ಲಕ್ಕುಂಡಿ ಹೊಳೆಮ್ಮಾ
ಮೊನ್ನೆ ಇತಿಹಾಸಹ ಉಪನ್ಯಾಸಕಿಯಾದ ಸ್ನೇಹಿತೆ ಗೀತಾ ಫೊನಾಯಿಸಿ “ಸಧ್ಯದಲ್ಲಿ ಗದಗಗೆ ಹೋಗುವವಳಿದ್ದರೆ ಹೇಳು ನಾನು ಬರುತ್ತೇನೆ, ಸ್ವಲ್ಪ ಲಕ್ಕುಂಡಿಯತನಕ ಹೋಗಿ ಬರೋಣ, ಸ್ವಲ್ಪ ಮಾಹಿತಿ ಬೇಕಾಗಿದೆ” ಅಂದಾಗ ತಕ್ಷಣ ನೆನಪಾಗಿದ್ದು ಹೊಳೆಮ್ಮ! ಗೀತಾಳ ಮುಂದುವರೆದ ಮಾತುಗಳು ಲಕ್ಕುಂಡಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅವಳಿಗೆ ಬೇಕಾದ ಮಾಹಿತಿಯ ವಿವರಗಳು ಕಿವಿಯ ಮೇಲೆ ಬೀಳುತ್ತಾ ಇದ್ದರೂ ಗ್ರಹಿಸಲು ಮನಸ್ಸು ಅಲ್ಲಿರಲಿಲ್ಲ. ಲಕ್ಕುಂಡಿಯ ಹೊಳೆಮ್ಮನ ನೆನಪುಗಳನ್ನಾಲಿಸುವಲ್ಲಿ ಮಗ್ನವಾಗಿತ ್ತು.
ಹೊಸದಾಗಿ ಮದುವೆಯಾಗಿ ಅತ್ತೆ ಮನೆ ಸೇರಿದಾಗ ಗಮನ ಸೆಳೆದಿದ್ದು ಕಪ್ಪಗೆ ದಪ್ಪಗೇ ಆನೆಯಂಥ ಮೈ ಹೊತ್ತು ದುಡು ದುಡುನೇ ಉರುಳಾಡಿದಂತೆ ಮನೆಯಲ್ಲಿ ಓಡಾಡುತ್ತಿದ್ದ ಹೆಂಗಸು. ಹಣೆಯಲ್ಲಿ ದೊಡ್ಡ ಕುಂಕುಮ, ಕೆಂಪು ದಡಿಯ ಗಾಢ ಹಸಿರಿನ ಇಳಕಲ್ ಸೀರೆ, ಹಣೆ ಕೈ ಆವರಿಸಿದ ಹಚ್ಚೆಯ ವಿನ್ಯಾಸ, ಒಂದು ಕಾಲಿಗೆ ಬೆಳ್ಳಿಯ ದಪ್ಪ ಕಡಗ, ಎಳೆದೆಳೆದು ತಲೆಮೇಲೆ ಸೆರಗು ಸರಿಪಡಿಸಿಕೊಳ್ಳುವ ಶೈಲಿ, ಮಾತುಗಳನ್ನೆಲ್ಲ ಗಮನಿಸಿದರೆ ಗಂಡನ ಕಡೆಯ ಸಂಬಂಧಿ ಅಂತೂ ಅಲ್ಲ ಎನ್ನುವುದು ಖಾತ್ರಿಯಾಗಿತ್ತು.
