ನಾ ಓದಿದ ಪುಸ್ತಕ -ಪುಸ್ತಕ ಪರಿಚಯ
“ಚಕ್ರ”
(ಸಣ್ಣ ಕಥೆಗಳು)
ಕೃತಿ ಕರ್ತೃ:- ಡಾ.ಗವಿಸ್ವಾಮಿ ಎನ್
ಸಣ್ಣ ಕಥೆಗಳನ್ನು ಬರೆಯುವುದು ಸುಲಭವಾದ ಕೌಶಲ್ಯವಲ್ಲ. ಸಾಹಿತ್ಯ ಪ್ರೌಢತೆ ಹೊಂದಿದವರು, ತಮ್ಮ ಮಸ್ತಕದಲ್ಲಿ ಚಿಗುರಿದ ಕಥೆಯ ನೂಲನ್ನು ಹಿಡಿದು ಸುಂದರವಾದ ರೂಪ ಕೊಡುವುದರೊಂದಿಗೆ ಕಡಿಮೆ ಪದಗಳಲ್ಲೇ ಹೇಳಬೆಕೆಂದುಕೊಂಡಿರುವುದನ್ನು ನಿಶ್ಶೇಶವಾಗಿ ಓದುಗನಿಗೆ ಸಮಾಧಾನವಾಗುವಂತೆ ಹೇಳುವುದು ಗಟ್ಟಿತನವೇ ಸರಿ.
ನೂಲನ್ನು ಹೆಣೆದು ಬಟ್ಟೆ ತಯಾರಿಸಿದರೆ ಸಾಲದು, ಅದಕ್ಕೊಂದು ಬಣ್ಣ ರೂಪ ಕೊಟ್ಟಾಗ ಮಾತ್ರ ಉಪಯೋಗಕ್ಕೆ ಯೋಗ್ಯವಾಗುತ್ತದೆ. ಅಂತೆಯೇ ಪದಗಳನ್ನು ಹೆಣೆಯುವಾಗ ಸೂಕ್ತವಾದ ವಿಷಯವಸ್ತುವನ್ನು ಕಲ್ಪನಾತೀತವಾಗಿ ಭಾವನಾತ್ಮಕ ಅಂಶವನ್ನು ತುಂಬಿದಾಗ ಅದು ಕಥಾರೂಪವನ್ನು ಪಡೆದುಕೊಳ್ಳುತ್ತದೆ.
ಅಂತಹ ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು “ಚಕ್ರ” ಸಂಕಲನದಲ್ಲಿ ಪೋಣಿಸಿದವರು ಡಾ.ಗವಿಸ್ವಾಮಿ ಎನ್ ಅವರು. ಒಬ್ಬ ಪ್ರಬುದ್ಧ ಲೇಖಕರು.
ಸಾಮಾಜಿಕ, ಸಾಂಸಾರಿಕ, ರಾಜಕೀಯ, ಬಡತನ, ನಿರುದ್ಯೋಗ, ಅನಕ್ಷರತೆ, ಲಂಚಗುಳಿತನ, ಅಲ್ಲದೆ ಹೆಣ್ಣಿನ ಮನದ ತುಡಿತಗಳಿಗೂ ಸಂಕಲನದಲ್ಲಿನ ಅನೇಕ ಕಥೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಹಲವು ವಿಭಿನ್ನವಾದ ವಿಷಯಗಳ ಮೇಲೆ ಕಥೆ ಕಟ್ಟಿದ ಗವಿಸ್ವಾಮಿಯವರ ಸೂಕ್ಷ್ಮಾತಿ ಸೂಕ್ಷ್ಮ ದೃಷ್ಟಿಕೋನ ಶ್ಲಾಘನೀಯವಾಗಿದೆ.
