ಗಜಲ್

ಗಜಲ್

ಬದುಕೇ ಮೂರಾಬಟ್ಟೆ ಆದಾಗ ಅನ್ನವೆಲ್ಲಿಂದ ತರಲಿ
ಊರೇ ಮಸಣವಾದಾಗ ಹೆಣಕ್ಕೆ ಬಟ್ಟೆ ಎಲ್ಲಿಂದ ತರಲಿ

ಯಮನ ಅಟ್ಟಹಾಸ ಎಲ್ಲೆಡೆ ಕೇಕೆಹಾಕುತ್ತಾ ಮುಂದೆ ಸಾಗಿದೆ
ಮೊಗ್ಗುಗಳೇ ಕಮರಿದಾಗ ಹೂವಿನ ಹಾರವೆಲ್ಲಿಂದ ತರಲಿ

ವಿಶ್ವವೇ ಚರಮಗೀತೆಗಳ ಹಾಡುತಿದೆ ಜಗದ ಜೀವಿಗಳಿಗೆ
ಗಂಟಲು ಕಟ್ಟಿ ನರವೇ ಉಬ್ಬಿದಾಗ ಮಾತೆಲ್ಲಿಂದ ತರಲಿ

ಕಂಬಗಳೇ ಉರುಳಿಹೋಗಿ ಸಂತಸದ ಮನೆಯು ನೆಲಸಮ ವಾಗಿದೆ
ಕರುಳ ಬಳ್ಳಿ ಅನಾಥವಾದಾಗ ಆಧಾರವೆಲ್ಲಿಂದ ತರಲಿ

ಸಾವುಗಳ ಕಂಡ ಎದೆದುಃಖ ಅರಣ್ಯ ರೋದನವಾಗಿದೆ “ಪ್ರಭೆ”
ಕಣ್ಣ ಕೊಳದ ನೀರೇ ಬತ್ತಿದಾಗ ಕನಸುಗಳೆಲ್ಲಿಂದ ತರಲಿ

ಪ್ರಭಾವತಿ ಎಸ್ ದೇಸಾಯಿ ವಿಜಯಪುರ

Don`t copy text!