ಆದರೆ ಮುಖದ ಮೇಲಿನ ಕಾಂತಿ, ಮುಕ್ತವಾದ ನಗು, ಎಲ್ಲರನ್ನೂ ಮಾತನಾಡಿಸುತ್ತ ಆದರಿಸುವ ರೀತಿ ನೋಡಿದರೆ ಕೆಲಸದವಳಿರಬಹುದೆಂಬ ತರ್ಕವನ್ನು ಮನ ಒಪ್ಪಿರಲಿಲ್ಲ. ಸಹಜವಾಗಿ ಮಾತಿನಲ್ಲಿ ಕೇಳಬಹುದಾದ ಸಮವಯಸ್ಕಳೂ ಮನೆಯಲ್ಲಿ ಇಲ್ಲದೇ ಇದ್ದುದರಿಂದ ಮನದ ಕುತೂಹಲವನ್ನು ಪಕ್ಕಕ್ಕೆ ಸರಿಸಿಟ್ಟಿದ್ದೆ. ಎರಡು ದಿನ ಇದ್ದು ಸಂಬಂಧಿಗಳೆಲ್ಲ ಊರಿಗೆ ತೆರಳಿದಾಗ ಹೊಳೆಮ್ಮ ತನ್ನ ಊರಿಗೆ ಹೊರಟು ನಿಂತಿದ್ದಳು. ಅತ್ತೆ ಇನ್ನೊಂದು ದಿನ ಇರಲು ಒತ್ತಾಯ ಮಾಡಿದರು. “ಇನ್ನೂ ನಿನ್ನ ಕಲಸ ಮುಗಿದಿಲ್ಲ ಒಬ್ಬಳೇ ಏನು ಮಾಡಲಿ’’ ಎಂದು ಮುಖ ಸಣ್ಣದು ಮಾಡಿ ಆಕೆಯನ್ನು ಭಾವುಕಳನ್ನಾಗಿಸಲು ಪ್ರಯತ್ನಿಸಿದರೂ ಬಗ್ಗದೇ “ಇಲ್ಲರಿ ಅವ್ವಾ ಮನಿ ಹಂಗ ಬಿಟ್ಟ ಬಂದೀನಿ, ಎಂಟ ದಿನಾ ಆತು. ಏನೇನ ಆವಸ್ಥೆ ಆಗೇದ ಏನೋ ಯಾರಿಗೆ ಗೊತ್ತು. ಬೇಕ ಅಂದ್ರ ಹದಿನೈದು ದಿನಾ ಬಿಟ್ಟ ಮತ್ತ ಬರತೇನ್ರಿ ಎಲ್ಲಾ ಹಸನ ಮಾಡಿ ಸಾಮಾನ ಛಂದ ಹಚ್ಚಿ ಕೊಡತೇನಿ. ನೀವೇನು ಕಾಳಜಿ ಮಾಡಬ್ಯಾಡ್ರಿ, ಎಲ್ಲಾ ಹಂಗ ಇಟ್ಟೀರ್ರಿ’’ ಎನ್ನುತ್ತಾ ಗಂಟು ಎತ್ತಿ ಹೊರಟು ಬಿಟ್ಟಿದ್ದಳು. ಗತ್ಯಂತರವಿಲ್ಲದೇ ಅತ್ತೆ ಅವಳಿಗಾಗಿ ತಂದ ಟೋಪ ಸೆರಗಿನ ಸೀರೆ, ಅವಳ ಗಂಡನಿಗೆ ಶರ್ಟಪೀಸ್ ಇಟ್ಟು ಕುಂಕುಮ ಹಚ್ಚಿ ಪರಾಳ ಕಟ್ಟಿ ಹತ್ತಿರದ ಸಂಬಂಧಿಯಂತೆ ಬೀಳ್ಕೊಟ್ಟದ್ದರು. ಅದನ್ನು ನೋಡಿ ಕುತೂಹಲ ಮತ್ತೆ ಗರಿಗೆದರಿತ್ತು.
ದಿನಗಳೆದಂತೆ ನಿಧಾನವಾಗಿ ಬಿಚ್ಚಿಕೊಂಡಿತ್ತು ನಮ್ಮ ಅತ್ತೆ ಮತ್ತು ಹೊಳೆಮ್ಮನ ಸಂಬಂಧದ ವಿಶಿಷ್ಟತೆ. ನಾನು ಮೊದಲೇ ಊಹಿಸಿದಂತೆ ಅವಳು ಸಂಬಂಧಿ ಅಲ್ಲ. ಯಾವುದೋ ಋಣಾನುಬಂಧ ಅವಳನ್ನು ಈ ಕುಟುಂಬದೊಂದಿಗೆ ತಂದು ಸೇರಿಸಿತ್ತು. ಲಕ್ಕುಂಡಿಯಲ್ಲಿ ಸಾಕಷ್ಟು ಹೊಲ, ತೋಟ, ಮನೆ ಉಳ್ಳಂಥ ಮನೆತನದ ಸೊಸೆಯಾಗಿ ಬಂದ ಹೊಳೆಮ್ಮ ನಂತರ ಪತಿಯ ಆರೋಗ್ಯದ ಕಾರಣದಿಂದ ಪೂರ್ಣ ಮನೆತನದ ಜವಾಬ್ಧಾರಿಯನ್ನು ಹೊರಬೇಕಾಯಿತು.
