ಪ್ರಕೃತಿಯ ಆರಾಧಕಳು ಅಕ್ಕ

ಪ್ರಕೃತಿಯ ಆರಾಧಕಳು ಅಕ್ಕ

ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು ಆಧ್ಯಾತ್ಮಿಕ ಮತ್ತು ಬೌದ್ಧಿಕ ಅನುಭೂತಿಯ ಸಮಾಗಮ ಎಂದು ಹೇಳಬಹುದು. ಪ್ರಕೃತಿಯಲ್ಲಿ ಕಾಣಬರುವ ಈ ವ್ಯವಸ್ಥೆ ಭೂಮಿಯಿಂದ ಫಲ, ಆ ಫಲದ ಮೂಲಕ ಆಹಾರ, ಆಹಾರದಿಂದ ಮಾನವ ಶರೀರ, ಮತ್ತು ಪುನಃ ಈ ಶರೀರ ಮಣ್ಣಾಗಿಯೇ ಬದಲಾಗುತ್ತದೆ. ಹೀಗಾಗಿ ಅಕ್ಕನಲ್ಲಿ ಕಂಡು ಬರುವ ಪ್ರಕೃತಿಯ ಆರಾಧನೆ ಎಂದರೆ ಸಂಸಾರದಿಂದ ವಿರಕ್ತಿಯ ಮೂಲಕ ಬಿಡುಗಡೆಯಾಗುವುದಲ್ಲ. ಆಕೆಯ ಪ್ರಕಾರ ಸಾಂಸಾರಿಕ ಜೀವನ ಮತ್ತು ಆಧ್ಯಾತ್ಮಿಕ ಭಕ್ತಿಯನ್ನು ಬದಲಿಸಲು ಸಾದ್ಯವಾಗದ ಅನುಭಾವದ ಅನುಬಂಧ.

ಆಧ್ಯಾತ್ಮದ ಆರಾಧನೆ ಮಾಗಿದ ಜೀವನದ ಬದುಕಿನ ಸಾರ. ಬದುಕಿನ ತಿರುಳನ್ನೇ ಆಸ್ವಾದಿಸುವ ಒಂದು ಆಂತರಿಕ ಪ್ರಕ್ರಿಯೆಯನ್ನು ಅಕ್ಕನಲ್ಲಿ ಮಾತ್ರ ಕಾಣಲು ಸಾದ್ಯವಾಗುತ್ತದೆ. ಶಿವನನ್ನೇ ತೀವ್ರವಾಗಿ ಪ್ರೀತಿಸಿ ಶೃಂಗಾರ ಮಾತುಗಳ ಮೂಲಕ ಸತಿಪತಿ ಭಾವವನ್ನು ಘನೀಕೃತವಾಗಿ ಅಭಿವ್ಯಕ್ತಿಸುತ್ತಾಳೆ. ಹಾಗೆ ನೋಡಿದರೆ ಭಕ್ತಿಕಾವ್ಯ ಪರಂಪರೆಯಲ್ಲಿ ಅಕ್ಕ ಮತ್ತು ಮೀರಾಬಾಯಿ ಜೀವನದ ಸಾಂದರ್ಭಿಕ ಸನ್ನಿವೇಶಗಳು ಒಳ್ಳೆಯ ಉದಾಹರಣೆಗಳೆಂದು ಹೇಳಬಹುದು.

12 ನೇ ಶತಮಾನದ ಸ್ತ್ರೀ ಸ್ವಾಭಿಮಾನ ಚಳುವಳಿಯ ಮೊದಲ ಹಕ್ಕು ಪ್ರತಿ ಪಾದಕಳು ಎಂದರೆ ಅಕ್ಕನೇ ಆಗಿದ್ದಾಳೆ. ಅವಳು ನಡೆದು ಬಂದ ದಾರಿ ಘೋರ ದುರ್ಗಮ. ಬದುಕಿನ ಕಂದಕಗಳನ್ನು ದಿಟ್ಟವಾಗಿ ಎದುರಿಸಿ ಪುರುಷವರ್ಗ ಸಮಾಜಕ್ಕೆ ಪ್ರತ್ಯುತ್ತರ ನೀಡಿದಾಕೆ.ಅಕ್ಕನಿಗೆ ಎರಡು ರೀತಿಯ ಹೋರಾಟಗಳು.
1. ಆಂತರಿಕ ಹೋರಾಟ
2. ಲೌಕಿಕದ ಹೊಯ್ದಾಟ

