ಅಪ್ಪ ಎಂಬ ವೃಕ್ಷದ ಬೇರು ಪಾತಳದಿಂದ ಅತ್ತತ್ತ, ರೆಂಬೆ ಕೊಂಬೆಗಳು ಆಕಾಶದಿಂದ ಅತ್ತತ್ತ
e-ಸುದ್ದಿ ಓದುಗರಿಗೆಲ್ಲ ಶರಣು ಶರಣಾರ್ಥಿಗಳು 🙏🙏
ನಿನ್ನೆ ಭಾನುವಾರ ಜೂ.೨೦ ಅಪ್ಪನ ದಿನಾಚರಣೆಯನ್ನು ಆಚರಿಸಲಾಯಿತು. ಕವಯತ್ರಿಯೊಬ್ಬರು ಅಪ್ಪನ ದಿನಾಚರಣೆ ಗಾಗಿ ಕವಿತೆಯನ್ನು ಕಳಿಸಲೇ ಎಂದು ಕೇಳಿದರು. ಕಳಿಸಿ ಎಂದೆ. ಕೊಪ್ಪಳ ಜಿಲ್ಲೆ ಕನಕಗಿರಿಯ ಡಾ.ಚನ್ನಮಲ್ಲ ಮಹಾಸ್ವಾಮೀಜಿಯವರು ತಮ್ಮ ತಂದೆಯ ಕುರಿತು (ಪಂ.ಗುರುಸ್ವಾಮಿ ಕಲಕೇರಿ) ಕವಿತೆಯನ್ನು ಫೇಸ್‌ಬುಕ್ ನಲ್ಲಿ ಪ್ರಕಟಿಸಿದ್ದರು. ಸ್ವಾಮೀಜಿಯವರಿಗೆ ಕವಿತೆಯನ್ನು e-ಸುದ್ದಿ ಯಲ್ಲಿ ಪ್ರಕಟಿಸುವೆ ಎಂದು ವಿನಂತಿಸಿದಾಗ ಅವರು ಒಪ್ಪಿ ಹಾರೈಸಿದರು. ಸ್ವಾಮೀಜಿಯವರ ಕವಿತೆ, ನಾನು ನನ್ನ ಅಪ್ಪನ ಬಗ್ಗೆ ಅನಿಸಿಕೆ ಮತ್ತು ಬೆಳಗಾವಿ ಜಿಲ್ಲೆಯ ಕವಯತ್ರಿಯ ಕವಿತೆಯನ್ನು ಪ್ರಕಟಿಸಿ ಅಪ್ಪನ ದಿನಾಚರಣೆ ಯನ್ನು ಚಂದವಾಗಿ ಆಚರಿಸೋಣ ಎಂದು ಕರೆಕೊಟ್ಟಾಗ ಒಂದು ತಾಸಿನೊಳಗಾಗಿ ನಿರೀಕ್ಷೆ ಮೀರಿ ಕವಿತೆ ಮತ್ತು ಲೇಖನಗಳು ಅಂಗೈ ಅಗಲದ ಮಾಯ ಪೆಟ್ಟಿಗೆ ಮೊಬೈಲ್ ನಲ್ಲಿ ಕುಣಿಯುತ್ತಿದ್ದವು.
ನನಗೆ ನಂಬ ಲಾಗಲಿಲ್ಲ. ಅವ್ವನ ಕುರಿತು ಅದೆಷ್ಟು ಕವಿತೆಗಳು, ಲೇಖನಗಳು, ಪ್ರಬಂಧಗಳು, ಕಾದಂಬರಿ, ಕತೆ ಗಳು ಬಂದಿವೆ. ಈಗಲೂ ಬರುತ್ತಿವೆ. ಆದರೆ ಅಪ್ಪ ನ ಕುರಿತು ? ಕತೆ ಲೇಖನ ಕಾದಂಬರಿ ಗಳಲ್ಲಿ ಪಾತ್ರವಾಗಿ ಬಂದು ಹೋಗುವ ವಸ್ತು ವಾಗುತ್ತಿದ್ದ ಎಂಬ ಭಾವನೆ ತಲೆಕೆಳಗಾಗಿ ಅಪ್ಪನ ಕುರಿತು ಅದೆಷ್ಟು ಬರಹಗಳು, ಕವಿತೆಗಳು ಬಂದವು ಎಂದರೆ ನನ್ನನ್ನು ನಾನೇ ನಂಬದಾದೆ.