ಮೊದಲ ಕಥೆ “ಮನೆಗೆಲಸದವಳ ಮಹದಾಸೆ”ಯಲ್ಲಿಯೇ ಓದುಗನನ್ನು ಸೆರೆಹಿಡಿದುಬಿಡುತ್ತಾರೆ. ಮನೆಗೆಲಸದವಳೆಂದು ಕೀಳಾಗಿ ಕಾಣುವ ಮನೆಯ ಎಲ್ಲ ಸದಸ್ಯರೂ ನಾಚಿಕೊಳ್ಳುವ ವ್ಯಕ್ತಿತ್ವವನ್ನು ಅವಳಲ್ಲಿ ತುಂಬಿ, ಮನೆಗೆಲಸದವರಲ್ಲೂ ನಾವು ಸಹೋದರತೆಯನ್ನು ಕಾಣುವಂತೆ ಮಾಡುತ್ತಾರೆ. ಕಥೆಯ ಕೊನೆಯಲ್ಲಿ ತಾನು ಕೆಲಸ ಮಾಡುವ ಮನೆಯ ಮಗಳ ಮದುವೆಗೆ ತಾಳಿಯ ಪಕ್ಕ ಪೋಣಿಸುವ ಎರಡು ಗುಂಡುಗಳನ್ನು ತನ್ನ ಸಂಪಾದನೆಯಿಂದ ಉಡುಗೋರೆ ನೀಡಿ ಹರ್ಷಿಸುವ ಮನೆಗೆಲಸದವಳ ವ್ಯಕ್ತಿತ್ವ ವಿಶೇಷವೆನಿಸುತ್ತದೆ. “ಅದ್ಯಾವ ಭಾರೀ ಖರ್ಚಾಗೋಯ್ತದೆ ಬಿಡ್ರವ್ವ, ನಿಮ್ ಮಗಳು ನನ್ ಮಗಳ ಸಮಾನ ಅಲ್ವಾ”, ಎಂಬ ಅವಳ ಮುಗ್ದತೆ, ಮಮತೆಯ ಮಾತಿಗೆ ನಮ್ಮ ಹೃದಯ ಮಿಡಿದು, ಅವಳ ಮೇಲೆ ಗೌರವ ಭಾವ ಮೂಡಿಸುತ್ತದೆ.
ಎಷ್ಟೇ ಕಷ್ಟ ಬಂದರೂ ದುಡಿದು ತಿನ್ನಬೇಕೆಂಬ ಚನ್ನಬಸವಣ್ಣನೂ ಆದರ್ಶನಾಗುತ್ತಾನೆ. ಅನೇಕ ಅವಮಾನದ ಚುಚ್ಚು ಮಾತುಗಳನ್ನು ಸಹಿಸಿಕೊಳ್ಳುವ ಚನ್ನಬಸವಣ್ಣನಿಗೆ ಮಾತುಗಳೆಂಬ ಖೋಟಾ ನಾಣ್ಯಗಳನ್ನು ಉದುರಿಸುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂದು ಸುಮ್ಮನಿರುವ ಕಥೆಯ ಮತ್ತೊಂದು ಪಾತ್ರವನ್ನೂ ಉತ್ತಮವಾಗಿ ತೋರಿಸಿದ್ದಾರೆ. ಖೋಟಾ ನಾಣ್ಯಕ್ಕೆ ಉಪಯೋಗಬಾರದ ಹೊಗಳಿಕೆ ಮಾತುಗಳನ್ನು ಹೋಲಿಸಿರುವುದು ಲೇಖಕರ ಸಾಹಿತ್ಯ ಪ್ರೌಢತೆಯನ್ನು ತೋರುತ್ತದೆ.
