e-ಸುದ್ದಿ, ಮಸ್ಕಿ
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನೂ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ತಾಲೂಕಿನ ಪ್ರಮುಖ ಗುರು ವಿರಕ್ತ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಉಟಕನೂರಿನ ಮರಿಬಸವಲಿಂಗ ಸ್ವಾಮೀಜಿಗಳು ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳಸಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಶ್ರಮಿಸಿದ ಅಗ್ರಗಣ್ಯ ನಾಯಕನಾಗಿದ್ದು ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿರುವ ಸರ್ವಧರ್ಮಗಳ ಜನರುಗಳ ಪ್ರೀತಿ ವಿಶ್ವಾಸ ಗಳಿಸಿಕೊಂಡು ಅನೇಕ ಹೋರಾಟಗಳನ್ನು ಮಾಡಿಕೊಂಡು ದಕ್ಷೀಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಈ ಸಮುದಾಯ ಬಿಜೆಪಿಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಕೂಡಲೇ ವರಿಷ್ಟರು ಚಿಂತನೆ ಮಾಡಲಿ ಎಂದು ಸ್ವಾಮಿಜೀಗಳು ಒತ್ತಾಯಿಸಿದ್ದಾರೆ.
ಬಣಜಿಗ ಸಮಾಜದಿಂದ ವಿರೋಧ ಃ ಪಟ್ಟಣದ ಮಸ್ಕಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪದಚ್ಯೂತಿಗೊಳಿಸದಂತೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕೆಂದು ತಾಲೂಕು ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಬ್ಯಾಳಿ ಒತ್ತಾಯಿಸಿದ್ದಾರೆ.
ಪಟ್ಟಣದ ಖಾಸಗಿ ವ್ಯಕ್ತಿಯೊಬ್ಬರ ಅಂಗಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇನ್ನೂ ಎರಡು ವರ್ಷ ಅಧಿಕಾರ ಮಾಡಲು ಹೈಕಮಾಂಡ ನೆರವು ನೀಡಬೇಕು. ರಾಜ್ಯದಲ್ಲಿ ದುರಾಡಳಿತ ನೀಡಿದ ಮೈತ್ರಿ ಸರ್ಕಾರ ತೆಗೆದು ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೆ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು.
ಯುವ ಘಟಕದ ಅಧ್ಯಕ್ಷ ನಾಗರಾಜ ಯಂಬಲದ, ಸಮಾಜದ ಮುಖಂಡ ಅಮರೇಶ ಯಂಬಲದ, ಪುರಸಭೆಯ ಮಾಜಿ ಸದಸ್ಯ ಎಂ.ಅಮರೇಶ, ಮಹಾಂತೇಶ ಬ್ಯಾಳಿ, ಬಸವರಾಜ ಕುಡತಿನಿ, ಶಿವು ಬ್ಯಾಳಿ ಇದ್ದರು.