ಸಾಂಪ್ರದಾಯಿಕ ಚೌಕಟ್ಟನ್ನು ತೊರೆದು ಬಂದ ಅಕ್ಕನಿಗೆ ದೇಹಭಾವದ ಮೂಲಕ ಶಿವನನ್ನು ಕಾಣುವ ತವಕ. ಕಲ್ಯಾಣದಿಂದ ಶ್ರೀಶೈಲದ ಮಾರ್ಗದಲ್ಲಿ ತನ್ನ ಗುರುವನ್ನು ಅರಸುತ್ತಾ ಹೋಗುವ ಪಯಣದಲ್ಲಿ ಆಕೆಗೆ ಸಾಕಷ್ಟು ಕಷ್ಟಗಳು.ಅನೇಕ ಕಾಮುಕ ಕಣ್ಣುಗಳು ಆಕೆಯನ್ನು ಹಿಂಬಾಲಿಸಿದಾಗ, ಅನೇಕ ವಚನಗಳ ಮೂಲಕ ಪ್ತತ್ಯುತ್ತರ ಕೊಡುತ್ತಾ ಸಾಗುತ್ತಾಳೆ. “ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ. ಏರಿಲ್ಲದ ಗಾಯದಲ್ಲಿ ನೊಂದೆನವ್ವಾ. ಸುಖವಿಲ್ಲದ ಧಾವತಿಗೊಂಡೆನವ್ವಾ”. ಅಕ್ಕನಿಗೆ ದೇಹದ ಗಾಯಕ್ಕಿಂತ ಮನದ ಗಾಯ ಅತೀ ಭೀಕರವಾಗಿತ್ತು. ಆಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದ ಅತಂತ್ರ ಸ್ಥಿತಿಯಾಗಿತ್ತು. ನಿರಾಕರನಾದ ಚೆನ್ನಮಲ್ಲಿಕಾರ್ಜುನನನ್ನು ಪ್ರಕೃತಿಯಲ್ಲಿ ಕಾಣುವ ತವಕ ಪ್ರೀತಿ ದಟ್ಟವಾದ ಮನಸಸ್ಥಿತಿ ಆಕೆಯದು.

ಒಡಲ ಕಳವಳಕ್ಕಾಗಿ | ಅಡವಿಯ ಪೊಕ್ಕೆನು ||
ಗಿಡು ಗಿಡುದಪ್ಪದೆ | ಬೇಡಿದೆನೆನ್ನಂಗಕ್ಕೆಂದು ||
ಅವು ನೀಡಿದವು | ತಮ್ಮ ಲಿಂಗಕ್ಕೆಂದು ||
ಆನು ಬೇಡಿ | ಭವಿಯಾದೆನು ||
ಅವು ನೀಡಿ | ಭಕ್ತರಾದವು ||
ಇನ್ನು | ಬೇಡಿದೆನಾದಡೆ ||
ಚೆನ್ನಮಲ್ಲಿಕಾರ್ಜುನ | ನಿಮ್ಮಾಣೆ ||

ಅಕ್ಕ ಪ್ರಕೃತಿಯಲ್ಲಿ ವಿಜ್ಞಾನದ ಸತ್ಯವನ್ನು ಮತ್ತು ಸೌಂದರ್ಯದ ಹುಡುಕಾಟ ನಡೆಸುತ್ತಾಳೆ. ತಾಯಿಯಾಗಿ ಬಹಿರಂಗದ ಹುಡುಕಾಟದಲ್ಲಿ ಬೆಟ್ಟ, ಗುಡ್ಡ, ಮರ, ತೊರೆ, ಗಿಡ, ಬಳ್ಳಿ, ಭುವಿ, ಆಕಾಶ, ಹೂ, ಪಶು, ಪಕ್ಷಿ, ವನಸಂಕುಲಕ್ಕೆಲ್ಲಕ್ಕೂ ತಾಯಿಯಂತೆ ಅಪ್ಪಿಕೊಳ್ಳುತ್ತಾಳೆ. ಪ್ರಕೃತಿಯಲ್ಲಿ ಭಕ್ತಳಾಗುತ್ತಾಳೆ. ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ನಿರೂಪಕಳಾಗುತ್ತಾಳೆ. ಆಧ್ಯಾತ್ಮದ ತಳಹದಿಯೇ ವಿಜ್ಞಾನ. ಪ್ರಕೃತಿ ಪ್ರಧಾನವಾದ ಜಗತ್ತನ್ನು ಸೃಷ್ಟಿಸಿದ ಅಕ್ಕನ ವಚನಗಳು ವಿಜ್ಞಾನದ ಮೂಲಕ ಪ್ರಕೃತಿಯ ಕಥನಕ್ಕೊಂದು ಆರ್ಥತೆ ಕೊಡುತ್ತಾಳೆ. ಭಾವೋಪಾಸಕಳಾಗಿ ಸಂವಾದ ಮಾಡುತ್ತಾಳೆ. ಘೋರ ದುರ್ಗಮವಾದ ಕಾಡಿನಲ್ಲಿ ಅಕ್ಷರೋಪಾಸಕಳಾಗಿ ಪ್ರಕೃತಿಯ ಅಂತಃಕರಣದ ಪ್ರೀತಿಯಲ್ಲಿ ಕವಿಯತ್ರಿಯಾಗುತ್ತಾಳೆ.

