ವಿಪರ್ಯಾಸ
(ಕತೆ)
ಸಹೋದರಿಯ ದೂರವಾಣಿಯ ಕರೆ ಬಿರುಗಾಳಿಯಂತೆ ಆರುಂಧತಿಯ ಮಾನಸ ಸರೋವರದಲ್ಲಿ ತರಂಗಗಳೊಂದಿಗೆ ವಿಚಿತ್ರ ಮಾನಸಿಕ ಗೊಂದಲವನ್ನೆಬ್ಬಿಸಿತ್ತು. ಅದೇನೂ ವಿಶೇಷ ಸಂಭಾಷಣೆಯಾಗಿರಲಿಲ್ಲ. ಯಾವುದೇ ಬೆಳೆದ ಹೆಣ್ಣು ಮಗುವಿದ್ದ ತಾಯಿ ಕೇಳಲೇ ಬೇಕಾದ ಸಹಜವಾದ ಮಾತುಗಳು. ನಿಮ್ಮ ಮಗಳಿಗೆ ಅನುರೂಪನಾದ ವರನಿದ್ದಾನೆ. ಇದೊಂದು ಒಳ್ಳೆಯ ಅವಕಾಶ. ನಿಮ್ಮ ಅಭಿಪ್ರಾಯ ತಿಳಿಸಿ… ಇತ್ಯಾದಿ. ಎಂದಾದರೊಂದು ದಿನ ಎದುರಿಸಲೇ ಬೇಕಾದ, ಆದರೆ ಪ್ರಯತ್ನ ಪಟ್ಟು ದೂರವಿಟ್ಟ ನಗ್ನ ಸತ್ಯ ತಂಗಿಯ ಪ್ರಸ್ತಾವನೆಯ ರೂಪದಲ್ಲಿ ಎದುರಿಗೆ ಪ್ರಕಟಗೊಂಡಿತ್ತು. ಇಪತ್ತೊಂದು ವರ್ಷಗಳ ಹಿಂದೆ ಮನದಲ್ಲಿ ಎದ್ದ ಬಂಡಾಯದ ಅಲೆ ಮತ್ತೆ ತೆಲೆ ಎತ್ತ ತೊಡಗಿತು. ವಿವಾಹದ ಅನಿವಾರ್ಯತೆ, ೧೮-೨೦ ವರ್ಷ ಅಂಗೈಯಲ್ಲಿ ಇಟ್ಟು ಸಾಕಿದ ಮಗಳನ್ನು ವಿವಾಹದ ನಂತರ ಬೇರೆ ಮನೆಗೆ ಕಳುಹಿಸುವ ಅನಿವಾರ್ಯತೆ, ಮನಸ್ಸನ್ನು ಚುಬ್ಬಿತ್ತು.
ತನ್ನ ವಿವಾಹದ ಸಮಯದಲ್ಲಿಯೂ ಮನಸ್ಸು ಬಂಡಾಯಕ್ಕಿಳಿದಿತ್ತು. ಹುಡುಗಿಯರು ಮಾತ್ರ ಯಾಕೆ ತಮ್ಮ ತಂದೆ ತಾಯಿಯರಿಂದ ದೂರವಾಗಬೇಕು? ಹುಟ್ಟಿದ ಮನೆ ವಾತಾವರಣ ಬಂಧುಗಳು ಗೆಳತಿಯರು ಎಲ್ಲರನ್ನೂ ತೊರೆದು, ಆಳವಾಗಿ ಇಳಿದ ಬೇರುಗಳನ್ನು ಬಲವಂತವಾಗಿ ಕಿತ್ತುಕೊಂಡು, ಹೊಸ ಪರಿಸರದಲ್ಲಿ ಅಪರಿಚಿತ ಬಂಧುಗಳ ಮಧ್ಯದಲ್ಲಿ ಮತ್ತೆ ಬೇರೂರುವ, ಬೆಳೆಯುವ ಈ ಹೆಣಗಾಟ ಬರಿ ಹೆಣ್ಣು ಮಗುವಿಗೆ ಮಾತ್ರ ಯಾಕೆ? ಎಂಬ ಪ್ರಶ್ನೆಗಳು ಮನದಲ್ಲಿ ಗೊಂದಲ ಎಬ್ಬಿಸಿ ಕಾಡಿದ್ದವು. ಈಗ ಮರಳಿ ಅದೇ ಪ್ರಶ್ನೆ ಮತ್ತೆ ಭೂತಕಾರವಾಗಿ ಬೆಳೆದು ಕಾಡ ತೊಡಗಿದ್ದವು. ವರ್ಷಗಳ ಹಿಂದೆ ಜಾರಿತ್ತು ಮನ.
ಕಾಡುತ್ತಿರುವ ಪ್ರಶ್ನೆಗಳಿಂದ ಹೊರಬಂದು ಸಾಮಾಜಿಕ ಅನಿವಾರ್ಯತೆಗಳ ಅರಿವಿನೊಂದಿಗೆ ವಿವಾಹ ಬಂಧನದೊಳಗೆ ಉಸಿರಾಡಲು ಪ್ರಯತ್ನಿಸುತ್ತಿದ್ದಂತೆಯೇ ಮಡಿಲಿಗೆ ಬಂದಿದ್ದಳು ಮಗಳು. ಹುಡುಗಾಟದ ಅಡಿಯಲ್ಲಿ ಅಡಗಿದ ತಾಯ್ತನದ ಭಾವನೆಗಳೆಲ್ಲ ತಲೆ ಎತ್ತಿ, ಮೈ ಮನಗಳನ್ನು ಆವರಿಸಿ ಹೊಮ್ಮಿತ್ತು ಸಾರ್ಥಕತೆಯ ಭಾವ. ಮಗನಿಗಾಗಿ ಕನಸು ಕಾಣುತ್ತಿದ್ದ ಪತಿಯ ಮುಖದಲ್ಲಿ ನಿರಾಶೆಯ ನೆರಳನ್ನು ಗುರುತಿಸಿತ್ತು ಕಣ್ಣು. ಆದರೆ ಸಂತೃಪ್ತಿಯಿಂದ ತುಳುಕಿದ ಮನದಲ್ಲಿ ಯಾವುದೇ ಕಹಿಗೆ ಜಾಗವಿರಲಿಲ್ಲ. ಮಗುವಿನ ನಗು ಮನ ತುಂಬಿತ್ತು. ಗುಲಾಬಿ ತುಟಿಗಳು ತಲೆ ತುಂಬಿದ ಕಪ್ಪು ಕೂದಲಿನ ಕರ್ಪೂರದ ಗೊಂಬೆಯಂತೆ ಮಡಿಲಲ್ಲಿ ಮಲಗಿದ್ದ ಮಗಳನ್ನು ಎಷ್ಟು ನೋಡಿದರೂ ಸಂತೃಪ್ತಿ ಇಲ್ಲ. ಮನಸ್ಸು ಅಭಿಮಾನದಿಂದ ಉಬ್ಬಿ ಉಬ್ಬಿ ಉಸುರಿತ್ತು ನನ್ನ ಸೃಷ್ಟಿ. ಯಾರೋ ಕೇಳಿದ್ದರು. ಏನು ಹೆಸರಿಡ್ತಿರಿ? ತುಟಿ ಉಸುರಿತ್ತು ಸೃಷ್ಠಿ, ಮನೋ ವಿಜ್ಞಾನಿ ಮಾಸ್ಲೂ ಗುರುತಿಸಿದ ಅವಶ್ಯಕತೆಗಳ ಪಟ್ಟಿಯಲ್ಲಿ ಉನ್ನತ ಸ್ಥಾನದ ಸಾರ್ಥಕತೆಯ ಭಾವವನ್ನು ಮಾತೃತ್ವದಲ್ಲಿ ಕಂಡಿತ್ತು ಮನಸ್ಸು. ಬೇರೆಲ್ಲ ಆಧ್ಯತೆಗಳು ನೈಪತ್ಯಕ್ಕೆ ಸರಿದಿದ್ದವು.
