ಗೂಡಂಗಡಿ

ಗೂಡಂಗಡಿ

ಪುಟ್ಟ ಗೂಡಿನಂಗಡಿ
ಅಗಣಿತ ಮಾಲುಗಳ ಅಂಗಡಿ
ಗೂಡಂಗಡಿಯ ಮಾಲುಗಳು ಕಣ್ಣಿಗೆ ಕಾಣುವುದೇ ಇಲ್ಲ
ಆದರೂ ಅಂಗಡಿಯ ತುಂಬ ಮಾಲುಗಳು

ಗೂಡಂಗಡಿಯ ಮಾಲೀಕನಿಗೆ ಮಾಲುಗಳದ್ದೇ ಧ್ಯಾನ
ಬಂಡವಾಳ ಹಾಕದೇ ಬಂದ ಸಾಮಾನುಗಳು
ಗೂಡಂಗಡಿಯ ತುಂಬಾ
ಹೊಸ ಹೊಸ ಮಾಡೆಲ್ ನ ಸಾಮಾನುಗಳು
ಚಿಕ್ಕ ಗೂಡು-ಅಸಂಖ್ಯಾತ ಸಾಮಾನುಗಳು
ಇಡಲು ಜಾಗದ ಕೊರತೆ

ಖರ್ಚಾಗದ ಮಾಲುಗಳು ಹಾಗೇ ಉಳಿದಿವೆ
ಹುಳ ಹಿಡಿದು ಹಾಳಾಗುತ್ತಿವೆ
ಜೊತೆಗೆ ಇಲಿ ಹೆಗ್ಗಣಗಳ ಕಾಟ
ಬೇಡವೆಂದರೂ ಬಂದು ಬಂದು ಬೀಳುವ ಮಾಲು
ಗೂಡಂಗಡಿಯ ಯಜಮಾನನಿಗೆ ಕೂಡಲೂ ಜಾಗವಿಲ್ಲ
ಖರ್ಚಾಗದ ಕರಗದ ಮಾಲು ಅಂಗಡಿಯ ತುಂಬಾ
ವ್ಯಾಪಾರ ಆಗದೇ ಉಳಿದ ಮಾಲು
ಮನೋ ವ್ಯಥೆ
ಮತ್ತೂ ಮತ್ತೂ ಬಂದು ಬೀಳುತ್ತಿವೆ
ಗೂಡಂಗಡಿಗೆ ಮಾಲು ಸಾಮಾನುಗಳು

ಕಣ್ಣು ಬಯಸಿದ್ದೆಲ್ಲ ಗೂಡಂಗಡಿಗೆ ನೇರ ರವಾನೆ
ಸುಮ್ಮಸುಮ್ಮನೇ ಮನೋವ್ಯಥೆ
ಮನೋವ್ಯಾಪಾರ
ಆಗದ ವ್ಯಾಪಾರ
ಕೊಳ್ಳುವವರು ತಿರುಗಿಯೂ ನೋಡುತ್ತಿಲ್ಲ ಕೂಗಿ ಕೂಗಿ ಕರೆದರೂ
ಬಯಕೆಗಳೆಂಬ ಮಾಲುಗಳ ಒಟ್ಟಿ ಒಟ್ಟಿ ಒತ್ತಟ್ಟಿಗೆ ಗೋಡಂಗಡಿಯಲ್ಲಿ ಜಾಗವೇ ಉಳಿದಿಲ್ಲ
ಕೊಳ್ಳದೆಯೇ ಬಂದು ಬಂದು ಬೀಳುವ ಮಾಲು
ಕಣ್ಣು ಕೊಂಡಿದ್ದು ಬಂಡವಾಳ ಇಲ್ಲದೆಯೇ
ಗೂಡಂಗಡಿಯ ತುಂಬಿಸಿದ ಕಣ್ಣಿಗೆ ಇನ್ನೂ ಇನ್ನಷ್ಟು ಮತ್ತಷ್ಟು ದಾಹ
ಬೇಕು ಬೇಕೆಂಬ ದಾಹ -ಹಪಹಪಿ
ಮನೋವ್ಯಾಪಾರ
ಮನೋವ್ಯಥೆ-ಗೂಡಂಗಡಿಗೆ ಯಾತನೆಗಳ ತೂತುಗಳು

ಗೂಡಂಗಡಿಯ ಗೋಡೆಗಳ ಕುಸಿತ
ಮಾಲುಗಳ ಹೊರಗೆಸೆದು ನಿರಮ್ಮಳವಾಗಿರಲು ಸಹ ಆಗದು
ಹೊರಗೆ ಎಸೆದರೂ ಜಾಗ ಇಲ್ಲವೇ ಇಲ್ಲ
ಜಾಗ ಕೂಡಲಷ್ಟಾದರೂ

ಗೂಡಂಗಡಿಯ ಮಾಲುಗಳ ಬಿಸಾಡಿ ಎದ್ದು ಹೋದ
ಎದ್ದು ಹೋಗಿಯೇಬಿಟ್ಟ ಮಾಲೀಕ
ಗೂಡಂಗಡಿ ಮುಚ್ಚಿಯೇ ಹೋಯ್ತು ಕುಸಿದು
ಧರೆಗುರುಳಿ
ಮಾಲೀಕ ಜಿಗಿದು ಹೊರಟೇಬಿಟ್ಟ
ಗೂಡಂಗಡಿಯ ಸಾಮಾನುಗಳು ಅನಾಥ
ಗೂಡಂಗಡಿಗಳ ಕತೆಗಳು ಹೀಗೇ ಹೀಗೇ ಯಾವಾಗಲೂ
ಅಂಗಡಿ ಬಿದ್ದು ಹೋಗುವವರೆಗೆ ಇದ್ದದ್ದೇ ಗಿರಾಕಿಗಳಿಲ್ಲದ ವ್ಯಾಪಾರ

#ಮಹಿಮ

Don`t copy text!