ಒತ್ತಡ
ಗಂಟೆ ೫:೩೦ ಆಗಿತ್ತು. ಆಲಾರಾಂ ಹೊಡೆದ ಸದ್ದಿಗೆ ಗಾಢನಿದ್ದೆಯಲ್ಲಿದ್ದ ರಾಣಿಗೆ ಬಡಿದೆಬ್ಬಿಸಿದಂತೆ ಎಚ್ಚರವಾಗಿತ್ತು. ರಾಣಿ ಅಭ್ಯಾಸದಂತೆ ಕಣ್ಣನ್ನು ಸವರಿಕೊಂಡು ನಿಧಾನವಾಗಿ ಎದ್ದು ಕುಳಿತು ಕೊಂಡಳು. ಎರಡು ನಿಮಿಷ ಹಾಗೇ ಕುಳಿತು ಕಾಲುಗಳನ್ನು ನೋಡಿಕೊಂಡಳು. ಕಾಲಿನ ಬಾವು ಹಾಗೆಯೇ ಇತ್ತು. ಯಾಕೋ ಎರಡು ದಿನದಿಂದ ಕಾಲಿಗೆ ಬಂದಿದ್ದ ಬಾವು ಕಡಿಮೆಯಾಗಿರಲಿಲ್ಲ.
ಹಿಂದಿನ ದಿನ ತನ್ನ ಪಾರ್ಲರ್ ಕೆಲಸ ಮುಗಿಸಿಕೊಂಡು ಬರುವಾಗ ಪಕ್ಕದಲ್ಲಿದ್ದ ಕ್ಲಿನಿಕ್‌ನಲ್ಲಿ ಡಾಕ್ಟರ್‌ಗೆ ತೋರಿಸಿ ಟ್ಯಾಬ್ಲೆಟ್ ತೆಗೆದುಕೊಂಡು ಬಂದಿದ್ದಳು. ತಿಂಡಿ ತಿಂದ ನಂತರ ನೆನಪಿನಿಂದ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕೆಂದು ಯೋಚಿಸುತ್ತ ಬಾತರೂಂ ಕಡೆಗೆ ನಡೆದಳು.
ರಾಣಿ ತುಂಬ ಮಹತ್ವಾಕಾಂಕ್ಷಿ, ಸ್ವಾಭಿಮಾನಿ ಹಾಗೆ ಕಷ್ಟಜೀವಿ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಗಂಡನ ಮನೆ ಸೇರಿದ್ದಳು. ಆದರೆ ಗಯ್ಯಾಳಿ ಅತ್ತೆ ಹಾಗು ಕೆಲಸಕ್ಕೆ ಬಾರದ ಗಂಡನ ಸಹವಾಸದಲ್ಲಿ ಅವಳ ಯಾವುದೇ ಪ್ರತಿಭೆಗೆ ಅವಕಾಶವಿರಲಿಲ್ಲ. ಹೇಗೋ ಅತ್ತೆಯ ಮನೆಯಲ್ಲಿ ತೊತ್ತಾಗಿ ಇರಬೇಕು ಎನ್ನುವ ನಾನ್ನುಡಿಯನ್ನು ನೆನಪಿಸಿಕೊಳ್ಳುತ್ತ ಸಾಗಿದ್ದಳು. ಒಂದು ವರ್ಷದಲ್ಲಿಯೇ ಹೆಣ್ಣು ಮಗು ಮಡಿಲಿಗೆ ಬಂದಿತ್ತು. ನಂತರದ ದಿನಗಳು ಇನ್ನೂ ಉಸಿರುಗಟ್ಟಿಸತೊಡಗಿದ್ದವು. ಮಗುವಿನ ಆರೈಕೆ, ಅತ್ತೆಯ ದಬ್ಬಾಳಿಕೆ, ಗಂಡನ ತಟಸ್ಥನೀತಿ ಅನುಭವಿಸುತ್ತ ಸಹನೆಯ ಕಟ್ಟೆ ಒಡೆಯತೊಡಗಿತ್ತು. ಇನ್ನು ಸಾಧ್ಯವಿಲ್ಲ ಎನಿಸತೊಡಗಿತು. ಅತ್ತೆಯನ್ನು ಎದುರಿಸಿ ಪ್ರತಿಭಟಿಸಿದಾಗ ಗಯ್ಯಾಳಿ ಎಂಬ ಪಟ್ಟ!. ಗಂಡನ ಸಹಕಾರ ಸಹಾನೂಭೂತಿ ಬಯಸಿದಾಗ ಸಿಕ್ಕಿದ್ದು ತಿರಸ್ಕಾರ! ಎಲ್ಲವನ್ನೂ ತೊರೆದು ಅಮ್ಮನ ಆಸರೆಯನ್ನು ಅರಸಿ ಬಂದಿದ್ದಳು. ಮುಕ್ತವಾದ ವಾತಾವರಣದಲ್ಲಿ ದೀರ್ಘವಾಗಿ ಉಸಿರಾಡಿದ್ದಳು.