ಸತ್ತ ನಂತರ ಉಳಿಯುವುದೇನು? ಮಾಡಿದ ಹೆಸರು ಮಾತ್ರ. ಏನಾದರೂ ಸಾಧಿಸಿಯೇ ಸಾಯಬೇಕಾ? ಹೆಸರು ಗಳಿಸಿಯೇ ಅಸುನೀಗಬೇಕಾ? ಎಂಬ ಪಾತ್ರ ಒಂದೆಡೆ ಆದರೆ, ಹೆಸರಿನ ಹಂಗಿಗೆ ಬೀಳದೆ ನಿಸ್ವಾರ್ಥತೆಯಿಂದ, ನಿರಪೇಕ್ಷಿಗಳಾಗಿ ಸಾಮಾನ್ಯರಾಗಿ ಬದುಕಿದರೆ ಸಾಕು ಎಂದು ಸಮರ್ಥನಾ ಪೂರ್ವಕ ವಿಚಾರವನ್ನು ಹೇಳುವ ಮತ್ತೊಂದು ಪಾತ್ರವನ್ನು ಸೃಷ್ಟಿಸಿ ಕಥೆಗೆ ಮೆರುಗು ನೀಡಿದ್ದಾರೆ.
ಪ್ರಾಣಿಗಳ ಮೇಲಿನ ದಯೆಯನ್ನು ಒಂದು ಹಾವು ಮತ್ತು ಅದು ತನ್ನ ಪ್ರಾಣವನ್ನು ಉದ್ರಿಕ್ತಗೊಂಡ ಗುಂಪಿನಿಂದ ರಕ್ಷಿಸಿಕೊಂಡ ಪರಿಯೊಂದಿಗೆ ತೋರಿದ್ದು ಉತ್ತಮವಾಗಿದೆ.
ಸತ್ತವರ ದೇಹ ಹೆಣವಲ್ಲ, ಸಾಯುವ ಸ್ಥಿಯಲ್ಲಿನ ಮನುಷ್ಯನನ್ನು ಕಾಪಾಡದೆ ನೋಡುತ್ತ ನಿಂತವನು ಜೀವಂತ ಹೆಣ ಇದ್ದಂತೆ ಎಂದು ಮನುಷ್ಯನ ಗುಣವನ್ನು ವಿಡಂಬನಾತ್ಮಕವಾಗಿ “ನಿಂತ ಹೆಣ”ದಲ್ಲಿ ವ್ಯಂಗ್ಯಮಾಡಿದ್ದಾರೆ.
“ನೂರೊಂದರ ನೆನಪು”, ಪ್ರಾರಂಭದಲ್ಲಿ ಪ್ರೇಮ ನಿವೇದನೆ ಮಾಡದೆ ಪರಿತಪಿಸವ ವ್ಯಕ್ತಿಯ ಕಥೆ ಎಂದು ತೋರಿ ಕುತೂಹಲ ಕೆರಳಿಸಿ, ಕೊನೆಯಲ್ಲಿ ಅಯ್ಯೋ ಹೀಗಾ… ಎಂದು ನಗುತರಿಸುತ್ತದೆ.
“ಕಳೆದುಹೋದ ಪ್ರಾಮಾಣಿಕತೆ”ಯ ಕಥೆಯಂತೂ ಬಲು ಸೊಗಸಾದ ಕಥೆ, ಪ್ರಾಮಾಣಿಕತೆಯೊಂದಿದ್ದರೆ ಸಾಕು ನ್ಯಾಯ ಸಿಗುತ್ತದೆ. ಇದನ್ನು ತೋರಲು ಗೋಡೆಯ ಮೇಲೆ ನಗುತ್ತಿರುವ ತಾತನೇ ಬರಬೇಕು. ತಾತನ ಕನ್ನಡಕವನ್ನು ಹಾಕಿದ ತಕ್ಷಣ ಪ್ರಾಮಾಣಿಕತೆ ಹುಟ್ಟುವುದಾದರೆ ನಮ್ಮ ಗಾಂಧಿ ಮಹಾತ್ಮ ಅದೆಷ್ಟು ಪ್ರಾಮಾಣಿಕವಾಗಿದ್ರು ಎನ್ನುವುದನ್ನು ತೋರಿಸುವಲ್ಲಿ ಕಥೆ ಗೆಲುವಿನ ನಗೆ ಬೀರುತ್ತದೆ.
