ಹಾಸ್ಯ-ರಸಾಯನ
-ಗುಂಡುರಾವ್ ದೇಸಾಯಿ ಶಿಕ್ಷಕರು, ಮಸ್ಕಿ
ಅಕಟಕಟಾ ಇಟು ದಿನ, ಖೊಡಿ ತಂದು ಟಿ.ವಿನ್ನ ದೊಡ್ಡ ದರಿದ್ರ ಅಂತ ಬಯ್ಯಕೋತಿದ್ವಿ ಆದರ ಅದಕ್ಕಿಂತಲೂ ಅಷ್ಟ ದರಿದ್ರ ಬಂದು ಒಕ್ಕರಸ್ತಾದ ಅಂತ ಯಾರು ಕೂಡಾ ಭಾವಿಸಿರಲಿಲ್ಲ. ಹುಟ್ಟಿದ ಕೂಸಿನಿಂದ ಹಿಡಿದು ಇಂದು ನಾಳೆ ಸಾಯೋ ಮುದಕರಲ್ಲೂ ಲಾಲಾರಸ ಬಿಡೋ ಹಾಂಗ ಮಾಡಿರುವಂತಹ ಈ ಮೊಬೈಲ್ ಅನ್ನ ಏನಂತ ಕರಿಯೋಣ.
ಎರಡು ದಶಕಗಳ ಹಿಂದೆ ಕುಕ್ಕರು ಕೂತಿರೋ ದೂರವಾಣಿಗೆ ಶೆಡ್ ಹೊಡದು ಬಂದ ದೊಡ್ಡ ದಪ್ಪ ಗಾತ್ರದ ಮೊಬೈಲ್ ಈ ಪರಿ ಧೂಳ ಎಬ್ಬಸ್ತಾದ ಅಂತ ಅದನ್ನು ಕಂಡು ಹಿಡಿದಾತನೂ ಎಣಿಸಿರಲಿಲ್ಲವೇನೋ. ಅನ್ವೇಷಣ ಹಸಿವು ಒಂದು ಕಾಲಕ್ಕೆ ದೈತ್ಯನಾಗಿ ಮೆರೆದ ನೋಕಿಯಾ ಕಂಪನಿನೆ ಬಲಿತೆಗೆದುಕೊಂಡು ಬಿಟ್ಟಿದೆ. ಇದು ಖಂಡಿತ ಬುದ್ಧಿ ಇರುವವರ ಬದಲಾಗುತ್ತಿರುವವರ ಕಾಲ ಎಂದು ಮೊಬೈಲ್ ಜಗಜ್ಜಾಹೀರು ಮಾಡಿ ತೋರಿಸಿದೆ. ಮೂರು ನಾಲ್ಕು ದಶಕಗಳ ಹಿಂದೆ ಟಿವಿ ಇದ್ದೋರು ಠೀವಿಯಿಂದ, ಲ್ಯಾಂಡ್ ಫೋನ ಇದ್ದೋರು ಲಾರ್ಡ ಆಗಿ ಮೆರಿತಿದ್ರು. ಟಿವಿ ನೋಡಾಕ ಅವರ ಮನಿಗೆ ಭಯ ಭಕ್ತಿಯಿಂದ ಹೋಗುವಾಂಗ, ದೂರವಾಣಿ ಬಂದಾಗ ಕೇಳಾಕೂ ಅದೆ ಭಾವದಿಂದ ಹೋಗಬೇಕಾಗಿತ್ತು. ಲ್ಯಾಂಡ್ ಫೋನ್ ಇದ್ದೋರು ದೊಡ್ಡ ಕಾಲರ್ ಟೋನ್ ಇಟ್ಟು ಓಣಿಮಂದಿ ಕಿವಿಯನ್ನೆಲ್ಲ ತಮ್ಮ ಮನಿ ಕಡೆ ಇರಿಸುವಂತೆ ನೋಡಿಕೊಳ್ಳೋರು. ಒಂದು ಕಾಲ್ ರಿಂಗಾತು ಅಂದ್ರ ಸುತ್ತಮುತ್ತಲಿನ ಮನೆಯವೆರೆಲ್ಲ ಆ ರಿಂಗಿಗೆ ಕಿವಿಯಾಗೊರು. ಆದರ ಒಂದು ಮಾತ್ರ ಸತ್ಯ ಫೋನ ಇದ್ದವರು ಧೀಮಾಕು ಬಡಿತಿದ್ರಾದರೂ ಕಾಲ್ ಬಂದಾಗ ಶಾಂತಮ್ಮ, ಮಾಲಮ್ಮ, ಸುನೀತಾ ನಿಮ್ಮದು ಅಂತ ಕರೆಯೊದನ್ನ ಮರಿತಿರಲಿಲ್ಲ. ಅವರ ಮನಿಗೆ ದೇವಸ್ಥಾನಕ್ಕೆ ಹೋದಂತೆ ಭಯಭಕ್ತಿಯಿಂದ ಹೋಗಿ ಫೋನ್ ಹ್ಯಾಂಡಲ್ ಎತ್ತಿ ಒಂದು ಹಿತಮಿತದಲ್ಲಿ ಮಾತಾಡಿ ಬರಬೇಕಾಗಿತ್ತು. ಕಾಲ ಬದಲಾಗಿ ದೂರವಾಣಿ ಸಂಖ್ಯೆ ಹೆಚ್ಚಿತು ಆನಂತರ ಎಸ್.