ಮನೆ ಬಿಟ್ಟು ಹೋದ ಸೊಸೆಗೆ ಹಿಡಿ ಶಾಪ ಹಾಕಿದ ಅತ್ತೆ ತಿರುಗಿ ನೋಡಿರಲಿಲ್ಲ. ಗಂಡನಂತೂ ತನಗೇನೂ ಸಂಬಂಧವಿಲ್ಲದಂತೆ ತಟಸ್ಥನಾಗಿ ಬಿಟ್ಟಿದ್ದ. ಅವನಿಗೆ ಹೆಂಡತಿಯ ಅವಶ್ಯಕತೆ ಎಷ್ಟರಮಟ್ಟಿಗೆ ಇತ್ತು ಅನ್ನುವುದೇ ಅನುಮಾನ! ತಾಯಿಯ ಮನೆಯ ಮುಕ್ತ ಸ್ವಾತಂತ್ರ‍್ಯದ ಸುಖವನ್ನು ಅನುಭವಿಸುತ್ತ ಮೈಮರೆದಿದ್ದ ರಾಣಿಯನ್ನು ಎಚ್ಚರಿಸಿದ್ದು ಬೆಳೆಯುತ್ತಿರುವ ಮಗಳ ಅವಶ್ಯಕತೆಗಳು. ಪ್ರತಿಯೊಂದಕ್ಕೂ ತಾಯಿಯ ಎದುರಿಗೆ ಕೈ ಒಡ್ಡುವ ಪರಿಸ್ಥಿತಿ ರಾಣಿಯ ಅಭಿಮಾನಕ್ಕೆ ಚುಚ್ಚಲಾರಂಭಿಸಿತ್ತು. ಬರೀ ಎಸ್.ಎಸ್.ಎಲ್.ಸಿ ಪಾಸಾಗಿದ್ದ ರಾಣಿಗೆ ಉದ್ಯೋಗವಕಾಶಗಳು ವಿರಳವಾಗಿದ್ದವು.
ಆಗ ಪಕ್ಕದ ಮನೆಯ ಆರತಿ ಅಕ್ಕ ಸಹಾಯಕ್ಕೆ ಬಂದಿದ್ದರು. ಸಮಾಜ ಸೇವಕಿಯಾಗಿ ಸಾಕಷ್ಟು ಪರಿಚಿತರನ್ನು ಹೊಂದಿದ್ದ ಅವರು ತಮ್ಮ ಪರಿಚಯದ ಬ್ಯೂಟಿ ಪಾರ್ಲರ್ ಒಂದರಲ್ಲಿ ಸಹಾಯಕಿಯಾಗಿ ಕೆಲಸ ಕೊಡಿಸಿದ್ದರು. ಮನೆಯ ಹತ್ತಿರವೇ ಇದ್ದ ಪಾರ್ಲರ್ ಮತ್ತು ನಗುಮುಖದ ಮೃದು ಭಾಷಿ ಒಡತಿಯಿಂದಾಗಿ ಜೀವನ ಸರಳವಾಗಿತ್ತು. ಆತ್ಮ ವಿಶ್ವಾಸ ಚಿಗುರಿತ್ತು. ಸಾಯುತ್ತಿದ್ದ ಸ್ವಾಭಿಮಾನ ಉಸಿರಾಡಿತ್ತು. ರಾಣಿಯ ಉತ್ಸಾಹ ಮತ್ತು ಆಸಕ್ತಿಯನ್ನು ಗಮನಿಸಿದ ಒಡತಿ ಚಿಕ್ಕ ಪುಟ್ಟ ಪಾರ್ಲರ್ ಕೌಶಲ್ಯಗಳನ್ನು ಕಲಿಯುವ ಅವಕಾಶ ನೀಡಿದಾಗ ಖುಷಿಯಾಗಿತ್ತು. ಆದರೂ ಇನ್ನೂ ಏನಾದರೂ ಹೆಚ್ಚಿನದನ್ನು ಸಾಧಿಸುವ ಆಶೆ!. ತನ್ನ ಮಗಳು ತನ್ನಂತೆ ಕಷ್ಟ ಪಡದೇ ಒಳ್ಳೆಯ ಜೀವನ ನಡೆಸಬೇಕೆಂಬ ಬಯಕೆ. ಮನಸ್ಸು ಹೊಸ ಅವಕಾಶಗಳ್ನು ಹುಡುಕುತ್ತಿತ್ತು. ಆಗಲೆ ದಿನ ಪತ್ರಿಕೆಯಲ್ಲಿದ್ದ ಪ್ರಕಟಣೆ ಗಮನ ಸೆಳೆದಿತ್ತು. ಸರಕಾರದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ನಡೆಸುವ ಅನೇಕ ತರಬೇತಿಗಳಲ್ಲಿ ಬ್ಯೂಟಿಷಿಯನ್ ಕೋರ್ಸ ಇದ್ದದ್ದು!ತಕ್ಷಣ ಅರ್ಜಿ ಸಲ್ಲಿಸಿದ್ದಳು.
