ಮರಳಿ ಅರಳು ‌

ಮರಳಿ ಅರಳು ‌

ನೆನಪಾಗುತ್ತಿದೆ …..
ನನಗಾಗ ಮೂವತ್ತು
ಹದೆಯದ ವಯಸ್ಸು
ಕಾಣುತ್ತಿದ್ದವು ಗುಳ್ಳೆಗಳು
ಮುಖದತುಂಬೆಲ್ಲ
ನನಗೀಗ ಅರವತ್ತು
ಹಿರಿಯ ನಾಗರಿಕ ವಯಸ್ಸು
ಕಾಣುತಿವೆ ಇಂದು
ಮುಖದಲ್ಲಿ ಸುಕ್ಕುಗಳು

ನನಗಾಗ ಇಪ್ಪತ್ತು
ಯವ್ವನದ ವಯಸ್ಸು
ಹಾಕುತ್ತಿದ್ದೆ ಬಣ್ಣದ ಕನ್ನಡಕ
ಅಂದಕಾಣಲು ಶೋಕಿಗಾಗಿ
ನನಗೀಗ ಅರವತ್ತು
ನಿವೃತ್ತಿಯ ವಯಸ್ಸು
ಹಾಕಿರುವೆ ಕಪ್ಪು ಕನ್ನಡಕ.
ಕಣ್ಣುಪೊರೆ ಸಮಸ್ಯೆಗಾಗಿ

ನನಗಾಗ ಹದಿನಾರು
ಕಣ್ಣು ಕುಕ್ಕುವ ವಯಸ್ಸು
ಉದ್ದನೆ ಜಡೆ ಕತ್ತರಿಸಿ
ಮಾಡಿಕೊಂಡೆ ಬಾಯ್ ಕಟ್
ನನಗೀಗ ಅರವತ್ತು
ನಿಶ:ಕ್ತಿಯ ವಯಸ್ಸು
ತಲೆಬಾಚಲಾಗದೆ
ಮಾಡಿರುವೆ ಪೊನಿಟೇಲ್ ಕಟ್

ನನಗಾಗ ಹತ್ತು
ಆಟವಾಡೋ ವಯಸ್ಸು
ಗೆಳತಿಯರ ಜೊತೆ
ಊರೆಲ್ಲ ಸುತ್ತೊ ಹುಮ್ಮಸ್ಸು
ನನಗೀಗ ಅರವತ್ತು
ಶಿವ ಶಿವ ಎನ್ನುವ ವಯಸ್ಸು
ಅಲೆಯುತಿರುವೆ ಗುಡಿಗುಂಡಾರ
ದೇವರ ಹುಡುಕುವ ಮನಸ್ಸು

ನನಗಾಗ ಎಂಟು
ತಿಂದುಂಡು ಓಡಾಡೋ ವಯಸ್ಸು
ಅಜ್ಜ ಅಜ್ಜಿ ಜೊತೆ ಆಸ್ಪತ್ರೆಗೆ
ಹೋಗಲು ರಂಪಾಟ
ನನಗೀಗ ಅರವತ್ತು
ಮರಳಿ ಮಕ್ಕಳ ವಯಸ್ಸು
ಜಡ್ಡು ಜಾಪತ್ರಿ ಬಂದರ
ದವಾಖಾನೆಗೆ ತೋರಿಸದ
ಮಗ ಸೊಸೆ ಜೊತೆ ಕಿತ್ತಾಟ.

ನನಗಾಗ ಮದುವೆ ವಯಸ್ಸು
ಹುಚ್ಚುಕೋಡಿ ಮನಸ್ಸು
ಮದುವೆ ಯಾಕೆ ಬೇಕು ಎನುತಿತ್ತು
ನನಗೀಗ ಅರವತ್ತು.
ಅರಳು ಮರಳು ವಯಸ್ಸು
ಗಂಡ ಜೊತೆಯಾಗಿರುವದೇ
ಅರಳಿದೆ ಮನಸ್ಸು.

ಶಾರದಾ ಕೌದಿ
ಮಂಗಳವಾರಪೇಟ
ಧಾರವಾಡ

 

One thought on “ಮರಳಿ ಅರಳು ‌

  1. ಅರ್ಥಗರ್ಭಿತ ಕವಿತೆ. ವಯಸ್ಸು ಕಳೆದಂತೆ ಬದುಕು ಕಲಿಸಿದ ಪಾಠ ಮನಸನ್ನು ಬದಲಾಯಿಸುತ್ತದೆ…. ಆಯಾ ವಯಸ್ಸಿಗೆ ಆಗಬೇಕಾದುದು ಆಗಿ… ಮುಪ್ಪಡರಿದಾಗ ಮತ್ತೆ ಅರಳುವ ಚಿಗುರುವ ಬಯಕೆ, ಯವ್ವನದ ವಯಸ್ಸಿನ ಮಧುರಾನುಭವಗಳನ್ನು ನೆನೆದು ನಗು ಮೂಡುವ ತುಟಿ ಅಂಚು ಈಗ ನಡುಗುವಾಗ… ಮರಳಿ ಅರಳಬಾರದೇ ಎನ್ನುವ ತವಕ ವಯೋ ಸಹಜವಲ್ಲದಿದ್ದರೂ, ಮನೋ ಸಹಜ ಬಯಕೆಯಾಗಿ ಕಾಡುತ್ತದೆ… ಸೂಪರ್ ಕವಿತೆ ರಿ…

Comments are closed.

Don`t copy text!