ಅಪ್ಪ
ಅಚ್ಚ ಬಿಳಿಯ
ಸ್ವಚ್ಛ ಉಡುಗೆ
ಯಾರಿಗೂ ಬಾಗದ
ದಿಟ್ಟ ನಡಿಗೆ!
ನಿನ್ನ ಪ್ರೀತಿ ಬಾನಿನ ರೀತಿ
ಒಮ್ಮೆ ಗುಡುಗು ಸಿಡಿಲಿನ ಮೊರೆತ!
ಮತ್ತೊಮ್ಮೆ
ವರ್ಷಧಾರೆಯ ಕುಣಿತ!
ನಿನ್ನ ಬೆವರ ಹನಿಯ ಸಾಲು
ಬಾಳ ಬಂಡಿಗೆ ಕಡೆಗೀಲು
ಯಾವ ಕೊರತೆ ತಾಗದಂತೆ
ಮಮತೆಯೊರತೆ ಜಿನುಗಿದಂತೆ!
ಗಂಧದಂತೆ ಜೀವತೇಯ್ದು
ಚೆಂದವಾದ ಬದುಕ ನೇಯ್ದು!
ಸಿಂಧುರೂಪವಾಗೆ ಮಮತೆ
ಮನೆಯನೆಲ್ಲ ತುಂಬಿ ತುಳುಕೆ!
ಅಪ್ಪನ ಹೆಸರು
ನಮ್ಮ ಬಾಳ ಹಸಿರು
ಕಟ್ಟಿಕೊಟ್ಟ ಗಟ್ಟಿ ಬದುಕು
ಕಟ್ಟಕಡೆಗೂ ಸವೆಯದು!
–ಇಂದುಮತಿ ಪುರಾಣಿಕ ಇಳಕಲ್ಲ.