ನಾನು ಓದಿದ ಪುಸ್ತಕ- “ಸಂಸಾರ ಗೀತೆ”
(ಕವನ ಸಂಕಲನ)
ಕೃತಿ ಕರ್ತೃ:- ಶ್ರೀ ಪ್ರಮೋದ ಸಾಗರ
“ಸಂಸಾರದಲ್ಲಿ ಸಾರ ಹೆಚ್ಚಿಸುವ ಆಪ್ತ ಗೀತೆ”
SOMEಸಾರದಲ್ಲಿ, ತಾಳ ಲಯ, ರಸಮಯ ಸೊಬಗು ಇದ್ದಾಗ ಮಾತ್ರ ಅದು ಒಂದು ಸುಂದರ ಮಾಧುರ್ಯದ ಗೀತೆಯಾಗುತ್ತದೆ. ಅದರಲ್ಲೂ ಭಾವದ ಬೆಸುಗೆ ಕಂಡುಕೊಂಡರಂತೂ ಆ ಸಂಸಾರ; Some-ಸಾರ ಪಡೆದುಕೊಂಡು ಸುಖಮಯವಾಗಿರುತ್ತದೆ.
Someಸಾರ ಪದವೇ ಒಂದು ಭಾವನಾತ್ಮಕತೆಯ ಪ್ರತಿಬಿಂಬವನ್ನು ಸೃಷ್ಟಿಸುತ್ತದೆ. ಆ ಪ್ರತಿಬಿಂಬದ ರೂಪದಲ್ಲಿ ಇದೂ ಒಂದು.
Samಸಾರ ಎಂದ ಕೂಡಲೆ ……
” ಬ್ರಹ್ಮಚಾರಿಯ ಮನ ಪುಳಕಗೊಂಡರೆ,
ಸಂಸಾರಿಯ ಮನ ತವಕಗೊಳ್ಳುತ್ತದೆ;
ವಿಚ್ಛೆದಿತರ ಮನ ಕಸಿವಿಸಿಗೊಂಡರೆ,
ವೈಧವ್ಯ ಅನುಭವಿಸುತ್ತಿರುವವರ ಮನ ಮರುಗುತ್ತದೆ”
ಮತ್ತೊಂದು ದೃಷ್ಟಿಕೋನದಲ್ಲಿ, ಸಂಸಾರ ಎಂದ ಕ್ಷಣ ನಮ್ಮ ಗಮನಕ್ಕೆ ಬರುವುದು ನಾಲ್ಕು ಗೋಡೆಯ ಮಧ್ಯ ಇರುವ ಗಂಡ ಹೆಂಡತಿ ಮಕ್ಕಳು ಮಾತ್ರ. ಆದರೆ ಇದರ ವಿಶಾಲತೆ ಇದಕ್ಕೂ ಹೆಚ್ಚಿನದೆನಿಸುತ್ತದೆ. ಮನೆಯಿಂದಾಚೆಯೂ ನಮ್ಮ ತನದ ಸಾರವನ್ನು ಕಂಡುಕೊಳ್ಳಬೇಕು, ಉಳಿಸಿ ಬೆಳೆಸಿಯೂ ತೀರಬೇಕು. ಆಗ ಮಾತ್ರ… ಬದುಕಿಗೆ ನಿಜವಾಗಿಯೂ Some-ಸಾರ ಇದೆ ಅನಿಸುತ್ತದೆ. ಇದನ್ನೇ ಕವಿ, ಪ್ರಮೋದ ಸಾಗರ ಅವರು “ಸಂಸಾರ ಗೀತೆ” ಕೃತಿ(ಕವನ ಸಂಕಲನ)ಯಲ್ಲಿ ಯತೇಚ್ಛವಾಗಿ ಅಭಿವ್ಯಕ್ತಿಸುತ್ತಾರೆ.
ಸಂಸಾರ ಗೀತೆಗಳನ್ನು ರಚಿಸುತ್ತಾ ಕವಿಗಳು, ಈ ಕೃತಿಯನ್ನು ತಮ್ಮ ಶ್ರೀಮತಿಯವರಿಗೆ ಅರ್ಪೀಸಿ ತಮ್ಮ Someಸಾರದ ಸಾರಕ್ಕೆ ಭದ್ರತೆಯನ್ನು ತಂದುಕೊಂಡಿದ್ದಾರೆ. ಪ್ರತಿಯೊಬ್ಬ ಸಂಸಾರಿಯೂ(ಪುರುಷನು) ತನ್ನ ದಂತಗಳ ಕಾಳಜಿಯನ್ನು ಮಾಡುತ್ತಿರಲೇಬೇಕು. ಹೆಂಡತಿಯೆಂಬ ಹೂ-ಸುತ್ತಿಗೆ ಯಾವಾಗ ತಾಗುತ್ತದೋ ತಿಳಿಯದು, ಈ ನಿಟ್ಟಿನಲ್ಲಿ ಜಾಣರಾದ ಪ್ರಮೋದ ಸಾಗರ ಅವರು, ಈ ಕೃತಿಯನ್ನು ಮೊದಲೇ ಹೇಳಿದಂತೆ ತಮ್ಮ ಶ್ರೀಮತಿ ಅವರಿಗೆ ಅರ್ಪಿಸುವುದರ ಜೊತೆಗೆ, ಮುಂಜಾಗ್ರತಾ ಕ್ರಮವಾಗಿ ದಂತ ವೈದ್ಯರಿಂದ ಮುನ್ನುಡಿ ಬರೆಸಿಬಿಟ್ಟಿದ್ದಾರೆ….. (ತಮಾಷೆಗಾಗಿ). ಅಲ್ಲಿಗೆ ಸಂಸಾರದಲ್ಲಿ ತಾವು ಸೇಫ್ ಆಗಿದ್ದಾರೆ. ಓದುಗರನ್ನು ಈ ಕುರಿತಾಗಿ ಚಿಂತನೆಗೆ ಹಚ್ಚಿ, ಸತಿಯನ್ನು ಓಲೈಸಬಹುದಾದ ಎಲ್ಲ ದಾರಿಗಳನ್ನು ತೆರೆದಿಡುತ್ತಾರೆ…..
