ಶಾಂತಿ ಸಿಗುವುದೆಲ್ಲಿ ?

ಶಾಂತಿ ಸಿಗುವುದೆಲ್ಲಿ ?

ಬಾಳಹಾದಿಯಲಿ ನೂರೆಂಟು ಕಗ್ಗಂಟು
ಬಿಡಿಸಬಹುದೇನು ಒಂದೇ ಕ್ಷಣದಿ..?

ಜಂಜಡದ ಬದುಕಿನಲಿ ಕಷ್ಟಗಳೋ ಎಷ್ಟು
ದೂರವಾಗುವವೇ ಒಂದೇ ದಿನದಿ..?

ಧಾವಂತ ಜೀವನದಿ ನೋವು-ಗಾಯಗಳೆಷ್ಟು
ಮಾಯುವವೇ ಎಲ್ಲವೂ ಒಂದೇ ಗಳಿಗೆಯಲಿ..?

ಸುಖದ ತುತ್ತು ಬಾಯ್ಗೆ ಬರುವ ಮುನ್ನ
ಜಾರಿ ಬಿದ್ದಿಹುದು ಕಾಲಧೂಳಿಯಲಿ..

ಕಂಡ ಕನಸುಗಳೆಲ್ಲ ನನಸಾಗಿ ಹೋದರೆ
ನಿಲಬಹುದೇ ಕಾಲ್ಗಳು ನೆಲದ ಮೇಲೆ..?

ಆಸೆ-ವ್ಯಾಮೋಹದ ಬಲೆ ಹೆಣೆದು ಹೆಣೆದು
ಬಂಧಿಯಾಗಿಹೆ ನಿನಗೆ-ನೀನೇ ಹೌದೇ..?

ತೀರದಾಸೆಗಳ ದಾಹ ಹೆಚ್ಚುತ್ತಿರಲು
ದೂರವಾಗಿದೆ ನೋಡು ನಿನ್ನ ನೆಮ್ಮದಿಯು..!

ಅಹಮಿಕೆಯ ಅರಮನೆಯ ರಂಗಿನಲ್ಲಿ
ಮರೆತಿಹೆ ಸದ್ಭಾವ ಸನ್ನಡತೆ ನೀನು..

ಇಬ್ಬಗೆಯ ಆಚಾರ ಅನೀತಿಯೊಳು ಸಿಲುಕಿ
ಕಲ್ಮಶದ ಪಾಚಿ ಬೆಳೆದಿದೆ ಮನದಿ..

ಶಾಂತಿ ಸಿಗುವುದೆಲ್ಲಿ…ನಿನಗೆ
ಸಮಚಿತ್ತ ಭಾವದಲಿ ನೆಲೆಸಿಹುದು ಶಾಂತಿ..!!

-ಹಮೀದಾ ಬೇಗಂ ದೇಸಾಯಿ ಸಂಕೇಶ್ವರ. 

Don`t copy text!