ಪಚನವಾಗಲಿಲ್ಲ
ಪಚನವಾಗಲಿಲ್ಲ
ಬಸವಣ್ಣ ನಿಮ್ಮ ಶರಣರ
ವಚನಗಳು ನಮಗೆ
ಕಳೆದವು ಒಂಬತ್ತು ಶತಕ
ಅದೇ ಕಾಡುದಾರಿ
ಕರಾಳ ಕತ್ತಲೆ
ಸಮತೆ ಸತ್ಯ ಸಮಾಧಿ
ಅಲ್ಲಲ್ಲಿ ಸಂಸ್ಕೃತ ಸೇರ್ಪಡೆ
ಶ್ಲೋಕ ನುಡಿ ಪದ ಪ್ರಕ್ಷಿಪ್ತ
ಹಲವು ವಿಷಯಗಳ ವಿಕ್ಷಿಪ್ತ
ಅನ್ಯ ಸಿದ್ಧಾಂತಗಳ
ಕಲಬೆರಿಕೆ
ಒಣ ಆಚರಣೆಗಳ ಸೇರಿಕೆ
ಮೌಲ್ಯಗಳ ಜೊತೆ
ಹೊಟ್ಟ ತೂರಿಕೆ
ಕಾವಿ ಲಾಂಛನಗಳ ತೋರಿಕೆ
ಮನ ಬಾಳಲಿ ಬಾಯಾರಿಕೆ
ಬಸವಣ್ಣ ನಿನ್ನ ತತ್ವ
ಈಗ ಕೇವಲ ಮರೀಚಿಕೆ
ಭಕ್ತನ ಹೆಗಲು ಸವೆದವು
ಅಕ್ಕ ಮಾತೆ ಸ್ವಾಮಿಗಳ
ಸವಾರಿ
ಬಡವಾಯಿತು ಲಿಂಗ
ಮೆರೆಯುತಿದೆ ಜಾತಿ ಜಂಗಮ
ಮಠ ಆಶ್ರಮ ಅಬ್ಬರ
ಪುರಾಣ ಪ್ರವಚನ
ಶಬ್ದಗಳ ಸೂತಕ ಸಂತೆ
ಮರೆವು ಮಂಪರು ಜಾತ್ರೆ
ಅರಿವು ಕನ್ನಡಿ ಯಾತ್ರೆ
ತಿಳಿಯಲಿಲ್ಲ ಅರಿಯಲಿಲ್ಲ
ನಿನ್ನ ಬಸವಣ್ಣ
ಜನ ಮರುಳೋ
ಜಾತ್ರೆ ಮರುಳೋ
ಪಚನವಾಗಲಿಲ್ಲ
ನಿಮ್ಮ ಶರಣರ
ವಚನಗಳು ನಮಗೆ
–ಡಾ ಶಶಿಕಾಂತ ಪಟ್ಟಣ ಪುಣೆ