ಕಥೆಯಲ್ಲಿ ತಿರುವು ನೀಡುವುದರಲ್ಲಿ ಗವಿಸ್ವಾಮಿಯವರು ಪರಿಣಿತರಾಗಿದ್ದಾರೆ. “ಮಂತ್ರಿ ಎಗೆನೆಸ್ಟ್ ಮಾದ” ಕಥೆ ಅಂತಿಮದಲ್ಲಿ ಊಹಿಸಲಾರದ ತಿರುವು ಪಡೆದು ಓದುಗನಿಗೆ ಮೆಚ್ಚುಗೆ ಆಗುತ್ತದೆ.
ಬಡವರಾದರೇನಂತೆ ಮಾನ ಮರೆತು ಬಾಳುವರೇ? ಉಪವಾಸ ಇದ್ದರೂ ಬೇರೆಯವರ ಸ್ವತ್ತನ್ನು ಮುಟ್ಟದಂತ ಪ್ರಾಮಾಣಿಕರು; ಬಡವರು ಎಂಬುದನ್ನು “ಮಾನಕ್ಕಂಜುವರು” ಕಥೆಯಲ್ಲಿ, ನಮ್ಮ ಮನಸ್ಸಿಗೆ ನಾಟುವಂತೆ ಗವಿಸ್ವಾಮಿಯವರು ಬರೆದಿದ್ದಾರೆ.
ದೇಹದ ತೃಷೆಗೋ, ಅನ್ಯರ ಬಲಾತ್ಕಾರದ ಫಲವಾಗಿಯೋ ಹುಟ್ಟಿದ ಅದೆಷ್ಟೋ ಕಂದಮ್ಮಗಳನ್ನು ಮೋರಿ, ಚರಂಡಿ, ಕಸದ ತಿಪ್ಪೆಯಲ್ಲಿ ತಾಯಿಯಾದವಳು ಬಿಟ್ಟು ಹೋದದ್ದನ್ನು ನಾವು ಕೇಳುತ್ತಲೇ ಇರತ್ತೇವೆ. ಅಂತಹ ಕೂಸಿಗೆ ಒಂದು ನೆಲೆ ಸೇರಿಸುವ ಹೊತ್ತಿಗೆ ಹೈರಾಣಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಉಪಾಯವಾಗಿ ನಿಭಾಯಿಸಿದ ಕಥೆ “ವಸ್ತುವೊಂದು ಸಿಕ್ಕಿದೆ”, ಉತ್ತಮವಾಗಿಯೂ ಮೂಡಿಬಂದಿದೆ.
ನಾವು ಮಾಡಿದ ಕಾರ್ಯ ಸನ್ಮಾನದಲ್ಲಿ ಮುಕ್ತಾಯವಾಗಬಾರದು. ಅಥವಾ ಸನ್ಮಾನಕ್ಕೆಂದೇ ಕಾಟಾಚಾರಕ್ಕೆ ನಮ್ಮ ಕರ್ತವ್ಯ ಬಲಿಯಾಗಲೂ ಬಾರದು.
ಅಂತಹ ಒಂದು ವ್ಯಕ್ತಿತ್ವ ಇರುವ “ಸನ್ಮಾನ” ಕಥೆ ಸೊಗಸಾಗಿದೆ ಮತ್ತು ಅರ್ಥವತ್ತಾಗಿದೆ. ಶಾಶ್ವತವಾಗಿ ಪ್ರಕೃತಿಗೆ ಕೂಡುಗೆ ನೀಡಿದ ಶಿವಣ್ಣನನ್ನು ಮರೆತು, ಹಣ ವ್ಯಯಿಸಿ ಶಾಲೆಗೆ ವಸ್ತುಗಳನ್ನು ದೇಣಿಗೆ ನೀಡಿದವರಿಗೆ ಮಾಡುತ್ತಿರುವ ಸನ್ಮಾನ ಶ್ಲಾಘನೀಯವಲ್ಲ ಎಂಬುದನ್ನು ಮತ್ತು ಅಲ್ಲಿ ನಡೆಯುತ್ತಿರುವುದೇನೆಂದೂ ತಲೆಕೆಡಿಸಿಕೊಳ್ಳದ, ಬಲಗೈ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದೆಂಬುದನ್ನು ನಂಬಿದಂತ ಶಿವಣ್ಣನ ಪಾತ್ರ ಮೆಚ್ಚುಗೆಗಳಿಸುತ್ತದೆ.
ಯಾವುದೇ ವ್ಯಕ್ತಿಯ ಓದು, ವೃತ್ತಿಯಂತೆ ಅವನ ಮಾತುಗಳಿರತ್ತವೆ ಎಂಬುದನ್ನು ನಾವು ಕೇಳಿದ್ದೇವೆ. ಅಂತೆಯೇ ಇಲ್ಲಿ ಗವಿಸ್ವಾಮಿಯವರು ಗಣಿತ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಓಲೆ ಬರೆದರೆ ಹೇಗಿರುತ್ತದೆ ಎಂಬುದನ್ನು ಹಾಸ್ಯವಾಗಿ ಬರೆದಿದ್ದಾರೆ. ಒಲವಿನ ಓಲೆಯ ಕೊನೆಗೆ ಅವರ ಪ್ರೇಮ ವೈಫಲ್ಯ ಆಗಿದ್ದುದು ಮಾತ್ರ ಓದುಗರ ಮನಸಿಗೆ ಹಿಡಿಸದಂತಾಗುತ್ತದೆ. ಕಥಾ ನಿರೂಪಣಾ ಶೈಲಿ ಓದುಗನನ್ನು ಆಕರ್ಶಿಸುತ್ತದೆ ಎಂಬುದು ಪ್ರಮುಖವಾಗಿ ಗಮನಿಸಬೆಕಾದ ಅಂಶ.
“ಚಕ್ರ” ಒಂದು ಸಾಮಾಜಿಕ ಕಥೆ, “ಬದಲಾವಣೆ ಎಂಬುದು, ಮುಂದಿನ ಪೀಳಿಗೆಯವರಿಂದ ಆದರೆ ಆಗಲಿ ಎನ್ನುವುದಕ್ಕಿಂತ ನಮ್ಮ ತಲೆಯವರಿಂದಲೇ ಆಗಬೇಕು” ಎಂದು ದಾಟು ಕಾದಂಬರಿಯಲ್ಲಿ ಪಾತ್ರಗಳ ಮೂಲಕ ಭೈರಪ್ಪನವರು ಹೇಳುತ್ತಾರೆ. ಅಂತೆಯೇ ಗವಿಸ್ವಾಮಿಯವರು, ಬದಲಾವಣೆಯನ್ನು ನಮ್ಮ ಹಿರಿತಲೆಯವರಿಂದಾಗಬೇಕೆಂದು ಹಟ ಹಿಡಿಯುವ ಬದಲು ನಮ್ಮಿಂದಾಗಬೇಕು ಎಂದು ಚಕ್ರ ಕಥೆಯಲ್ಲಿ ಹೇಳಿದ್ದಾರೆ. ಚಕ್ರ ಒಂದು ಪುರುಷ ಪಾತ್ರವಾಗಿ ಕಥೆಯಲ್ಲಿ ಬಿಂಬಿತವಾಗಿದೆ ಆದರೂ ಅ ಪಾತ್ರವನ್ನು ಮತ್ತಷ್ಟು ಕಥೆಯಲ್ಲಿ ಗಟ್ಟಿಗೊಳಿಸಿದ್ದರೆ, ಮತ್ತು ವಿಸ್ತಾರಗೊಳಿಸಿದ್ದರೆ ಕಥೆ ಇನ್ನೂ ಅರ್ಥವತ್ತಾಗುತ್ತಿತ್ತು ಎಂಬುದು ನನ್ನ ಅನಿಸಿಕೆ.