ಆಸ್ಪತ್ರೆಯ ಖರ್ಚು ಹಾಗು ಸರಿಯಾಗಿ ಯಾರ ಮಾರ್ಗದರ್ಶನ ಹಾಗೂ ಸಹಕಾರವಿಲ್ಲದೇ ಹೆಚ್ಚಿನಾಂಶ ಆಸ್ತಿ, ಹೊಲ ಕೈ ಬಿಟ್ಟು ಹೋಗಿತ್ತು. ಉಳಿದದ್ದು ನಾಲ್ಕು ಎಕರೆ ತೋಟ, ಮನೆಯಲ್ಲಿ ಎಂಟು ಮಕ್ಕಳು ಹಾಗು ಅಶಕ್ತನಾದ ಪತಿ. ಹೆಣ್ಣು ಜೀವ ಹೈರಾಣಾಗಿ ಬಿಟ್ಟಿತ್ತು. ಆ ಗಳಿಗೆಯಲ್ಲಿ ಅದೃಷ್ಟವಶಾತ್ ಭೆಟ್ಟಿಯಾದವರು ನಮ್ಮ ಮಾವನವರು. ಬ್ಯಾಂಕ ಮ್ಯಾನೇಜರ ಆದ ಅವರು ಯಾವುದೋ ಸಾಲದ ರಿಕವರಿಗಾಗಿ ಲಕ್ಕುಂಡಿಗಾಗಿ ಹೋದಾಗ ಸಾಲ ಕೊಡುವ ಸಾಹೇಬರು ಬಂದಿದ್ದಾರೆಂದು ತನ್ನ ಹಿರಿಯ ಮಗನನ್ನು ಮುಂದಿಟ್ಟುಕೊಂಡು ಬಂದು ಕೈ ಮುಗಿದಿದ್ದಳು.
ಅವಳ ಅಸಹಾಯಕತೆಯನ್ನು ನೋಡಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮಾವನವರು “ಕಾಗದ ಪತ್ರಗಳನ್ನು ತೆಗೆದುಕೊಂಡು ಬ್ಯಾಂಕಿಗೆ ಬಂದು ಭೆಟ್ಟಿಯಾಗು ಏನಾದರೂ ಮಾಡಲು ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದ್ದೇ ತಡ ಮೂರನೇ ದಿನ ಎಲ್ಲ ದಾಖಲೆಗಳ ಸಮೇತ ಹಾಜರಾಗಿದ್ದಳು. ಮಾವನವರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಅಧಿಕಾರದ ಪರಿಧಿಯಲ್ಲಿ ಯಾವುದೋ ಸ್ಕಿಮ್ ಅಡಿಯಲ್ಲಿ ಅತೀ ಕಡಿಮೆ ದರದ ಸಾಲ ಮಂಜೂರು ಮಾಡಿಸಿದ್ದರು. ಅದನ್ನು ಆಧಾರವಾಗಿ ಬಳಸಿ ಇದ್ದ ನಾಲ್ಕು ಎಕರೆ ತೋಟವನ್ನು ಸರಿಪಡಿಸಿದ್ದಳು. ಕೈಗೆ ಬಂದ ಇಬ್ಬರು ಹದಿ ಹರೆಯದ ಮಕ್ಕಳ ಸಹಾಯದಿಂದ ಸೇವಂತಿಗೆ ಹೂವನ್ನು ಬೆಳೆದು ಗದಗಿನ ಮಾರ್ಕೇಟಿಗೆ ಕಳುಹಿಸಲು ಪ್ರಾರಂಭಿಸಿದ ಮೇಲೆ ಸಂಸಾರದ ಗಾಡಿ ನಿಧಾನವಾಗಿ ಮುನ್ನಡೆದಿತ್ತು.
