ಹಳೆ ಧಾರವಾಡದ ನಿಜ ಜೀವನ ಸ್ವಾರಸ್ಯ
ನನ್ನ ಹೆಮ್ಮೆ ನನ್ನ ಧಾರವಾಡ
ಧಾರವಾಡದ ವಿಶೇಷತೆಗಳು: ದ್ಚಾರವಾಟ/ದಾರವಾಡ/ಧಾರವಾಡ(ಧಾರವಾರ) ಈಗ ಮತ್ತೆ ಧಾರವಾಡ ನಮ್ಮ ಹೆಮ್ಮೆ. ಧಾರವಾಡ ಏಳು ಗುಡ್ಡಗಳಿಂದ, ಏಳು ಕೆರೆಗಳಿಂದ ಕೂಡಿದೆ ಎನ್ನಲಾಗಿದೆ.
ಗುಡ್ಡಗಳು:
೧.ಮಾಳಮಡ್ಡಿ
೨.ಮದಾರಮಡ್ಡಿ
೩.ಎತ್ತಿನಗುಡ್ಡ
೪.ಮೈಲಾರಲಿಂಗನ ಗುಡ್ಡ(ಈಗಿನ(jss)
೫.ಉಳಿಬಸಪ್ಪನಗುಡ್ಡ
೬.ರಜತಗಿರಿ ಗುಡ್ಡ
೭.ತೇಜಸ್ವಿನಗರ(ಹೊಸಹೆಸರು)
ಕೆರೆಗಳು:
೧.ಹಾಲಗೇರಿ
೨.ಕೊಪ್ಪದಕೇರಿ
೩.ಎಮ್ಮಿಕೇರಿ
೪.ನುಗ್ಗಿಕೇರಿ
೫.ಕೋಳಿಕೇರಿ
೬.ಕೆಂಪಗೇರಿ
೭.ಕೆಲಗೇರಿ
ಬಾವಿಗಳು
೧.ಏಳಗಡೆಗಡೆ ಬಾವಿ
೨.ಜಕಣಿ ಬಾವಿ
೩.ನುಚ್ಚಂಬಲಿ ಬಾವಿ
೪.ಅಗಸರಬಾವಿ
೫.ಸಪ್ತಾಪೂರ ಬಾವಿ
ಧಾರವಾಡ ಎಂದಾಕ್ಷಣ ಎಲ್ಲರಿಗು ನೆನಪಾಗುವದು ಧಾರವಾಡ ಫೇಡಾ. ಅಷ್ಟೆ ಅಲ್ಲ
ಧಾರವಾಡದಲ್ಲಿ ಕಲ್ಲು ಎಸೆದರ ಸಾಕು ಅದು ಕವಿಗಳ ಮನಿಮೇಲೆ ಇಲ್ಲ ಸಂಗೀತಗಾರರ ಮನೆ ಮೇಲೆ ಬೀಳೋದು ಗ್ಯಾರಂಟಿ. ಅಷ್ಟು ಜನ ಇಲ್ಲಿ ಕಲಾವಿದರು, ಸಂಗೀತಗಾರರು, ಕವಿಗಳ ನಗರ ಇದು. ಅದರ ಹೊರತಾಗಿ ಹಳೇ ಧಾರವಾಡದ ವಿಶೇಷತೆ ನೀವು ತಿಳಿಯಬೇಕು. ನಾನಿರುವದು ಹಳೇ ಧಾರವಾಡ. ಮಂಗಳವಾರಪೇಟದಾಗ. ಹಳೇ ಧಾರವಾಡ ಅಂದರ ರವಿವಾರ ಪ್ಯಾಟಿ, ಶುಕ್ರವಾರಪ್ಯಾಟಿ ಕಾಮನಕಟ್ಟಿ, ಭೂಸಪ್ಯಾಟಿ, ಭೂಸಪ್ಪಚೌಕ, ಮಟ್ಟಿಪರಪ್ಪನ ಕೂಟ ಮಂಗ್ಯಾನ ಮಹಲ, ಹೊಸಯಲ್ಲಾಪೂರ. ಇದಕೆಲ್ಲ ಕಿರೀಟ ಇಟ್ಟಂಗ ಗಾಂಧಿಚೌಕ. ಇನ್ನು ಕೆ.ಸಿ.ಸಿ ಬ್ಯಾಂಕ ಗಡಿಯಾರ ಎಲ್ಲರ ಮನೆಗೂ ಗಡಿಯಾರ ಇದ್ದಂಗ. ಅದರ ತಾಸಿಗೊಮ್ಮೆ ಹೊಡಿಯೊ ಘಂಟಿ ಇಡೀ ಊರಿಗೆ ಕೇಳಸತಿತ್ತು. ರಾತ್ರಿ ಭೋಂಗಾ ಆತಂದರ ರಾತ್ರಿ ಒಂಭತ್ತ ಆತು ಅಂತ ಎಲ್ಲರು ಅಂಗಡಿ, ಮುಗ್ಗಟ್ಟುಗಳನ್ನ ಬಂದ ಮಾಡಾಕ ಚಾಲು ಮಾಡತಿದ್ದರ.