ಟಿ.ಡಿ, ಐ.ಎಸ್.ಟಿ.ಡಿಗಳ ಭರಾಟೆ ಸುರುವಾತು. ಆ ಫೊನ್ ಮಾಡಕ ಕ್ಯೂ ಎಷ್ಟು ಅಂದಿರಿ? ಅದೇನೋ ಎಸ್.ಟಿ.ಡಿ/ಐ.ಎಸ್.ಟಿ.ಡಿ ಒಂದು ಕಾಲಕ್ಕೆ ಸುಂದರ ಮಾಯಾ ಪ್ರಪಂಚವನ್ನ ಸೃಷ್ಠಿಸಿತ್ತು. ಎಸ್.ಟಿ.ಡಿಗಳಲ್ಲಿ ದುಡ್ಡುಕೊಟ್ಟು ದೂರದಲ್ಲಿರುವವರಿಗೆ, ಆಪ್ತರ ಜೊತೆ ಯಾರ ಹಂಗಿಲ್ಲದೆ ಫೋನ ಮಾಡುವ ಸೊಗಸಾದ್ರು ಎಂತಹದು. ಮಾತಾಡುವುದಕ್ಕೆ ಎಷ್ಟು ಖುಷಿ. ಅಂಗಡಿ ತಗದಾವ ಗಳಿಸಿದ್ದ ಮಾತ್ರ ಸಿಕ್ಕಾಪಟ್ಟೆ. ಮೊದಲ ಕಾಲ್ ಸೆಕೆಂಡಗೆ ಮರೂವರೆ ರೂಪಾಯಿಂದ ಸ್ಟಾರ್ಟ ಆಗೋದು, ಸೆಕೆಂಡು ಸೆಕೆಂಡಿಗೂ ಕಾಲ್ ರೇಟ್ ಜಾಸ್ತಿ ಆಗತಾ ನಡಿಯೋದು. ಹಗಲಲ್ಲಿ ಮಾಡಿದ್ರ ಬೇರೆ ರೇಟು ರಾತ್ರಿ ಮಾಡಿದ್ರ ಬೇರೆ ರೇಟು. ಹೆಚ್ಚಾಗಿ ರಾತ್ರಿನೆ ಎಲ್ಲರೂ ಪ್ರಯತ್ನಸೋರು. ಐದು ನಿಮಿಷ ಆ ಫೋನ್ ಬೂತ್ ಒಳಗ ಹೊಕ್ಕು ಹೊರಬರುವಷ್ಟರಲ್ಲಿ ಮುವತ್ತೊ ನಲವತ್ತು ರೂಪಾಯಿ ಆಗಿರೋದು. ರೊಕ್ಕ ಹೋದ್ರು ಚಿಂತೆ ಇಲ್ಲ ಆ ವಿಸ್ಮಯವನ್ನು ಅನುಭವಿಸುವುದು ಇದೆಯಲ್ಲ ಅದು ಸ್ಮರಣೀಯ.
ಆಮೇಲೆ ಕ್ವಾಯನ್ ಬೂತ್ ಬಂದ್ವು. ಅದು ಬದಲಾಗಿ ಮೊಬೈಲ್ ಅವತಾರ ಶುರುವಾತು. ಅದು ಹೊಸದಾಗಿ ಬಂದಾಗ ದಿಗಿಲು ಪಟ್ಟವರ ಬಾಳ. ವೈರ್ ಕನೆಕ್ಷನ್ ಇಲ್ಲ. ಮಣಭಾರದ ಆ ಪುಟ್ಟ ಆಕೃತಿಯಲ್ಲಿ ಕಾಲ್ ಮಾಡಿದಾಕ್ಷಣ ಧ್ವನಿ ಬರುವುದೆಂದರೇನು? ನಮ್ಮ ರೇಡಿಯೋ ನಮಗೆ ಅಚ್ಚರಿ ಹುಟ್ಟಿಸದಿದ್ದರೂ ಮೊಬೈಲ್ ಹುಟ್ಟಿಸುತ್ತಿತ್ತು. ಅದರ ಬೆಲೆ ಗಗನ ಕುಸುಮ. ಸಿಮ್ ಕಾರ್ಡ ಬೆಲೆ ಆಕಾಶದಷ್ಟು. ರೊಕ್ಕ ಕೊಟ್ಟರೂ ಸಿಗದ ಪರಸ್ಥಿತಿ. ಎರಡು ಮೂರು ಸಾವಿರ ರೂಪಾಯಿಗೆ ಕಾಳ ಸಂತೆಯಲ್ಲಿ ಮಾರಾಟ. ಒಂದು ಸಿಮ್ ಪಡೆಯಲು ಎಂ.ಎಲ್.ಎ, ಎಂ.