ಬದುಕೇ ಒಂದು ಚದುರಂಗ, ನಾವು ರಾಜರಾಗುತ್ತೇವೋ?, ಮಂತ್ರಿಯಾಗುತ್ತೇವೋ? ಸಿಪಾಯಿಯಾಗಿಯೇ ಉಳಿಯುತ್ತೇವೆಯೋ? ಅಥವಾ ಮತ್ತಾವುದೋ ಪ್ರಾಣಿಯಾಗುತ್ತೇವೆಯೋ? ಎಲ್ಲವೂ ನಮ್ಮ ನಡೆಯ ಮೇಲೆ ನಿರ್ಧಾರವಾಗತ್ತದೆ.
ಕಥೆಯಲ್ಲಿ ವಿಧಿ ರವಿ(ಪಾತ್ರ)ಯ ಬದುಕಲ್ಲಿ ಆಡಿದ ಚದುರಂಗ ಮಾತ್ರ ಘೋರವೆ. ತಾಯಿಯನ್ನು ಕಳೆದುಕೊಂಡ ರವಿಗೆ ಹೆಜ್ಜೆ ಹೆಜ್ಜೆಗೂ ಚೆಕ್ ನೀಡುತ್ತಲೇ ಬಂದ ವಿಧಿ; ಕೊನೆಗೂ ಹೊಡೆದುರುಳಿಸುತ್ತದೆ. ಅವನ ನೆನಪುಗಳನ್ನು ಕಣ್ಣಲ್ಲಿ ತುಂಬಿಕೊಂಡು ಫೈನಲ್ನಲ್ಲೂ ಗೆಲುವಿನ ನಗೆ ಬೀರಿದ ಕಥಾ ನಾಯಕ ಚೆಸ್ ಚಾಂಪಿಯನ್ ಆಗುತ್ತಾನೆ. ಈ ಹೊತ್ತಿಗೆಯ ಉತ್ತಮ ಮತ್ತು ಮನಸ್ಸಿಗೆ ನಾಟಿದ ಕಥೆಗಳಲ್ಲಿ ಈ ಕಥೆಯೂ ಒಂದು. ಗವಿಸ್ವಾಮಿಯವರು ಕಟ್ಟಿದ ಈ ಕಥೆ ನಿಜಸ್ವರೂಪದ್ದೇನೋ ಅನ್ನಿಸುವಷ್ಟು ಚೆನ್ನಾಗಿ ಮೂಡಿ ಬಂದಿದೆ.
“ಮಾಡರ್ನ್ ಕತ್ತೆ”, ಜನರನ್ನು ಮಾತಿಂದ ಮರಳು ಮಾಡಿದ ಕಥೆ, “ನಿಮ್ ಅದೃಷ್ಟ ಖುಲಾಯ್ಸ್ತೀನಿ ನನ್ನ ಸಾಕೊಳ್ಳಿ” ಅಂತ ಯಾಮಾರಿಸಿ ಒಬ್ಬನ ಮನೆ ಸೇರಿ ಅವನನ್ನು ಬೆಪ್ಪು ಮಾಡುತ್ತದೆ. ನಮ್ಮನ್ನು ನಗೆಗಡಲಲ್ಲಿ ತೇಲಿಸುವ ಕಥೆ ಇದಾಗಿದ್ದು ಮಾಡರ್ನ್ ಯುವಕರ ಸೋಮಾರಿತನವನ್ನ ಸಹ ಪ್ರತಿಬಿಂಬಿಸುವಂತಿದೆ.