ಮಗುವಿನ ಆಟ ನೋಟಗಳು ದಿನಚರಿಯ ಮುಖ್ಯ ಭಾಗಗಳಾಗಿದ್ದವು. ದಿನಗಳು ತಿಂಗಳು ರೆಕ್ಕೆ ಕಟ್ಟಿಕೊಂಡು ಹಾರಿದ್ದವು. ಮಗುವಿನ ಮೊದಲು ನುಡಿ, ಮೊದಲ ಹೆಜ್ಜೆ ಮೊದಲ ವಾಕ್ಯ, ಮೊದಲ ಅಕ್ಷರ, ಸಾಗಿತ್ತು ಸಂಭ್ರಮದ ಹಬ್ಬಗಳ ಸಾಲು. ಉಡಿಯಲ್ಲಿದ್ದ ಮಗು ತೊಡೆ ಏರಿ, ಅಂಬೆಗಾಲಿಟ್ಟು, ನಡೆದು, ಸೈಕಲ್ ಏರಿ, ಸ್ಕೂಟಿಗೆ ಕಿಕ್ ಹೊಡೆಯುವ ಪ್ರಕ್ರಿಯೇ ಜಾರು ಚಿತ್ರಗಳಂತೆ ಉರಿಳಿತ್ತು.
ಕುಂಕುಳಲ್ಲಿ ಅಪ್ಪಿ ಕುಳಿತ ಮಗಳು ಎದೆ ಎತ್ತರಕ್ಕೆ ಬೆಳೆದಾಗ ಎದೆ ಹೆಮ್ಮೆಯಿಂದ ಬೀಗಿತ್ತು. ಮುಖದಲ್ಲಿ ಕಂಡ ಆಶೆ, ನಿರಾಶೆ, ದುಖಃ, ದುಗುಡ, ನಗು, ಉಲ್ಲಾಸ ಎಲ್ಲ ಭಾವಗಳನ್ನು ಮನ ತನ್ನದೇ ಎನ್ನುವಂತೆ ಅನುಭವಿಸಿತ್ತು. ತನ್ನಲ್ಲಿ ಅದುಮಿಟ್ಟ ಆಶೆಗಳಿಗೆ ಅಭಿವ್ಯಕ್ತಿಯನ್ನು ಮಗಳಲ್ಲಿ ಹುಡುಕಿತ್ತು ಮನಸ್ಸು. ತನ್ನದೇ ವ್ಯಕ್ತಿತ್ವದ ವಿಸ್ತರಣೆಯನ್ನು, ತನ್ನ ಪ್ರತಿರೂಪವನ್ನು ತನ್ನ ಮಗಳಲ್ಲಿ ಕಂಡಿದ್ದಳು ಆರುಂಧತಿ. ಮಾತೃತ್ವದ ಪಾತ್ರದಲ್ಲಿ ಮುಳುಗಿ ತನ್ನನ್ನು ತಾನು ಮರೆತು ಬಿಟ್ಟಿದ್ದಳು. ಬರಿ ಸೃಷ್ಠಿಯ ತಾಯಿಯಾಗಿ ಉಳಿದು ಬಿಟ್ಟಿದ್ದಳು.