ಇನ್ನು ಊರ ಒಳಗೊಳಗೆ ಮೆಣಸಿನಕಾಯಿ ಓಣಿ, ಅಡಕಿ ಓಣಿ, ದೇಸಾಯಿ ಓಣಿ, ನಂದಿಕೋಲ ಗುಡಿಓಣಿ, ಮುದಿಮಾರುತಿ ಓಣಿ, ದ್ಯಾಮವ್ವನ ಗುಡಿ ಓಣಿ, ಕುಂಬಾರ ಓಣಿ, ಬಸ್ತಿ ಓಣಿ, ಚೌರಿಬಸವಣ್ಣನ ಓಣಿ,ಯಲಿಗಾರ ಓಣಿ, ನೇಕಾರ ಓಣಿ. ಇನ್ನೂ ಹೇಳದಂಗ ಬಾಳ ಅದಾವ. ದೇವರ ಇರೊ ಹೆಸರಿನ ಮೇಲೆ ಇಲ್ಲಾ ಆ ಓಣಿಯಾಗ ಮಾಡತಿದ್ದ ಕಸಬಿನಮೇಲಿಂದ ಆ ಓಣಿಗೆ ಹೆಸರಿದ್ದವು. ಈಗು ಅದಾವ. ಅದಕ್ಕೆ ಹೊಂದಿಕೊಂಡು ಬೆಳೆದ ಧಾರವಾಡಕ್ಕ ಆ ನಗರ ಈ ನಗರ ಅಂತೊ ಇಲ್ಲ ಯವುದೊ ಬಡಾವಣೆ ಅಂತೊ ಅಷ್ಟನೆ ಕ್ರಾಸ್, ಇಷ್ನನೆ ಕ್ರಾಸ್ ಅನ್ನೋದು ಚಾಲೂ ಅಗೇದ. ಹಳೇಕಾಲದ ದೊಡ್ಡ ಮಣ್ಣಿನ ಮಡಗಿ ಮನಿಗೆಲ್ಲ ಸಾಗವಾನಿ ಕಟಗಿ. ದೊಡ್ಡ ದೊಡ್ಡ ಬಾಗಿಲ, ಎಂಥೆಂಥಾ ಮನಿ. ಈಗ ಎಷ್ಟೊಂದು ಬಿದ್ದಾವ ಕೆಲವೊಂದು ಹೊಸ ರೂಪ ಪಡೆದಾವು. ಆದರ ಬಹಳಷ್ಟು ಮನೆಗಳು ಇರುವ ರೂಪದಲ್ಲೆ ಇರೋದು ವಿಶೇಷ. ಹಳೇ ಜಾಗದಾಗ ಕಾಂಕ್ರೀಟ ಮನೆಗಳು ಎದ್ದಾವ. ದೊಡ್ಡ ದೊಡ್ಡ ಹಿತ್ತಲಗಳು ಆದರ ಸಣ್ಣ ರೋಡ. ಈಗು ನಾಲ್ಕಗಾಲಿ ಗಾಡಿ ಹಾಯಾಕ ಆಗದಂತ ಸಣ್ಣ ಸಣ್ಣ ರಸ್ತೆಗಳು ತಿರುವುಗಳು. . ಈಗ ಇಲ್ಲೂ ಟ್ರಾಫಿಕ್ ಜ್ಯಾಮ್. ಊರಾಗಿನವರ ಗಾಡಿ ಜೊತೆ extentionದವರು ಮಾರ್ಕೆಟ ಗೆ ಇಲ್ಲೇ ಬರೂದು. ಓಣಿಯೊಳಗ ರಸ್ತೆ ಮ್ಯ್ಯಾಲೆ ಬಾವಿ. ಕೆಲವನ್ನ ಮುಚ್ಚಿದ್ದಾರ. ಪ್ರತಿ ಓಣಿಯೊಳಗು ಒಂದ ಸಣ್ಣ ಗುಡಿ ಇದ್ದರ ರಸ್ತೆ ಮೇಲೆ ದತ್ತಾತ್ರೇಯ, ಹಾಲಗೇರಿ ಹನಮಪ್ಪನಗುಡಿ, ನರಸಿಂಹದೇವರಗುಡಿ, ವೆಂಕಪ್ಪನ ಗುಡಿ, ಜಡ್ಜಿಹನಮಪ್ಪನ ಗುಡಿ. ವೀರಭದ್ರೇಶ್ವರ ಗುಡಿ, ಶಿವಾಜಿ ರಸ್ತೆದಾಗ ಬೆಟಗೇರಿ ಕೃಷ್ಣಶರ್ಮ ಆನಂದ ಕಂದರ ಮನಿ ಅದ. ಪೋತ್ನೀಸ ಓಣಿಯೊಳಗ ದ.