ಪಿ ಗಳ ಶಿಫಾರಸ್ಸು ಪತ್ರಗಳು ಬೇರೆ. ಈಗ……….? ಬೆಲೆ ಇಲ್ಲದ ಕಾಸಿಗೆ ಸಿಮ್ ಸಿಗತಾವ ಅದು ಐವತ್ತೊ ನೂರು ರೂಪಾಯಿಯ ಎಕ್ಸಟ್ರಾ ಟಾಕ್ ಟೈಮ್ ನೀಡಿ. ಈಗ ಅದ್ಯಾವುದೋ ಜಿಯೋ ಸಿಮ್ ಬಂದಿದೆ. ಎಲ್ಲಾನೂ ಪ್ರೀ ಅಂತೆ. ಆರ್ಡನರಿ ಸೆಟ್ ಆದ ಮೇಲೆ ಕಲರ್ ಫೊನ್ಗಳು ಬಂದುವು, ಹಾಡು ಕೇಳುವಂತವು ಬಂದ್ವು, ಚಿತ್ರ ಮೆಸ್ಸೆಜ್ ಕಳಸಾವು ಬಂದ್ವು, ಕಡ್ಡಿ ತೊಂಡು ಚುಚ್ಚವು ಬಂದ್ವು, ಟಚ್ ಸ್ರೀನ್ ಬಂದವು. ಯಾವಾಗ ಆಂಡ್ರಾಯಿಡ್ ಪ್ರಪಂಚಾ ಬಂತೋ ಸ್ಮಾರ್ಟ ಫೊನ್ ಗಳ ಹಾರಾಟದಲ್ಲಿ ಎಲ್ಲಾ ಫೊನ್‍ಗಳು ಟ್ರಾಕಟರ್ನಾಗ ಸಿಕ್ಕ ಕುರಿಗಳಂತೆ ನುಜ್ಜುನುಜ್ಜಾಗಿ ಹೋಯ್ತು. ಅನಭಿಷಕ್ತ ದೊರೆಯಾಗಿ ಮೊಬೈಲ್ ಪ್ರಪಂಚ ಆಳಿದ ಕಂಪನಿಗಳು ಖೊಗಯಾ ಅನ್ನೊ ಹಾಗಾಯಿತು.
ಐವತ್ತು ವರ್ಷಗಳಲ್ಲಿ ತಂತ್ರಜ್ಞಾನದ ಯಾವು ಉಪಕರಣವೂ ಮಾನವನ ಮೇಲೆ ಇಷ್ಟು ಸವಾರಿ ಮಾಡಿದ್ದಿಲ್ಲ ಆದರೆ ಮೊಬೈಲು ಮಾಡತಿದೆ. ಫ್ರೆಂಡ್ ಈಜ್ ಸೆಕೆಂಡ್ ವೈಫ್ ಅಂತಿದ್ರು , ವೈಫ್ /ಹಜಬಂಡ್ ಸೆಕೆಂಡ್ ಆಗ್ಯಾಳ/ನ ಫಸ್ಟ್ ಪ್ಲೇಸನ್ಯಾಗ ಮೊಬೈಲ್ ಕೂತಾದ. ಹೆಂಡ್ತಿ/ಗಂಡನ ಮುಖಾನ ದಿನದಾಗ ಎಷ್ಟು ನೋಡೊತಿವೋ ಅದರ ನೂರು ಪಟ್ಟು ಮೊಬೈಲನ ಮುಖ ನೋಡತಿವಿ. ನನ್ನ ಮಾತು ವೈಸ ವರ್ಸಾ ಅನ್ನಕೊಬೇಕು. ಅದು ಹೆಣ್ಣಮಕ್ಕಳಿಗೂ ಅನ್ವಯ. ಮೊಬೈಲನ ಪಯಣದ ಮೊದಲಲಿ ಇಷ್ಟು ಅಡಿಕ್ಷನ್ ಇರಲಿಲ್ಲ. ಯಾವಾಗ ಅಂತರ್ಜಾಲದ ಕರಿನೆರಳು ಮೊಬೈಲನತ್ತ ಬಿತ್ತು ಆಂಡ್ರೈಡ್, ಐ.ಓ.ಎಸ್, ಪ್ರಪಂಚ ಬಂತೋ ಜಗತ್ತೆ ಅಂಗೈಯಲ್ಲಿ ಆತು. ಎಂತಹ ಜಗತ್ತನ್ನು ಈ ಪುಟ್ಟ ಕೈಗನ್ನಡಿಯಲ್ಲಿ ಕಾಣುವಂತಾಯಿತು. ಗೂಗಲೆ ವಿಶ್ವಗುರು ಆಯ್ತು. ಕಂಡು ಹಿಡಿದ ಪುಣ್ಯಾತ್ಮನ ಎಷ್ಟು ಹೋಗಳಿದರೂ ಸಾಲದು. ಈ ಪುಟ್ಟ ವಿಸ್ಮಯವನ್ನು ದೇವರೆನ್ನುವರು ನೋಡಿದರೆ ದಂಗಾಗದೆ ಇರಲಾರ. ಅಂತಹ ಮಾಯಾಸೃಷ್ಟಿಯನ್ನು ನಿರ್ಮಿಸಿದೆ.