ಒಡಲ ಹಸಿವೆಗಾಗಿ ಭವಾರಣ್ಯವೆಂಬ ಕಾಡನ್ನು ಹೊಕ್ಕೆ, ತನುಗುಣದ ದಾಹದಲ್ಲಿ ತನ್ನ ನಿರ್ಮಲವಾದ ಮನದಲ್ಲಿ, ಎನ್ನ ಅಂಗದ ಲಿಂಗಕ್ಕೆ ಹಸಿವಾಗಿದೆ ಎನ್ನುತ್ತಾಳೆ. ಲಿಂಗವಾದ ಚೆನ್ನಮಲ್ಲಿಕಾರ್ಜುನ ಹಸಿದಿದ್ದಾನೆ. ಅಂತರಂಗದ ಒಡಲ ಹಸಿವು ತೀವ್ರವಾದಾಗ “ಗಿಡು ಗಿಡು ದಪ್ಪದೆ ಬೇಡಿದೆ ಎನ್ನಂಗಕ್ಕೆಂದು” ಕಾವ್ಯ ರೂಪಕ ಕೊಡುತ್ತಾಳೆ. ಪ್ರಕೃತಿಯಲ್ಲಿ ತಾಯಿ ಭಾವ ಕಾಣುವುದು ಒಬ್ಬ ಸ್ತ್ರೀಗೆ ಮಾತ್ರ ಸಾದ್ಯ. ಇಂತಹ ಭಾವ ತೀವ್ರತೆಯಲ್ಲಿ ಪರಿಸರದ ಫಲವನ್ನು, ಜಲವನ್ನು ಆತ್ಮೀಯತೆಯ ಮೂಲಕ ದೈವವಾಗಿ ಕಾಣುತ್ತಾಳೆ. ಒಡಲಿನ ಹಸಿವಿನ ಅಂಗಕ್ಕೆ ಬೇಡಿ ಭವಿಯಾದೆನಲ್ಲಾ ಎಂಬ ನೋವು ಅಕ್ಕನಿಗಾಗಿದೆ. ಪ್ರಕೃತಿಯ ಮುಂದೆ ಅಂಗಲಾಚಿ ಬೇಡಿ ಅಪರಾಧಿ ಪ್ರಜ್ಞೆಗೆ ಒಳಗಾದೆ. ಒಡಲ ಸಂಸಾರದ ತೃಷೆಯಲ್ಲಿ ತನುಗುಣಕ್ಕೆ ವಶವಾದೆನಲ್ಲಾ ಎಂದು ತತ್ವೀಕರಿಸಿ ಕಳವಳ ಪಡುತ್ತಾಳೆ. ಮನದ ಒಡೆಯನಲ್ಲಿ ಕ್ಷಮೆಯಾಚಿಸುತ್ತಾ ಇನ್ನು ಬೇಡಿದೆನಾದೊಡೆ ನಿಮ್ಮಾಣೆ ಎಂದು ಶರಣಾಗುತ್ತಾಳೆ. ಚೆನ್ನಮಲ್ಲಿಕಾರ್ಜುನನಲ್ಲಿ ಶರಣೆಂದು ಬಾಗುವ ಪರಿ ಆಕೆಯದು. ಅಡವಿ, ಆಕೆಗೆ ಪ್ರಕೃತಿಯ ಲಿಂಗ. ತನ್ನ ಮನದೊಡೆಯನನ್ನು ಅಂಗ ಲಿಂಗ ಸಂಬಂಧಿಯಾಗಿಸಿಕೊಂಡು ಇಡೀ ಕಾಡಿನ ಪರಿಸರವನ್ನು ಲಿಂಗಮಯವಾಗಿಸಿ ಲಿಂಗಕ್ಕೆಂದು ಆನು ಬೇಡಿದೆ. ಒಡಲ ಕಳವಳಕ್ಕಾಗಿ ಅಡವಿಯು ಅಕ್ಕನಲ್ಲಿ ಶರೀರವಾಗಿದೆ. ಅಕ್ಕನ ಆಧ್ಯಾತ್ಮಿಕ ಪಯಣವು ಪ್ರಕೃತಿಯ ತನ್ಮಯತೆಯನ್ನು ಪಿಂಡಾಂಡದಲ್ಲಿ ಕಾಣುವ ಅನುಭಾವಿಕ ರೂಪಕಗಳೆಂದು ಹೇಳಬಹುದು.

ಅಕ್ಕ ಚೆನ್ನಮಲ್ಲಿಕಾರ್ಜುನನ ಜೊತೆ ಸಂವಾದಿಸುವಾಗ ಸಂಸಾರದ ಪ್ರತಿಮೆಯ ರೂಪಕಗಳನ್ನು ದಟ್ಟವಾಗಿ ಮುಂದು ಮಾಡುತ್ತಾಳೆ. ತನ್ನ ಹೃದಯ ಕಮಲದಲ್ಲಿ ಲಿಂಗಾತ್ಮನಾದ ಚೆನ್ನಮಲ್ಲಿಕಾರ್ಜುನನಿರುವುದರಿಂದ ಆಕೆಗೆ ಲೌಕಿಕ ಸ್ವಾತಂತ್ರ್ಯ ಅಡ್ಡಿಯಾಗುತ್ತದೆ. ಹೀಗಾಗಿ ಅಕ್ಕನಿಗೆ ತನ್ನ ಮನದಲ್ಲಿ ವಚನ ಹುಟ್ಟಲು ಸಾದ್ಯವಾಗುವುದಿಲ್ಲ. ಏಕೆಂದರೆ ಒಂದೆಡೆ ಸಮುದ್ರ ಇನ್ನೊಂದೆಡೆ ಪ್ರಕೃತಿ. ಮನದ ಆಂತರ್ಯದಲ್ಲಿ ಮನದೊಡೆಯನ ಪ್ರತಿರೂಪ. ಇಂತಹ ಸಂವೇದನಾತ್ಮಕ ಮನದಿಂದ ಒಂಟಿಯಾಗಿ ಕಾಡನ್ನು ಪ್ರವೇಶಿಸುತ್ತಾಳೆ. ಬೆಟ್ಟ, ಗುಡ್ಡ, ಸಮುದ್ರಗಳ ಆಸರೆಯಲ್ಲಿ ಭಾವನಾತ್ಮಕ ರಕ್ಷಣೆ ಪಡೆಯುತ್ತಾ ಗೀತಾತ್ಮಕವಾಗಿ ವಚನಗಳನ್ನು ಬರೆಯಲು ಪ್ರಾರಂಭಿಸುತ್ತಾ, ಸಾಗುವ ಒಂದು ನಿಗೂಢ ಪಯಣದ ಈ ವಚನ.

ಬೆಟ್ಟದಾ ಮೇಲೊಂದು | ಮನೆಯ ಮಾಡಿ ||
ಮೃಗಗಳಿಗೆ | ಅಂಜಿದೊಡೆಂತಯ್ಯಾ ||
ಸಮುದ್ರದಾ ತಟದಲ್ಲೊಂದು | ಮನೆಯ ಮಾಡಿ ||
ನೊರೆ | ತೊರೆಗಳಿಗಂಜಿದಡೆಂತಯ್ಯಾ ||
ಸಂತೆಯೊಳಗೊಂದು | ಮನೆಯ ಮಾಡಿ ||
ಶಬ್ದಕ್ಕೆ | ನಾಚಿದೊಡೆಂತಯ್ಯಾ ||
ಚೆನ್ನಮಲ್ಲಿಕಾರ್ಜುನ | ದೇವಾ ಕೇಳಯ್ಯಾ ||
ಲೋಕದೊಳಗೆ | ಹುಟ್ಟಿದ ಬಳಿಕ ||
ಸ್ತುತಿ ನಿಂದೆಗಳು | ಬಂದಡೆ ||
ಮನದಲ್ಲಿ ಕೋಪವ ತಾಳದೆ | ಸಮಾಧಾನಿಯಾಗಿರಬೇಕು ||

ಈ ವಚನ ಭಾಷಾ ವಿಶ್ಲೇಷಣೆಗೆ ಲೌಕಿಕ ಕಾವ್ಯ ಮೀಮಾಂಸೆಗೆ ತುಂಬಾ ಹತ್ತಿರದ ಉಪಯುಕ್ತ ಗುಣಗಳಿದ್ದರೂ ಲೌಕಿಕ ಚಿಂತನೆಯ ಮೂಲಕ ಆಧ್ಯಾತ್ಮಿಕ ತಳಹದಿಯಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಬೆಟ್ಟದಾ ಮೇಲೊಂದು ಮನೆಯ ಮಾಡಿ ಎನ್ನುವ ಲೌಕಿಕಾರ್ಥವನ್ನು ಮುಂದು ಮಾಡಿದರೂ ಆಧ್ಯಾತ್ಮ ಮತ್ತು ಲೌಕಿಕ ತೌಲನಿಕತೆಯಲ್ಲಿ ಕುತೂಹಲಕಾರಿ ವಿಷಯಗಳು ಗೋಚರಿಸುತ್ತವೆ. ಈ ಕಾಯದಲ್ಲಿ ಬ್ರಹ್ಮರಂದ್ರದಿಂದ ಆವೃತವಾದ ಅಮೃತದ ಶಿಖರವನ್ನೇರಿದೆ. ಮಾಯಾಪಿಂಡವೆಂಬ ಈ ದೇಹದಲ್ಲಿ ಇಂದ್ರಿಯ ಚಾಪಲ್ಯದ ಮೃಗಗಳು ವಾಸವಾಗಿವೆ. ಚಂಚಲವಾದ ಈ ಮನಸ್ಸು ಇಂದ್ರಿಯ ಸಂವೇದನೆಗಳಿಗೆ ವಶವಾಗಿದೆ. ಹೀಗಾಗಿ ಬದುಕೆಂಬ ಸಂತೆಯಲ್ಲಿ ಲೌಕಿಕದ ವ್ಯಾಪಾರವು ಮನದ ಆಂತರಿಕ ಸತ್ಯಕ್ಕೆ ಅರಿವಾಗಿದೆ.

ಅಕ್ಕ ಕಾಯದ ವಿಕಾರಗಳನ್ನು ನಿರ್ಲಕ್ಷಿಸಿದಾಕೆ. ಆದರೆ ಈ ದೇಹಕ್ಕೆ ತನ್ನದೇ ಆದ ಸೆಳೆತಗಳಿವೆ. ಈ ಶರೀರಕ್ಕೆ ಮೃಗದ ಗುಣಗಳು ಇವೆ ಎನ್ನುವುದೂ ಗೊತ್ತು. ಹೀಗಾಗಿ ತನ್ನ ಸುಪ್ತ ಮನದ ಪ್ರಣಯದ ಸಾಂಕೇತಿಕತೆಯನ್ನು ಚೆನ್ನಮಲ್ಲಿಕಾರ್ಜುನನ ಜೊತೆಗೆ ಸಂಸಾರದ ಪಾವಿತ್ರ್ಯತೆಯನ್ನು ಕೊಡುತ್ತಾಳೆ. ಆಧ್ಯಾತ್ಮ ಸಂಸಾರದ ಮೂಲಕ ಬೆಟ್ಟದ ಮೇಲಿನ ಒಡೆಯನನ್ನು ಕಾಣಲು ಸಾಧ್ಯವೆಂಬುದು ಆಕೆಯ ನಿರ್ಧಾರ. ಭಾವಗೀತೆಯ ಜೊತೆಗೆ ನಿಸರ್ಗದ ತನ್ಮಯತೆಯಲ್ಲಿ ಹಾಡಾಗಿಸಿಕೊಳ್ಳುತ್ತಾಳೆ. ಮೃಗಗಳಿಗಂಜಿದೊಡೆ ಎಂತಯ್ಯಾ. ಈ ವಾಕ್ಯ ನಾದಮಯ ಗೇಯತೆಯನ್ನು ಮುಂದು ಮಾಡುತ್ತದೆ. ಲೌಕಿಕ ಸಂಸಾರದಲ್ಲಿ ಮೃಗೀಯ ವ್ಯಕ್ತಿಗಳು ಮೃಗಗಳಾಗಿ ಕಾಡಿದಾಗ ಮನಕ್ಕೆ ಅಭಯವನ್ನು ನೀಡುತ್ತಾಳೆ. ಆಕೆಯ ಪ್ರಕಾರ ಸಂಸಾರದ ಬಂಧನಗಳನ್ನು ನಿರಾಕರಿಸಿದರೂ ತಾತ್ವಿಕ ಸಂಸಾರದ ತಳಹದಿಯ ತುರೀಯಾವಸ್ಥೆಯಲ್ಲಿ ಚೆನ್ನಮಲ್ಲಿಕಾರ್ಜುನನಿಗೆ ಅಕ್ಕ ಶರಣು ಎನ್ನುತ್ತಾಳೆ. ಶರಣಸತಿ ಲಿಂಗಪತಿಯಾಗಿ ಬೆಟ್ಟದ ಮೇಲೆ ಸಮುದ್ರದ ತಟದಲ್ಲಿ ಸಂಸಾರ ಹೂಡುತ್ತಾಳೆ. ಕೆಲವೊಮ್ಮೆ ಮನದಲ್ಲಿ ಉಂಟಾದ ವಿಕಾರ ಭಾವನೆಗಳಿಗೆ ಕರಗುತ್ತಾಳೆ. ನೊರೆ ತೊರೆ ವಿಕಾರ ಭಾವಗಳಾಗಿದ್ದರೂ ನಿರಾಕಾರನಾದ ಶಿವನನ್ನು ಕಾಣಲು ಸಾಧ್ಯವಿಲ್ಲವಾಗುತ್ತದೆ. ಮನದ ಬಡತನತಕ್ಕಂಜಿ ಊರು ಬಿಟ್ಟು ಕಾಡು ಸೇರಿದ ಜನರಿಗೆ ಹಿತೋಪದೇಶವನ್ನು ಹಂಚಿಕೊಳ್ಳುತ್ತಾಳೆ. ಬಡವರ ಪಾಲಿಗೆ ದೈತ್ಯವಾಗಿ ಅಪ್ಪಳಿಸುವ ಸಾಗರದಂತಹ ಕಷ್ಟಗಳು ಸ್ವಾಹಾ ಮಾಡುವ ಪರಿಕಲ್ಪನೆ ಇದಾಗಿದೆ.

