ಕನಸು ಕಳೆದಾಗ

ಕನಸು ಕಳೆದಾಗ

(ಕತೆ)

ನಾನು ಆ ಚಿಕ್ಕ ಕೊಣೆಯ ಮುಚ್ಚಿದ ಬಾಗಿಲನ್ನೆ ನೋಡುತ್ತಿದ್ದೆ. ನಾಲ್ಕು ಗೊಡೆಗಳು, ಒಂದು ಚಿಕ್ಕ ಕಿಟಕಿ ಮತ್ತು ಒಂದು ಬಾಗಿಲು, ಮೂಲೆಯಲ್ಲಿ ಚಿಕ್ಕ ಕಟ್ಟೆಯ ಮೇಲೆ ಗ್ಯಾಸ್ ಓಲೆ, ಪಕ್ಕದ ಚಿಕ್ಕ ರ‍್ಯಾಕ್‌ನಲ್ಲಿ ನಾಲ್ಕು ಪಾತ್ರೆಗಳು, ನಾಲ್ಕು ತಟ್ಟೆಗಳು, ಇದು ನಮ್ಮ ಮನೆ. ಪಕ್ಕದ ಕೊಣೆಯಿಂದ ಶಬ್ಧ ಕೇಳಿಸುತ್ತಿತ್ತು. ಆ ಕೊಣೆ ಹಾಗೂ ಅದರ ಪಕ್ಕದ ಎರಡೂ ಕೊಣೆಗಳಲ್ಲಿ ಇದ್ದವರು ಶಂಕರನ ಸಹೋದರ ಸಂಬಂಧಿಗಳು. ಒಬ್ಬ ಆತನ ಚಿಕ್ಕಪ್ಪನ ಮಗ ಹಾಗೂ ಇಬ್ಬರು ದೂರದ ಮಾವನ ಮಕ್ಕಳು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಜೊತೆಯಲ್ಲಿಯೇ ಬಂದವರು.

ಶಂಕರ ಯಾರು ಅಂತಿರಾ? ನನ್ನ ಗಂಡ, ನನ್ನ ಈ ಎರಡು ಕರುಳಿನ ಕುಡಿಗಳ ಅಪ್ಪ. ನನ್ನ ಕಣ್ಣುಗಳಲ್ಲಿ ಬೆಂಗಳೂರಿನ ಭವ್ಯ ಚಿತ್ರಣ ತುಂಬಿ ಈ ಕೊಣೆಗೆ ಕರೆತಂದ ಕನಸುಗಾರ. ಮೂರು ಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತರೂ ಪಾಸಾಗಿರಲಿಲ್ಲ. ಹೊಲಗಳಿದ್ದರೂ ಆತನಿಗೆ ವ್ಯವಸಾಯದಲ್ಲಿ ಆಸಕ್ತಿ ಇರಲಿಲ್ಲ. ಊಳುವುದಕ್ಕೆ ಬಾಡಿಗೆಗೆ ತಂದ ಟ್ರಾಕ್ಟರ ಮಾತ್ರ ಆಸಕ್ತಿಯಿಂದ ತಾನೇ ಓಡಿಸಲು ಕಲಿತುಕೊಂಡಿದ್ದ. ಹಾಗೆಯೇ ಸ್ನೇಹಿತರ ಜೊತೆ ಕಾರ ಡ್ರೈವಿಂಗ್ ಸಹ ಕಲಿತುಕೊಂಡಿದ್ದ ಅಷ್ಟೇ. ಆದರೆ ಕನಸುಗಳು ರೆಕ್ಕೆ ಕಟ್ಟಿಕೊಂಡು ಆಕಾಶದಲ್ಲಿ ಹಾರುತ್ತಿದ್ದವು. ಉದ್ಯೋಗವನ್ನರಿಸಿ ಬೆಂಗಳೂರಿಗೆ ಹೋದ ಯುವಕರು ಊರಿಗೆ ಬಂದಾಗ ಅವರ ನಡೆ ನುಡಿ ವೇಷ-ಭೂಷಣ, ಅವರ ಮನೆಯಲ್ಲಿ ಕಾಣುತ್ತಿದ್ದ ಟಿವ್ಹಿ, ಸೋಪಾ, ಅಲಂಕಾರಿಕ ವಸ್ತುಗಳು ಆತನ ಕಣ್ಣು ಕುಕ್ಕುತ್ತಿದ್ದವು. ಆಸೆಗಳು ಗರಿಗೆದರಿ ಆತನನ್ನು ಪಟ್ಟಣಕ್ಕೆ ಸೆಳೆದಿದ್ದವು. ಮನೆಯಲ್ಲಿ ಹೇಳಿದಾಗ ತಂದೆ ಕೂಗಾಡಿದ್ದರು. ಮದುವೆ ಮಾಡಿದರೆ ಜವಾಬ್ದಾರಿಯಿಂದ ಸುಧಾರಿಸುವನು ಎಂದು ಅಣ್ಣನ ಜೊತೆಗೆ ತಮ್ಮನ ಮದುವೆ ಮಾಡಿ ಮುಗಿಸಿದ್ದರು. ಕನ್ನಡ ಸಿನಿಮಾಗಳ ನಾಯಕನಂತೆ ಕಾಣುತ್ತಿದ್ದ ಆತನ ಜೊತೆಗೆ ಬಣ್ಣ ಬಣ್ಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಅವರ ಮನೆ ಪ್ರವೇಶಿಸಿದ್ದೆ.
ಸ್ವಲ್ಪ ದಿನ ಶಂಕರನ ಕಣ್ಣುಗಳಲ್ಲಿ, ಕನಸುಗಳಲ್ಲಿ ನಾನೆ ತುಂಬಿಕೊಂಡು ಪಟ್ಟಣದ ಕನಸು ಮರೆಯಾಗಿತ್ತು. ಅಣ್ಣನಿಗೆ ಹೊಲದ ಕೆಲಸಗಳಲ್ಲಿ ನೆರವಾಗುತ್ತಿದ್ದ. ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಆಸಕ್ತಿ ತೋರಲು ಪ್ರಾರಂಭಿಸಿದ್ದ.
ಮದುವೆಯಾಗಿ ಆರು ತಿಂಗಳು ಕಳೆದಿತ್ತು. ಹಾಗೆ ಒಂದು ದಿನ ಮರೆಯಾಗಿ ಬಿಟ್ಟಿದ್ದ. ಆತನ ಜೊತೆ ನಾಲ್ಕು ಜೊಡು ಬಟ್ಟೆಗಳೂ ಮರೆಯಾಗಿದ್ದವು. ವಿಚಾರಿಸಿದಾಗ ಊರಿನ ಐದು ಹುಡುಗರು ಸಹ ಮಾಯವಾಗಿದ್ದರು ಎಂದು ತಿಳಿಯಿತು. ಅದರಲ್ಲಿ ನಾಲ್ವರು ನಮ್ಮ ಹುಡುಗರೇ! ನಂತರ ಅವರ ಮುಖ ನೋಡಿದ್ದು ದೀಪಾವಳಿಯ ಹಿಂದಿನ ದಿನ.