ಇರಲಿ, ಕೃತಿಯ ಬಗ್ಗೆ ಕೃತಿಯಲ್ಲಿ ನಮ್ಮನ್ನೆಲ್ಲ ಮನಸೂರೆಗೊಳಿಸುವ ಗೀತೆಗಳ ಬಗ್ಗೆ ಒಂದಷ್ಟು ಮಾತಾಗುತ್ತೇನೆ…. ಅಕ್ಷರ ರೂಪಗಳ ನನ್ನ ಭಾವದ ಅನಿಸಿಕೆಗಳು ಇಗೋ ನಿಮ್ಮ ಓದಿಗೆ……
ಖ್ಯಾತ ಸಾಹಿತಿಗಳು, ” ನಾ…ನೀ “, ” ಅಯ್ದು ರೂಪಾಯಿ” ಕೃತಿಗಳ ಪ್ರಖ್ಯಾತ ಲೇಖಕರೂ ಆದ ಪ್ರಕಾಶ ಡಂಗಿಯವರ ಸೊಗಸಾದ ಅಕ್ಷರಗಳ ಪಂಕ್ತಿ ಮುನ್ನುಡಿಯಾಗಿದೆ. ಮುನ್ನುಡಿಯಲ್ಲೇ ಕೃತಿಕಾರರ ಕಾವ್ಯ ಸತ್ವವನ್ನು ಪರಿಚಯಿಸುತ್ತ, ಕವಿತೆಗಳನ್ನು ವಿಶ್ಲೇಷಿಸುತ್ತ ಕೃತಿಗೆ ಮೆರುಗನ್ನು ಕೊಟ್ಟು, ಓದುಗನಿಗೆ ಕವಿತೆಗಳನ್ನು ಓದಲು ಪ್ರೇರೇಪಿಸುತ್ತಾರೆ. ಅರ್ಥಪೂರ್ಣ ಮುನ್ನುಡಿಯಿಂದ ಕೃತಿಗೆ ಮೆರುಗು, ಕೃತಿ ಕರ್ತೃವಿನ ಶ್ರಮಕ್ಕೆ ಸಾರ್ಥಕತೆ ಸಂದಂತಾಗಿದೆ.
ಕವಿಯಾದವನು ನಾನು ಖ್ಯಾತನಾದವನೆಂಬ ನಿರ್ಧಾರಕ್ಕೆ ಎಂದಿಗೂ ಬರಬಾರದು. ಆ ಕಾರಣಕ್ಕೆ ಕವಿಗಳು, ಆಲದ ಮರದಷ್ಟು ವಿಶಾಲವಾದ ಕಾವ್ಯ ಲೋಕದಲ್ಲಿ ನಾನಿನ್ನು ಈಗ ತಾನೆ ಚಿಗುರಿದ “(ನಾನಿನ್ನು)ಗರಿಕೆ” ಎನ್ನುತ್ತಾರೆ. ಆ ವಿಶಾಲ ಮರದ ನೆರಳೆ ನಮಗೆ ತಂಪು, ನಮ್ಮ ಬೆಳವಣಿಗೆಗೆ ದಾರಿ ಎಂದು ಹೀಗೆ ಹೇಳುತ್ತಾರೆ.
” ದಿಕ್ಕನ್ನೇ ದಿಕ್ಕೆಡಿಸಿ ಪಸರಿಸಿಹ ಆಲದಡಿ
ಈಗ ಹುಟ್ಟಿದ ಗರಿಕೆ ಈ ಕವಿಯ ಬಾಳು
ಎಷ್ಟು ಹಬ್ಬಿದರೂ ಸಾಟಿಯೇ ಆ ಮರಕೆ?
ಜೀವಕ್ಕೆ ತಂಪೆಂದೂ ಮರದ ನೆರಳು”
ಎಂಬುದಾಗಿ ತಿಳಿಸುತ್ತಾ, ಬೆನ್ತಟ್ಟಿ ಬೆಳೆಸಿದವರನ್ನು, ಕೈ ತುತ್ತು ತಿನಿಸದವರನ್ನು ನೆನೆಯುತ್ತಾ ಅವರು ಬಿತ್ತಿದ ಕಾವ್ಯದ ಪಾಠಕ್ಕೆ ನಾನು ಋಣಿ ಎನ್ನುತ್ತಾರೆ. ಹಾಗೆ, ಈ ಕಲಿಕೆಯ ಪಯಣದಲ್ಲಿ ಸ್ನೇಹ, ಪ್ರೀತಿ, ಒಡನಾಟ ಇರಲಿ ಎಂದು ಬಯಸಿ, ಪರಿಪೂರ್ಣ ಸಾಹಿತಿಯಾಗುವೆಡೆ ಪಾದ ಬೆಳೆಸುತ್ತಾರೆ.