ಹಾಗಾಗಿ ಭಾನುವಾರ e-ಸುದ್ದಿ ಯಲ್ಲಿ ಸುದ್ದಿಗಳನ್ನು ಪ್ರಕಟಿಸುವದಕ್ಕೆ ಬ್ರೇಕ್ ಹಾಕಿ , ಅಪ್ಪನ ಕುರಿತು ಬರುವ ಲೇಖನ, ಕವಿತೆ ಎಲ್ಲವುಗಳನ್ನು ಪ್ರಕಟಿಸುವ ನಿರ್ಧಾರಕ್ಕೆ ಬರಲಾಯಿತು.
ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ e-ಸುದ್ದಿ ಯಲ್ಲಿ ಅಪ್ಪನ ಕುರಿತು 25 ಜನರಿಂದ ಬರಹ, ಕವಿತೆ ಗಳನ್ನು ಪ್ರಕಟಿಸಲಾಯಿತು. ಅದರಲ್ಲಿ 16 ಕವಿತೆಗಳು, 1ಲಲಿತ ಪ್ರಬಂಧ, 8 ಲೇಖನಗಳು ಸೇರಿವೆ. 2 ಸಾವಿರಕ್ಕೂ ಹೆಚ್ಚು ಜನ ಓದಿ ದಾಖಲೆಗೊಳಿಸಿದ್ದಾರೆ. ರಾತ್ರಿ 9 ಗಂಟೆಯ ನಂತರವು ಲೇಖನ, ಕವಿತೆ ಬರತೊಡಗಿದವು. ಇಂಟರ್ನೆಟ್ ಸಮಸ್ಯೆ ಮತ್ತು e-ಸುದ್ದಿ ವೆಬ್ ಪೇಜ್ ಸ್ಟ್ರಕ್ ಆಗಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಅವರಲ್ಲಿ ವಿಷಾದಿಸುತ್ತ ಕ್ಷಮೆ ಯಾಚಿಸುವೆ. ಇಂದು ಅವುಗಳನ್ನು ಆದ್ಯತೆಯ ಮೇರೆಗೆ ಪ್ರಕಟಿಸುವೆ.
ಬೆಳಿಗಿನಿಂದ ರಾತ್ರಿಯವರೆಗೂ ನಾನು ಎಲ್ಲೂ ಕದಲಿಲ್ಲ. ಈ ನಡುವೆ ನನ್ನ ಮಿತ್ರರೊಬ್ಬರ ತಮ್ಮನ ಮದುವೆ ಹೋಗಿ ಹಾರೈಸಿ ಬಂದು. ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದೆ. ನನ್ನ ಹೆಂಡತಿ ಸಾಕು ಮಾಡಿ ಮೊಬೈಲ ನೋಡುವದು. ಕೆಲವನ್ನು ಪ್ರಕಟಿಸಿ ಕೈ ಬಿಡಿ ಎಂದರು ಹೆಂಡತಿಯ ಮಾತನ್ನು ನಿರಾಕರಿಸಿ ಕವಿತೆ ಲೇಖನಗಳೆಲ್ಲವನ್ನೂ ಓದಿದೆ. ಆನಂದಿಸಿದೆ. ಕಣ್ಣೀರಿಟ್ಟೆ. ಭಾವೋದ್ವೇಗಕ್ಕೆ ಒಳಗಾದೆ. ಅಚ್ಚರಿಪಟ್ಟೆ ಅಪ್ಪನ ಬಗ್ಗೆ ಎಷ್ಟೊಂದು ಅನುಭವಗಳು ದಾಖಲಾದವು.
ನನ್ನ ಸ್ಥಿತಿ ನೋಡಿದ ಹೆಂಡತಿ ಲತಾ (ವೀಣಾ) ಆಗಾಗ ಚಾ ಮಾಡಿ, ಸಂಜೆ ಮಂಡಕ್ಕಿ ಚೂರುಮುರಿ ಕೊಟ್ಟು ಸಹಕರಿಸಿದಳು.