ನೆನಪುಗಳ ಆಳದಿಂದ ಹೊರಬಂದಾಗ ವಾಸ್ತವಿಕತೆ ಪೆಡಂಭೂತವಾಗಿ ಎದುರಿಗೆ ನಿಂತಿತ್ತು. ಮಗಳ ಮದುವೆ ಜೀವನದ ಅತಿ ಮುಖ್ಯ ಅವಶ್ಯಕತೆ ಮತ್ತು ಅನಿವಾರ್ಯತೆ. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸಲೇಬೇಕು. ಭಾವನೆಗಳ ಉತ್ಕಟತೆಯನ್ನು ಅದುಮಿ ವಾಸ್ತವಿಕತೆಯ ಪರಂಪರೆಯನ್ನು ಪಾಲಿಸಲೇ ಬೇಕು. ಸಂಜೆ ಮನೆಗೆ ಬಂದ ಗಂಡನ ಎದುರಿಗೆ ತಂಗಿಯ ಪ್ರಸ್ತಾವನೆಯನ್ನು ಇಟ್ಟಾಗ ಬಂದ ಪ್ರತಿಕ್ರಿಯೆ “ಅದಕ್ಕೆನಂತೆ ಬಂದು ನೋಡಿಕೊಂಡು ಹೋಗಲಿ, ಇದೆಲ್ಲ ನಡೆಯಬೇಕಾದದ್ದೆ” ಎಂದ. ವಾಸ್ತವವಾದಿಯಾದ ಗಂಡನನ್ನು ಸಂವೇದನಾ ಹೀನನೆಂದು ನಿಂದಿಸಿದ ಮನ ಕೆಲವು ನಿಮಿಷಗಳಲ್ಲಿ ಸ್ಥಿಮಿತಕ್ಕೆ ಬಂದು ಆತನ ಮಾತನ್ನು ಒಪ್ಪಿತ್ತು. ಮುಂದಿನ ಸಿದ್ಧತೆಗಳ ಬಗ್ಗೆ ಯೋಚಿಸಿತ್ತು. ಮಗಳ ಬೆಳವಣಿಗೆಯ ಹಂತದಲ್ಲಿ ಇನ್ನೊಂದು ಮೊದಲ ಘಟನೆ ಸೇರ್ಪಡೆಯಾಗಲಿತ್ತು. ಮೊದಲ ವಧು ಪರೀಕ್ಷೆ !
ವಧು ಪರೀಕ್ಷೆಯ ಆ ರವಿವಾರ ಎದ್ದಿದ್ದೆ ಕೈಗೆ ಬಂದಿದ್ದು ಯೂರೊಕ್ಲಿನ್ ಯಂತ್ರ, ಮೂಲೆ ಮೂಲೆಗಳಲ್ಲಿ ನಿರಾತಂಕವಾಗಿ ಬೀಡು ಬಿಟ್ಟಿದ್ದ ಜೇಡಗಳೆಲ್ಲ ಯಂತ್ರದ ಹೊಟ್ಟೆ ಸೇರಿದ್ದವು. ಸೊಫಾ ಟೇಬಲಗಳು ಮೈ ತಿಕ್ಕಿಸಿಕೊಂಡು ಮಿಂಚಿದರೆ ಬಹಳ ದಿನಗಳಿಂದ ಪೆಟ್ಟಿಗೆಯಲ್ಲಿ ಕಾಯ್ತಾ ಇದ್ದ ಹೊಸ ಸೊಫಾ ಕವರಗಳು ಗಾಳಿಗೆ ಹರಡಿಕೊಂಡು ಬೀಗಿದವು. ಮೊದಲ ಬಾರಿಗೆ ರಾಯರ ಕೈಗೆ ಧೂಳೊರೆಸುವ ಬಟ್ಟೆ ಸಿಕ್ಕು ಯಾರ ಕಣ್ಣಿಗೂ ಬೀಳದೆ ಇರುವ ಧೂಳೂ ಕೂಡ ಮೂಲೆ ಮೂಲೆಗಳಲ್ಲಿ ಅವರ ಕಣ್ಣಿಗೆ ಬಿದ್ದು ಗತಿ ಕಂಡಿತ್ತು. ರವಿವಾರದ ಜೊತೆ ಜೊತೆಗೆ ಬರುವ ಸ್ಪೆಷಲ್ ಉಪಹಾರದ ಫರಮಾಯಿಷೆ ನೆನಪು ಇವತ್ತು ಯಾರಿಗೂ ಇಲ್ಲ. ಮನೆಯಾಯಿತು, ಇನ್ನು ಮಗಳು! ಅವಳು ಏನು ಉಡಬೇಕು ತೊಡಬೇಕು ಅನ್ನೊದಕ್ಕೆ ನೂರು ಚರ್ಚೆ. ಒಬ್ಬೊಬ್ಬರದು ಒಂದೊಂದು ಸಲಹೆ. ಆಭರಣ ಹಾಕಬೇಕೊ ಬೇಡವೊ? ಸೀರೆ ಉಡಬೇಕೊ ಡ್ರೆಸ್ ನಡಿತದೊ? ಬರೋ ಜನ ಎಂಥ ಮನೋಭಾವದರಿರಬಹುದು? ನೂರು ಪ್ರಶ್ನೆಗಳು ಎದ್ದು ಎದ್ದು ಬಿದ್ದದ್ದಾಯಿತು. ಕೊನೆಗೆ ಸೀರೆಯುಟ್ಟು ಸಿಂಗರಿಸಿಕೊAಡು ನಿಂತ ಮಗಳನ್ನು ಎಷ್ಟು ನೋಡಿದರೂ ತೃಪ್ತಿಯಿಲ್ಲ.
ನಿಖರವಾದ ಹೇಳಿದ ಸಮಯಕ್ಕೆ ಸರಿಯಾಗಿ ವರನ ಕಡೆಯವರನ್ನು ಹೊತ್ತು ವಾಹನ ಮನೆ ಎದುರುಗಡೆ ನಿಂತಿತ್ತು. ಭಾವನ ಜೊತೆ ಇಳಿದವರು ನಾಲ್ಕು ಜನ. ನಮಸ್ಕಾರಗಳ ವಿನಿಮಯದ ನಂತರ ಭಾವ ಪರಿಚಯಿಸಿದ್ದು ಶ್ರೀ ………….. ಶ್ರೀಮತಿ …………….. ಮತ್ತು ಅವರ ಇಬ್ಬರು ಚಿರಂಜೀವಿಗಳು. ಅವಳಿಗಳಂತಿದ್ದ ಇಬ್ಬರು ಯುವಕರಲ್ಲಿ ವರ ಯಾರು ಎನ್ನುವ ಪ್ರಶ್ನೆ ಹಾಗೆ ಉಳಿದಿತ್ತು. ಎಲ್ಲ ಕುಶಲೋಪರಿಯ ನಂತರ ತಮ್ಮ ಕುಟುಂಬದ ವಿವರಗಳು, ತಮ್ಮ ಸಂಬಂದಿಗಳ ವಿವರ, ಯಾರು ಎಲ್ಲಿದ್ದಾರೆ, ಈ ಊರಿನಲ್ಲಿ ಯಾರಿದ್ದಾರೆ, ಆಸ್ತಿ ವಿವರ, ಡಾಕ್ಟರ ಆಗಿ ತಮ್ಮ ಚಿರಂಜೀವಿಗಳ ಸ್ಪಷಲೈಜೆಶನ್, ಅವರ ಪ್ರಾö್ಯಕ್ಟಿಸ್ ಎಲ್ಲ ವಿವರಗಳು ಹರಿದು ಬಂದವು. ವಧು ನೋಡುವ ಔಪಚಾರಿಕತೆಯೂ ಮುಗಿಯಿತು.
ಭಾವಿ ಬೀಗರ ಮುಕ್ತ ನಡವಳಿಕೆ, ತಿಳುವಳಿಕೆ, ಸದ್‌ವರ್ತನೆ ಎಲ್ಲ ಮನಸ್ಸಿಗೆ ಹಿಡಿಸಿದವು. ಆದರೂ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ವಯಸ್ಸಿನಲ್ಲಿಯೂ ಅಂತರ ಕಾಣದ, ಸ್ಪೂರಧ್ರೂಪಿ ಗುಂಗುರು ಕೂದಲಿನ ಮಿಂಚುಗಣ್ಣಿನ ಇಬ್ಬರು ಯುವಕರು ! ಅವರ ಮಾತುಗಳಿಂದಲೂ ಏನೂ ಸೂಚನೆ ಸಿಕ್ತಾ ಇಲ್ಲ. ಕೊನೆಗೆ ಮನಸ್ಸು ತಡಿದೆ ಭಾವನವರನ್ನು ಕೇಳಿದಾಗ ಅವರು ಬಾಯಿ ಬಿಡುವ ಮೊದಲೆ ಭಾವಿ ಬೀಗತ್ತಿ (!) ನುಡಿದರು “ನೋಡಿಮ್ಮಾ ಈ ವಿಷಯವನ್ನು ಈಗಲೇ ಮಾತಾಡಿ ಬಿಟ್ಟರೆ ಒಳ್ಳೆಯದು ನಮಗಿರೊದು ಎರಡೇ ಮಕ್ಕಳು. ಇಬ್ಬರೂ ಒಂದೇ ಕಡೆ ಜೊತೆ ಜೊತೆಗೆ ಪ್ರಾಕ್ಟಿಸ್ ಮಾಡಿಕೊಂಡು ಸೆಟಲ್ ಆಗಿದ್ದಾರೆ. ಹೀಗಾಗಿ ಬೇರೆ ಬೇರೆ ಇರೊ ಅವಶ್ಯಕತೆನೂ ಇಲ್ಲ. ನಿಮಗೆ ಗೊತ್ತಿರೊ ಹಾಗೆ ನಮ್ಮಲ್ಲಿ ಸಂಸ್ಕಾರವುಳ್ಳ ಒಳ್ಳೆ ಮನೆತನದ ಹುಡುಗಿಯರು ಸಿಗೋದು ಬಹಳ ಕಷ್ಟ. ಅದಕ್ಕೆ ನಿಮಗೆ ಅಭ್ಯಂತರ ಇಲ್ಲದಿದ್ದರೆ ನಿಮ್ಮ ಮಗಳನ್ನು ಇಬ್ಬರೂ ಮಕ್ಕಳಿಗೆ ಸೇರಿ ತಂದು ಕೊಳ್ಳಬೇಕು ಅಂತ ಅಂದು ಕೊಂಡಿದ್ದೇವೆ. ನಮ್ಮ ಮಕ್ಕಳಿಗೂ ಅಭ್ಯಂತರವಿಲ್ಲ ನಮಗೂ ಅನುಕೂಲವಾಗುತ್ತೆ. ನೀವು ಮನಸ್ಸು ಮಾಡಬೇಕು.
ಸಿಡಿಲು ಹೊಡೆದಂತಾಗಿ ಗಾಬರಿಯಲ್ಲಿ ಎದ್ದು ನಿಂತಾಗ ತಲೆ ಸುತಿ,್ತ ಕಣ್ಣಿಗೆ ಕತ್ತಲೆ ಕವಿದು, ಧಡಾರ್ ಎಂದು ನೆಲಕ್ಕೆ ಉರುಳಿದ್ದಳು ಆರುಂಧತಿ. ಮುಖಕ್ಕೆ ತಂಪು ಗಾಳಿ ತಗುಲಿ ನಂತರ ಯಜಮಾನರ ಧ್ವನಿ ಕೇಳಿಸಿತ್ತು. ಕಣ್ಣು ತೆರೆದಾಗ ಎದುರಿಗೆ ಮುಖದಲ್ಲಿ ಆತಂಕ ಹೊತ್ತ ಯಜಮಾನರು ದಿನ ಪತ್ರಿಕೆಯಲ್ಲಿ ಗಾಳಿಹಾಕುತ್ತ ಏನಾಯ್ತು? ಯಾಕೆ ಹೀಗೆ ಬೆವರಿದ್ದಿ? ಏನಾಗ್ತಾ ಇದೆ? ಎಂದು ಸುರಿಸಿದ್ದ ಪ್ರಶ್ನೆಗಳ ಸುರಿಮಳೆ ತಡೆದು ಕೇಳಿದ್ದಳು ಆರುಂಧತಿ ಅವರು ಹೋದರಾ? ರಾಯರು ಗೊಂದಲಿಸಿ ಯಾರು? ಯಾರು ಬಂದಿದ್ದರು? ಎಂದಾಗ ಗೊಂದಲಕ್ಕಿಡಾದವಳು ಆರುಂಧತಿ. ಕಣ್ಣರಳಿಸಿ ನೈಜ ಸ್ಥಿತಿ ಅರಿಯಲು ಪ್ರಯತ್ನಿಸಿದಾಗ ಕಣ್ಣಿಗೆ ಬಿದ್ದಿದ್ದು ಯಜಮಾನರ ಕೈಯಲ್ಲಿದ್ದ ದಿನ ಪತ್ರಿಕೆ, ಅದರಲ್ಲಿದ್ದ ಲೇಖನ ಹೆಣ್ಣು ಮಗು ಎಲ್ಲಿ?