ಆಕೆಗೆ ಕ್ಷಣಿಕ ಸಂಸಾರದ ವ್ಯಾಮೋಹದಲ್ಲಿ ಸ್ತುತಿ ನಿಂದೆಯ ಕಂಪನಗಳು ಮನಸ್ಸಿಗೆ ಕೆಡುಕಾಗಿ ಕಂಡರೂ ಆಧ್ಯಾತ್ಮದ ಪಯಣದಲ್ಲಿ ಹಾದಿತಪ್ಪಿದ ಮಗುವಿನಂತೆ ಚೆನ್ನಮಲ್ಲಿಕಾರ್ಜುನನ ಕಾಣುವ ಹಂಬಲದಲ್ಲಿ ಪ್ರಕೃತಿಗೆ ಶರಣಾಗುತ್ತಾಳೆ. ಬೆಟ್ಟಗುಡ್ಡ ನೊರೆ ತೊರೆ ಜೊತೆಗೆ ಸಂವಾದಿಸುತ್ತಾಳೆ. ಆಧ್ಯಾತ್ಮದ ಬದುಕೇ ಸಮುದ್ರದಷ್ಟು ವಿಶಾಲವಾದದ್ದು. ಶಬ್ದಕ್ಕೆ ನಾಚಿದೊಡೆಂತಯ್ಯ. ಎನ್ನುವ ಹೇಳಿಕೆಯಲ್ಲಿ ಶಬ್ದ ಮನದ ಕಣ್ತೆರೆದಾಗ ಬೆಳಗು. ಶಬ್ದವೇ ಇಲ್ಲಿ ಕವಿತೆಯಾಗಿದೆ. ಶಬ್ದ ಮಿಂಚಾಗಿ ಮನದ ಆಶ್ರಯದಲ್ಲಿ ಅಸಾಧಾರಣ ಪದಗಳು ಜೀವದುಂಬಿ ಮೊರೆಯುತ್ತವೆ. ಮನದ ಕತ್ತಲೆಗೆ ಶಬ್ದದ ಬೆಳಕಿಗೆ ದೈವೀಶಕ್ತಿಯ ಪ್ರಖರತೆ ಕೊಡುತ್ತಾಳೆ. ಅದೇ ಚೆನ್ನಮಲ್ಲಿಕಾರ್ಜುನ ದೇವಾ ಕೇಳಯ್ಯ ಎನ್ನುವುದು. ಆಕೆಗೆ ತನ್ನ ಮನದೊಡೆಯನೇ ಭೌತಿಕ ಸತ್ಯ. ಆತ ತನ್ನ ಪ್ರಜ್ಞೆಗೆ ಮತ್ತು ಭಕ್ತಿಗೆ ದಕ್ಕುವ ಸತ್ಯವಾಗಿದೆ. ಈ ಬೌದ್ಧಿಕ ಸತ್ಯಗಳಾಚೆ ಶಿವರಹಸ್ಯವಿದ್ದರೂ ಅದನ್ನು ದಾಟಲು ಪ್ರಕೃತಿಯ ಸತ್ಯವನ್ನು ಅರಿಯಬೇಕಾದ ಅನಿವಾರ್ಯತೆ ಇದೆ.

ಪ್ರಕೃತಿಯ ತನ್ಮಯತೆಯಲ್ಲಿ ಅಕ್ಕನ ಮನಸ್ಸು ಆಧ್ಯಾತ್ಮಿಕವಾಗಿ ಭಾವ ಗೀತಾತ್ಮಕತೆಯಲ್ಲಿ ಕಾವ್ಯ ಬರಹವನ್ನು ನಿಸರ್ಗದ ಶಕ್ತಿಗೆ ಅರ್ಪಿಸಿಕೊಳ್ಳುತ್ತಾಳೆ. ಮನದ ಭಗ್ನತೆಗೆ ಲಿಂಗ ಸ್ವರೂಪಿಯಾದ ಮನದೊಡೆಯನಿಗೆ ಅನುಭಾವದ ಶೃಂಗಾರ ಶಬ್ದಗಳು ಅಕ್ಕನ ವಚನಗಳ ವಿಶೇಷತೆ ಎಂದು ಹೇಳಬಹುದು.

ಬೆಟ್ಟಕ್ಕೆ | ಸಾರವಿಲ್ಲವೆಂಬರು ||
ತರುಗಳ ಹುಟ್ಟುವ | ಪರಿ ಇನ್ನೆಂತಯ್ಯಾ? ||
ಇದ್ದಲಿಗೆ | ರಸವಿಲ್ಲೆಂಬರು ||
ಕಬ್ಬುನ ಕರಗುವ | ಪರಿ ಇನ್ನೆಂತಯ್ಯಾ? ||
ಎನಗೆ | ಕಾಯವಿಲ್ಲವೆಂಬರು ||
ಚೆನ್ನಮಲ್ಲಿಕಾರ್ಜುನನೊಲಿವ | ಪರಿ ಇನ್ನೆಂತಯ್ಯಾ? ||