ಆಯ್ಕೆಯ ಪತ್ರ ಬಂದಾಗ ಸ್ವರ್ಗ ಮೂರೇ ಗೇಣು ಉಳಿದಿತ್ತು. ಮೂರು ತಿಂಗಳ ತರಬೇತಿ ಶುರುವಾಗಿತ್ತು. ಪಾರ್ಲರ್‌ನಲ್ಲಿ ಕೆಲಸ ಮಾಡಿದ ಅನುಭವ ಅಲ್ಲಿ ಸಹಾಯಕ್ಕೆ ಬಂದಿತ್ತು. ಪ್ರತಿಯೊಂದು ಕೌಶಲ್ಯವನ್ನು ಗಮನವಿಟ್ಟು ಅವಲೋಕನೆ ಮಾಡಿ ಬಹಳ ನೀಟಾಗಿ ತೋರಿಸಿ ಎಲ್ಲರ ಗಮನ ಸೆಳೆದಳು. ಉತ್ತಮ ಅಂಕಗಳೊಂದಿಗೆ ಸರ್ಟಿಫಿಕೇಟ ಕೈಗೆ ಬಂದಾಗ ಆಶಯಗಳು ಗರಿಗೆದರಿದ್ದವು. ಏನಾದರೂ ಸಾಧಿಸಬಲ್ಲೆನೆಂಬ ಭರವಸೆ ಮೂಡಿತ್ತು. ಸಾವಕಾಶವಾಗಿ ಪರಿಚಯದ ಮಹಿಳೆಯರನ್ನು ಸಂಪರ್ಕಿಸುತ್ತ ಮನೆಗೆ ಬಂದು ಪಾರ್ಲರ್ ಸೇವೆ ನೀಡುವ ಭರವಸೆ ನೀಡಿದಾಗ ಬಹಳಷ್ಟು ಜನ ಸ್ಪಂಧಿಸಿದ್ದರು. ಹಾಗೆ ಸೇವಾಸಕ್ತರ ಜಾಲ ಬೆಳೆಯುತ್ತಾ ನಡೆದಿತ್ತು. ಅವಳ ಮಾತುಗಾರಿಕೆ ಮತ್ತು ಕೆಲಸದ ಕುಶಲತೆ ಎಲ್ಲರನ್ನೂ ಸೆಳೆಯುತ್ತಿತ್ತು. ನಿಧಾನವಾಗಿ ಬ್ಯಾಂಕ ಬ್ಯಾಲೆನ್ಸ ಸ್ಥಿರವಾಗುತ್ತ ಹಿಗ್ಗತೊಡಗಿತ್ತು.
ತಮ್ಮ ಪಿ.ಯು.ಸಿ. ಯಲ್ಲಿ ಎರಡು ಸಲ ಡುಂಕಿ ಹೊಡೆದು ಸ್ನೇಹಿತನ ಆಟೋ ರಿಕ್ಷಾ ಬಾಡಿಗೆಗೆ ಒಡಿಸಲು ಪ್ರಾರಂಭಿಸಿದಾಗ ಅವನಿಗೆ ಕೊೆಡುತ್ತಿದ್ದ ಪಾಕೇಟ್ ಹಣ ಉಳಿತಾಯವಾಗ ತೊಡಗಿತ್ತು. ನಿಧಾನವಾಗಿ ಸ್ವಂತ ಪಾರ್ಲರ್ ಆಸೆ ಚಿಗುರತೊಡಗಿತ್ತು. ಆಗ ಮತ್ತೆ ಸಹಾಯಕ್ಕೆ ಬಂದವರು ಆರತಿ ಅಕ್ಕ.
