ಗಜಲ್
ಬದುಕು ಇನ್ನೆಷ್ಟು ದಿನ ಕಾದಿದೆ ಯಾರಿಗೆ ಗೊತ್ತು
ಅದೇನನು ಅರಸಿ ಕುಳಿತಿದೆ ಯಾರಿಗೆ ಗೊತ್ತು
ಬೇಕು ಬೇಡಗಳೇ ಎಲ್ಲೆಡೆ ತುಂಬಿ ತುಳುಕಿವೆ
ತೃಪ್ತಿಯ ಸೆಲೆ ಎಲ್ಲಿ ಅಡಗಿದೆ ಯಾರಿಗೆ ಗೊತ್ತು
ದಿನಕರ ದಣಿಯದೆ ಧರೆಗೆ ನಿತ್ಯ ಬೆಳಕುಣಿಸುವ
ಮನಸಾವ ಬೆಳಗಿಗೆ ತವಕಿಸಿದೆ ಯಾರಿಗೆ ಗೊತ್ತು
ಹಳೆ ನೆನಪುಗಳೆ ಮತ್ತೆ ಮೊಳಕೆಯೊಡೆದಿವೆ
ಚಿಗುರುವಾಸೆ ಮತ್ತೆ ಬದುಕಿಸಿದೆ ಯಾರಿಗೆ ಗೊತ್ತು
ನಿದ್ರೆಯಿರದ ರಾತ್ರಿಗಳು ನಿದ್ದೆಗೆ ಹಂಬಲಿಸಿವೆ ‘ಸುನಿ’
ಹತ್ತಿರದೆ ಚಿರನಿದ್ರೆ ಅಣಕಿಸುತಿದೆ ಯಾರಿಗೆ ಗೊತ್ತು
– ಸುನಿತಾ ಮೂರಶಿಳ್ಳಿ