SOMEಸಾರ ಗೀತೆಯಲ್ಲಿ, ಹೆಂಡತಿಯ ನಡೆಯನ್ನು ಕಿಚಾಯಿಸುತ್ತ, ಗಂಡ ನನಗೆ ಮಾತ್ರ ಸ್ವಂತ ಎಂಬ ಅವಳ ಭಾವನೆಯನ್ನು ತಮ್ಮ ಕಾವ್ಯದಲ್ಲಿ, ಓದುಗರು ಅನುಭವಿಸುವಂತೆ ಹೀಗೆ ಬರೆಯುತ್ತಾರೆ.
ಅಡುಗೆ ಮನೆಯಲ್ಲಿ ಈರುಳ್ಳಿ
ಹೆಚ್ಚುತ ಕಣ್ಣೀರು ಸುರಿಸುವ
ನನ್ನವಳ ಕಂಡು, ಕರುಣೆಗೊಂಡು
“ನಿನ್ನ ಸಹಾಯಕ್ಕಾಗಿ ತಂಗಿಯೊಬ್ಬಳ
ತರಲೇನು?”
ಎಂಬ ಗಂಡನ ಮಾತಿಗೆ, ಎದುರೇಟಾಗಿ; “ಅಯ್ಯಾ! ರಸಿಕ ರಮಣ …. ಮೊದಲು ನನ್ನನ್ನು ಸಂಭಾಳಿಸು ಸಾಕು” ಎಂದು ಹೇಳುವ, ಹೆಂಡತಿಯ ಹುಸಿಕೋಪವನ್ನು, ಸೊಗಸಾಗಿ ರಸಾತ್ಮಕವಾಗಿ, ಓದುಗನಿಗೆ ಮೋಜು ಹುಟ್ಟುವಂತೆ ಬರೆಯುತ್ತಾರೆ. ಅಷ್ಟೇ ಅಲ್ಲ, ಹೆಂಡತಿಯೆಂಬುವಳು,
” ಜೀವವಿಲ್ಲದ ಶಿಲಾಮೂರ್ತಿ
ಸಂಜೀವಿನಿಯಂತಹ
ಮಂದಹಾಸ ಬಿಟ್ಟು ಬೇರೆ
ಭಾವವೇ ಕಂಡಿಲ್ಲ ಇವಳ ಮೊಗದಲ್ಲಿ”
ಅಂದರೆ, ಹೆಂಡತಿ ತನ್ನ ಇಡೀ ಬದುಕನ್ನು ನಿರಪೇಕ್ಷಿಯಾಗಿಯೂ ಕಳೆಯುತ್ತಾಳೆ, ಇರುವುದೆಲ್ಲವನ್ನು ತನ್ನ ಮನೆ, ಮಕ್ಕಳಿಗೆ ಧಾರೆ ಎರೆದು, ತಾನು ಮಾತ್ರ ಕನಕನ ಕಿಂಡಿಯಾಗಿರುವ ಸೀರೆಯಲ್ಲೇ ಸುಖ ಕಾಣುತ್ತಾಳೆ, ವಾರದ ಉಪವಾಸ ನೆಪವೊಡ್ಡಿ ಬರಿ ಹೊಟ್ಟೆಯಲ್ಲಿ ಮಲಗುತ್ತಾಳೆ. ಇವಳೆಂತಹ ಮುಗ್ಧೆ, ಇವಳೆಂತಹ ಮಮತಾಮಯಿ, ಅದಕ್ಕೇ ಒಮ್ಮೊಮ್ಮೆ ಇವಳು ಜೀವವಿಲ್ಲದ ಶಿಲಾಮೂರ್ತಿ ಎನಿಸಿ ಬಿಡುತ್ತಾಳೆ ಏಂದು ಭಾವನಾತ್ಮಕವಾಗಿ ಬರೆದು, ಓದುಗನ ಭಾವನೆಗೂ ತಾಕುತ್ತಾರೆ.
ಹಾಗೆ ಕವಿಗಳು ಸಂಸಾರದಲ್ಲಿ ಕೇವಲ ಹೆಂಡತಿಯ ಹಾಜರಿಯನ್ನಷ್ಟೇ ತೋರದೆ, ಹೆಂಡತಿಯೊಡನೆ, ತಮ್ಮ ತಂದೆ, ತಾಯಿಯೂ ಇರುತ್ತಾರೆಂಬುದನ್ನು, ತಂದೆ ತಾಯಿಯ ಕುರಿತಾದ ಕವಿತೆ ರಚಿಸುವ ಮೂಲಕ ತಮ್ಮ ನಿಲುವಿಗೆ ಬದ್ಧತೆ ತೋರುತ್ತಾರೆ.