ಮಾರ್ಕೇಟ್ ಹತ್ತಿರದಲ್ಲಿಯೇ ಒಂದು ರೂಮ್ ಬಾಡಿಗೆಗೆ ಸಿಕ್ಕಾಗ ಹೆಚ್ಚು ಯೋಚನೆ ಮಾಡದೇ ಆರತಿ ಅಕ್ಕನ ಸಹಾಯದಿಂದ ಬ್ಯಾಂಕ ಲೋನ ತೆಗೆದುಕೊಂಡು ಸ್ವಂತ ಪಾರ್ಲರ್ ಪ್ರಾರಂಭ ಮಾಡಿಯೇ ಬಿಟ್ಟಿದ್ದಳು. ದಿನಾಲೂ ಬೆಳಿಗ್ಗೆ ೫:೩೦ಕ್ಕೆ ಎದ್ದು ಬೇಗ ಬೇಗ ಮನೆ ಕೆಲಸ ಮುಗಿಸಿ ಮಗಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸಿ ಪಾರ್ಲರ್‌ಗೆ ಬಂದರೆ ೨ ರಿಂದ ೨:೩೦ರ ತನಕ ಇದ್ದು ಮನೆಗೆ ಬಂದು ಊಟ ಮಾಡಿ ೩ ಗಂಟೆಗೆ ಹೋದರೆ ಮತ್ತೆ ಮನೆಗೆ ಬರುವುದು ೭ ಗಂಟೆ ನಂತರ. ಮಗಳ ಹೊಂ ವರ್ಕ ಅಡುಗೆ ನಿದ್ದೆ ಇಷ್ಟೇ ಆಕೆಯ ದಿನಚರಿ. ರಾಣಿಗೆ ಪಾರ್ಲರ್ ಮತ್ತು ಮಗಳನ್ನು ಬಿಟ್ಟು ಉಳಿದ ಜಗತ್ತು ಗೌಣವಾಗಿತ್ತು.
ಆವತ್ತು ಕೂಡ ಎಂದಿನಂತೆ ಎದ್ದು ಮಗಳನ್ನು ಶಾಲೆಗೆ ಕಳುಹಿಸಿ ತಾನೂ ತಿಂಡಿ ತಿಂದು ಕಾಲಿನ ಬಾವು ಕಡಿಮೆಯಾಗಲು ಡಾಕ್ಟರ್ ಕೊಟ್ಟ ಟಾಬ್ಲೆಟ್ ತೆಗೆದುಕೊಂಡು ಹೊರಡಲು ರ‍್ಸ ಕೈಗೆ ಎತ್ತಿಕೊಂಡಾಗ ಆರತಿ ಅಕ್ಕನ ಧ್ವನಿ ಕೇಳಿಸಿತು. ಒಳಗೆ ಬಂದ ಆರತಿ ಅಕ್ಕ “ರಾಣಿ ನಾಳಿನ ಮೋರ್ಚಾ ನೆನಪಿದೆಯಲ್ಲಾ?’’ ಎಂದಳು. “ ಆಯ್ತು ನೋಡ್ತಿನಿ’’ ಎಂದ ರಾಣಿಗೆ “ನೋಡ್ತೀನಿ ಗಿಡ್ತೀನಿ ಏನೂ ಇಲ್ಲ ನಿನ್ನ ಪಾರ್ಲರ್ ಸಹ ಅದೇ ಏರಿಯಾದಲ್ಲಿ ರ‍್ತದೆ ಎಲ್ಲ ಮಹಿಳೆಯರೂ ಸೇರ‍್ತಾರೆ ನೀನೂ ಬರ‍್ಲೇ ಬೇಕು. ಈ ಸಲ ಹೇಗಾದರೂ ಮಾಡಿ ಒಂದು ಸಾರ್ವಜನಿಕ ಶೌಚಾಲಯ ಮಂಜೂರು ಮಾಡಿಸಿಕೊಳ್ಳಬೇಕು” ಎಂದು ಹೇಳುತ್ತಾ ಬಂದಂತೆ ಅವಸರದಲ್ಲಿ ಹೊರನಡೆದಿದ್ದಳು.
ಹೊರಗೆ ಬಂದು ತಮ್ಮನ ಆಟೋದಲ್ಲಿ ಕುಳಿತ ರಾಣಿಯ ತಲೆಯಲ್ಲಿ ಆರತಿ ಅಕ್ಕ ತುಂಬಿಕೊಂಡಿದ್ದಳು. ವಯಸ್ಸಿನಲ್ಲಿ ಹಿರಿಯಳಾದರೂ ರಾಣಿಯನ್ನು ತುಂಬ ಹಚ್ಚಿಕೊಂಡಿದ್ದ ಆರತಿ ಇವಳ ಎಲ್ಲ ಪ್ರಯತ್ನಗಳಿಗೆ ಬೆಂಬಲಿಸುತ್ತ ಸಹಕಾರ ನೀಡುತ್ತ ಸ್ನೇಹಿತೆಯಾಗಿ ಹತ್ತಿರವಾಗಿದ್ದಳು. ಮಹಿಳಾ ಅನ್ಯಾಯ ನಿವಾರಣಾ ಸಮಿತಿಯ ಸದಸ್ಯೆಯಾಗಿ ಯಾವಾಗಲೂ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತ ಪರಿಹಾರ ಹುಡುಕುವ ಪ್ರಯತ್ನದಲ್ಲಿ ಇರುತ್ತಿದ್ದಳು.
