಯಾರ್ಯಾರೋ ನೋಡಿದವರು ಬಂದು ಹೇಳತಿದ್ರು. ಒಂದೊಂದ ಸಾರಿ ಹೋಗೋವಾಗ ಹಾಕೊಂಡ ಹೋಗಿದ್ದ ಚಪ್ಪಲ್ ಬರುವಾಗ ಬದಲಾಗಿರತಿದ್ದುವು. ಅಲ್ಲೂ ಇದೇ ಕಥೆ. ಅವರ ಹೆಸರು ವೀರಣ್ಣ ಇದ್ರೂ ಅವರಿಗೆ ಎಲ್ಲರೂ ಸಿದ್ಧಾರೂಢ ಅನ್ನೋರು. ಮನೆಗೆ ಅತಿಥಿಗಳು ಬಂದರೆ ಎಲ್ಲಿಲ್ಲದ ಆನಂದ ಅವರಿಗೆ. ಒಳಹೊರಗೆ ಶುದ್ಧವಾದ ನಿರ್ಮಲವಾದ ಬದುಕು ಅವರದು. ತಾವಿರುವವರೆಗು ಎಲ್ಲರಿಗೂ ಕೈಯೆತ್ತಿ ಕೊಟ್ಟರು. ಒಂದು ದಿನವೂ ಕೈಯೊಡ್ಡಿ ಯಾರಿಗೂ ಬೇಡಿದವರಲ್ಲ. ಯಾರಾದರೂ ಅಂಕು,ಡೊಂಕು, ವ್ಯಂಗ್ಯ ಮಾತುಗಳನ್ನು ಆಡಿದರೆ ಅವರಿಗೆ ಅರ್ಥ ಆಗುತ್ತಿರಲಿಲ್ಲ, ಸುಮ್ಮನೆ ನಕ್ಕುಬಿಡೋರು. ಅಕ್ಕನ ವಚನದಲ್ಲಿ ಅಕ್ಕ ಹೇಳುವಂತೇ ಲೋಕವೆಂಬ ಮಾಯೆಗೆ ಶರಣ ಚಾರಿತ್ರ್ಯ ಮರುಳಾಗಿ ತೋರಿತ್ತು ನೋಡಾ ಎಂಬಂತೆ ಜಗತ್ತಿಗೆ ಅವರು ಮರುಳಾಗೇ ಇದ್ದರು.
ನಾವು ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಎಲ್ಲರ ಮೇಲೂ ಅತಿಯಾದ ಪ್ರೀತಿ. ಅದೆಷ್ಟರ ಮಟ್ಟಿಗೆ ಇದ್ದರು ಅಂದರೆ ಎಲ್ಲೂ ಕಳಿಸತಿರಲಿಲ್ಲ. ಒಂದು ಬಾರಿ ಸೋದರಮಾವ ನನಗೆ ನಾಲ್ಕು ದಿವಸ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆತ ಬಂದ ಮೇಲೆ ಅವನೊಂದಿಗೆ ಜಗಳವಾಡಿ ಇನ್ನೊಮ್ಮೆ ಕರೆದುಕೊಂಡು ಹೋಗಬೇಡ ಎಂದು ತಾಕೀತು ಮಾಡಿದರು.
ಇಷ್ಟೆಲ್ಲ ಒಳ್ಳೆಯತನ ಹೊಂದಿದ್ದರೂ ಯಾರೂ ಅನುಭವಿಸಬಾರದ ನೋವನ್ನು ಅನುಭವಿಸಿದರು. ಅವರಿದ್ದಾಗಲೆ ಅಂಗಡಿ ನೋಡುವವರಿಲ್ಲದೆ ನಷ್ಟ ಅನುಭವಿಸಿ ಒಮ್ಮೆಲೆ ಮುಚ್ಚಬೇಕಾಯಿತು. ಆಗ ಜವಳಿ ಸಾಲಿನ ಹಿರಿಯರೆಲ್ಲ ಮನೆಗೆ ಬಂದರು. ಅವ್ವ ಗಾಭರಿಯಾದಳು. ಉದ್ರಿ ನೀಡಿದವರೆಲ್ಲ ವಸೂಲಿಗೆ ಬಂದಿರಬೇಕೆಂದುಕೊಂಡಳು. ಆದರೆ ಅವರೆಲ್ಲ ಬಂದು ಆರಾಮಾಗಿ ಕುಳಿತು ಅಪ್ಪನ ಯೋಗಕ್ಷೇಮ ವಿಚಾರಿಸಿ, ತಾಯಿಗೆ ಗಾಭರಿಯಾಗಬೇಡಿ ನಾವು ಹಣ ಕೇಳಲು ಬಂದಿಲ್ಲ, ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನಿಸ್ಸಂಕೋಚವಾಗಿ ಕೇಳಿ ಎಂದು ಧೈರ್ಯ ತುಂಬಿ ಹೋದದ್ದು, ಅವ್ವಳ ತುಂಬಿದ ಕಣ್ಣುಗಳ ಚಿತ್ರಗಳು ಇಂದಿಗೂ ನನ್ನ ಎದೆಗೂಡಿನಲ್ಲಿ ಭದ್ರವಾಗಿವೆ. ಬಿಟ್ಟಿರಲಾರದ ನಮ್ಮಗಳನ್ನ ಶಾಶ್ವತವಾಗಿ ಅಪ್ಪ ಬಿಟ್ಟು ತೆರಳಿದರು. ಆಗ ಅವರಿಗೆ ಕೇವಲ 42 ವರ್ಷ ನನಗೆ 14 ವರ್ಷ.
ಅವರಿಲ್ಲದೆ 35 ವರ್ಷ ಕಳೆದರೂ ಆ ಶರಣ ಬದುಕು ನನ್ನ ಮನಃಪಟಲದಲ್ಲಿ ಅಚ್ಚಳಿಯದೆ ಉಳಿದಿದೆ.
–ಸುನಿತಾ ಮೂರಶಿಳ್ಳಿ ಧಾರವಾಡ