ರಾ.ಬೇಂದ್ರೆ ಅವರು ಹುಟ್ಟಿದ ಮನಿ ಅದ. ಹೊಸಯಲ್ಲಾಪೂರ ರೋಡನ್ಯಾಗ ಗಂಗೂಬಾಯಿ ಹಾನಗಲ್ ಅವರ ಹಳೆ ಮನಿ ಮ್ಯುಸಿಯಂ ಮಾಡ್ಯಾರ ಆದರದು ಬಿದ್ದ ಹೊಗೇದ. ಡಾ.ಫ.ಗು.ಹಳಕಟ್ಟಿ ಅವರು ಹುಟ್ಟಿದ ಮನಿ ಅದ. ರಾಯಟರ ಗಲ್ಲಿಯೊಳಗ ಸ್ವತಂತ್ರ ಯೋಧರಾದ ಹೊನ್ನಾಪುರಮಠ ಕರ್ನಾಟಕ ಏಕೀಕರಣ ಅಧ್ವೈರ್ಯು ಅವರ ಮನೆ ಇದೆ. ಇನ್ನು ಕಾಯಿಪಲ್ಲೆ, ಹಣ್ಣಿನ ಮಾರ್ಕೆಟ್ ಕಿರಾಣಿ ಗೆ ಒಲಿಮ್ಯಾಲೆ ಎಸರಿಟ್ಟ ಹೋಗಿ ತರಬಹುದು. ಬ್ಯಾಂಕಗಳು, ಪೋಸ್ಟಾಫೀಸ ಎಡುವಿಬಿದ್ದರ ಅದಾವ. ಸಣ್ಣ ಪುಟ್ಟದಕ್ಕ ಡಾಕ್ಟರ್ಸ, ಮೆಡಿಕಲ್ ಶಾಪ್, ಮಗ್ಗಲದಾಗ ಅದಾವ. ಅದಕ್ಕ ಹಬ್ಬದ ದಿನದ ವರೆಗು ಬಟ್ಟೆ ಬರೆ ಚಿಂತಿ ಇರಂಗಿಲ್ಲ ಇಲ್ಲಿ ಮಂದಿಗೆ. “ನೀ ಪೂಜಾ ಸುರು ಮಾಡುದರಾಗ ಥಟ್ಟಂತ ಹೋಗಿ ತರತೇನಿ ತಗೋ” ಅನ್ನೋ ಗಂಡಸರ ಅದಾರ. ಗಾಡಿ ಇಲ್ಲದ ನಡಕೊಂಡ ಹೋಗಿ ತರಬಹುದಾದಷ್ಟು ಹತ್ತಿರ. ಈಗಿನಂಗ ಕಾಲನಿಗೊಂದ ಗಾರ್ಡನ್ ಅಂತ ಇರಲಿಲ್ಲ. ಎಲ್ಲರ ಬಿತ್ತಿ ಹಳೆ ಗಾರ್ಡನ್. ಪೇರಲ, ನುಗ್ಗಿ,ಇಲಾಚಿ,ಹುಣಸೆ,ಪಪಾಯ,ದಾಳಿಂಬೆ,
ನಿಂಬೆ ಅಷ್ಟ ಅಲ್ಲ ದಾಸವಾಳ,ನಂದಬಟ್ಟಲ, ಗೊರಟಗಿ ಹೂವಿನ ಗಿಡ ಇರತಿದ್ದವು. ಈಗಿನಂಗ ಪೂಜಾಕ ಹೂ ಕೊಂಡತರತಿರಲಿಲ್ಲ. ಇಡಿ ಓಣಿಯೊಳಗಿನ ಮನಿಗೆಲ್ಲ ಹಣ್ಣು ಹೂ ಹಂಚತಿದ್ದರು. ಈಗಿನವರಂಗ ಮಾರಿಕೊಳ್ಳೊ ಬುದ್ಧಿನು ಇರಲಿಲ್ಲ. ಒಬ್ಬರ ಹಿತ್ತಲ ಇನ್ನೊಬ್ಬರ ಹಿತ್ತಲಕ್ಕ ಕೂಡಿರತಿದ್ದವು. ಹೆಣಮಕ್ಕಳೆಲ್ಲ ಅಲ್ಲಿಂದನ ಓಡಾಡತಿದ್ದರು. ಒಗಿಯೊ ಕಲ್ಲು ಇಲ್ಲ ಬಾವಿ ಕಟ್ಟಿಗೆ ಕೂತ ಕಾಳ ಹಸಮಾಡಕೋತ ಹರಟಿ ಹೊಡಿಯೋರು. ಅಷ್ಟ ಅಲ್ಲ ಹಾಲ, ಜೋಳದ ಹಿಟ್ಟ,ಸಕ್ಕರಿ ಕಡ ಕೇಳಾಕ ಹಿತ್ತಲದಾಗಿನ ಬಾಗಲದಿಂದ ಹೊಗೋದು.ಈಗಿನಂಗ ಕಂಪೌಂಡ ಇದ್ದಿದ್ದಿಲ್ಲ. ಈಗಿನ ಕಂಪೌಂಡ ಮನಿಗಷ್ಟ ಅಲ್ಲ ಮನಕ್ಕೂ ಗೋಡೆ ಕಟ್ಟಿತು ಅನಸತದ. ಮಕ್ಕಳು ಗಿಡ ಮರ ಸುತ್ತಾಡಕೋತ , ಹಣ್ಣ ಕೀಳಾಕ ಎಸದ ಕಲ್ಲ ಯಾರದರ ಮನೆ ಮೇಲೆ ಬಿತ್ತಂದರ ಮುಗೀತು. ಬಂತು ಮನೆಗಿ ಅವ್ವ ಅಪ್ಪನ ಮಟ ಜಗಳ. ಏಟ ತಿಂದ ಉಪವಾಸ ಮಲಗಿದರ ಶಿಕ್ಷಾ ಮುಗೀತ. ಮಾರನೆ ದಿನ ಪ್ರೆಶ್ ಆಗಿ ಅವರ ಮನಿಗೆ ಆಡಾಕ ಹೋಗುದ. ಸಂಜೆಯ ಮುಂದ ಹೆಣ್ಣಮಕ್ಕಳ ಚಾ ಕುಡದ ಹರಟಿಗೆ ಕುಂತರ ಮಕ್ಕಳೆಲ್ಲ ಸೇರಿ ಯಾರದರ ಮನಿಯಾಗ ಓದಾಕ ಹೋಗವರ. ಅವ್ವನ ಓದಸಬೇಕಂತಿರಲಿಲ್ಲ. ಅವರಕಿಂತ ದೊಡ್ಡ ಕ್ಲಾಸಿನವರು ಸಣ್ಣವರಿಗೆ ಹೇಳಿಕೊಡವರು.
ಶಾವಗಿ, ಪರಡಿ,ಗೌಲಿ,ಸವತಿಬೀಜ ಎಲ್ಲರೂ ಸೇರಿ ಪಾಳಿಪ್ರಕಾರ ಎಲ್ಲರ ಮನಿಗೂ ಮಾಡವರು. ಹಿಂಗಾಗಿ ಓಣಿ ಒಗ್ಗಟ್ಟಿನಿಂದ ಇರತಿತ್ತ. ಹಂಗಂತ ಜಗಳ ಇದ್ದಿದ್ದಿಲ್ಲ ಅಂತ ಅಲ್ಲ ಬಾಳ ಇರತಿದ್ದವು ಆದರ ಮನಸ ಮುರಕೊತಿರಲಿಲ್ಲ. ಬೇಗ ಒಂದಾಗತಿದ್ದರು. ಇರಲಿ ಬಿಡರಿ ಹೇಳತಾ ಹೋದಂಗ ಭಾಳ ಐತಿ. ಹಬ್ಬ ಗಿಬ್ಬ ಕೂಡಿ ಮಾಡತಿದ್ದರ ಮಾತಾಡಕೊಂಡ ಒಂದ ದಿನ. ಈಗ ಸಾಕಷ್ಟು ಹೊಸ ಗುಡಿ ಹುಟಗೊಂಡಾವ. ಗಣಪತಿ, ಹನಮಪ್ಪನ ಗುಡಿ ಅಂತು ಭಾಳ ಅದಾವ.
