e-ಸುದ್ದಿ, ಮಸ್ಕಿ
ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಭಾನುವಾರ ಬೆಳಗಿನ ಜಾವದ ವರೆಗೆ ಸತತವಾಗಿ ಸುರಿದ ಮಳೆಗೆ ಮಸ್ಕಿ ಪಟ್ಟಣದ ಕೆಲ ಬಡವಾಣೆಗಳ ಜನರು ತತ್ತರಗೊಂಡಿದ್ದಾರೆ. ಮನೆಗಳು ಕುಸಿತಗೊಂಡಿವೆ. ದನಕರು, ಮೇಕೆ, ಕೊಳಿಗಳು ಸತ್ತು ಜನ ಜೀವನ ಅಸ್ತವ್ಯಸ್ತಗೊಂಡ ಘಟನೆ ಜರುಗಿದೆ.
ಪಟ್ಟಣದಲ್ಲಿ ಕೆಲ ಬಡವಾಣೆಗಳಲ್ಲಿ ಮಳೆ ನೀರು ನುಗ್ಗಿವೆ. ಗಾಂಧಿನಗರ, 17ನೇ ವಾರ್ಡನ ಬಾಳೆಕಾಯಿ ಮಿಲ್ಲಿನ ಹಿಂದಗಡೆ ಭಾಗದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ತೊಂದರೆಯಾಗಿದೆ. ಗಾಂಧಿನಗರದಲ್ಲಿ 4 ಮನೆಗಳು ಬಿದಿದ್ದು, 15 ರಿಂದ 20 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಧವಸ ಧಾನ್ಯಗಳು ಹಾಳಾಗಿವೆ.
ಮಸ್ಕಿ ಸಮೀಪದ ಶಂಕರನಗರ ಕ್ಯಾಂಪಿನಲ್ಲಿ 10 ಮೇಕೆಗಳು ಮತ್ತು ಕೊಳಿಗಳು ಮಳೆಯ ರಭಸಕ್ಕೆ ರಾತ್ರಿ ಸಾವಿಗೀಡಾಗಿವೆ. ಬೆಳಗಾಗುವಷ್ಟರಲ್ಲಿ ಮನೆ ಮುಂದೆ ಮೇಕೆ ಕೊಳಿಗಳು ಸತ್ತು ಬಿದ್ದು ಗ್ರಾಮಸ್ಥರು ಆತಂಕಕ್ಕೆ ಸಿಲುಕುವಂತಾಯಿತು.
ಭೇಟಿ ಃ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮತ್ತು ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಅವರು ಪ್ರತೇಖವಾಗಿ ಗಾಂಧಿನಗರ ಹಾಗೂ ಕಂಬಾಳಿಮಠ ಲೇ ಔಟ್‍ನ ತಗ್ಗಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಆಲಿಸಿದರು. ತಹಸೀಲ್ದಾರ ಕವಿತಾ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದರು.
ಹರಿದು ಹೋದ ಬೈಕ್ ಃ ಮಸ್ಕಿ ತಾಲೂಕಿನ ಹಾಲಪೂರು ಗ್ರಾಮದಲ್ಲಿ ಹಳ್ಳದ ಮೇಲೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಹಳ್ಳಕ್ಕೆ ಹರಿದುಕೊಂಡು ಹೋಗಿದೆ.
ಮಲ್ಲಪ್ಪ, ಬಸವರಾಜ, ಶರಣಬಸವ, ಶರಣು ಎಂಬ ನಾಲ್ಕು ಜನ ಯುವಕರು ಹಾಲಪೂರು ಗ್ರಾಮದ ಹಳ್ಳ ದಾಟುತ್ತಿರುವಾಗ ಸುರಕ್ಷಿತವಾಗಿ ಪಾರಾಗಿದ್ದಾರೆ.