ಜೀನ್ಸ್ ಪ್ಯಾಂಟ ತೊಟ್ಟು ಕೈಯಲ್ಲಿ ದೊಡ್ಡ ಸುಟಕೇಸ ಹಿಡಿದು ಮನೆ ಪ್ರವೇಶಿಸಿದಾಗ ಎಲ್ಲರೂ ಶಂಕರನನ್ನು ಬೆರಗಾಗಿ ನೋಡಿದ್ದರು. ಸಿಟ್ಟಿನಿಂದ ಗಂಟಾಗಿದ್ದ ತಂದೆಯ ಹಣೆ ಆತ ಅವರ ಕೈಯಲ್ಲಿ ಗರಿಗರಿ ನೋಟುಗಳ ಸಣ್ಣ ಕಟ್ಟನ್ನು ಇಟ್ಟು ನಮಸ್ಕಾರ ಮಾಡಿದಾಗ ಆಚ್ಚರಿಯಿಂದ ಅರಳಿತ್ತು. ಎಲ್ಲರಿಗೂ ತಂದ ಕಾಣಿಕೆಗಳನ್ನು ನೀಡಿ ತನ್ನ ಬೆಂಗಳೂರಿನ ಸಾಹಸಗಾಥೆಯನ್ನು ಹೊರಗೆಡಹಿದ್ದ ಮನೆಯವರನ್ನು ಒಪ್ಪಿಸುವುದು ಕಷ್ಟವೆಂದು ಅರಿತಿದ್ದ ಸಮ ವಯಸ್ಕರಾದ ಆ ಯುವಕರು ಗುಟ್ಟಾಗಿ ಯೋಜನೆ ಹಾಕಿ ಬೆಂಗಳೂರಿನಲ್ಲಿದ್ದ ತಮ್ಮ ಸ್ನೇಹಿತರನ್ನು ಸಂಪರ್ಕಿಸಿ, ಇಲ್ಲಿಂದ ಹೊರಟು ಬಿಟ್ಟಿದ್ದರು. ಹೋದ ಎರಡು ವಾರಗಳಲ್ಲಿ ಎಲ್ಲರಿಗೂ ಬೇರೆ ಬೇರೆ ಕಡೆ ಕೆಲಸ ದೊರೆತಿತ್ತು. ಈಗ ತಮ್ಮದೇ ಆದ ಒಂದು ಮನೆಯನ್ನು ಬಾಡಿಗೆ ಹಿಡಿದು ಅಲ್ಲಿ ನೆಲೆಗೊಳ್ಳಲು ಸಾಧ್ಯವಾಗಿತ್ತು. ದೊಡ್ಡ ನಗರ, ಸಾಕಷ್ಟು ಉದ್ಯೋಗ ಅವಕಾಶಗಳು, ಕೆಲಸ ಮಾಡಿದಷ್ಟು ಹೆಚ್ಚು ಹಣ ಗಳಿಸುವ ಅವಕಾಶಗಳು, ಹೆಚ್ಚು ಹಣಗಳಿಸಲು ಸಾಧ್ಯವಾದರೆ ಊರಿಗೆ ಸಹ ಸ್ವಲ್ಪ ಕಳುಹಿಸಬಹುದು, ಮನೆಯ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಅನೇಕ ವಿಚಾರಗಳು ಮಾತಿನಲ್ಲಿ ಹಾಯ್ದು ಬಂದು ಎಲ್ಲರ ಮುಖದಲ್ಲಿ ಸಂತಸ ತಂದಿದ್ದವು. ನನ್ನ ಜೊತೆ ರಾತ್ರಿಯಿಡಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಿದ್ದ. ಅಲ್ಲಿನ ರಸ್ತೆಗಳು, ಬಣ್ಣ ಬಣ್ಣದ ದೀಪಗಳು, ಮೆಟ್ರೊ ರೈಲು, ಮೆಜೆಸ್ಟಿಕ್, ಗಾಂಧಿ ನಗರ, ದೊಡ್ಡ ದೊಡ್ಡ ಮಾಲ್‌ಗಳು ಇತ್ಯಾದಿ.