ಹಾಂ! ಲಕ್ಮೀನಾರಾಯಣ ಗುಡಿ ಜಾತ್ರಿ ಬಗ್ಗೆ ಬರಿದೆ ಇದ್ದರೆ ಹೆಂಗ? ಜಾತ್ರೆಯ ಸ್ವರೂಪ ಚೇಂಜ ಆಗಿದೆ ಆದರೆ ದೇವರ ಮೂರ್ತಿ, ಅಲಂಕಾರ ಅದನ್ನೆ ಇಟ್ಟಿರುವದು ದೇವಸ್ಥಾನಕ್ಕೆ ಕಳೆ ತಂದಿದೆ.
ನಾವು ಸಣ್ಣವರಿದ್ದಾಗ “ಆಡಪೊಗೊಣು ಬಾರೊ ರಂಗಾ ಗೂಡಿಯ ಮುನ ತೀರದಲ್ಲಿ” ಅನ್ನೋ ಹಾಡ ಭಾರಿ ಫೇಮಸ್ ಇತ್ತು.ಅದು ನವರಾತ್ರಿ ಗೆ ಹಾಡೋದು. ಓಣಿಯೊಳಗಿನ ಇಬ್ಬರಿಗೆ ಚಿಕ್ಕಮಕ್ಕಳಿಗೆ ಶಿವ-ಪಾರ್ವತಿ, ರಾಧಾ ಕೃಷ್ಣ, ರಾಮ-ಸೀತಾ ಹೀಗೆ ಪಾರ್ಟ ಹಾಕೋದು. ಅಂದರ ವೇಷ ಭೂಷಣ ಮಾಡೋದು. ಅದು ಈಗಿನಂಗ ಅವ್ವ ಅಪ್ಪಮಾಡುದಿಲ್ಲ. ಓಣಿ ಮಕ್ಕಳೆಲ್ಲ ಸೇರಿ ಬೇಕಾಗುವ ಸೀರೆ, ಧೋತಿ ಮತ್ತಿತರೆ ಸಾಮಾನುಗಳನ್ನ ಎಲ್ಲರ ಮನೆಯಿಂದ ಕಲೆಹಾಕಿ, ಕಿರೀಟ, ಬಾಣ ಎಲ್ಲ ಮನೆಯಲ್ಲೆ ಮಾಡೋದು, ಕಸದಿಂದ ರಸ ಅಂತಾರಲ್ಲ ಹಂಗ. ಹೂಗಳನ್ನ ಯಾರದರ ಹಿತ್ತಲದಾಗ ಕದ್ದ ತರೋದು. ಬೆಳಗ್ಗೆಯಿಂದ ಓಣಿಮಕ್ಕಳ ಸಂಭ್ರಯ ಹೇಳ ತೀರದು. ಸಾಯಂಕಾಲ ವೇಷಧಾರಿಗಳ ಹಿಂದೆ ಇಬ್ಬಿಬ್ಬರಂತೆ ಶಿಸ್ತಿನಿಂದ ನಿಂತ “ಆಡ ಪೊಗೊಣು ಬಾರೋ ರಂಗಾ ಕೂಡಿ ಯಮುನ ತೀರದಲ್ಲಿ, ಚಿನ್ನಿಕೋಲು ಚೆಂಡು ಬುಗುರಿ ಸಣ್ಣ ಸಣ್ಣದಾಟಗಳನು” ಅಂತ ಜೋರಾದ ದ್ವನಿಯಲ್ಲಿ ಚೀರುತ್ತಾ ಹಾಡು ಹೇಳುತ್ತಾ ಹೊಗೋದು. ಯಾಕಂದರ ಒಳಗಿದ್ದವರು ಹೊರಗ ಬಂದ ನಮ್ಮನ್ನ ನೋಡಬೇಕಲ್ಲ. ಲಕ್ಷೀನಾರಾಯಣ ಗುಡಿ ಮುಟ್ಟಿ ಎಲ್ಲರು ದೇವರ ದರುಶನ ಪಡೆದು ಧನ್ಯರಾಗೋ ಪರಿ ನಿಜವಾಗಿ ಅದರಲ್ಲಿ ಪಾರ್ಟ ಹಾಕಿದವರಿಗೆ ಗೊತ್ತು. ಈಗಲು ಜಾತ್ರೆ ಇದೆ. ಆದರೆ ಬಹಳಷ್ಟು ಜನರಿಗೆ ಹೀಗೆಲ್ಲ ಇತ್ತು ಅನ್ನೋದು ಮರೆತಿದೆ ಅಥವಾ ಗೊತ್ತಿಲ್ಲ. ಜಾತ್ರೆಯೊಳಗ ಮಣ್ಣಿನ ಒಲೆ, ಚಟಗಿ ಭಾವಿ ಬಹಳ ಚೆಂದ ಆಡಾಕ. ಈಗೇನಿದ್ದರು ಪ್ಲಾಸ್ಟಿಕ್ ಯುಗ. ನಗರೇಶ್ವರ ದೇವಸ್ಥಾನದಾಗು ದೇವರಿಗೆ ಅಲಂಕಾರ ಮಾಡತಾರ. ಬಹಳ ಚೆಂದ ಇರತದ. ಈಗೀಗ ಬಹಳಷ್ಟು ದೇವಸ್ಥಾನಗಳಲ್ಲಿ ಮನೆಗಳಲ್ಲಿ ದೇವರಿಗೆ ಅಲಂಕಾರ ಮಾಡುವದನ್ನು ನೋಡತೇವೆ.
ಇನ್ನು ಇಲ್ಲಿ ಹೊಂಡದ ಈರಣ್ಣನ ಗುಗ್ಗಳ, ಪ್ಯಾಟಿ ಈರಣ್ಣನ ಗುಗ್ಗಳ ಜಾತ್ರೆ ಮತ್ತು ಮದುವೆ ಮೆರವಣಿಗೆ ಬಾಗಲಮುಂದ ಬರತಾವ. ಇನ್ನು ವೆಂಕಪ್ಪನ ತೇರು, ಹನುಮಪ್ಪನ ತೇರು, ಈರಣ್ಣನ ತೇರು,ಸರಸಿಂಹದೇವರ ತೇರು ಹೀಗೆ ಎಲ್ಲಾ ದೇವರತೇರುಗಳನ್ನ ಎಳೆಯೊ ಸಂಭ್ರಮ ನೋಡಾಕ ಸಿಗತದ. ದತ್ತ ಜಯಂತಿ ರಾಘವೇಂದ್ರ ಸ್ವಾಮಿ ಆರಾಧನೆ. ಹಿಂಗ ಹಳೇ ಧಾರವಾಡ ಅಂದರ. ಅಷ್ಟ ಯಾಕ ಭೂಸಪೇಟಿ ಕಾಮಣ್ಣ, ಹೆಬ್ಬಳ್ಳಿ ಅಗಸಿ ಕಾಮಣ್ಣ, ಕಾಮನಕಟ್ಟಿ ಕಾಮಣ್ಣ, ಹೊಸಯಲ್ಲಾಪೂರ ಕಾಮಣ್ಣ, ಗಾಂಧಿಚೌಕ ಕಾಮಣ್ಣ ರತಿಯರನ್ನ ನೋಡುವಂಗ ಇರತಾವ. ಇನ್ನು ಗಣಪತಿ ಹಬ್ಬ ಬಂದರಂತು ಹಳೇಧಾರವಾಡದ ಸಂಭ್ರಮ ಹೇಳಂಗಿಲ್ಲ. ಓಣಿಗೊಂದ ಗಣಪತಿ. ಸ್ಪರ್ಧಾಮೇಲೆ ಅಲಂಕಾರ. ಗಣಪ್ಪನ ನೋಡಾಕ ಜನಜಾತ್ರೆ. ಬೇಕಿದಷ್ಟ ರಾತ್ರಿ ಆದರು ಹೆದರಕೊ ಬೇಕಿಲ್ಲ ಯಾಕಂದರ ಮನಿಹತ್ರ ಇರತದ. ಇನ್ನ ಗಣಪ್ಪನ ಕಳಸೊ ಸಂಭ್ರಮ ೫ ನೇ ದಿನದಿಂದ ಹನ್ನೊಂದನೆ ದಿನದ ಮಟಾ ಬೆಳತನಕ ಡಿಜೆ ಹಕ್ಕೊಂಡ ಕುಣಿಯೋದ ಕುಪ್ಪಳಸೋದನ್ನ ಇಲ್ಲಿಮಂದಿ ಮನಿ ಕಟ್ಟಿಮೇಲೆ, ಕೂಟಿಗೆ,ಇಲ್ಲ ಮಾಳಗಿಮೇಲೆ ನಿಂತು ಕಣ್ತುಂಬ ಹೀರಿಕೊಳ್ಳೊದು ಅಂದರ… ಅಷ್ಟ ಅಲ್ಲರಿ
