ಅಪ್ಪ‌ ಕಣ್ಣೀರಿಟ್ಟ ಕ್ಷಣ

 

ಅಪ್ಪ‌ ಕಣ್ಣೀರಿಟ್ಟ ಕ್ಷಣ

ಅಪ್ಪನ ಮಾತು ತಿರಸ್ಕರಿಸಿ ಗುಲ್ಬರ್ಗ ಕ್ಕೆ ಹೋಗಿ ಎಂ‌ಎ ಇತಿಹಾಸ ಮಾಡಿ ಮನೆಗೆ ಬಂದದ್ದಾಯ್ತು.ಅಪ್ಪನ ಆಸೆ ನಾನು ಬಿಇಡಿ ಮಾಡಬೇಕೆಂಬುದಿತ್ತು.ಈಗೇನಾಯ್ತು ಈಗಲಾದರೂ ಬಿಇಡಿ ಮಾಡು ಎನ್ನುವುದು ಅಪ್ಪನ‌ ಅಹವಾಲು.

ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಪೂಜ್ಯ ಸಂಗನ ಬಸವ ಮಹಾಸ್ವಾಮಿಗಳ ಸನ್ನಿಧಿಗೆ ಹೋಗೋಣ. ಅವರ ಹೆಸರಿನ ಮೇಲಿರುವ ಕಾಲೇಜು. ಅವರು ಹೇಳಿದರೆ ಫ್ರೀ ಸೀಟು ನಿನಗೆ ಸಿಗಬಹುದು. ಡೊನೇ಼ಷನ್ ಕಟ್ಟಲು ನನ್ನಿಂದಾಗದು ಅಪ್ಪ ಮನದ ಮಾತನ್ನು ಹೇಳಿದರು. ಸ್ವಾಮೀಜಿ ಯವರನ್ನು ಕಾಣಲು ಬಳ್ಳಾರಿ ಗೆ ಕರೆದುಕೊಂಡು ಹೋದರು.

ಮಠದಲ್ಲಿ ಸ್ವಾಮೀಜಿ ಗಳ ದರ್ಶನ ಆಯ್ತು. ಕೇವಲ ಕೆಲವೇ ಭಕ್ತರಿದ್ದರು. ಅಪ್ಪಾಜಿ ಪರಿಚಯ ಮಾಡಿಕೊಂಡು ನನ್ನನ್ನು ಪರಿಚಯಿಸಿ ಉಚಿತ ಸೀಟು ನೀಡಲು ಪ್ರಾರ್ಥಿಸಿದರು. ಸ್ವಾಮೀಜಿಯವರು ಎಲ್ಲ ಕೇಳಿಸಿಕೊಂಡರು ನಂತರ ನನ್ನನ್ನು ಉದ್ದೇಶಿಸಿ

“ಏನಯ್ಯಾ ನಿನಗೆ ಸೀಟ್ ಬೇಕಾ? ನಮ್ಮ ಮಠಕ್ಕೆ ಏನ್ ಸೇವೆ ಮಾಡಿದ್ದೀಯಾ ನೀನು?ನೀನು ಹೀಗೆ ಬಂದು ಸೀಟ್ ಕೇಳಿದರೆ ನಾನು ಕೊಟ್ ಬಿಡಬೇಕಾ?ಏನಾಗಿದೆ ನಿನಗೆ ಧಾಡಿ ತಾಲೂಕ ಕಛೇರಿ ಮುಂದೆ ಸ್ಟಾಂಪ್ ಮಾರು.ಇಲ್ಲ ನಮ್ಮ ಮಠದಲ್ಲಿ ಎರಡು ವರ್ಷ ಕಸ ಹೊಡಿ” ಇನ್ನು ಅನೇಕ ಮಾತುಗಳನ್ನಾಡಿದರು.

ಅವರು‌ ಅಂದ್ಯಾಕೋ ಬಹಳ ಸಿಟ್ಟಿನಿಂದ ಇದ್ದರು..ಸುಮಾರು ‌ಇಪ್ಪತ್ತು ನಿಮಿಷಗಳ ಕಾಲ‌ ನಿರರ್ಗಳವಾಗಿ ಬೈದರು..ನಾನು ಏನನ್ನೂ ಮಾತನಾಡದೇ ಸುಮ್ಮನೇ ಕುಳಿತಿದ್ದೆ.ಅಪ್ಪ ನನ್ನ ಮುಖವನ್ನೊಮ್ಮೆ ನೋಡಿದರು.ನನ್ನ ಕಂಗಳು ಒದ್ದೆಯಾಗಿದ್ದವು.ತಾನೇ ಸ್ವಾಮೀಜಿಯವರ ಬಳಿ ಕರೆದುಕೊಂಡು ಬಂದು ಮಗನಿಗೆ ಬೈಸಿಬಿಟ್ಟೆ ಎನಿಸಿರಬೇಕು ಅಪ್ಪನಿಗೆ..

ಸ್ವಾಮೀಜಿ ಒಳಹೋದರು.ಅಪ್ಪಾಜಿ ನನ್ನ ಮುಖ ನೋಡಿ ತಲೆಯ ಮೇಲೆ ಕೈಯಾಡಿಸಿ

“ಬೇಸರ ಆಗಬೇಡಪ್ಪಾ.ನಾನೊಬ್ಬನೇ ಬರಬೇಕಿತ್ತು.ನಿನ್ನ ಕರ್ಕೊಂಡು ಬಂದು ತಪ್ಪು ಮಾಡಿದೆ.ನಾನು ಅವರೇನಂದ್ರೂ ಸಹಿಸಿಕೊಳ್ತಿದ್ದೆ.ನೀನು ದಯಮಾಡಿ ನನ್ನ ಹಾಗೆ ಸಹಿಸಿಕೋ..ನಿನಗೆ ಖಂಡಿತವಾಗಿ ನೋವಾಗಿದೆ.ಅದಕ್ಕೆ ಹೊಣೆಗಾರ ನಾನು” ಅಪ್ಪನ ಕಂಗಳು ಹನಿಗೂಡಿದವು.

“ಸ್ವಾಮೀಜಿಯವರು ಸರಿಯಾದ ಮಾತನ್ನೇ ಹೇಳಿದ್ದಾರೆ ಇದರಲ್ಲಿ ನಿನ್ನ ತಪ್ಪೇನೂ ಇಲ್ಲ ಅಪ್ಪ. ನನಗೆ ಬೇಸರ ಆಗಿಲ್ಲ.ಹಣ ನಮಗಿದ್ದಿದ್ದರೆ ಅಪಮಾನ ಅವಮಾನ ಯಾಚನೆ ಇವು ಯಾವುವೂ ನಮಗಿರ್ತಿರಲಿಲ್ಲ.ನಮ್ಮ ಸ್ಥಿತಿಯೇ ಅಂತಹದ್ದು..ಅವರ ಮಾತುಗಳಿಂದ ನನಗೆ ಬೇಸರ ಆಗಿಲ್ಲ.ನೀನು ಬೇಸರ ಆಗಬೇಡ ಅಪ್ಪ”ಅಂದೆ

ಅಪ್ಪ ಚಿಕ್ಕ ಮಗುವಂತೆ ಅತ್ತುಬಿಟ್ಟ..ಅಪ್ಪ ನ ಕಣ್ಣೀರು ನನ್ನನ್ನೂ ಇನ್ನಷ್ಟು ಅಳಿಸಿತು ನನ್ನ ಜನ್ಮದಾತ,ಅನ್ನದಾತ,ಅಕ್ಷರ ಕಲಿಸಿದ ಗುರು ನನ್ನ ಅಪ್ಪ ..ದೇವರೇ ಅಳುತ್ತಿದ್ದಾನೇನೋ ಅನ್ನಿಸಿತು..

#ಮಹಿಮ

Don`t copy text!