ತನ್ನ ಕಣ್ಣುಗಳಲ್ಲಿದ್ದ ಕನಸುಗಳನ್ನೆಲ್ಲ ನನ್ನ ಕಣ್ಣಿಗೆ ತುಂಬಿದ್ದ. ಆತನ ಜೊತೆ ಬೆಂಗಳೂರಿಗೆ ಹೋಗುವ ಆಸೆ ನನ್ನಲ್ಲಿ ಸಣ್ಣಗೆ ಚಿಗುರಿತ್ತು. ಆದರೆ ಆ ಆಸೆ ಕೈಗೂಡಿದ್ದು ನಾಲ್ಕು ವರ್ಷಗಳ ನಂತರ. ದೀಪಾವಳಿಹಬ್ಬ ಮುಗಿಸಿ ಒಬ್ಬನೇ ಮರಳಿದ್ದ ಶಂಕರ. ನಂತರ ೩-೪ ತಿಂಗಳಿಗೆ ಒಮ್ಮೆ ಊರಿಗೆ ಭೇಟಿ ನೀಡುತ್ತಿದ್ದು ನನ್ನ ಕನಸಿಗೆ ಸ್ವಲ್ಪ ಸ್ವಲ್ಪ ನೀರೆರೆದು ಹೋಗುತ್ತಿದ್ದ. ಮದುವೆಯಾದ ಒಂದು ವರ್ಷದಲ್ಲಿ ಮಗಳು ಕೀರ್ತಿ ಹುಟ್ಟಿ ಮಡಿಲು ತುಂಬಿ ತಾಯ್ತನ ಅರಿವಾಗುವುದರಲ್ಲಿಯೇ ಕಿರಣ ಮಡಿಲಿಗೆ ಬಂದಿದ್ದ. ಅದೇ ಅವಧಿಯಲ್ಲಿ ಶಂಕರನ ಜೊತೆಗಾರರ ಮದುವೆಯೂ ಆಗಿ ಅವರೆಲ್ಲ ಸಂಸಾರಸ್ಥರಾಗಿದ್ದರು. ನಾಲ್ಕು ವರ್ಷಗಳಲ್ಲಿ ತಮ್ಮೆಲ್ಲ ಮೊಜು-ಮಸ್ತಿ ಮುಗಿದು ಕೈಯಲ್ಲಿ ಸ್ವಲ್ಪ ಹಣ ಉಳಿತಾಯವಾದ ನಂತರ ಒಂದೇ ಕಟ್ಟಡದಲ್ಲಿ ಕೊಣೆಗಳು ದೊರೆತಾಗ ನಾಲ್ಕು ಸಹೋದರರು ಸಂಸಾರಗಳನ್ನು ಅಲ್ಲಿಗೆ ತರುವ ಯೋಚನೆ ಮಾಡಿದ್ದರು. ಅನೇಕ ವರ್ಷಗಳಿಂದ ಕನಸಿನಲ್ಲಿ ಕಾಣುತ್ತಿದ್ದ ಆ ಮಾಯಾ ನಗರಿಯನ್ನು ನೋಡುವ ಉತ್ಸಾಹ ಮನಸ್ಸಿನಲ್ಲಿ ಮೂಡಿದ ಅಲ್ಪ ಸ್ವಲ್ಪ ಜವಾಬ್ದಾರಿಯ ಅಂಜಿಕೆಯನ್ನು ನುಂಗಿ ಹಾಗಿತ್ತು. ಅರಳಿದ ಕಣ್ಣುಗಳಿಂದ ನಗರವನ್ನು ಅವಲೋಕಿಸಿದ್ದೆ. ಮೊದಲ ಬಾರಿಗೆ ‘ನನ್ನ’ ಮನೆಯಲ್ಲಿ ಪ್ರವೇಶಿಸಿದ್ದೆ. ಸ್ವಲ್ಪ ದಿನ ಸೀಮೆ ಎಣ್ಣೆ ಸ್ಟೊವ್‌ನಲ್ಲಿ ಅಡಿಗೆ ಮಾಡಿದ ನಂತರ ಗ್ಯಾಸ್ ಬಂದಿತ್ತು. ನಾಲ್ಕು ಜನ ನಮ್ಮವರೇ ಅಕ್ಕ ಪಕ್ಕದಲ್ಲಿ ಇದ್ದದ್ದು ಅನುಕೂಲವೆನಿಸಿತ್ತು. ಕನಸಿನಲ್ಲಿ ಕಂಡ ಭವ್ಯತೆ ಇಲ್ಲದಿದ್ದರೂ ನನ್ನದೇ ಆದ ಹಿತಕರವಾದ ಜಗತ್ತು ನನ್ನೆದರು ತೆರೆದುಕೊಂಡಿತ್ತು. ಭರವಸೆಗಳ ಬೆಳಕು ಪ್ರಖರವಾಗಿತ್ತು. ಆ ನಾಲ್ಕು ಗೊಡೆಗಳ ಮಧ್ಯೆ ಹಾಗೂ ರಜೆಯ ದಿನಗಳಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಬಣ್ಣ ಬಣ್ಣದ ದೀಪಗಳಲ್ಲಿ ನನ್ನ ಕನಸುಗಳನ್ನು ಹುಡುಕುತ್ತ ದಿನಗಳು ಜಾರುತ್ತ ಸಾಗಿದವು. ಮೂರು ವರ್ಷಗಳು ಕಳೆದು ಮಗಳು ಕೀರ್ತಿ ಹತ್ತಿರದ ಸರಕಾರಿ ಶಾಲೆಗೆ ಸೇರಿದಾಗ ಮಕ್ಕಳ ಜವಾಬ್ದಾರಿಯ ಅರಿವಾಗಿತ್ತು. ಮಗುವನ್ನು ಶಾಲೆಗೆ ಬಿಡಲು, ಕರೆಯಲು ಹೊಗುತ್ತ ಸುತ್ತಲಿನ ಜಗತ್ತು ತೆರೆದುಕೊಂಡಿತ್ತು. ಹಾಗೆಯೇ ಕೆಲವು ಸ್ನೇಹಿತೆಯರು ಸಿಕ್ಕಿದ್ದರು.