” ನನ್ನಮ್ಮನಿಗೆ ಮಾತ್ರ ಗೊತ್ತು
ನನ್ನ ಹೊಟ್ಟೆಯ ಅಳತೆ ಎಷ್ಟೆಂದು ! “
ಎಂಬುದಾಗಿ ತಾಯಿಯ ಬಗ್ಗೆ ಮತ್ತು,
” ತಿದ್ದಿ ತೀಡಿ ನನ್ನ ಬೆಳೆಸಿದ
ಮಾತುಗಳೆಲ್ಲವೂ ಅಮ್ಮನವು
ಆ ಮಾತಿನ ಹಿಂದಿನ
ಜೀವನಾನುಭವದ ಮೌನ ನನ್ನಪ್ಪ”
ಎಂದು ಕ್ರಮವಾಗಿ, ‘ತಾಯಿ ತುತ್ತು’, ‘ನನ್ನಪ್ಪ’ ಕವಿತೆಗಳಲ್ಲಿ ತಿಳಿಸಿ, ತಾಯಿಯ ಮಮತೆ, ತಂದೆಯ ಔದಾರ್ಯ ಮತ್ತು ಅವರ ಬದುಕಿನ ಕ್ಷಮತೆ ಬಗೆಗೆ ಮನಕ್ಕೆ ಮುಟ್ಟಿಸುತ್ತಾರೆ.
ಗಂಡು ಹೆಣ್ಣಿನ ಸಾಂಗತ್ಯದ ಸವಿಯನ್ನು ಹೇಳುವಲ್ಲಿ ಕವಿಯ ಅನುಭವ ಕಾವ್ಯ ಪೂರ್ತಿ ಮತ್ತು ಸಂಕಲನ ಪೂರ್ತಿ ಅನೇಕ ಕವಿತೆಗಳಲ್ಲಿ ಕಾಣಸಿಗುತ್ತದೆ. ಕಲ್ಪನೆಗೆ ನಿಲುಕದ್ದನ್ನು ಅನುಭವಿಸಿದಾಗ ಉತ್ಪತ್ತಿಯಾಗುವ ರಸವತ್ತಾದ ಪದಗಳೇ ಸುಂದರ.
ಆ ಹಾದಿಯಲ್ಲಿ ಕವಿಗಳು ವಿಭಿನ್ನವಾಗಿ “ಮಿಲನ ಮಹೋತ್ಸವ” (ಕವಿತೆಯನ್ನು)ವನ್ನು Someಸ್ಕಾರಯುತ ಚೌಕಟ್ಟಿನಲ್ಲಿ ಬಿಂಬಿಸಿ, ಹೊಸ ಸೃಷ್ಟಿಯ ಮಹೋನ್ನತ ಕಾರ್ಯವೇ ಶಿವ ಶಕ್ತಿಯರ ಸಂಗಮ, ಇದುವೇ ಸಾಕ್ಷಾತ್ಕಾರ. ಪುರುಷ ಪ್ರಕೃತಿಯ ಕೂಡುವಿಕೆ ಒಂದು; ಕಪ್ಪು ಹಲಗೆಯ ಮೇಲೆ ಬಿಳಿಯ ಬಣ್ಣದಿಂದ ಚಿತ್ತಾರ ಬಿಡಿಸಿದಂತೆ ಎಂದು ಮನೋರಂಜನೀಯವಾಗಿ ಪ್ರಸ್ತುತ ಪಡಿಸಿದ್ದಾರೆ. ಈ ಕವಿತೆ ಖಂಡಿತವಾಗಿ ಓದುಗನ ಮನಸನ್ನು ಹಿಡಿದಿಡುತ್ತದೆ. ನಾಲ್ಕು ಗೋಡೆಯ ಮಧ್ಯೆ ನಡೆಯುವ ಜೋಡಿಗಳ ಸಮಾಮಾಗಮವನ್ನು ಯಾವುದೇ, ಮುಜುಗರವಾಗದಂತಹ ಪದಗಳಿಂದ ಕಾವ್ಯದಲ್ಲಿ ಕಟ್ಟಿಕೊಟ್ಟಿರುವುದು ಕವಿಗಳ ಅಪಾರ ಅಕ್ಷರ Someಪತ್ತಿಗೆ ಸಾಕ್ಷಿ.