ಹೀಗೆ ಗವಿಸ್ವಾಮಿಯವರು ಈ ಹೊತ್ತಿಗೆಯಲ್ಲಿ ಮೃಗಗಳು ಕಲಿಸಿದ ಪಾಠ, ಎತ್ತರದ ಸಾಧನೆ, ಗುರಿಯ ಹಾದಿ, ಪ್ರೇರಣೆ, ಬಾಂಧವ್ಯ, ಮೂಕ ಮಕ್ಕಳು, ಅ-ಮಾನವೀಯತೆ, ಛಲ, ನಂಬಿಕೆ ಫಲಿಸಿತು, ಸಾವಿತ್ರಿ, ಜೂಜು, ದುರಂತ, ಅಪ್ಪ, ಸಾಂತ್ವನ…ಮುಂತಾದ ಅತ್ಯುತ್ತಮ ಸಣ್ಣಕಥೆಗಳನ್ನು ನೀಡಿದ್ದಾರೆ.
ಮುಂದುವರೆದಂತೆ; ಮುಖಾಮುಖಿ, ತಾಯಿ ಮಗ, ವಿಪರ್ಯಾಸ, ಒಳಗಣ್ಣಿನ ಗರುಡ, ಅಸಹಾಯಕ ಮಕ್ಕಳು ನ್ಯಾನೋ ಕಥೆಗಳಂತೆ ಮಿಂಚಿ ಮನವನ್ನು ಬೆಳಗುವಂತಹ ವಿಚಾರವನ್ನೊಳಗೊಂಡಿವೆ.
ಒಟ್ಟು ಒಂದು ನೂರಾ ಹನ್ನೊಂದು ಕಥೆಗಳನ್ನು ತಮ್ಮ ಕ್ರಿಯಾಶೀಲತೆಯಿಂದ, ವಿಭಿನ್ನದೃಷ್ಟಿಯಿಂದ, ಭಿನ್ನ ಭಿನ್ನವಾದ ವಿಷಯಗಳನ್ನೊಳಗೊಂಡಂತೆ ರಚಿಸಿದ್ದು ಸಣ್ಣಕಥಾಸಾಹಿತ್ಯ ಪ್ರಕಾರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು.
ಇಲ್ಲಿ ಎಲ್ಲ ಕಥೆಗಳ (111) ಕುರಿತಾಗಿ ಸಂಕ್ಷಿಪ್ತವಾಗಿ ಹೇಳಿದರೂ ಬಹಳ ವಿಸ್ತಾರವಾಗುವ ಕಾರಣ ಕೆಲವೊಂದು ಕಥೆಗಳ ಬಗ್ಗೆ ಮಾತ್ರ ಬರೆದಿರುತ್ತೇನೆ. ಉಳಿದ ಹಲವು ಕಥೆಗಳು ಈಗ ಹೇಳಿದ ಕಥೆಗಳಷ್ಟೇ ಸುಂದರವಾಗಿದ್ದು, ನನ್ನ ಮನದಲ್ಲೇ ಉಳಿದು ಕಾಡುವ ಕಥೆಗಳಾಗಿ ಎಂದಿಗೂ ನೆನಪಿನಲ್ಲಿರುತ್ತವೆ. ಕೇವಲ ನನ್ನನ್ನು ಮಾತ್ರವಲ್ಲ ಅನೇಕ ಸಾಹಿತ್ಯ ಪ್ರೇಮಿಗಳನ್ನು ಈ ಕೃತಿ ಸೆರೆಹಿಡಿದಿದೆ. ಇತ್ತೀಚೆಗಷ್ಟೇ ಕ್ಲಬ್ ಹೌಸ್ ನಲ್ಲಿ “ಚಕ್ರ” ಕೃತಿಯ ಕುರಿತಾಗಿ ಸಂವಾದ ಕಾರ್ಯಕ್ರಮವೊಂದು ಜರುಗಿತು. ಓದುಗರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿಹಂಚಿಕೊಂಡು, ಕೃತಿಕಾರರು