ರಾಣಿಯ ಪಾರ್ಲರ್ ಹತ್ತಿರವಿದ್ದ ತರಕಾರಿ ಮಾರ್ಕೇಟನಲ್ಲಿ ವ್ಯಾಪಾರ ಮಾಡುವ ಮಹಿಳೆಯರು ಇಡೀ ದಿನ ತರಕಾರಿ ಮಾರಿ ಮನೆಗೆ ಹೋಗುತ್ತಿದ್ದುದು ೮ ಗಂಟೆಗೆ. ಅಲ್ಲಿಯವರೆಗೆ ದೇಹಭಾದೆಯನ್ನು ತೀರಿಸಿಕೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಅದನ್ನು ಗಮನಿಸಿದ ಆರತಿ ಅವರಿಗಾಗಿ ಒಂದು ಸಾರ್ವಜನಿಕ ಶೌಚಾಲಯಕ್ಕಾಗಿ ಅಲ್ಲಿಯ ಕಾರ್ಪೋರೇಟರ್ ಹತ್ತಿರ ಬೇಡಿಕೆ ಇಟ್ಟಿದ್ದಳು.
ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸಂಧಿಸಿದ್ದಳು. ಅವಳ ಬೇಡಿಕೆಗೆ ಯಾರೂ ಸರಿಯಾಗಿ ಸ್ಪಂಧಿಸದಿದ್ದಾಗ ಆ ಎಲ್ಲಾ ಮಹಿಳೆಯರನ್ನು ಸಂಘಟಿಸಿ ಮೋರ್ಛಾದೊಂದಿಗೆ ಡಿ.ಸಿ. ಕಛೇರಿಗೆ ಹೋಗಿ ಅವರಿಗೆ ಮನವಿ ನೀಡಲು ಹೋರಟಿದ್ದಳು. ರಾಣಿಗೆ ಅಕ್ಕನ ಬಗ್ಗೆ ಪ್ರೀತಿ ಗೌರವಗಳಿದ್ದರೂ ತನ್ನ ಪಾರ್ಲರ್ ಬಿಟ್ಟು ಅವಳ ಮೋರ್ಚಾ ಬೆಂಬಲಿಸುವ ಮನಸ್ಥಿತಿ ಇರಲಿಲ್ಲ. ತಮ್ಮ ಪಾರ್ಲರ್ ಎದುರಿಗೆ ಆಟೋ ನಿಲ್ಲಿಸಿದಾಗ ಯೋಚನೆ ತುಂಡಾಗಿತ್ತು. ಆತನಿಗೆ ೨ ಗಂಟೆಗೆ ಬರಲು ತಿಳಿಸಿ ಕೆಳಗೆ ಇಳಿದಿದ್ದಳು. ಬಾಗಿಲು ತೆರೆಯುತ್ತಿದ್ದಂತೆ ಬರುತ್ತಿದ್ದ ಗ್ರಾಹಕರೊಂದಿಗೆ ಮಾತನಾಡುತ್ತ ಅವರ ಬೇಡಿಕೆಗಳನ್ನು ಪೂರೈಸುತ್ತ ಕೆಲಸದಲ್ಲಿ ಮಗ್ನಳಾದಾಗ ರಾಣಿಯ ಮನಸ್ಸಿನಿಂದ ಆರತಿ ಅಕ್ಕ ಜಾರಿ ಹೋಗಿದ್ದಳು. ಕೊನೆಯ ಫೇಷೀಯಲ್ ಮುಗಿಸಿ ಆ ಮಹಿಳೆ ಕೊಟ್ಟ ದುಡ್ಡನ್ನು ಡ್ರಾವರ್‌ನಲ್ಲಿ ಹಾಕಿ ವಾಚ್ ನೋಡಿಕೊಂಡಾಗ ಸಮಯ ಆಗಲೇ ೨ ಗಂಟೆ ೧೦ ನಿಮಿಷ. ಎಲ್ಲ ಪರಿಕರಗಳ್ನು ಎತ್ತಿಟ್ಟು ತಮ್ಮನಿಗಾಗಿ ಕಾಯುತ್ತ ಚೇರ ಮೇಲೆ ಕುಳಿತಾಗ ಕಿಬ್ಬೊಟ್ಟೆಯಲ್ಲಿಯ ಒತ್ತಡ ಗಮನಕ್ಕೆ ಬಂದಿತ್ತು. ಅದರ ಜೊತೆಗೆ ನೆನಪಾಗಿದ್ದು ಟ್ಯಾಬ್ಲೆಟ್ ಜೊತೆ ಡಾಕ್ಟರ್ ನೀಡಿದ್ದ ಎಚ್ಚರಿಕೆ! ಬಾವು ಕಡಿಮೆಯಾಗುವುದಕ್ಕೆ ನೀಡಿದ ಟ್ಯಾಬ್‌ಲೆಟ್‌ನಿಂದಾಗಿ ಪದೇ ಪದೇ ಮೂತ್ರ ವಿಸರ್ಜನೆಯ ಸಾಧ್ಯತೆಯ ಬಗ್ಗೆ ಹೇಳಿದ್ದರು. ಆದರೆ ಕೆಲಸದ ಒತ್ತಡದಲ್ಲಿ ಕಿಬ್ಬೊಟ್ಟೆಯ ಒತ್ತಡ ಗಮನಕ್ಕೆ ಬಾರದೇ ಮೂತ್ರಕೋಶ ತುಂಬಿ ಕಿಬ್ಬೊಟ್ಟೆ ತಟತಟ ಎನ್ನುತ್ತಿತ್ತು.ತಕ್ಷಣ ತಮ್ಮನಿಗೆ ಫೋನು ಮಾಡಿ ಯಾಕೆ ಬರಲಿಲ್ಲ ಎಂದು ವಿಚಾರಿಸಿದಾಗ ಸವಾರಿ ತೆಗೆದುಕೊಂಡು ಹೋಗಿದ್ದೆ ಇನ್ನು ೧೫-೨೦ ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದಾಗ ಗಾಬರಿಯಾಗಿತ್ತು.
ಆತ ಬರಲು ೨೦ ನಿಮಿಷ ಮತ್ತೆ ಮನೆ ತಲುಪಲು ಹತ್ತು ನಿಮಿಷ. ಹೇಗಪ್ಪ ತಡೆದುಕೊಳ್ಳುವುದು ಎಂದು ಕೊಳ್ಳುತ್ತ ಕುಳಿತುಕೊಳ್ಳಲು ಕಿರಿ ಕಿರಿ ಎನಿಸಿ ಎದ್ದು ಟೇಬಲ್ ಮೇಲಿದ್ದ ಸಾಮಾನುಗಳನ್ನು ಜೋಡಿಸುವುದರಲ್ಲಿ ನಿರತಳಾದಳು. ಐದು ನಿಮಿಷದ ನಂತರ ಒತ್ತಡ ಹೆಚ್ಚಾದಂತೆ ನಿಂತ ಜಾಗದಲ್ಲಿ ನಿಲ್ಲಲಾಗದೆ ಆಚೆ ಈಚೆ ನಿಧಾನವಾಗಿ ಹೆಜ್ಜೆ ಹಾಕಲು ಪ್ರಾರಂಭಿಸಿದಳು. ನಿಮಿಷದ ಮುಳ್ಳು ಬಹಳ ನಿಧಾನವಾಗಿ ಸರಿದಂತೆ ಭಾಸವಾಗುತ್ತಿತ್ತು. ಮತ್ತೆ ತಮ್ಮನಿಗೆ ಫೋನಾಯಿಸಿದಳು. “ಬಂದೆ… ರ‍್ತಾ ಇದಿನಿ’’ ಎಂದ ತಮ್ಮನ ಮಾತುಗಳನ್ನು ಕೇಳಿ ಬಾಗಿಲ ಕಡೆಗೆ ನೋಡುತ್ತ ಏನೂ ಮಾಡಲು ತೋಚದೆ ಯಾಂತ್ರಿಕವಾಗಿ ರ‍್ಸ ಕೈಯಲ್ಲಿ ತೆಗೆದುಕೊಂಡು ಹೊರಗೆ ಬಂದು ಬಾಗಿಲು ಮುಚ್ಚಿ ಲಾಕ್ ಮಾಡಿದಳು. ದೃಷ್ಟಿ ರಸ್ತೆಯ ತಿರುವಿನಲ್ಲಿ ಬರಬಹುದಾದ ತಮ್ಮನ ಆಟೋ ರಿಕ್ಷಾ ಗಮನಿಸುತ್ತಿತ್ತು. ಕಿಬ್ಬೊಟ್ಟೆಯಲ್ಲಿ ತಡೆಯಲಾರದ ಸಂಕಟ. ನರಗಳೆಲ್ಲ ಕಿತ್ತು ಕಿತ್ತು ಬರ‍್ತಾ ಇದ್ದವು. ನಿಧಾನವಾಗಿ ತಿರುವಿನ ಕಡೆಗೆ ನಡೆಯಲು ಪ್ರಾರಂಭಿಸಿದಳು. ಕಾಲಿನಲ್ಲಿ, ತೊಡೆಯಲ್ಲಿ ಜಗ್ಗುತ್ತಿರುವ ಅನುಭವ. ಅಸಹಾಯಕತೆ… ಮಾರ್ಕೇಟ್‌ಗೆ ಹೋಗುವ ಬರುವ ಜನಸಂದಣಿ… ವಾಹನಗಳ ಭರಾಟೆ… ತಮ್ಮನ ಆಟೋದ ಸುಳಿವಿಲ್ಲ. ಇನ್ನೊಂದು ಹೆಜ್ಜೆ ಮುಂದಿಟುತ್ತಿದ್ದಂತೆಯೇ ಸ್ನಾಯುಗಳ ಮೇಲಿನ ಹಿಡಿತ ತಪ್ಪಿತ್ತು. ಅಲ್ಲೆ ನಿಂತಿದ್ದ ಟೆಂಪೋ ಒಂದಕ್ಕೆ ಒರಗಿ ಸಾವರಿಸಿಕೊಂಡಿದ್ದಳು. ಏನಾಗಿದೆ ಎಂದು ಅರ್ಥವಾಗುವುದರಲ್ಲಿ ಎರಡೂ ತೊಡೆಗಳು ಒದ್ದೆಯಾಗತೊಡಗಿದವು. ದಿಗ್‌ಭ್ರಾಂತಿಯಿಂದ ತಲೆ ಎತ್ತದೇ ಸುಮ್ಮನೇ ನಿಂತು ಬಿಟ್ಟಳು. ಭೂಮಿ ಬಾಯಿ ಬಿಡಬಾರದೇ ಎನಿಸಿತು. ನಾಚಿಕೆ, ಅಸಹಾಯಕತೆ ಕಣ್ಣೆತ್ತಿ ನೋಡಲೂ ಆಗದೆ ಸಮಯದೇ ಪರಿವೆಯೇ ಇಲ್ಲದೇ ನಿಶ್ಚಲವಾಗಿ ಬಿಟ್ಟಳು! ತಮ್ಮ ಬಂದು “ಯಾಕೆ ಇಲ್ಲಿ ನಿಂತಿದ್ದಿಯಾ಼ ಹತ್ತು಼಼’’ ಎಂದಾಗ ಎಚ್ಚರಗೊಂಡವಳು. ಒದ್ದೆ ನಿರಿಗೆಗಳನ್ನು ಎತ್ತಿ ಆಚೆ ಈಚೆ ನೋಡದೇ ಆಟೋ ಹತ್ತಿದಳು. ಕಣ್ಣಿನಿಂದ ಧಾರಾಕಾರವಾಗಿ ಸುರಿದ ನೀರನ್ನು ಮುಂದೆ ಆಟೋ ಓಡಿಸುತ್ತಿದ್ದ ತಮ್ಮ ಗಮನಿಸಿರಲಿಲ್ಲ. ಮನೆ ಬಂದ ತಕ್ಷಣ ಸೆರಗಿನಿಂದ ಕುಳಿತಿದ್ದ ಸೀಟನ್ನು ಒರೆಸಿ ಒಳಗೆ ಓಡುತ್ತಾ ಬಾತ್‌ರೂಂ ಸೇರಿದಳು. ಒಂದು ಗಂಟೆಯಾದರೂ ಹೊರಗೆ ಬಾರದ ಮಗಳನ್ನು ನೋಡಿ ತಾಯಿ ಆತಂಕದಿಂದ ಕೂಗಿದಾಗ ಸ್ನಾನ ಮಾಡಿ ಬೇರೆ ಬಟ್ಟೆ ತೊಟ್ಟು ಹೊರಬಂದ ಮಗಳನ್ನು ನೋಡಿದ ಅವರು ಆಶ್ಚರ್ಯದಿಂದ “ಯಾಕೆ ಏನಾಯಿತು?” ಎಂದು ಕೇಳುತ್ತಿದ್ದರು “ಏನಿಲ್ಲಾ” ಎನ್ನುತ್ತಾ ಬೇಗ ಬೇಗ ಎದ್ದು ತುತ್ತು ಅನ್ನ ತಿಂದ ಶಾಸ್ತç ಮಾಡಿ ಹೋಗಿ ಮಲಗಿ ಬಿಟ್ಟಳು.