ಶಂಕರ ಆವತ್ತು ಮನೆಗೆ ಬೇಗ ಬಂದಿದ್ದ. ನಾಳೆಯಿಂದ ‘ಲಾಕ್‌ಡೌನ್’ ಆಗಬಹುದು ಎಂದಿದ್ದ. ನನಗೆ ಅರ್ಥವಾಗಿರಲಿಲ್ಲ. ಬೆರಗುಗಣ್ಣಿಂದ ನೋಡುತ್ತಿದ್ದ ನನ್ನನ್ನು ಸರಿಸಿ ಪಕ್ಕದ ಮನೆಯಲ್ಲಿದ್ದ ಚಿಕ್ಕ ಟಿವ್ಹಿ ನೋಡಲು ಹೋಗಿದ್ದ. ಪ್ರಧಾನ ಮಂತ್ರಿಯವರ ಭಾಷಣ ನಡೆದಿತ್ತು. ಅದೇ ಆ ‘ಲಾಕ್‌ಡೌನ್’ ಬಗ್ಗೆ ಮಾತನಾಡುತ್ತಿದ್ದರು ಎನಿಸುತ್ತದೆ. ಅವರ ಭಾಷೆ ಅರ್ಥವಾಗದೇ ಇದ್ದರೂ ಆ ಪದ ಅನೇಕ ಸಲ ಕೇಳಿ ಬಂದಿತ್ತು. ತಡ ರಾತ್ರಿಯವರೆಗೆ ಶಂಕರ ಅಲ್ಲಿಯೇ ಕುಳಿತು ಎಲ್ಲರೊಡನೆ ಕನ್ನಡ ವಾರ್ತೆಗಳನ್ನು ಕೇಳುತ್ತಿದ್ದ. ನಂತರ ಸಾಕಷ್ಟು ಚರ್ಚೆಗಳು ಅಣ್ಣ ತಮ್ಮಂದಿರಲ್ಲಿ ನಡೆದಿದ್ದವು. ನನಗೆ ತಿಳಿದು ಬಂದಿದ್ದಷ್ಟೇ.. ನಾಳೆಯಿಂದ ಎಲ್ಲರ ಆಫೀಸ್, ಶಾಲೆ, ಅಂಗಡಿಗಳು ಬಂದ ಇರುತ್ತವೆ ಎಂಬುದು.
ಕರೋನಾ ! ಎನಿದು ಕರೋನಾ? ಚೀನ ದೇಶದಿಂದ ಬಂದಿದೆಯಂತೆ ! ಮುಟ್ಟಿದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆಯಂತೆ ! ಅದಕ್ಕೆ ಯಾವ ಮದ್ದು ನಾಟುವುದಿಲ್ಲವಂತೆ ! ಎಲ್ಲರೂ ಬಾಯಿ ಮೂಗು ಮುಚ್ಚಿಕೊಂಡು ಅಡ್ಡಾಡ ಬೇಕಂತೆ ! ಏನೇನೊ ಅಂತೆ ಕಂತೆಗಳ ಸುರಿಮಳೆ…
ಒಬ್ಬೊಬ್ಬರು ಒಂದೊಂದು ರೀತಿ ವಿವರಣೆ ನೀಡುತ್ತಿದ್ದರು.
