ಅಪ್ಪನೆಂಬ ಮಾಣಿಕ್ಯ

 

ಅಪ್ಪನೆಂಬ ಮಾಣಿಕ್ಯ

ಹಗಲಿಡೀ ದುಡಿಯುವ, ಬಿಸಿಲು ಮಳೆ ಚಳಿಯನ್ನದೆ
ಸಂಸಾರದ ಕಡಲಿನ ದಡ ಸೇರಿಸೋ ನಾವಿಕ ನೀನು.
ಜೀವನದುದ್ದಕ್ಕೂ ಕಡು ಕಷ್ಟಗಳನು ಸಹಿಸಿ
ತಾ ನೊಂದು ತನ್ನವರಿಗಾಗಿ ಮಿಡಿಯೋ ಮೌನ ಪ್ರೀತಿಯ ದೊರೆ ನೀನು.

ಸರಳತೆಯ ಪ್ರತೀಕ, ಅಪರೂಪದ ಮಾಣಿಕ್ಯ ನೀ ನನಗೆ.
ಅಭಿಮಾನದ ಆಗರ, ಮುಗ್ದತೆಯ ಸ್ವರೂಪಿ
ನೀ ನನಗೆ.
ಕನಸುಗಳ ನನಸಾಗಿಸಿ, ತಪ್ಪುಗಳ ತಿದ್ದಿ ತಿಳಿಸುವ ಸಲಹೆಗಾರ ನೀ ನನಗೆ.
ಜೀವನದ ಪಾಠ ಹೇಳುತ್ತಾ, ಗುರಿ ಮುಟ್ಟಿಸುವ ಮಾರ್ಗದರ್ಶಕ ನೀ ನನಗೆ.

ತಾನು ಎರದ ಎತ್ತರವನ್ನು ತನ್ನ ಮಕ್ಕಳೆರಲೆಂದು
ಹುರಿದುಂಬಿಸುವ ಕರುಣಾಮೂರ್ತಿ ನೀನು.
ಬಡತನದಲಿ ಕುಗ್ಗದೆ, ಸಿರಿತನದಲಿ ಹಿಗ್ಗದೆ
ಸರಿಸಮಾನವಾಗಿ ಕಾಣುವ ಸಹನಾಮೂರ್ತಿ ನೀನು.

ತನ್ನ ಮೈಮೇಲೆ ಹರಿದ ಬಟ್ಟೆಗಳಿದ್ದರೂ
ನಮಗೆ ಹೊಸ ಬಟ್ಟೆ ಕೊಡಿಸೋ ಸಾಹುಕಾರ ನೀನು.
ತನ್ನ ದಿನವೀಡಿ ಕೆಲಸಗಳ ಒತ್ತಡಗಳ ನಡುವೆ
ಮನೆಮಂದಿಯನು ಕಣ್ಣು ರೆಪ್ಪೆಯಂತೆ

ಕಾಪಾಡುವ ಕಾವಲುಗಾರ ನೀನು.

✍🏻- ಪ್ರಶಾಂತ ಗುಣಕಿ, ಬೆಂಗಳೂರು

Don`t copy text!