” ‘ಕ’ವಿತೆ” ಕವಿತೆಯಲ್ಲಿ, ಕವಿಗಳ ಒಂದು ವಿಭಿನ್ನ ಪ್ರಯತ್ನ ಕಾಣಬಹುದು. ಬಳಸಿದ ಪ್ರತೀ ಪದದಲ್ಲೂ ಪ್ರಾರಂಭದಲ್ಲಿ ‘ಕ’ ವರ್ಣಾಕ್ಷರವನ್ನು ಬಳಸಿ, ಓದುಗನಿಗೆ ವಾಚಿಸಲು ಲಯದ ಜೊತೆಗೆ ಆಸಕ್ತಿಯನ್ನೂ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
* ” ಹುಟ್ಟಬಾರದು ನೋಡಿ ಈ ಪ್ರೀತಿ
ಶುರು ಹುಡುಗರಿಗೆ ಸಾಲು ಸಾಲು ಫಜೀತಿ “
ಹೀಗೆ ನೋಡಿ, ಒಂದು ಸಂಸಾರದಲ್ಲಿ ಸಿಗುವ ನಂಟಿಗೆ ಹೋಲಿಕೆ ಇಲ್ಲ, ಅಲ್ಲಿ ಸಿಗುವ ಸುಖ; ಸ್ವರ್ಗಕ್ಕೆ ಸಮಾನ ಎನ್ನುವ ಕವಿ, ಪ್ರೀತಿ ಹುಟ್ಟಿದರೆ ಸಾಲು ಸಾಲು “ಫಜೀತಿ” ಹುಡುಗರಿಗೆ. ದಿನ ಬೆಳಗಾದರೆ ಅವಳ ದರ್ಶನಕೆ ಹಾಜರಾಗಬೇಕು, ಅವಳ ಅರಮನೆಯ
” ಆಳೆತ್ತರದ ಕಾಂಪೋಂಡಿಗೆ ಗಾಜಿನ ಚೂರು
ಕಾವಲಿನ ನಾಯಿಯ ಬಾಯಿಯೂ ಜೋರು ”
ಇದನ್ನೆಲ್ಲ ಸಹಿಸಿಕೊಂಡರೂ ಅವಳಪ್ಪನ, ಅಣ್ಣನ ಕಾವಲಿನ ಕಣ್ಣಿಗೆ ಬಿದ್ದರೆ ನನ್ನ ಮೂಳೆಗಳು ಚೂರು ಚೂರು…. ಹೀಗೆ ಪ್ರೇಮದ ದಿನಗಳಲ್ಲಿ ಅವಳ ಸುತ್ತಲೂ ಇರುತ್ತದೆ ಮುಳ್ಳಿನ ಬೇಲಿ, ಇದನ್ನು ಕಂಡು ನನ್ನ ಸ್ನೇಹಿತರು ಮಾಡುವರು ನನ್ನ ಗೇಲಿ… ಎಂದಿಗೆ ಮುಗಿಯುತ್ತದೋ ಈ ಪ್ರೇಮದ ಗೋಳು, ಹಸನಾಗುವದೇ ಅವಳೊಂದಿಗೆ ನನ್ನ ಬಾಳು… ಎಂದು ನಾನಾ ತರದಲ್ಲಿ ಪ್ರೇಮಿಗಳ ಬವಣೆಯ ಅನುಭವಗಳನ್ನು ಕಟ್ಟಿ ಕೊಡುತ್ತಾರೆ, ಪ್ರತಿಯೊಬ್ಬ ಪ್ರೇಮಿಯ ಮಾತುಗಳೇ ಇವು ಎಂದೆನಿಸುವುದರ ಜೊತೆಗೆ ಓದುಗರನ್ನು ರಂಜಿಸುವ ಕೌಶಲ್ಯ ಕರಗತವಾದಂತಿದೆ ಕವಿ ಪ್ರಮೋದ ಸಾಗರರವರಿಗೆ. ಈ ಕಾರ್ಯದಲ್ಲಿ ಪ್ರೇಮದಲ್ಲಿ ಬಿದ್ದ
ಹೆಣ್ಣಿನ ಗೋಳನ್ನೂ ಸೇರಿಸಿದ್ದರೆ, ಹೆಂಗಳೆಯರ ಕೆಂಗಣ್ಣಿನ ನೋಟದಿಂದ ತಪ್ಪಿಸಿಕೊಳ್ಳಬಹುದಿತ್ತೆನಿಸುತ್ತದೆ.
ಮುಂದೆ “ಪುರುಷ” ಕವಿತೆಯಲ್ಲಿ ಪುರುಷನೆಂದರೆ, ಸೂರ್ಯ, ಗಾಳಿ, ಆಕಾಶ, ಮಳೆ, ಬಂಡೆಗಲ್ಲು, ಜೀವ ಸೂಕ್ಷ್ಮ ರೂಪಿ ಎಂದು ಹಾಡಿಹೊಗಳಿದ್ದಾರೆ. ಪುರುಷ ತನ್ನನ್ನು ದಹಿಸಿಕೊಂಡು ತನ್ನವರಿಗೆ ಬೆಳಕಾಗುವವನು ಎಂಬ ಭಾವ ಸತ್ಯವಾದುದು. ಎಲ್ಲ ಸಹೃದಯಿ ಪುರುಷರಿಗೆ ಅರ್ಪಣೆಯಾದ ಕವಿತೆ ಇದು ಎಂಬುದು ನನ್ನ ಭಾವನೆ.
“ಉಡುಗೊರೆ” ಕವಿತೆಯಂತೂ ಭಾವನಾತ್ಮಕ ಕವಿತೆ, ಒಂದು ಹೆಣ್ಣಿಗೆ ತನ್ನಿನಿಯನೇ ದೇವರು ದಯಪಾಲಿಸಿದ ದೊಡ್ಡ ಉಡುಗೋರೆ, ಇನಿಯ ಕೊಡಿಸಿದ ಸೀರೆ, ಒಡವೆ ಅಷ್ಟೇ ಯಾಕೆ ಮುಡಿಸಿದ ಮಲ್ಲಿಗೆಯೂ ತನ್ನವನ ಪ್ರೇಮದ ಅಮಲಿಗೆ ಸಮವಲ್ಲ ಎನ್ನುತ್ತಾಳೆ. ಎಲ್ಲ ಉಡುಗೊರೆಗಳಿಗೂ ಹೆಸರಿಟ್ಟ ಮಡದಿಯ ಮಾತಿಗೆ ನಿರಾಸೆ ಹೊತ್ತ ಮುಖದಿ ನಿಂತ ಗಂಡನ ಕೊರಳಿಗೆ ತನ್ನ ಕೈಗಳನ್ನು ಮಾಲೆಯಾಗಿಸಿ
” ಕೊಡುಗೆಯಾಗಿ ನಾ
ನಿಮ್ಮನ್ನೇ ಪಡೆದ ಮೇಲೆ
ನೀವಿಟ್ಟ ಉಡುಗೊರೆಗಳು
ನಿಮ್ಮನ್ನು ಸರಿಗಟ್ಟಲಾರವು!”
ಎಂಬ ನಲ್ಮೆಯ ಮಾತಿನ ಮುತ್ತುಗಳುದುರಿದ ಕ್ಷಣ ಗಂಡನ ಮುಖ ಎಷ್ಟು ರಂಗೇರಿರ ಬೇಡ. ಖಂಡಿತವಾಗಿಯೂ ಹೇಂಡತಿಯ ಈ ಮಾತುಗಳು, ಗಂಡನಿಗೆ ಸಂತೃಪ್ತ ಭಾವ ಕೊಡುತ್ತವೆ. ಅಂತೆಯೇ ಹೆಂಡತಿಯೂ ಗಂಡನಿಗೆ ದೈವದತ್ತ ಕಾಣಿಕೆಯೆಂಬುದು ನಿಜವೇ ಸರಿ. ಬಹಳ ಸೊಗಸಾದ ಕವಿತೆ, ಹೃದಯ ಮುಟ್ಟುತ್ತದೆ.
ಮುಂದುವರೆದಂತೆ, ‘ನನ್ನ ನಾರಿ’, ‘ಸಗ್ಗದ ಹಂಗ್ಯಾಕ’, ‘ಮದುವೆ ಹಾಡು’ ‘ಉಸಿರು ಮತ್ತು ನೀನು’ ಸುಂದರವಾಗಿ ಸರಳವಾಗಿ ಓದಿಸಿಕೊಂಡರೆ, ‘ನಾಂದಿ’ಯ ಓದಿನಲ್ಲಿ ಮಧುರಾನುಭವ, ಬದುಕಿನ ನಿಜಾರ್ಥ ತಿಳಿಯುತ್ತದೆ.
‘ಪ್ರೇಮ’, ‘ಕಾಡಬೇಡ ಹುಡುಗಿ’, ‘ಏನೇ’, ಗಂಡಿನ ಒಲವಿನ ಪ್ರೇಮಕ್ಕೆ ಸಾಕ್ಷಿಯಾಗಿದ್ದು ಇನ್ನೂ ಅನೇಕ ಕವಿತೆಗಳು ಗಂಡು ಹೆಣ್ಣಿನ ನಡುವೆ ಬಂದ್ಹೋಗುವ ಸುಖಾನುಭವ, ವಿಶೇಷ ಸಂಗತಿಗಳನ್ನು ಪ್ರತಿಬಿಂಬಿಸುತ್ತವೆ.
SOMEಸಾರದಲ್ಲಿ ರಸಿಕತನ ಎನ್ನುವುದು ಎಂದಿಗೂ ಮುಪ್ಪಾಗುವುದಿಲ್ಲ. ನವ ಜೋಡಿಗಳಂತೆ, ಮುದಿ ಜೋಡಿಗಳೂ ತಮ್ಮ ಪ್ರೇಮಾನುಭವವನ್ನು ರಸಮಯವಾಗಿ ಹಂಚಿಕೊಳ್ಳಬಹುದು, ಹಂಚಿಕೊಳ್ಳಬೇಕು ಸಹ. ಅಂದಾಗಲೇ ಜೀವನ ಸಾರ್ಥಕ, ನೆಮ್ಮದಿ ಕೂಡ ಎಂಬ ಭಾವ… ನಮ್ಮ “ಅಜ್ಜನ ಕೊಡೆ”ಯ ಕವಿತೆಯಲ್ಲಿ ಕಾಣಸಿಗುತ್ತದೆ. ಅಜ್ಜ ಅಜ್ಜಿಗೆ ತನ್ನ ಕೊಡೆಯ ಜೊತೆಗೆ ಮುತ್ತು ಕೇಳುವ ಶೈಲಿ, ಓದುಗನೆದೆಯಲ್ಲಿ ಪುಳಕವನ್ನು ಹುಟ್ಟಿಸುತ್ತದೆ.
ಕವಿತೆಗಳನ್ನು ಬರೆಯಬೇಕೆಂದು ಕೂತವರು ಈ ಕವಿಯಲ್ಲ ಅನಿಸುತ್ತದೆ. ಸಂದರ್ಭೋಚಿತವಾಗಿ ಕಾವ್ಯ ಹುಟ್ಟುತ್ತದೆ. ಹಾಗೆ ತಾನಾಗಿಯೇ ಹುಟ್ಟಿದ ಕವಿತೆಯಲ್ಲಿ ನೈಜತೆ ಇರುತ್ತದೆ. ಈ ಮಾತಿಗೆ ಸಾಕ್ಷಿಯಾಗಿ ಅನೇಕ ಕವಿತೆಗಳು ಈ ಕೃತಿಯಲ್ಲಿ ಸಿಗುತ್ತವೆ. ಅವುಗಳಲ್ಲಿ ‘ಸ್ವಾಗತ’ ಕವಿತೆ ಕೂಡ ಒಂದು. ಹುಟ್ಟಿದ ಮಗುವನ್ನು ಭುವಿಗೆ, ಭುವಿಯ ಪರಿಚಯದೊಂದಿಗೆ, ನೀತಿ ಮಾತುಗಳೊಂದಿಗೆ ಸ್ವಾಗತಿಸುವ ಪರಿ ಅಮೋಘ ಎನಿಸುತ್ತದೆ.