ಎಲ್ಲರ ದಿನಚರಿ ಬದಲಾಗಿತ್ತು. ಹೊರಗಡೆ ಹೋಗಲು ಎಂಥದೊ ಭಯ ಇಣಕಿ ನೋಡಿದಾಗ ಕಂಡಿದ್ದು ಜನರಿಲ್ಲದೇ ಬಣಗುಡುತ್ತಿದ್ದ ಖಾಲಿ ರಸ್ತೆ ಮತ್ತು ಬಾಗಿಲು ಮುಚ್ಚಿದ ಮನೆಗಳು. ದಿನಗಳು ಕಳೆದಿದ್ದವು. ಮನೆಯಲ್ಲಿದ್ದ ದಿನಸಿ ತೀರುತ್ತಾ ಬಂದಿತ್ತು. ಮೂರು ತಿಂಗಳು ಮನೆಯ ಬಾಡಿಗೆ ಇಲ್ಲ ಎಂದು ಶಂಕರ ಯಾರಿಗೂ ಹೇಳುತ್ತಿದ್ದುದು ಕೇಳಿಸಿತ್ತು. ಆದರೆ ನನಗೆ ನಂಬಿಕೆ ಬರಲಿಲ್ಲ. ಹುಬ್ಬು ಗಂಟಿಕ್ಕಿದ ಮನೆ ಮಾಲೀಕನ ಮುಖ ನೆನಪಿಗೆ ಬಂದಿತ್ತು. ಕೆಲವು ಹೆಂಗಸರು ಬಂದಿದ್ದರು. ಯಾವುದೊ ಸಂಘದವರಂತೆ. ಪ್ರತಿ ಮನೆಗೆ ಒಂದು ಚೀಲ ಕೊಟ್ಟು ಹೊದರು. ತೆಗೆದು ನೋಡಿದಾಗ ಅಕ್ಕಿ, ಬೆಳೆ, ಹಿಟ್ಟು ಹಾಗೂ ಮನೆಗೆ ಬೇಕಾಗುವ ಕೆಲ ದಿನಸಿ ಕಾಣಿಸಿತ್ತು. ಬೇಡ ಎಂದು ಹೇಳಲು ಬಾಯಿ ತೆಗೆಯುವಸ್ಟರಲ್ಲಿ ಪಕ್ಕದ ಮನೆಯ ರತ್ನಕ್ಕ ಕಣ್ಣು ಸನ್ನೆ ಮಾಡಿದ್ದರು. ಸುಮ್ಮನೇ ತೆಗೆದುಕೊಂಡಿದ್ದೆ. ತಿಂಗಳು ಕಳೆದಿತ್ತು ಹಿಟ್ಟಿನ ಡಬ್ಬಿ, ಶಂಕರನ ಜೇಬು ಎರಡೂ ಖಾಲಿಯಾಗಿತ್ತು. ಊರಿನಿಂದ ಪೋನ ಬರುತ್ತಿತ್ತು. ಮಾವನವರ ಧ್ವನಿಯಲ್ಲಿ ಕಾಳಜಿ ಇರುತ್ತಿತ್ತು. ಆದರೆ ಅವರಿಗೆ ಅವರದೇ ಸಮಸ್ಯೆಗಳಿದ್ದವು. ಲಾಕ್‌ಡೌನ ಹಾಗೆ ಮುಂದುವರೆದಿತ್ತು. ಕರೋನಾ ನಿವಾರಣೆಗೆ ತಟ್ಟೆ ಭಾರಿಸಿದ್ದಾಗಿತ್ತು, ದೀಪ ಬೆಳಗಿಸಿದ್ದಾಗಿತ್ತು ಆದರೆ ಪರಿಸ್ಥಿತಿ ಮಾತ್ರ ದಿನೇ ದಿನೇ ಭಯಾನಕ ರೂಪ ತಳೆಯುತ್ತಿತ್ತು. ಮನೆಯಲ್ಲಿ ಕುಳಿತ ಪುರುಷರು ಮಕ್ಕಳು ಕಂಗೆಟ್ಟಿದ್ದರು. ಊರಿಗೆ ವಾಪಸ್ ಹೊಗುವ ಆಲೋಚನೆ ಪದೆ ಪದೆ ಮನದಲ್ಲಿ ಕಾಡುತ್ತಿತ್ತು. ಆದರೆ ಯಾರಿಗೂ ದಾರಿ ತೊರುತ್ತಿರಲಿಲ್ಲ. ಬಸ್, ಟ್ರೆನ್ ಇಲ್ಲದೇ ಹೇಗೆ ಹೋಗಲು ಸಾಧ್ಯ? ಶಂಕರ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಬಂದಾಗಿದ್ದು. ಆತ ಕೆಲಸಕ್ಕೆ ಮರಳುವ ಸಾಧ್ಯತೆಗಳು ಕಾಣುತ್ತಿರಲಿಲ್ಲ.
