ಮತ್ತೆ ಹುಟ್ಟಿಬಾ ತಾಯೆ

 

ಮತ್ತೆ ಹುಟ್ಟಿಬಾ ತಾಯೆ

ನಿನ್ನ ಮನೆಯಂಗಳದಿ
ಬೆಳೆದ ಕಂದನು ನಾನು !
ನನ್ನ ಆಗಲಿದೆ ತಾಯೆ
ಎಲ್ಲಿ ಹೋದೆ ?

ನವ ಮಾಸಗಳು ನಿನ್ನ
ಗರ್ಭದಲಿ ಬಚ್ಚಿಟ್ಟು !
ನರಕಯಾತನೆ ಸಹಿಸಿ
ಭುವಿಗೆ ತಂದೆಯಾ ನನ್ನ ?

ಎದೆಯ ಹಾಲನು ಕುಡಿಸಿ
ಲಾಲಿ ಹಾಡನು ಹಾಡಿ !
ರಕ್ಷಣೆಯ ಗೂಡಿನಲಿ
ಬೆಳೆಸಿದೆಯ ನನ್ನ ?

ಪುಟ್ಟ ಹೆಜ್ಜೆಗಳಿಡುತ
ಪುಟ್ಟಿಯಾದೆನು ನಾನು !
ತೊದಲು ನುಡಿಗಳ ನಂಗೆ
ಕಲಿಸಿಕೊಟ್ಟೆಯಾ ಅಮ್ಮ ?

ಕರುಳಕುಡಿಯನು ನಿನ್ನ
ಮಡಿಲಿನಾಸರೆ ಕೊಟ್ಟು !
ಕಣ್ಣಿಟ್ಟು ಕಾಪಾಡಿ
ಸಲುಹಿದೆಯಾ ತಾಯೆ ?

ಬಾಲ್ಯ ಮುಗಿಯಿತು ಮಗಳೇ
ಪ್ರೌಢ ಹೆಂಗಸು ನೀನು !
ಶೀಲವದು ಬಲು ಸೂಕ್ಷ್ಮ
ಕಿವಿಮಾತು ಹೇಳಿದೆಯಾ ?

ಓದು ಮುಗಿಯಿತು ನಿಂದು
ಮದುವೆ ಮಾಡುವೆ ಎಂದು !
ಕಳಿಸಿ ಬಿಟ್ಟೆಯಾ ನನ್ನ
ಅತ್ತೆ ಮನೆಗೆ ?

ಮಕ್ಕಳಾದವು ನಂಗೆ
ಅಜ್ಜಿಯಾದೆಯಾ ನೀನು !
ನನ್ನ ಬಾಳನು ನೋಡಿ
ಖುಷಿ ಪಟ್ಟೆಯಾ ?

ದಿನವು ಉರುಳುತಳಿಹವು
ಅಪ್ಪ ಹಾಸಿಗೆ ಹಿಡಿದ !
ಪತಿಯ ಸೇವೆಗೆ ನಿನ್ನ
ಮೀಸಲಿಟ್ಟೆಯಾ ತಾಯೆ ?

ಮುಪ್ಪು ಆವರಿಸಿತ್ತು
ದೇಹ ದಣಿಯುತಲಿತ್ತು !
ಚಿರನಿದ್ರೆಯನು ನೀನು
ಬಯಸಿದೆಯಾ ತಾಯೇ ?

ನಿನ್ನ ಅಗಲಿಕೆಯನ್ನು
ಸಹಿಸಲಾರೆವು ನಾವು !
ಹುಟ್ಟಿ ಬಾ ಮತ್ತೆ ನೀ
ಮೊಮ್ಮಕ್ಕಳ ಉದರದಲಿ

ವೀಣಾ ಆನಂದ ಕುಲಕರ್ಣಿ
ಪುಣೆ

Don`t copy text!