ಮೊಬೈಲ್ ಅನ್ನುವ ವಿಸ್ಮಯ ಸೃಷ್ಟಿ ಹಲವು ಉದ್ಯಮಗಳನ್ನು ಕೊಚ್ಚಿ ಹಾಕಿದೆ. ಹಲವು ದಶಕಗಳ ಕಾಲ ಪಾರುಪತ್ಯ ಮೇರೆದ ಹೆಚ್.ಎಂ.ಟಿ ಕಂಪನಿ ಬೀಗ ಮುದ್ರೆ ಜಡಿಸಿಕೊಂಡಿದ್ದು ಯಾರ ದೆಸೆಯಿಂದ. ‘ನನಗ ಮದುವಿಗೆ ಹೆಚ್.ಎಂ.ಟಿ ವಾಚ್ ಬೇಕು?’ ಎಂದು ಡಿಮ್ಯಾಂಡ ಇಟ್ಟು, ಕೊಡುವುದನ್ನು ಮರೆತಿದ್ದಾಗ ‘ಅದನ್ನು ಕೊಡಸಾತನ ತಾಳಿನ ಕಟ್ಟೊಲ್ಲ’ ಅಂತ ಹಠಹಿಡಿದು ಕುಳಿತಿದ್ದ ಗಂಡುಗಳೆಷ್ಟೊ? ಹಠಹಿಡಿಯುವಷ್ಟು ಮನೆಮಾತಾಗಿದ್ದ ವಾಚ್ ಹೇಳಹೆಸರಿಲ್ಲದಂತಾಗಿದ್ದು ಯಾರ ಕಾರಣದಿಂದ? ಅದು ಹೋಗಲಿ ಕ್ಯಾಲುಕಲೇಟರ್- ನಮ್ಮ ಮೆದುಳಿನ ಶತ್ರು ಅದನ್ನು ನಾಮಾವಶೇಷ ಮಾಡಲು ಹೊರಟಿರುವವರು ಯಾರು? ನಾವು ಪಿ.ಯು.ಸಿ ಓದೊ ಕಾಲಕ್ಕ ನಮ್ಮ ಸೀನಿಯರು ಎಲ್ಲಾ ಆಪರೇಷನ್ ಇರೊ ಸೈಂಟಿಫಿಕ್ ಕ್ಯಾಲುಕೇಲೇಟರ್ ಬಳಸಿತಿದ್ರು. ಅದಕ್ಕ ಎಷ್ಟು ಡಿಮ್ಯಾಂಡು. ಅದು ಬೀಡಿ ಎಂತೆಂತ ತರವರಿ ಬ್ಯಾಟರಿಗಳಿದ್ದುವು, ಚಾರ್ಜಬಲ್ ಬ್ಯಾಟರಿ ಬಂದ ಮೇಲೆ ಡಿಮ್ಯಾಂಡ ಕಡಿಮೆ ಆತು, ಮೊಬೈಲ್ ಬಂದ ಮ್ಯಾಲೆ ನೆಲಕಚ್ಚಿಕೊಂಡ ಹೋತು. ಪಾಪ ಶೆಲ್ಲುಗಳು! ರೇಡಿಯೋ, ಟೇಪರೆಕಾರ್ಡರ್, ಕ್ಯಾಮರಾ, ಬ್ಯಾಟರಿಗಳಿಗೆ ಆಧಾರವಾಗಿದ್ದ ಅವುಗಳ ಅಸ್ತಿತ್ವ ಏನಾಗಿದೆ? ಒಂದು ಕಾಲಕ್ಕ ಶೆಲ್ಲುಗಳು ಉರದದ್ದು ಸಣ್ಣಾಗಿಲ್ಲ. ಅವುಗಳಲ್ಲಿ ಹಾಕಿಟ್ರು ಪವರ್ ಕಳಕಳವು, ತಗದು ಭೂಸಂಪರ್ಕಕ್ಕೆ ಇಟ್ರು ಡೌನಾಗಿ ಬಿಡೊವು. ಜಾಸ್ತಿ ಬಳಸಿದ್ರೆ ವೀಕ್ ಆಗಿ ಬಿಡೋವು. ತಿಂಗಳೊಳಗ ಮತ್ತೆ ಮತ್ತೆ ಹೊಸ ಶೆಲ್ ತರಬೇಕಂದ್ರ ಎಷ್ಟು ಧಾವತಿ, ಎವರಿ ಡೇ, ನವಿನೋ, ನಿಪ್ಪೊ ಯಾವ್ಯಾವೋ ಶೆಲ್‍ಗಳಿಗೆ ಎಷ್ಟು ಡಿಮ್ಯಾಂಡು? ಅಂತವುಗಳನ್ನು ದಿವಾಳಿ ಎಬ್ಬಿಸಿದ್ದು ಯಾರು? ಅದೂ ಬಿಡಿ ಒಂದು ಕಾಲದ ಜನಸಂಪರ್ಕದ ಸೇತುವೆ ರೇಡಿಯೋವನ್ನು, ಮನೋರಂಜಿಸುತ್ತಿದ್ದ ಟೇಪ ರೆಕಾರ್ಡರನ್ನು, ಕ್ಯಾಸೆಟ್ಗಳನ್ನು ಧೂಳುತಿನ್ನುವಂತೆ ಅವುಗಳ ಅಸ್ತಿತ್ವವೇ ಇಲ್ಲವಂತೆ ಕಷ್ಟದ ಪರಿಸ್ಥಿತಿ ನಿಮಾಣ ಮಾಡಿದವರಾರು? ಇತ್ತೀಚಿಗೆ ಮೈಕ್ರೊ ಚಿಪ್ ಬಂದು ಸಿ.ಡಿ ಡಿವಿಡಿಗಳ ಪ್ರಪಂಚಕ್ಕ ಅಗಾಥ ತಂದೊಡ್ಡುತ್ತಿರುವುದು ಯಾವುದು? ಸ್ಟಾಪ ವಾಚು, ಅಲರಾಮ ಟೈಪೀಸು ಮೂಕಬತ್ತಿ ಮಾಡಿದವರಾರು? ಗೇಮು-ಗಿಮು, ಚಿತ್ರ-ಪತ್ರ, ಸಾಂಗು-ಗಿಂಗು ಒಂದ ಎರಡ ಅದು ಹೋಗಲಿ ಕೊಡೆಕಾ, ಕ್ಯಾನನ್ ಅದ್ಯಾವ್ಯಾವೋ ಕ್ಯಾಮರಗಳನ್ನ ತೊಂಡು ಅದಕ್ಕ ರೀಲ್ ತುಂಬಿಸಿ ಜಿಪುಣತನದಿಂದ ಪೋಟೊ ತೆಗೆಯೋದು, ತೆಗೆಸಿಕೊಳೊದು ನಡಿತಿತ್ತು. ರೀಲ್ ಎಲ್ಲಾ ಮುಗಿದ ಮೇಲೆ ಡೆವಲಪಿಂಗ್ ಮಾಡಿಸಿ ಅದರಲ್ಲಿ ಚೆನ್ನಾಗಿ ಬಂದ ಪೋಟೊ ತೊಳೊಸೊದು ಅದರ ರೀಲಿನಲ್ಲಿ ನಮ್ಮ ವಿಚಿತ್ರ ಆಕೃತಿಯನ್ನು ನೋಡಿ ಸಂಭ್ರಮಿಸೋದು ಇದನ್ನೆಲ್ಲ ಡಿಜಿಟಲ್ ಕ್ಯಾಮರ್ ಬಂದು ಕಸಗಂಡ್ವು. ನಂತರ ಫೋಟೊ, ವಿಡಿಯೋಗಳಿಗೆ, ಫೊಟೊ, ವಿಡಿಯೋ ತೆಗೆಯುವವರಿಗೆ ಕಿಮ್ಮತ್ತೆ ಇಲ್ಲದಾಂಗ ಮಾಡಿದವರಾರು? ಮುಖ ನೋಡಿಕೊಳ್ಳಾಕ ಕನ್ನಡಿ ಬೇಕು ಆದರ ಈಗ ಮೊಬೈಲ ಆದಲ್ಲ. ಮೊನ್ನೆ ಯಾವುದೊ ಪ್ರವಾಸಕ್ಕ ಹೋಗಿದ್ವಿ. ಶೇವಿಂಗ ಮಾಡಿಕೊಳ್ಳಬೇಕಾಗಿತ್ತು ಕನ್ನಡಿಗಾಗಿ ತಡಕಾಡಿದೆ. ಗೆಳೆಯ ‘ಹುಚ್ಚಾ, ಯಾಕ ಕಾಲದಾಗಿದ್ದಿ ಅಂಗೈಯಾಗ ಬೆಣ್ಣಿ ಇಟ್ಟುಕೊಂಡು ತುಪ್ಪಕ್ಕ ಹುಡಕಾಡದಂಗಾತು’ ಅಂತ ನನ್ನ ಮೊಬೈಲನಾಗ ಕ್ಯಾಮರ ಆನ್ ಮಾಡಿ ಮುಖ ನೋಡಿಕೊ ಅಂತ ಕೊಟ್ಟ. ನನಗೂ ಶಾಕ್ ಆತು ಇಷ್ಟು ಸಣ್ಣ ವಿಷಯಕ್ಕ ತಲಿ ಓಡಲಿಲ್ಲ ಅಂತ!
ಇನ್ನೂ ಯಾವುದೋ ಸಮಾರಂಭದ ಭಾಷಣಕ್ಕ ಅಥವಾ ವಿಷಯಕ್ಕ ಸಾಕಷ್ಟು ಪುಸ್ತಕಗಳನ್ನು ಓದಬೇಕಿತ್ತು, ಪತ್ರಿಕೆಗಳನ್ನ ತಿರುಗಿಸಬೇಕಿತ್ತು. ಆದರ ಈಗ ಏನು ವಿಷಯ ಬೇಕೊ ಟೈಪ ಹೊಡದ್ರ ಸಾಕು ಎಲ್ಲಾ ಮಾಹಿತಿ ಕ್ಷಣಾರ್ಧದಾಗ ಕಾಣ ಸಿಗತಾದ. ನೋಡ ಸಿಗತಾದ. ಒಂದೆ ಎರಡೆ ಮೊಬೈಲು ಎಷ್ಟೆಲ್ಲಾ ಉದ್ಯಮಗಳನ್ನ ಕಂಗಾಲು ಮಾಡ್ಯಾದ ಯೋಚಿಸ್ರಿ. ಇಷ್ಟೆಲ್ಲವನ್ನು ಆಪೋಷನ ತೆಗೆದುಕೊಂಡ ಈ ಆಧುನಿಕ ಮೊಬೈಲ್ ಇನ್ನೂ ಕೆಲವೇ ದಿನಗಳಲ್ಲಿ ಟಿ.ವಿಯನ್ನ, ಗಣಕ ಯಂತ್ರವನ್ನ ಬಲಿತೆಗೆದುಕೊಳ್ಳದೆ ಇರುತ್ತೇನ್ರಿ? ವಿಶೇಷ ಅಪ್ಲಿಕೇಷನ್ ಇರೋ ಮೊಬೈಲ್ ನಿಂದ ಅವಕ್ಕೂ ಗಂಡಾಂತರ ಬರತಾ ಇದೆ ಅಂದ್ರೇನು? ಆಗಲೆ ಬಂದಾಗೇದ…!