ಮಧ್ಯಾಹ್ನ ಊಟ ಮುಗಿಸಿ ವಿಶ್ರಮಿಸುತ್ತ ಪತ್ರಿಕೆ ತಿರುವಿ ಹಾಕುವಾಗ ಲೇಖನ ಕಣ್ಣಿಗೆ ಬಿದ್ದಿತ್ತು. ಹೆಚ್ಚುತ್ತಿರುವ ಹೆಣ್ಣು ಬ್ರೂಣ ಹತ್ಯೆ, ಹೆಣ್ಣು ಮಕ್ಕಳ ಸಂಖ್ಯೆಯಲ್ಲಾಗುತ್ತಿರುವ ಗಣನೀಯ ಪ್ರಮಾಣದ ಇಳಿತ, ಲೇಖನದಲ್ಲಿಯ ಬೇರೆ ಬೇರೆ ರಾಜ್ಯಗಳ ಹೆಣ್ಣು ಗಂಡು ಸಂಖ್ಯಾ ಪ್ರಮಾಣ,
ಹಿಮಾಚಲ ಪ್ರದೇಶ ೧೦೦೦ – ೯೧೭
ರಾಜಸ್ಥಾನ ೧೦೦೦ – ೮೦೦
ಮಹಾರಾಷ್ಟç ೧೦೦೦ – ೯೧೭
ತಮಿಳು ನಾಡು ೧೦೦೦ – ೯೩೯ ಇತ್ಯಾದಿ
ಬೆಳಿಗ್ಗೆ ತಂಗಿಯಿAದ ಬಂದ ಮಗಳ ಮದುವೆಯ ಪ್ರಸ್ತಾವನೆ, ನಂತರ ಓದಿದ ಪತ್ರಿಕೆಯ ವರದಿ, ಎಲ್ಲಾ ಆಲೋಚನೆಗಳು ಸೇರಿ ಮನ ಕದಡಿ ಅಲೆಗಳನ್ನು ಎಬ್ಬಿಸುತ್ತಿದ್ದಾಗ ಆವರಿಸಿತ್ತು ನಿದ್ದೆ. ಆ ನಿದ್ದೆಯಲ್ಲಿ ಮನದ ಆಳಕ್ಕಿಳಿದ ಭಾವಗಳು ವಿಚಿತ್ರ ರೂಪ ತಳೆದು ಕನಸಾಗಿತ್ತು. ನಡೆದದ್ದು ಕನಸೆಂದು ಅರಿವಾದಾಗ ಮನದಲ್ಲಿಯೇ ಎಂದೂ ನೆನೆಯದ ಎಲ್ಲಾ ದೇವರುಗಳನ್ನು ನೆನೆದಿದ್ದಳು, ವಂದಿಸಿದ್ದಳು. ನಿರಾತಂಕವಾಗಿ ಸಮಾಧಾನದ ಉಸಿರು ಬಿಡುತ್ತಿದ್ದಾಗ ಮತ್ತೆ ಪತ್ರಿಕೆಯ ವರದಿಯ ಮೇಲೆ ಗಮನ ಹರಿದು, ತನಗಿದು ಕನಸಾದರೂ ಈ ಸನ್ನಿವೇಶ ವಾಸ್ತವ ರೂಪ ಧರಿಸುವ ಸಾಧ್ಯತೆ ಮತ್ತೆ ಕಾಲ ದೂರವಿಲ್ಲ ಎಂದು ಭಾರವಾಗಿತ್ತು ಆರುಂಧತಿಯ ಮನ.
–ಶ್ರೀಮತಿ. ರಾಜನಂದಾ ಘಾರ್ಗಿ
ಸಹಾಯಕ ಉಪನ್ಯಾಸಕರು (ನಿವೃತ್ತ)
ಕೆ.ಎಸ್.ಆರ್ ಶಿಕ್ಷಣ ವಿದ್ಯಾಲಯ,
ಬೆಳಗಾವಿ