ಮೊಹರಮ್ ಹಬ್ಬ ಬಂದರ ಓಣಿ ಓಣಿಗೆ ಕೂಡಿಸೊ ಅಲೆ ದೇವರು ಹಬ್ಬದ ದಿನ ಊರವರೆಲ್ಲ ಚೊಂಗೆ ಮಾಡತಾರ. ಈಡಿ ದಿನ ರಾತ್ರಿ. ದೇವರನ್ನು ಕೆರೆಗೆ ಒಯ್ಯೋದನ್ನ ನೋಡಾಕ ಪತಿಯಾದ ಪ್ಯಾಟಿ, ಶುಕ್ರವಾರ ಪ್ಯಾಟಿ ಮಂಗಳವಾರ ಪ್ಯಾಟಿ ಕಟ್ಟಿ, ಅಟ್ಟದ ತುಂಬ ಜನ ತುಂಬಿರತಾರ. ಇಲ್ಲಿ ಸಾಮರಸ್ಯದಿಂದ ಹಬ್ಬ ಆಚರಿಸೋದನ್ನ ಕಾಣಬಹುದು. ಮದುವೆಗಾಗಿ ಕಲ್ಯಾಣ ಮಂಟಪಗಳು ಕೆಲವಾದರೆ, ಸಣ್ಣಸಣ್ಣ ಸಮಾರಂಭಗಳಿಗೆ ಹಲವು ಸದಾ ಗಿಜಗಿಡುವ ರೋಡು. ಶಹನಾಯಿ,ಬೆಂಡಬಾಜಾ ಸಪ್ಪಳ ಮದುಮಕ್ಕಳನ್ನ ನೋಡಲು ಖುಷಿ. ಏನಿದು ಖುಷಿ ವಿಷಯ ಮಾತ್ರ ಹೇಳತಾಳ ಅಂತೀರೇನು. ನೋವು ನಲಿವು ಒಂದೆ ನಾಣ್ಯದ ಎರಡು ಮುಖಗಳು. ಯಾರದರ ಮನಿಯಾಗ ಯಾರಿಗಾದರು ಹುಷಾರಿಲ್ಲಂದರ, ಜಗಳಾದರ ತಕ್ಷಣ ಓಣಿಗೆ ಗೊತ್ತಾಗಿ ಬಿಡತದ. ಕಷ್ಟಕ್ಕ ಆಗೋರ ನೆರೆಹೊರೆಯವರ ಯಾವಾಗಲು ಸಂಬಂಧಿಕರ ಇರತಾರೇನು? ಸ್ಮಶಾನ ದ ರೋಡು ಇದ ಆಗಿರೋದರಿಂದ ದಿನಕ್ಕೆ ಅದೆಷ್ಟುಜನ ಇಹ ಯಾತ್ರೆ ಮುಗಿಸಿ ಹೋಗೊರನ್ನು ನೋಡತಾರೆ. ಙ ನಮ: ಶಿವಾಯ ಗಾಡಿ ಹೊಂಟರ ಹೊರಗ ಓಡಿ ಬರೋದ ಙ ಶಾಂತಿ ಹೇಳೊದ.
ನಿಜ ಜೀವನದ ರಸ ಸ್ವಾದ ಇರೋದ
ಹಳೇ ಧಾರವಾಡದಾಗ.
“ALL IN ONE PLACE & ALL LIVE TOGETHER”
–ಶಾರದಾ ಕೌದಿ
ಅಡಕಿ ಓಣಿ
ಮಂಗಳವಾರಪೇಟ
ಧಾರವಾಡ.-೫೮೦೦೦೧
8951491838