ಎಂತಾ ಶಕ್ತಿ ಈ ಮೊಬೈಲ್‍ಗೆ ಇದೆ ಅಂತಿನಿ. ಐದಾರು ವರ್ಷಗಳಲ್ಲೆ ಭಾರಿ ಕ್ರಾಂತಿ ಮಾಡಿದ. 2011ರ ಜನಗಣತ್ಯಾಗ ತಿಳಕೊಂಡಾಂಗ ಶೇ.75ರಷ್ಟು ಮೊಬೈಲ್ಗಳು ದೇಶದಾಗ ಆಗ ಇದ್ವು. ಆದರ ನನಗನಿಸಿದ ಮಟ್ಟಿಗೆ ನಮ್ಮ ಜನಸಂಖ್ಯೆನ ಸೆಂಟ್ ಪರ್ಸೆಂಟಾಗಿ ಸೈಡ್ ಹೊಡದೆ ಹೊಡಿದಿರಲೇಬೇಕು ಅನ್ನೋದು ನನ್ನ ಬಲವಾದ ನಂಬಿಕೆ. ಅಲ್ಲರಿ ಹೆಣದಂತಾ ಫೋನಿದ್ದಾಗ ಒಂದಕ್ಕ ಸಾಕ ಸಾಕೆನಿಸುತ್ತಿತ್ತು. ಈಗ ಸ್ಮಾರ್ಟ ಫೋನ್ ಬಂದಮ್ಯಾಲೆ ಹಳೇ ಫೋನ್ ಜೊತಿಗೆ ಬ್ಯಾರೆ ಸ್ಟೇಫ್ನಿ ಇದ್ದಾಂಗ. ಏಕಪತ್ನಿ ಹೊಂದಿದಂತಹ ಶ್ರೀರಾಮಚಂದ್ರನಂತವರು ಬೇಕಾದಷ್ಟು ಜನ ಸಿಕ್ಕಾರು ಏಕ ಮೊಬೈಲ್ ಫೋನ್ ಹೊಂದಿದ ಮೊಬ್ಯಲಾಮಚಂದ್ರರು ಸಿಕ್ಕಾರೆ? ನೋಚಾನ್ಸ್.
ಕಳೆದ ಹಲವಾರು ದಶಕಗಳಿಂದ ನಾಡಿನ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಪ್ರಯತ್ನಿಸುತ್ತಿರುವ ಇಲಾಖೆ ನಿಜವಾಗಿ ಗುರಿಸಾಧಿಸಿದೆಯೋ ಇಲ್ಲೋ ಮೊಬೈಲ್ ಖಂಡಿತ ಆ ಸಾಧನೆ ಮಾಡಿದೆ. ನಿರಕ್ಷರ ಕುಕ್ಷಿಗೂ ಬಾರದ ಭಾಷೆ ಕಲಿಸಿದೆ, ಆಪರೆಟಿಂಗ ತಂತ್ರಜ್ಞಾನ ತಿಳಿಸಿಕೊಟ್ಟಿದೆ. ಕನ್ನಡಕ್ಕಿಂತಲೂ ಇಂಗ್ಲೀಷ್ ಅಕ್ಷರವನ್ನ ಗುರುತಿಸುವ ಸಾಮಥ್ರ್ಯವನ್ನು ತಂದುಕೊಟ್ಟಿದೆ. ಯಾರರ ಕೇಳಿ ಮೊಬೈಲ್ ನಂಬರ ಅಂದ್ರ ಸಾಕು ‘ನೈನ್ ಸೆವನ್ ಫೊರ್ ಝೀರೊ….. ‘ ಅಂತಾನೆ ಆರಂಬಸ್ತಾನೆ. ಅನಿವಾರ್ಯತೆ ಏನನ್ನೆಲ್ಲ ಕಲಸ್ತಾದೆ ಅಂದಮ್ಯಾಲೆ ಶಾಲೆಗೆ ಮಕ್ಕಳನ್ನ ಕಳಸದೆ ಇದ್ರೆ ನಿಮಗೆ ಎಲ್ಲಾ ಸೌಲಭ್ಯ ಕಟ್ ಅಂದ್ರೆ ನಮ್ಮಲ್ಲಿ ಅನಕ್ಷರತೆ ಯಾಕಿರುತ್ತೆ ಹೇಳಿ? ಅಂತಹ ಇಚ್ಛಾಶಕ್ತಿ ಇದೆಯೇ? ಮೊದಲೆಲ್ಲ ಕಾರ್ಯಕ್ರಮದಾಗ ಇಂತಹವರ ಭಾಷಣ ಆರಂಭ ಆಗತಿದೆ ದಯವಿಟ್ಟು ಶಾಂತಚಿತ್ತರಾಗಿ ಕುಳಿತುಕೊಳ್ಳಿ ಅಂತಿದ್ರು ಮೊಬೈಲ ಬಂದ ದಿನಗಳಲ್ಲಿ ತಮ್ಮ ಹತ್ತಿರ ಮೊಬೈಲ ಅದ ಅಂತ ಸಭಾದಾಗ ತೋರಸಾಕರ ಯಾರಕೂಡಾರ ರಿಂಗ ಮಾಡಸ್ತಿದ್ರು. ಕಾರ್ಯಕ್ರಮದ ಆರಂಭಕ್ಕ ನಿಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿ ಇಲ್ಲ ಸೈಲೆಂಟ್ ಮೋಡನಲ್ಲಿಡಿ ಎನ್ನುತ್ತಿದ್ದರು ಕೇಳತಿರಲಿಲ್ಲ. ಈಗ ಹಾಂಗ ರಿಂಗ ಆತು ಅಂದ್ರ ಅವ ಮೊಬೈಲ್ ಬಳಸಿಕೊಳ್ಳಾಕ ಬಾರದ ಗಮಾರ ಅಂತ ಕೆಕ್ಕರಿಸಿ ನೋಡತಿರತಾರ. ಈಗ ಅದು ಹೇಳೊದು ಬೇಕಿಲ್ಲ. ಕಾರ್ಯಕ್ರಮ ಬೇಸರ ಆದ್ರ ಫೇಸಬುಕ್ ವ್ಯಾಟ್ಸಪ್ಪು ಅವರನ್ನ ಕಂಟ್ರೋಲ್ ಮಾಡತಾವ.
ಮೊಬೈಲ್ ನಲ್ಲಿ ಫೇಸಬುಕ್, ವ್ಯಾಟ್ಸಪ್ ಆಫಷನ್ ಬಂದ ಮೇಲೆ ಜನರಿಗೆ ಹಗಲಿರಳು ಬಿಡುವೆ ಇಲ್ಲ. ಅನ್ನ ಕುದ್ದದದ ಇಲ್ಲ, ಹಾಲು ಉಕ್ಕಿತೇನೊ ಎಂದು ಅಡುಗೆಮನೆಗೆ ಧಾವಿಸಿ ಬರುವ ಹಾಗೆ ಇಟ್ಟಿಟ್ಟಕ ಫೇಸಬುಕ್, ವ್ಯಾಟ್ಸಪ್ ಗೆ ಅಪಲೋಡ ಮಾಡಿದ ಫೊಟೊಗೆ ಏನ್ ಕಾಮಿಂಟ್ ಬಂದು, ಎಷ್ಟು ಮಂದಿ ಲೈಕ್ ಮಾಡಿದ್ರು, ಯಾರದು ಹೊಸ ಪೋಷ್ಟ ಬಂದ್ವು ಅಂತ ತಾಸಿಗೊಮ್ಮೆ ಘಳಿಗೊಮ್ಮ ನೆಟ್ ಆನ್ ಮಾಡಿದ್ದಾ ಮಾಡಿದ್ದು, ನೋಡಿದ್ದಾ ನೋಡಿದ್ದು.
ಯಾರ್ಯಾರಿಗೆ ಫ್ರೆಂಡ್ಸ ರಿಕ್ವೆಸ್ಟ್ ಕಳಸ್ತಿವಿ ಎದುರಿಗೆ ಬಂದರ ಮಾತಾಡಿಸದೆ ಹೋಗ್ತಿವಿ. ಓಪನ್ ಮಾಡಿ ನೋಡಾಕ ತತ್ತರಸ್ತಾ ಇರ್ತೀವಿ. ಅದು ಇಲ್ಲದ ಬದುಕ ಇಲ್ಲ ಅನ್ನುವಂತಹ ವಾತಾವರಣ ಯುವಪೀಳಿಗೆ ಬಿಡಿ ಮುದುಕರಿಗೂ ಕಾಡಕತಾದ. ವ್ಯಾಟ್ಸಪ್ ಹಾಗೂ ಫೇಸ್ಬುಕ್ ಸಂಸ್ಥೆಯ ಅಭಿವೃದ್ಧಿಗಾಗಿ ಸಂಬಳ ಪಡೆಯದೆ ತಾವೇ ಹಣಕೊಟ್ಟು ನಿದ್ದೆಗೆಟ್ಟು ಹಗಲಿರುಳು ದುಡಿಯುತ್ತಿರುವ ನನ್ನ ಮಿತ್ರರಿಗೆ ‘ಕಾರ್ಮಿಕ ದಿನಾಚರಣೆ’ ಯ ಶುಭಾಶಯಗಳು ಅಂತ ಮೊನ್ನೆ ಮೇ 1 ರಂದು ಯಾರೋ ಅನಾಮಿಕ ಸ್ಟೇಟಸ್ ಹಾಕಿದ್ರು. ಎಷ್ಟು ಸತ್ಯ ಅಲ್ಲ. ಅದೇನೆ ಇರಲಿ ಯುವಕರನ್ನು ಅವು ಹಾದಿ ತಪ್ಪಿಸುತ್ತಿದ್ದರೂ ಅದರ ಸದ್ಬಳಕೆ ಮೂಲಕ ಭವಿಷ್ಯ ರೂಪಿಸಲು ಪ್ರಯತ್ನಿಸಬೇಕಾಗಿದೆ. ನಾನಂತೂ ಈ ಮಾಧ್ಯಮದ ಮೂಲಕ ಅನೇಕ ಮಿತ್ರರ ಸ್ನೇಹ ಸಂಪಾದಿಸಿದ್ದೇನೆ. ಕಾರ್ಯಕ್ರಮಗಳನ್ನೂ ಸಂಘಟಿಸದ್ದೇನೆ, ಹಲವಾರು ಒಳ್ಳೆಯ ಸ್ನೇಹಿತರನ್ನ ಅವಕಾಶಗಳನ್ನ ಕಲ್ಪಿಸಿದೆ. ನನ್ನ ಕೃತಿಯೊಂದು ಫೇಸ್ ಬುಕ್ ಪರಿಚಯದ ಮೂಲಕವೇ ಪ್ರಕಟಗೊಂಡಿದೆ. ಮತ್ತೆನ್ನಿನೇನು ಬೇಕು ಹೇಳಿ.
ಮೊನ್ನೆ ವ್ಯಾಟ್ಸಪನಲ್ಲಿ ಬಂದ ಸಂದೇಶವೊಂದು ಹೀಗಿತ್ತು.
ತಲೆತಗ್ಗಿಸಿ ನೋಡು ಮತ್ಯಾವತ್ತು ನಿನ್ನನ್ನು ತಲೆಯತ್ತದಂತೆ ಮಾಡುತ್ತೇನೆ
–ಮೊಬೈಲ
ತಲೆತಗ್ಗಿಸಿ ನನ್ನನ್ನು ನೋಡು ನಾನು ನಿನ್ನನ್ನು ಸದಾ ತಲೆ ಎತ್ತುವಂತೆ ಮಾಡುತ್ತೇನೆ
-ಪುಸ್ತಕ
ಎರಡನೆಯದಂತೂ ಸತ್ಯ ಒಂದನೆಯದನ್ನು ಸತ್ಯ ಆಗಕ ಬಿಡತಿರಾ?
.
ಏಕಮೊಬೈಲ್ವ್ರತಸ್ಥರು ಇರಬಹುದಾದರೂ ಒಳಗೆ ಎರಡರ ಸಂಗ ಬಿಡೋದಿಲ್ಲ ಬಿಡಿ. ಒಬ್ಬಾಕಿ(ತ) ತಪ್ಪಿದ್ರ ಮತ್ತೊಬ್ಬಾಕಿ(ತ)ನ ಬಳಸಿಕೊಳ್ಳೋ ಚಾಕಚಕ್ಯತೆ ಮೊಬೈಲಾಸುರ ಕಲಿಸಿಕೊಟ್ಟಾನ…. ತಲಾತಲಾಂತರದ ವಂಶ ಪಾರಂಪರ್ಯವಾಗಿ ಬಂದ ಸಂಸ್ಕಾರವನ್ನೂ ತಿಂದ ಗೆದ್ದಲು ಈ ಮೊಬೈಲು.
ಉತ್ತಮವಾಗಿ ಹಾಸ್ಯ ಭರಿತ ಲೇಖನ ಇದು. ಮೊಬೈಲ್ ಬೆಳೆದು ಬಂದ ಹಾದಿಯನ್ನು ಹೇಳುವುದರ ಜೊತೆಜೊತೆಗೆ, ಇದು ಎಷ್ಟೋ ವಸ್ತುಗಳನ್ನು ಮೂಲೆಗುಂಪಾಗಿಸಿದ್ದರ ಬಗ್ಗೆಯೂ ಚೆನ್ನಾಗಿ ಬರೆದಿದ್ದೀರಿ.
ಜಗತ್ತೇ ಕೈಯೊಳಗೆ ತಂದ ಮೊಬೈಲ್ ನಮ್ಮನ್ನು ಜಗತ್ತನ್ನೇ ತಿನ್ನುತೇತಿದೆ. ಸಂಬಂಧಗಳನ್ನು ಎಷ್ಟು ಬೆಸೆಯುತ್ತಿದೆಯೋ… ಅಷ್ಟೇ ಸಂಬಂಧಗಳನ್ನು ಹಾಳುಗೆಡುವುತ್ತಲೂ ಇದೆ, ಆದರೆ ಅದನ್ನು ಧನಾತ್ಮಕವಾಗಿ ಬಳಸಿಕೊಳ್ಳಿ ಎಂದು ತಿಳಿಸಿ ಯುವಜನೆತೆಗೆ ಉತ್ತಮ ಸಂದೇಶ ನೀಡಿದ್ದೀರಿ…. ಅಭಿನಂದನೆಗಳು