ಭಾವನೆಗಳು ಗರಿಗೆದರುವ ತಾಣ ಬಾತ್ ರೂಂ, ಅಲ್ಲಿ ಬಾಲ್ಯದಿಂದ ಅಂತ್ಯದವರೆಗೆ ಅನುಭವಿಸುವ ರಸಾತ್ಮಕ ಕ್ಷಣಗಳನ್ನು ಸೊಗಸಾಗಿ ವರ್ಣಿಸುತ್ತಾರೆ. ತಾಯಿಯ ವಾತ್ಸಲ್ಯ, ಗಂಡನ ರಸಿಕತೆ, ಹಾಡುಗಾರಿಕೆ, ಷವರ್ ಬುಡದಲ್ಲಿ ಮರೆತ ನೋವು, ಹೀಗೆ ಎಲ್ಲ ಸುಖದ, ದುಃಖದ, ಸ್ವಾನುಭವ ವ್ಯಕ್ತಪಡಿಸಿದ ರೀತಿ ಇಷ್ಟವಾಗುತ್ತದೆ.
” ಬಚ್ಚಲೆಂಬುದು ಬರೀ ಬಚ್ಚಲಲ್ಲ ಕಾಣ
ನಮ್ಮ ಕೊಳೆ ತೊಳೆದು ಶುದ್ಧಗೊಳಿಸುವ
ಪವಿತ್ರ ತಾಣ…. “
ನಮ್ಮ ಎಲ್ಲ ಕಲ್ಮಷಗಳನ್ನು ಸಹಿಸಿ, ಹೀರಿ.. ನಮ್ಮನ್ನು ಶುಚಿಗೊಳಿಸುವ ಪವಿತ್ರ ತಾಣ ಎಂಬುದು ಸತ್ಯತೆಯ ಪ್ರತಿಬಿಂಬವಾಗಿ ಓದುಗನ ಗೋಚರತೆಗೆ ಕಾಣುವಂತೆ ಬರೆದಿದ್ದಾರೆ.
ಹೂಗಳಿಗೆ ಹೂಗಳೇ ಸಾಟಿ ಎನ್ನುವ ಕವಿತೆ “ಹೂಗಳರಳಿದರೆ” ಘಮಿಸುತ್ತದೆ. ಹೂಗಳ ಆದರ್ಶ ನಾವು ಪಾಲಿಸಬೇಕೆನ್ನುವ ಕವಿ, ಹೂಗಳ ಬದುಕಿನ ಸಾರ್ಥಕತೆಯನ್ನು ಕವಿತೆಯಲ್ಲಿ ತಿಳಿಸುತ್ತಾರೆ.
“ಹೆಸರಲ್ಲೇನಿದೆ ಹೇಳಿ” ಕವಿತೆಯಂತೂ ಬಲು ವಿಮರ್ಶಾ ಕಾವ್ಯ ಎನ್ನಬಹುದು. ನೊಂದ ಮನಸುಗಳ ಸ್ವಚ್ಛಂದ ಹೆಸರಿಗೆ ಮತ್ತು ಬದುಕಿಗೆ ಸಂಬಂಧವಿಲ್ಲ ಎಂಬ ವಾದ ಸರಿಯೆನಿಸುತ್ತದೆ.
”ದರಿದ್ರನ ಹೊತ್ತವನ ಹೆಸರು- ಕುಬೇರ,
ಕುರಿ ಕಡಿಯುವವ- ಕರುಣಾಕರ
ಕುರೂಪಿ ಹುಡುಗಿಯ ಹೆಸರು- ಸುಂದರಿ
ನೀರಿಗಾಗಿ ಅಲೆಯುವವಳು- ಕಾವೇರಿ
ಬದುಕನ್ನು ಕತ್ತಲಾಗಿಸಿಕೊಂಡವಳು- ದೀಪ
ಹೇಡಿಯೊಬ್ಬನ ಹೆಸರು- ಪ್ರತಾಪ”
ಹೀಗೆ ಕವಿತೆಯುದ್ದಕ್ಕೂ, ಹೆಸರು ಮತ್ತು ಅವರ ಬದುಕನ್ನು ಹೋಲಿಸಿಕೊಂಡು ಸಾಮ್ಯತೆ ಇಲ್ಲದುದರ ಬಗ್ಗೆ ಹೇಳುತ್ತಾ, ಹೆಸರಲ್ಲೇನಿಲ್ಲ, ಬದುಕನ್ನು ಕಟ್ಟಿಕೊಳ್ಳುವುದು ನಮ್ಮ ಪ್ರಯತ್ನ, ಶ್ರಮದಲ್ಲಿದೆ ಎಂಬುದನ್ನು ಪರಿಣಾಮಾತ್ಮಕವಾಗಿ ಮನಕ್ಕಿಳಿಸುತ್ತಾರೆ. ಓದುಗರಿಗೆ ಬಲು ಮೆಚ್ಚಾಗುವ ಕವಿತೆ ಇದು.
