ಭಾವ ಕುಸುಮ ನಮನ,,,,,,

ಭಾವ ಕುಸುಮ ನಮನ,,,,,,

ಅಮ್ಮ, ನೀ ನಮ್ಮ ಅರಿವಿನ ಜ್ಞಾನಜ್ಯೋತಿಯಮ್ಮ
ಗುರು ಲಿಂಗ ಜಂಗಮ ಪ್ರೇಮಿ ನೀನಮ್ಮ

ಮಹಾಂತರ ನುಡಿಗಳೇ ನಿನಗೆ ಆದರ್ಶವಮ್ಮ
ಶರಣರ ವಚನಗಳಂತೆ ನೀ ನಡೆದೆಯಮ್ಮ

ಕರುಳಬಳ್ಳಿಯನ್ನು ಹುಲುಸಾಗಿ ಬೆಳೆಸಿ
ಹರುಷಪಟ್ಟ ಶ್ರಮಜೀವಿ ನೀನಮ್ಮ
ಪ್ರೀತಿ ಕರುಣೆ ಮಮತೆಯ ಹಿರಿಹೊಳೆ ನೀನಮ್ಮ

ಸಂತಸಕ್ಕೆ ಇನ್ನೊಂದು ಹೆಸರೇ ನೀನಮ್ಮ
ನಮ್ಮ ಮೇಲೆ ನಿಮಗೆ ಮುನಿಸೇನಮ್ಮ

ಆ ದೇವನ ಕರೆಗೆ ಓಗೊಟ್ಟು
ನಮ್ಮನ್ನೆಲ್ಲ ಅಗಲಿದೆ ಏನಮ್ಮ
ಇಲ್ಲ ಇಲ್ಲ ನೀ ನಮ್ಮೆಲ್ಲರ ಮನದಲ್ಲಿ
ಹಚ್ಚ ಹಸಿರಾಗಿ ಇರುವೆಯಮ್ಮ

ಬಯಲಲ್ಲಿ ಬಯಲಾಗಿ ಬಸವಚೇತನ ನೀನಾದೆಯಮ್ಮ
ಭಾವ ಪುಷ್ಪವಾಗಿ ಅರಳಿ ಹಣ್ಣಾಗಿ
ಆ ದೇವನ ಬಳಿಗೆ ಸಲ್ಲಿದೆಯಮ್ಮ

ನಿನ್ನಂಥ ಅಮ್ಮ ಸಿಗುವಳೇನಮ್ಮ
ನಮ್ಮ ಮನೆಯ ಹೊನ್ನ ಕಳಸ ನೀನಮ್ಮ
ನಮ್ಮೆಲ್ಲರ ಸಗ್ಗದ ಸಿರಿ ನೀನಮ್ಮ
ಇಂದು ತಬ್ಬಲಿ ನಾವಾದೆವಮ್ಮ

ಮತ್ತೆ ನಮ್ಮ ಭಾಗ್ಯದ ಹೊನಲಾಗಿ ನೀ ಬಾರಮ್ಮ,
ನೀ ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗುವೆವಮ್ಮ

ನಿನಗೆ ಶರಣು ಶರಣು ಅಶ್ರುತರ್ಪಣ.

ಸುನಿತಾ ಅಂಗಡಿ ಇಲಕಲ್ಲ

Don`t copy text!