ಅವ್ವ ಬುವಿಯಾದರೆ ಅಪ್ಪ ಆಕಾಶ

ಅವ್ವ ಬುವಿಯಾದರೆ ಅಪ್ಪ ಆಕಾಶ

ನನ್ನ ತಂದೆ ಗೌಸಖಾನ್. ಅಹ್ಮದ್ ಖಾನ್ ದೇವಡಿ. ಸ್ವಂತ ಊರು ಗೋಕಾಕ್ ತಾಲೂಕಿನ ಮಮದಾಪೂರ.
ನಾನು ಹನ್ನೊಂದನೆಯ ಮಗು ಮನೆಯಲ್ಲಿ. ನಾನು ಹುಟ್ಟಿದ ಎರಡು ವರ್ಷಗಳಲ್ಲೇ ಅಪ್ಪ ನಿವೃತ್ತಿ ಹೊಂದಿದರು. ಕೊನೆಯ ಮಗಳೆಂದು ಮತ್ತು ತಮ್ಮ ತಾಯಿಯನ್ನು ಹೋಲುವುದರಿಂದ ಅಪ್ಪ ನನ್ನ ಮೇಲೆ ವಿಶೇಷ ಪ್ರೀತಿ ಕಾಳಜಿಯನ್ನು ಹೊಂದಿದ್ದರು. ಶಾಲಾ ಮಾಸ್ತರಿಕೆಯೊಂದಿಗೆ ಅಪ್ಪ, ಪೋಸ್ಟ್ ಕೆಲಸವನ್ನು ಕೂಡ ಮಾಡುತ್ತಿದ್ದರು. ಮನೆತುಂಬ ಮಕ್ಕಳು.. ಕಡಿಮೆ ವೇತನ ಬಡತನದಲ್ಲೇ ಜೀವನ ಸಾಗಿತ್ತು. ಅಪ್ಪನ ಸತ್ಯಸಂಧತೆ ಊರಿನ ಮುಖಂಡರ ಕಣ್ಣು ಕಿಸುರಾಗಿತ್ತು. ಮೊದಲೆಲ್ಲ ಊರಲ್ಲಿ ಗೌಡರು ಕುಲಕರ್ಣಿ ಎಂದು ಒಳ ಜಗಳಗಳು ಬಹಳವಿರುತ್ತಿದ್ದವು. ಇದನ್ನು ಅಪ್ಪ ಆದಷ್ಟು ದೂರವಿಡುತ್ತಿದ್ದರಿಂದ..ಅವರನ್ನು ತಮ್ಮ ನೇರನುಡಿಗಳಿಂದ ಎದುರಿಸುತ್ತಿದ್ದರಿಂದ.. ಊರಲ್ಲಿ ಕೆಲವರ ಸೇಡು ಕಟ್ಟಿಕೊಂಡು ಕೆಲವೊಮ್ಮೆ ಅಜ್ಞಾತವಾಸಕ್ಕೆ ಹೋಗಬೇಕಾಗುತ್ತಿತ್ತು. ಆಗ ಯಾರಿಗೂ ಬೇಡ ನಮ್ಮ ಕಷ್ಟ. ಯಾವ ಅಂಗಡಿಯಲ್ಲೂ ನಮಗೆ ಸಾಮಾನು ಕೊಡುತ್ತಿರಲಿಲ್ಲ. ಊರಲ್ಲಿ ಯಾರೂ ಮಾತಾಡುತ್ತಿರಲಿಲ್ಲ. ಅಮ್ಮ ಮನೆಯಲ್ಲಿ ಬೆಳೆದು ನಿಂತ ಹೆಣ್ಣು ಮಕ್ಕಳೊಂದಿಗೆ ಹೆದರಿಕೆಯಿಂದ ಬಾಳಬೇಕಾಗುತ್ತಿತ್ತು. ಇಂತ ಸಂದರ್ಭದಲ್ಲಿ ಕೆಲ ಸಹೃದಯಿ ಬಂಧುಗಳು ಕದ್ದು ಮುಚ್ಚಿ ನಮ್ಮ ಸಹಾಯಕ್ಕೆ ಬರಬೇಕಾಗುತ್ತಿತ್ತು. ಅಪ್ಪ ಗಾಂಧಿವಾದಿಗಳಾಗಿದ್ದರು. ಅವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಧುಮುಕಿ ಜೇಲು ಕಂಡು ಬಂದಿದ್ದರು. ತಮ್ಮ ಕೊನೆಯ ಉಸಿರು ಇರುವವರೆಗೂ ಖಾದಿಧಾರಿಗಳಾಗಿ ಬದುಕಿದ್ದರು. ಬಡತನದಲ್ಲೇ ಬದುಕಿದರೂ ಮಕ್ಕಳ ಶಿಕ್ಷಣದ ಬಗ್ಗೆ ಬಹಳ ಕಾಳಜಿ ವಹಿಸಿದ್ದರು. ಹಿರಿಯ ಮೂವರು ಅಕ್ಕಂದಿರು ಹೆಚ್ಚು ಓದದಿದ್ದರೂ..ಐವರು ಮಕ್ಕಳಿಗೆ ಪದವಿಯ ಕಿರೀಟ ತೊಡಸಿದರು. ಎಲ್ಲರೂ ಒಳ್ಳೆಯ ನೌಕರಿಗಳಲ್ಲಿ ತೊಡಗಿ ತಮ್ಮ ತಂದೆಯ ಜೀವನಸಂಜೆಯನ್ನು ಸುಖಮರವಾಗಿಸಿದ್ದರು. ನನ್ನ ಅಕ್ಕ ಡಾಕ್ಟರ್. ಚಾಂದನಿ. ದೇವಡಿಯವರು ಬೆಳಗಾವಿ ಜಿಲ್ಲೆಯ ಕುಷ್ಠ ನಿವಾರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಅಣ್ಣಂದಿರು ಶಿಕ್ಷಕ ವೃತ್ತಿಯಲ್ಲಿ ಇದ್ದಾರೆ. ನನ್ನ ಒಬ್ಬ ಅಣ್ಣ ಭಾರತದ ಸೈನ್ಯದ ವಿಮಾನಖಾತೆಯಲ್ಲಿ ಸೇವೆಗೈದು ಈಗ ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ನಮ್ಮ ತಂದೆ ಒಂದೇ ಜೊತೆ ಬಟ್ಟೆಯಲ್ಲಿ ಬದುಕು ಸಾಗಿಸಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು.. ಎಂಬತ್ತರೊಂಬತ್ತು ವರ್ಷಗಳ ತುಂಬು ಜೀವನ ನಡೆಸಿ.. ಕೆಲಗಂಟೆಗಳ ಅನಾರೋಗ್ಯದಿಂದ ಅಸ್ತಂಗತರಾದರು.

-ಶಮಾ. ಜಮಾದಾರ.
ಯರಗಟ್ಟಿ.
ಬೆಳಗಾವಿ ಜಿಲ್ಲೆ.

Don`t copy text!