ಹೀಗೆ ಕವಿ ಪ್ರಮೋದ ಸಾಗರ ಅವರ ಹಲವು ಕವಿತೆಗಳು, ಬದುಕು ಮತ್ತು ಸಂಸಾರವನ್ನು ತೂಗುತ್ತಾ, ಅಳೆಯುತ್ತಾ ತಮ್ಮ ಕಾವ್ಯದಲ್ಲಿ ಅಡಗಿಸಿಡುತ್ತಾರೆ. ಸಂಸಾರದ ಕುರಿತಾಗಿ ಹೇಳುತ್ತಲೆ, ಪ್ರೀತಿಯಿಂದ ಮನೆಯಲ್ಲಿ ಮತ್ತು ಸಮಾಜದಲ್ಲಿ ಬಾಳವುದನ್ನು ಕಲಿಸುತ್ತಾರೆ. ಸಾರವಿರದ ಸಂಸಾರದಲ್ಲಿ ಸುಖವಿಲ್ಲ, ಚಿಕ್ಕ ಬದುಕನ್ನು ನಿಸ್ಸಾರಗೊಳಿಸದೆ, ವ್ಯರ್ಥವಾಗಿಸಿಕೊಳ್ಳದೆ ಹೂವಿನಂತೆ(ಹೂಗಳರಳಿದರೆ) ಸಾರ್ಥಕತೆಯನ್ನು ಪಡೆದುಕೊಂಡು, ನವಿಲಂತೆ(ವಿಭಾವ) ತನ್ನ ಕಾರ್ಯದಲ್ಲಿ ಮಗ್ನತೆ ಪಡೆದು, ಬದುಕನ್ನು ರಂಜನೀಯವಾಗಿಸಿಕೊಳ್ಳಲು ದಾರಿ ತೋರಿ, ನಿನ್ನ ಮನದ ಖುಷಿಗೆ(ಖುಷಿಯಿಂದ ಬದುಕು) ಬದುಕು ಎನ್ನುತ್ತಾರೆ.
ಇನ್ನು ಕಾವ್ಯ ಶೈಲಿಯ ಬಗ್ಗೆ ಮಾತನಾಡುವುದೇನಿದೆ. ಒಬ್ಬ ಕವಿಯ ಕಾವ್ಯದ ಅಂತರಂಗ ಓದುಗನ ಓದಿಗೆ ಸುಲಭವಾಗಿ ದಕ್ಕಿದರೆ ಆ ಕಾವ್ಯ ಪರಿಪೂರ್ಣತೆಯನ್ನು ಪಡೆದಂತೆಯೇ ಸರಿ. ಅಷ್ಟಕ್ಕೂ Someಸಾರವೆಂಬುದೇ ಅರ್ಥವಾಗದ ಸಾರ. ಆ ಸಾರವನ್ನೂ ಅರ್ಥವಾಗದ ಪದ ಬಳಿಸಿ ಬರೆದರೆ ಹೇಗೆ? ಸರಿ ಆಗೊಲ್ಲ ಅನ್ಸುತ್ತೆ. ಇದನ್ನರಿತೇ ಕವಿ, ಬಹುಮುಖ ಪ್ರತಿಭೆಯ ಪ್ರಮೋದ ಸಾಗರರವರು ಅತ್ಯಂತ ಸರಳ ಭಾಷೆ, ಸರಳ ಪದಗಳಲ್ಲಿ ಬದುಕಿಗೆ ಹತ್ತಿರವಾದ Someಸಾರದ ಕುರಿತಾಗಿ ತಿಳಿಸಿಕೊಡುತ್ತಾರೆ.
ಹೀಗೆ ಮತ್ತಷ್ಟು ಕವಿತೆಗಳು ಶ್ರೀಯುತರಿಂದ ಹರಿದು ಬರಲಿ. ಎಲ್ಲ ಓದುಗರನ್ನು ರಂಜಿಸಲಿ. ಓದುಗರ Someಸಾರದಲ್ಲಿನ ಸಾರವನ್ನು ಹೆಚ್ಚಿಸಲಿ ಎಂದು ಹಾರೈಸುತ್ತಾ ನನ್ನ ಮಾತುಗಳಿಗೆ ವಿರಾಮ ನೀಡಿ ನನ್ನ Someಸಾರದ ಕಡೆ ಗಮನಹರಿಸುತ್ತೇನೆ. ಮರೆತಿದ್ದೆ, ಅಂದ ಹಾಗೆ ನಾನೂ ಈ ಲೇಖನವನನ್ನು ನನ್ನ ಶ್ರೀಮತಿಯವರಿಗೆ ಅರ್ಪಿಸುತ್ತೇನೆ…
– ವರದೇಂದ್ರ ಕೆ ಮಸ್ಕಿ
9945253030
ಪುಸ್ತಕಗಳಿಗಾಗಿ ಸಂಪರ್ಕಿಸಿ
– ಪ್ರಮೋದ ಸಾಗರ (ವಿಶ್ವ ಖುಷಿ ಪ್ರಕಾಶನ)
96866 05563