ನಿಸರ್ಗ ದೇವರು ಕೊಟ್ಟ ಕೊಡುಗೆ. ನಿಸರ್ಗದ ಒಡಲು ತಾಯಿಯ ಮಡಿಲು ಎರಡೂ ಆಕಾಶಕ್ಕಿಂತ ಹಿರಿದಾದವುಗಳು. ತರು ಮತ್ತು ಬೆಟ್ಟಕ್ಕೆ ಪ್ರೀತಿ ಇರುವುದರಿಂದ ಪ್ರಕೃತಿಯನ್ನು ವ್ಯಕ್ತಿ ಎನ್ನದೆ ಪುರುಷನನ್ನಾಗಿ ಕಾಣುವ ಕುತೂಹಲ ಆಕೆಯದು. ಬೆಟ್ಟಕ್ಕೆ ಸಾರವಿಲ್ಲವೆಂಬರು. ಮೂಲತಃ ಪ್ರಕೃತಿಯನ್ನು ಅದ್ವೈತವಾಗಿ ಕಾಣುವ ಆರಾಧನಾ ಮನಸ್ಸು. ಒಬ್ಬ ಯೋಗಿಣಿಗೆ ಮಾತ್ರ ಸಾಧ್ಯವಾಗುತ್ತದೆ. ಪ್ರಕೃತಿಯ ಪಂಚಭೂತಗಳಲ್ಲೊಂದಾದ ಅಗ್ನಿಯು ಪಶು ಪಕ್ಷಿ ಗಿಡ ಮರ ಮನುಷ್ಯರಲ್ಲೂ ಸ್ಥಾವರ ಸ್ಥಾನ ಪಡೆದಿದೆ. ಕಠಿಣವಾದ ಕಬ್ಬಿಣವನ್ನು ಕರಗಿಸಲು ಪ್ರಕೃತಿಯ ಇದ್ದಲಿನ ಬೆಂಕಿ ಬೇಕು. ಪ್ರಕೃತಿಯ ಆರಾಧನೆಯಲ್ಲಿ ಆಧ್ಯಾತ್ಮದ ಅನುಭೂತಿ ಕಾಣಲು ಇದ್ದಲಿಗೆ ರಸವಿಲ್ಲವೆಂಬರು ಎಂಬ ವಿಸ್ಮಯದ ಸೆಲೆ ಅಕ್ಕನದು. ಅಂದರೆ ಪ್ರಕೃತಿಯಲ್ಲಿ ಕಬ್ಬಿಣವನ್ನು ಕರಗಿಸುವ ಶಕ್ತಿ ಆಧ್ಯಾತ್ಮದ ಅಗ್ನಿಗೆ ಮಾತ್ರ ಸಾದ್ಯ. ಇದನ್ನೇ ಅಗ್ನಿ ತತ್ವ ಎಂದು ಸ್ಪಷ್ಟಪಡಿಸಬಹುದು. ಪ್ರಕೃತಿ ಮತ್ತು ಪುರುಷನ ಮಿಲನವು ಆಧ್ಯಾತ್ಮದಲ್ಲಿ ಮೇರು ಸಂಧಾನ. ಶಿವನ ಜೊತೆ ಒಂದಾಗುವ ಅದ್ವೈತದ ನಿಗೂಢತೆ ಆಕೆಯದು. ಪುರುಷ ಅಕ್ಕನ ಪ್ರಜ್ಞೆಗೆ ದಕ್ಕುವ ವಾಸ್ತವ. ಪ್ರಕೃತಿ ಪ್ರಾಪಂಚಿಕ ಅಸ್ತಿತ್ವದ ಅನುಭವದ ನೆಲೆ “ಎನಗೆ ಕಾಯವಿಲ್ಲೆಂಬರು” ಅಂತರಂಗದಲ್ಲೂ ಬಹಿರಂಗದಲ್ಲೂ ಚೆನ್ನಮಲ್ಲಿಕಾರ್ಜುನನ ವಿರಾಟ ರೂಪವನ್ನು ನಿಸರ್ಗದ ಪ್ರತಿಮೆಗಳ ಮೂಲಕವೇ ಕಟ್ಟಿಕೊಡುತ್ತಾಳೆ ಅಕ್ಕಾ. ಇದು ಅತೀಂದ್ರಿಯ ವಾಸ್ತವಿಕ ಸತ್ಯವೆಂದು ಹೇಳಬಹುದು.

ಅಕ್ಕನ ಅನೇಕ ವಚನಗಳು ಕಾವ್ಯ ಪ್ರತಿಭೆಯ ರೂಪಕಗಳಾಗಿ ಕಂಡು ಬರುತ್ತವೆ. ಚೆನ್ನಮಲ್ಲಿಕಾರ್ಜುನನ್ನು ಮನದಲ್ಲಿ ಗುರು ಲಿಂಗ ಜಂಗಮವೆಂದು ಸಂವೇದಿಸಿ ಮಾತನಾಡುತ್ತಾ ಲೌಕಿಕದ ಜೊತೆಗೆ ಆಧ್ಯಾತ್ಮಿಕ ಪ್ರತಿಮೆಗಳನ್ನು ದಟ್ಟವಾಗಿ ಬಳಸುತ್ತಾಳೆ. ಶಿವನ ಜೊತೆಗೆ ಲೀನವಾಗುವ ಹಂತದಲ್ಲಿ ನಾನು ಈ ಜಗತ್ತಿನಲ್ಲಿ ಏಕಾಂಗಿಯಲ್ಲವೆಂದು ಒತ್ತಿ ಒತ್ತಿ ಹೇಳುವ ಸ್ಪಷ್ಟತೆ ಹೀಗಿದೆ.