ಪ್ರಕಟಿತ ಕವಿತೆ, ಲೇಖನ ಕುರಿತು ಓದಿದ ಅನೇಕರು, ವಾಟ್ಸ್ ಆಪ್ ಗೆ ಮೆಸೇಜ್ ಹಾಕಿ ತಮ್ಮ ಭಾವನೆಗಳು ಹಂಚಿಕೊಂಡರು, ಅನೇಕರು ದೂರವಾಣಿ ಮಾಡಿ ಅಭಿನಂದಿಸಿದರು.
ಅನೇಕ ಸ್ನೇಹಿತರು, ಓದುಗರು ಮತ್ತು ನನ್ನ ಮಕ್ಕಳು e-ಸುದ್ದಿ ವೆಬ್ ಪೇಜ್ ನಿಂದ ನಿನಗೇನು ಲಾಭ ಎಂದು ಕೇಳುತ್ತಿದ್ದಾರೆ. ಅವರೆಲ್ಲ ನನ್ನ ಮೇಲಿನ ಪ್ರೀತಿಯಿಂದ ಕೇಳುತ್ತಿರಬಹುದು. ಅಥವಾ ಹಣ ಗಳಿಕೆ ಇಲ್ಲದಿದ್ದರೆ ಸಮಯ ಯಾಕೆ ವ್ಯರ್ಥ ಮಾಡುತ್ತೀ ಎಂಬ ಭಾವನೆ ಇರುಬಹುದು.
ಅವರಿಗೆಲ್ಲಾ ಹೇಗೆ ಹೇಳಲಿ. ನನ್ನ ಮನಸ್ಸಿನ ಸಂತೋಷ, ತುಮುಲು, ತಳಮಳ, ಪ್ರಸಕ್ತಕಾಲ ಘಟ್ಟದಲ್ಲಿ ಆಗುವ ಮುಖಾಮುಖಿ, ಸುದ್ದಿಯ ಒಳಗಿನ ಸುದ್ದಿ ನೋಡುವುದು, ಮಸ್ಕಿಯಂತ ಗ್ರಾಮ ಹಳ್ಳಿಯೂ ಅಲ್ಲದ ಮಹಾನಗರವು ಅಲ್ಲದ ಪಟ್ಟಣದಹಳ್ಳಿಯಂತಿರುವ ಗ್ರಾಮದಲ್ಲಿ ಕುಳಿತಿರುವ ನನ್ನೊಂದಿಗೆ ಕರ್ನಾಟಕ ಅಷ್ಟೆ ಅಲ್ಲ ವಿದೇಶದಲ್ಲಿರುವ ಕನ್ನಡಿಗರನ್ನು e-ಸುದ್ದಿ ಯ ಜತೆಗೆ ಬಂಧಿಸಿ ಬೆಸೆದಿದೆ. ಅಷ್ಟೆ ಅಲ್ಲ ಅವರೊಂದಿಗೆ ಭಾವನಾತ್ಮಕವಾಗಿ ಒಂದಾಗಿಸಿದೆ. ಅಗಾಧತೆ ಮೆರೆದಿದೆ. ಇಷ್ಟು ಸಾಕಲ್ಲವೇ ಸಾರ್ಥಕತೆಗೆ.
ಅಪ್ಪನ ದಿನಾಚರಣೆಯ ದಿನದ ಗುಂಗಿನಲ್ಲಿ ಇಷ್ಟೆಲ್ಲ ಹಂಚಿಕೊಂಡಿರುವದಕ್ಕೆ ತಮಗೆಲ್ಲ ನನ್ನ ಶಿರಸಾಸ್ಟಾಂಗ ನಮಸ್ಕಾರಗಳು 🙏🙏🙏
–ವೀರೇಶ ಸೌದ್ರಿ ಮಸ್ಕಿ
ಸಂಪಾದಕ e-ಸುದ್ದಿ
ತುಂಬಾ ಚೆನ್ನಾಗಿದೆ ಸರ್ tt