ನಾಚಿಕೆ, ಹೇಸಿಕೆ, ಸಿಟ್ಟು, ಆಸಹಾಯಕತೆ ಎಲ್ಲ ಮಿಶ್ರವಾದ ಎಂಥದೋ ಭಾವ! ಯಾಕೆ ಹೀಗಾಯಿತು? ಇಂಥ ಪರಿಸ್ಥಿತಿಗೆ ಕಾರಣ ಏನು? ತನ್ನ ಸ್ಥಿತಿಯನ್ನು ಯಾರು ಯಾರು ಗಮನಿಸಿರಬಹುದು? ಪರಿಚಿತರು ಏನು ಅಂದುಕೊಂಡಿರಬಹುದು? ಮನಸ್ಸು ಗೊಂದಲದ ಗೂಡಾಗಿತ್ತು. ಹಾಗೆ ನಿದ್ರೆ ಆವರಿಸಿತ್ತು.ಓಟ ಮಾಡಿದ ನಂತರ ಪಾರ್ಲರ್‌ಗೆ ಹೋಗದೇ ಮಲಗಿದ ಮಗಳನ್ನು ನೋಡಿ ತಾಯಿ ಆಶ್ಚರ್ಯಗೊಂಡರೂ ಅವಳ ಮುಖಭಾವವನ್ನು ನೋಡಿದ್ದ ಆಕೆ ಎಬ್ಬಿಸದೇ ಹಾಗೆ ತಮ್ಮ ಕೆಲಸದಲ್ಲಿ ತೊಡಗಿದ್ದರು. ನಂತರ ಬಂದು ಅಮ್ಮನ ಬಗ್ಗೆ ಕೇಳಿದ ಮೊಮ್ಮಗಳಿಗೂ ಕೂಡ ಅಮ್ಮನಿಗೆ ಮೈ ಸರಿಯಿಲ್ಲ ತೊಂದರೆ ಕೊಡಬೇಡ ಎಂದು ಎಚ್ಚರಿಸಿದ್ದರು.
ಮಾರನೇ ದಿನ ಎಂದಿನಂತೆ ೫:೩೦ಕ್ಕೆ ಆಲಾರಾಂ ಧ್ವನಿ ಕೇಳಿ ಎಚ್ಚರವಾದ ರಾಣಿಯ ಮನ ತಿಳಿಯಾಗಿತ್ತು. ನಿತ್ಯದಂತೆ ಎದ್ದು ತನ್ನ ಎಲ್ಲ ಕೆಲಸಗಳನ್ನು ಮುಗಿಸಿ ೧೦ ಗಂಟೆಗೆ ಸರಿಯಾಗಿ ತಯಾರಾಗಿ ಹೊರಟಾಗ ಅವಳಿಗಾಗಿ ಕಾಯುತ್ತಿದ್ದ ತಮ್ಮ ಆಟೋ ಸ್ಟಾರ್ಟ ಮಾಡಿದ. ಆದರೆ ರಾಣಿ ಅದರಲ್ಲಿ ಕೂಡದೇ ನಡೆಯುತ್ತ ಹೊರಟಾಗ “ಯಾಕೆ ಪಾರ್ಲರ್‌ಗೆ ಬರೋದಿಲ್ವಾ?’’ ಪ್ರಶ್ನಿಸಿದ ತಮ್ಮನಿಗೆ “ಇಲ್ಲ ಆರತಿ ಅಕ್ಕನ ಮನೆಗೆ ಹೋಗುತ್ತಾ ಇದ್ದೇನೆ. ಇವತ್ತು ಡಿ.ಸಿ. ಕಛೇರಿಗೆ ಮೋರ್ಛಾ ಹೋಗುತ್ತಾ ಇದ್ದೇವೆ. ಮಾರ್ಕೇಟನಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಮನವಿ ಕೊಡಬೇಕು’’ ಎಂದು ಹೇಳಿದ ಅವಳ ಮುಖದ ಮೇಲಿನ ದೃಢತೆ ಮತ್ತು ಧ್ವನಿಯಲ್ಲಿ ನಿರ್ಧಾರ ಆತನನ್ನು ಚಕಿತಗೊಳಿಸಿದವು. ಸುಮ್ಮನೆ ತಲೆ ಆಡಿಸಿ ಆಟೋ ಓಡಿಸಿದ. ದೃಢವಾದ ಹೆಜ್ಜೆ ಇಡುತ್ತ ಸ್ವಾಭಿಮಾನದಿಂದ ತಲೆ ಎತ್ತಿ ರಾಣಿ ಆರತಿಯ ಮನೆ ಕಡೆ ಹೆಜ್ಜೆ ಹಾಕಿದಳು
.
ಶ್ರೀಮತಿ. ರಾಜನಂದಾ ಘಾರ್ಗಿ
ಸಹಾಯಕ ಉಪನ್ಯಾಸಕರು
ಕೆ.ಎಸ್.ಆರ್ ಶಿಕ್ಷಣ ವಿದ್ಯಾಲಯ, ಬೆಳಗಾವಿ
ನಿಜಾ ಮೆಡಂ ಮಹಿಳೆರು ತಮ್ಮ ಅಳಲನ್ನ ಹೇಳಿಕೊಳ್ಳದೆ ಹೋದ್ರೆ ಸೂಕ್ಷ್ಮತಗಳು ಯಾರಿಗೂ ತಿಳಿಯಲ್ಲ.