ಅರೂ ಇಲ್ಲದವಳೆಂದು | ಅಳಿಗೊಳಲು ಬೇಡ ||
ಏನು ಮಾಡಿದರೂ | ಆನಂಜುವವಳಲ್ಲ ||
ತರಗಲೆಯ | ಮೆಲಿದು ಆನಿಹೆನು ||
ಸರಿಯ | ಮೇಲೊರಗಿ ಅನಿಹಿನು ||
ಚೆನ್ನಮಲ್ಲಿಕಾರ್ಜುನಯ್ಯಾ | ಕರಕೇಡನೊಡ್ದಿದಡೆ ||
ಒಡಲನು ಪ್ರಾಣವನು | ನಿನಗರ್ಪಿಸಿ ಶುದ್ದಳಹೆನು ||

ಸ್ವಾಭಿಮಾನದ ನೆಲೆಯಲ್ಲಿ ಶಿವನ ಹುಡುಕಾಟದ ಬದುಕಿನಲ್ಲಿ ಅಕ್ಕ ಸ್ತ್ರೀ ವಾದಿಯಾಗುತ್ತಾಳೆ. ಸಮಾಜದ ಶೋಷಣೆ ಸಂಕಟಗಳು ಎಲ್ಲರ ಪ್ರೀತಿಯಿಂದ ವಂಚಿತರಾದವರಿಗೆ ಒಂಟಿತನ ಕಾಡುತ್ತದೆ. ಮಾನಸಿಕ ಮತ್ತು ಲೌಕಿಕ ಜೀವನದ ಸ್ತಿತ್ಯಂತರವನ್ನು ಹೇಳುವುದು ಒಬ್ಬ ಕವಿಯತ್ರಿಗೆ ಮಾತ್ರ ಸಾದ್ಯ. ಏಕಾಂಗಿತನದ ನೋವು ತಬ್ಬಲಿತನದ ಪ್ರಜ್ಞೆ ಹೆಚ್ಚಾದಂತೆಲ್ಲಾ ತನ್ನ ವಚನದ ಹೇಳಿಕೆಯ ಮಿತಿಯಲ್ಲಿ ಚಿಕ್ಕ ಚಿಕ್ಕ ವಿವರಗಳನ್ನು ಹಂಚಿಕೊಳ್ಳುವುದು ಅಕ್ಕನಿಗೆ ಮಾತ್ರ ಸಾದ್ಯ. ಲೌಕಿಕ ಸಂಸಾರದ ಬಿಡುಗಡೆ ಅಕ್ಕನಿಗೆ ತರಗಲೆಯಾಗಿ ಕಾಡುತ್ತದೆ. ತನ್ನ ಇಡೀ ವ್ಯಕ್ತಿತ್ವ ಶರಣಾಗುವ ಚೈತನ್ಯದಲ್ಲಿ ಶಿವನಿಗೆ ಕೈಯೊಡ್ಡುವ ಕರಗಳು ಸಾಮರಸ್ಯ ಮನಸ್ಥಿತಿಯಾಗಿದೆ. ಎನ್ನ ದೇವನಿಗೆ ಆನು ಶರಣು, ನನ್ನ ಸಮರ್ಪಣೆ, ಎನ್ನನು ರಕ್ಷಿಸು. ಈ ಪದಗಳ ಅರ್ಥ ಭಾವುಕ ಮನದ ಯಾಚನೆಗಳಾಗಿವೆ. ಸ್ತ್ರೀ ಸಾಧಕಿಯಾಗಿ ತಾತ್ವಿಕ ಪ್ರಧಾನದ ಪ್ರಕ್ರಿಯೆಯಾಗಿದೆ. ಎನ್ನ ಒಡಲು ಪ್ರಾಣ ನಿನಗರ್ಪಿಸುವೆ ಎಂಬ ಆತುರತೆಯ ಅಂಗೀಕಾರವನ್ನು ಇಲ್ಲಿ ಕಾಣಬಹುದು. ಹೀಗಾಗಿ ಶಿವ ಶಕ್ತಿಯರ ಸಾಮರಸ್ಯವನ್ನು ಪ್ರಾಣಲಿಂಗವಾಗಿಸಿಕೊಳ್ಳುವ ಅನುಸಂಧಾನದ ಸ್ವಾತಂತ್ರ್ಯ ಅಕ್ಕನದು.

ಅಕ್ಕನ ಅಂತರಂಗವು ಕರುಳ ಬಳ್ಳಿಯ ನುಡಿ ಮುತ್ತುಗಳಾಗಿವೆ. ಅನುಭಾವಿಕ ಶಕ್ತಿಯ ವಿನಯವಂತಿಕೆಯಾಗಿದೆ. ಚೆನ್ನಮಲ್ಲಿಕಾರ್ಜುನ ಆಧ್ಯಾತ್ಮದ ಶಿಖರವಾಗಿದ್ದಾನೆ. ಬೆಟ್ಟದಾ ಮೇಲೊಂದು ಎನ್ನುವ ಭಾವ ತೀವ್ರತೆಯಲ್ಲಿ ಕದಳಿಯನ್ನು ತಲುಪಿ ಶಿವನ ಚೈತನ್ಯದ ಪ್ರೀತಿಯಲ್ಲಿ ಶಾಶ್ವತವಾಗಿ ತನ್ನ ಸ್ಥಾನವನ್ನು ಕಂಡುಕೊಂಡಳು ಅಕ್ಕಾ.

-ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು.
ರಾಯಚೂರು.

Don`t copy text!