ಮತ್ತಷ್ಟು ಸಾಹಿತ್ಯದಲ್ಲಿ ಬಲಗೊಳ್ಳುವಂತೆ ಪ್ರೇರೇಪಿಸಿದರು. ಇಂತಹ ಅನೇಕ ಓದುಗರು ಈ ಕೃತಿಗೆ ಮಾರು ಹೋಗಿದ್ದಾರೆ. ಈ ಕಾರಣದಿಂದಲೇ ಈ “ಚಕ್ರ” ಕೃತಿ ಬಿಡುಗಡೆಯಾದ ಒಂದು ವರ್ಷದಲ್ಲೇ ಎರಡನೇ ಬಾರಿ ಮುದ್ರಣಗೊಂಡು ನಾಡಿನ ಅನೇಕ ಜನರ ಬಳಿ ಉರುಳಿಹೋಗುತ್ತಿದೆ….. ಎಂಬುದನ್ನು ಕೇಳಿ ಸಂತೋಷವಾಯಿತು. ಮುಂದೆ ಮೂರನೇ ಮುದ್ರಣಕ್ಕೂ ಕೃತಿಕಾರರು ಸನ್ನದ್ಧರಾಗುತ್ತಾರೆ ಎಂಬುದು ನನ್ನ ವಿಶ್ವಾಸ….
ಇಂತಹ ವೈಚಾರಿಕ, ಮನೋಸಾಮಾಜಿಕ ಮನಸ್ಸಿನಲ್ಲಿ ನೆಲೆ ನಿಲ್ಲುವ ಸಣ್ಣಕಥಾ ಸಂಕಲನವನ್ನು ಎಲ್ಲ ಓದುಗರು, ಸಾಹಿತ್ಯಾಸಕ್ತ ಹೃದಯವಂತರು ಖರೀದಿಸಿ ಕಥೆಗಳನ್ನು ಓದಬೇಕು. ಓದುಗರ ಪ್ರೋತ್ಸಾಹವೇ ಕೃತಿಕಾರರಿಗೆ ಸ್ಪೂರ್ತಿ.
ಒಬ್ಬ ಸಾಹಿತಿಯ ಕೊಡುಗೆ ನಿರಂತರವಾಗಿ ಸಾಹಿತ್ಯಲೋಕಕ್ಕೆ ಸೇರ್ಪಡೆಗೊಳ್ಳಬೇಕೆಂದರೆ, ಅವರ ಕೃತಿಗಳು ಮನೆ ಮನೆಗೂ, ಮನ ಮನಗಳಿಗೂ ತಲುಪಬೇಕು. ಆ ನಿಟ್ಟಿನಲ್ಲಿ ನಾವು ಓದಿನತ್ತ ಹೆಜ್ಜೆ ಹಾಕಬೇಕು.
ಡಾ. ಗವಿಸ್ವಾಮಿಯವರು ಹೀಗೆ ಮತ್ತಷ್ಟು ಎಲ್ಲ ತರಹದ ಸಾಹಿತ್ಯ ರಚನೆಗಳ ಸಂಕಲನಗಳನ್ನು ಹೊರತಂದು, ಸಾಹಿತ್ಯ ಪ್ರಿಯರ ಓದುವ ಹಸಿವನ್ನು ನೀಗಿಸಲಿ, ಮತ್ತಷ್ಟು ಪಕ್ವವಾದ ಸಾಹಿತ್ಯವನ್ನು ರಚಿಸಲಿ ಎಂದು ಆಶಿಸುತ್ತಾ ಅವರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತೇನೆ.
— ವರದೇಂದ್ರ ಕೆ ಮಸ್ಕಿ
9945253030
ಪುಸ್ತಕಗಳಿಗಾಗಿ ಸಂಪರ್ಕಿಸಿ
– ಡಾ.ಗವಿಸ್ವಾಮಿ ಎನ್
9972797817