ಬೇರೆಯವರದ್ದು ಹೆಚ್ಚು ಕಡಿಮೆ ಅದೇ ಪರಿಸ್ಥಿತಿ. ಇದ್ದ ಒಂದು ಬಟ್ಟಲು ಹಿಟ್ಟಿನಿಂದ ಗಂಜಿ ಮಾಡಿ ಮಕ್ಕಳಿಗೆ ಕುಡಿಸಿ ಬರಿಹೊಟ್ಟೆ ಮಲಗಿದಾಗ ಬೆಂಗಳೂರಿನ ಕನಸು ಹರಿದು ಊರಿಗೆ ಮರಳುವ ನಿರ್ಧಾರ ಗಟ್ಟಿಯಾಗಿತ್ತು. ಚಿಕ್ಕದಾದರೂ ನನ್ನದೇ ಸ್ವಂತ ಮನೆಯಲ್ಲಿ ಸುಂದರವಾದ ಬದುಕು ಕಟ್ಟಿಕೊಂಡಿದ್ದೆ. ಬಿಟ್ಟು ಹೋಗಲು ಕರುಳು ಕಿತ್ತು ಬರುತ್ತಿತ್ತು. ಆದರೆ ಪರ್ಯಾಯ ಕಾಣುತ್ತಿರಲಿಲ್ಲ. ಹೆತ್ತ ಮಕ್ಕಳ ಹಸಿವು ಕರುಳು ಕುಕ್ಕುತ್ತಿತ್ತು.
ಅಗತ್ಯದ ಸಾಮಾನುಗಳನ್ನು ಮೂಟೆ ಕಟ್ಟಿಕೊಂಡು ಹೊರಟಿದ್ದೆವು. ರತ್ನಕ್ಕನ ಗಂಡ ಯಾವುದೊ ಲಾರಿಯವನಿಗೆ ಹೇಳಿಟ್ಟಿದ್ದರು. ಆದರೆ ಲಾರಿ ಬೆಂಗಳೂರ ಗಡಿ ದಾಟಲು ಸಾಧ್ಯವಾಗದೇ ನಮ್ಮನ್ನು ಅಲ್ಲೇ ಇಳಿಸಿ ಮರಳಿದಾಗ ಆಕಾಶ ಕಡಿದು ತೆಲೆಯ ಮೇಲೆ ಬಿದ್ದಂತೆ ಎನ್ನಿಸಿತ್ತು. ಬೇರೆ ದಾರಿ ಕಾಣದೇ ಒಂದೊಂದು ಮೂಟೆ ಹೊತ್ತು ಎಲ್ಲರೊಡನೇ ರಸ್ತೆಯ ಮೇಲೆ ನಡೆಯಲು ಪ್ರಾರಂಭಿಸಿದ್ದೆವು. ಯಾವುದೊ ದೇಶದಲ್ಲಿ ಜನ ರಸ್ತೆಯ ಮೇಲೆ ಬಿದ್ದು ಸಾಯುತ್ತಿದ್ದುದನ್ನು ಟಿವ್ಹಿಯಲ್ಲಿ ನೋಡಿದ್ದೆ. ಊರು ಮುಟ್ಟುವುದರಲ್ಲಿ ನಾನೂ ಹಾಗೇ ಸತ್ತು ಬೀಳುತ್ತೇನೆ ಅನಿಸಿತ್ತು. ಎದೆ ನಡುಗಿ ಮಕ್ಕಳನ್ನು ಹತ್ತಿರ ಎಳೆದುಕೊಂಡೆ. ರಸ್ತೆ ಬದಿಯಲ್ಲಿ ನಮ್ಮ ಹಾಗೆ ಗುಂಪು ಕಟ್ಟಿಕೊಂಡು ನಡೆಯುತ್ತಿದ್ದ ಜನರನ್ನು ನೋಡಿದಾಗ ಧೈರ್ಯ ತುಂಬಿತ್ತು. ನಡಿಗೆ ಸರಾಗವಾಗಿತ್ತು. ಮುಂದಿನ ಊರಿನಲ್ಲಿ ನೀರಿನ ಬಾಟಲಿ ಹಾಗೂ ಚಿತ್ರಾನ್ನದ ಪೊಟ್ಟಣ ನೀಡಿದ ಯುವಕರು ದೇವತೆಗಳಂತೆ ಕಾಣಿಸಿದ್ದರು. ಕಾಣದ ದೇವರ ಮೇಲೆ ನಂಬಿಕೆ ಇನ್ನೂ ಬಲವಾಗಿತ್ತು. ರಾತ್ರಿ ಯಾವುದೊ ಶಾಲೆಯ ಕಟ್ಟೆಯ ಮೇಲೆ ಎಲ್ಲರ ಜೊತೆ ಮಲಗಿ ಎದ್ದಾಗ ದಣಿವು ಆರಿ ಭರವಸೆಯ ಬೆಳಕು ಹರಿದಿತ್ತು. ಸ್ವಲ್ಪ ಬೇಗ ಬೇಗ ನಡೆದರೆ ಸಂಜೆಯವರೆಗೆ ಊರು ತಲುಪಬಹುದು ಎಂದ ಶಂಕರನ ಮಾತು ಕೇಳಿ ಮನಸ್ಸು ನಿರಾಳವಾಗಿತ್ತು. ಮುಖದ ಮೇಲೆ ನಗು ಅರಳಿತ್ತು. ಉದ್ದದ ಕ್ಯಾಮರಾ ಹಿಡಿದ ವ್ಯಕ್ತಿ ಶಂಕರನನ್ನು ಮಾತನಾಡಿಸುತ್ತಿದ್ದ. ಯಾವುದೊ ಟಿವ್ಹಿಯವರಂತೆ! ನನ್ನೆಡೆ ತಿರುಗಿ ಆತ ಕೇಳಿದ “ನಿಮ್ಮ ಊರಿಗೆ ಮರಳಿ ಹೋಗುತ್ತಿದ್ದಿರಿ. ನಿಮಗೆ ಹೇಗೆನಿಸುತ್ತಿದೆ?” ಏನು ಹೇಳಲಿ? ಕಣ್ಣುಗಳಲ್ಲಿ ಕನಸುಗಳನ್ನು ಹೊತ್ತು ಬಂದವರು ಕನಸುಗಳನ್ನು ಕಳೆದುಕೊಂಡು ಮರಳುತ್ತಿದ್ದೆವೆಯೇ? ಅಥವಾ ಹೊಸ ಕನಸುಗಳನ್ನು ಅರಿಸಿ ಮರಳಿ ಮಣ್ಣಿಗೆ ಮರಳುತ್ತಿದ್ದೆನೆಯೇ? ಸಂತೋಷವಾಗುತ್ತಿದ್ದೆಯೇ? ದುಃಖವಾಗುತ್ತಿದೆಯೇ? ಅರ್ಥವಾಗದೇ ಗೊಂದಲದಲ್ಲಿದ್ದಾಗ ಟಿವ್ಹಿಯಲ್ಲಿ ಕಾಣಿಸುತ್ತೆನೆ ಎಂದು ನೆನಪಾಗಿ ಸುಮ್ಮನೇ ಮುಖ ಅರಳಿಸಿ ನಕ್ಕಿದ್ದೆ.

ಪ್ರೋ. ರಾಜನಂದ ಗಾರ್ಘಿ, ಬೆಳಗಾವಿ

One thought on “ಕನಸು ಕಳೆದಾಗ

Comments are closed.

Don`t copy text!