ಸಾಲ ಮಂಜೂರಾದಾಗ ಸಿಹಿ ಹೊತ್ತು ಮನೆಗೆ ಬಂದ ಹೊಳೆಮ್ಮ ಒಂದೇ ಭೆಟ್ಟಿಯಲ್ಲಿ ಅತ್ತೆಯ ಮಗಳಾಗಿ ಬಿಟ್ಟಿದ್ದಳು. ನಮ್ಮ ಮಾವನವರನ್ನು ತಮ್ಮ ಪಾಲಿನ ದೇವರೆಂದು ಕರೆಯುತ್ತ ಅವರ ಸಹಾಯವನ್ನು ಬಾಯಿತುಂಬ ಹೊಗಳುತ್ತಿದ್ದ ಹೊಳೆಮ್ಮ ಅತ್ತೆಯವರಿಗೆ ಆತ್ಮೀಯಳಾಗಿ ಕಂಡಿದ್ದಳು. ಹೃದಯಕ್ಕೆ ಹತ್ತಿರವಾಗಿದ್ದಳು. ಆವಾಗಿನಿಂದ ಪ್ರಾರಂಭವಾಗಿತ್ತು ಈ ನಂಟು. ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದೇ ನಾಲ್ಕು ಗಂಡು ಮಕ್ಕಳು ಮತ್ತು ದುಡ್ಡು ಕೊಟ್ಟು ಕೆಲಸ ಮಾಡಿಸುವುದರಲ್ಲಿ ನಂಬಿಕೆ ಇಲ್ಲದೇ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆಂಬ ತತ್ವ ಪಾಲಿಸುವ ಶಿಸ್ತಿನ ಸಿಪಾಯಿ ಪತಿ ಹಾಗೂ ದಿನೆ ದಿನೇ ಹೆಚ್ಚಾಗುತ್ತಿರುವ ಮನೆ ಕೆಲಸ, ಹಬ್ಬ ಹರಿದಿನಗಳ ವಿಶೇಷ ಕೆಲಸದ ಹೊರೆ, ಹೆಚ್ಚುತ್ತಿರುವ ವಯಸ್ಸಿನ ಜೊತೆಗೆ ಬರುವ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳ ನಡುವೆ ಸಿಕ್ಕು ಒದ್ದಾಡುತ್ತಿದ್ದ ಅತ್ತೆಯವರಿಗೆ ತನ್ನದೇ ಮನೆ ಎಂಬಂತೆ ಒಳ ಹೊಕ್ಕು ಮನೆ ಕೆಲಸಗಳಲ್ಲಿ ಸಹಾಯ ನೀಡುವ ಹೊಳೆಮ್ಮನ ಗುಣ ಅಪ್ಯಾಯಮಾನವಾಗಿತ್ತು.
ಆರ್ಥಿಕ ಸಮಸ್ಯೆಗಳಿಂದ ದಿಕ್ಕೆಟ್ಟು ಬಳಲುತ್ತಿದ್ದಾಗ ದಾರಿ ತೋರಿ ಸಹಾಯ ಹಸ್ತ ನೀಡಿದ ಮಾವನವರು ಹೊಳೆಮ್ಮನಿಗೆ ಪೂಜನೀಯರಾಗಿದ್ದರು. ಬ್ಯಾಂಕಿನ ಸಾಲವಾದರೂ ಅದು ಅವಳ ಮಾತಿನಲ್ಲಿ “ಅಪ್ಪನವರು ಕೊಟ್ಟ ರೊಕ್ಕ’’ವಾಗಿತ್ತು. ಅದಕ್ಕಾಗಿ ಎಷ್ಟು ಕೃತಜ್ಞತೆ ತೋರಿಸಿದರೂ ಅವಳಿಗೆ ಸಮಾಧಾನವಿಲ್ಲ. ಪ್ರತಿ ಸಲ ಬರುವಾಗ ಒಂದು ಬುಟ್ಟಿ ಸೇವಂತಿಗೆ ಹೂವು, ಹಣ್ಣು ತಂದು ಮನೆಯಲ್ಲಿ ಎದುರಿಗೆ ಕಾಣಿಸಿದ ಎಲ್ಲ ಕೆಲಸಗಳನ್ನು ಭರಭರನೇ ಮುಗಿಸಿ, ಬೇಡ ಬೇಡವೆಂದರೂ ಮನೆಯ ಅಂಗಳವನ್ನು ಗುಡಿಸಿ ತೊಳೆದು ಅತ್ತೆಯವರು ಪ್ರೀತಿಯಿಂದ ಬಡಿಸಿದ್ದನ್ನು ಪ್ರಸಾದವೆಂಬಂತೆ ಸ್ವೀಕರಿಸುವಾಗ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. ಯಾವುದೇ ವಿಶೇಷವಾದ ದಿನ ಪ್ರಾರಂಭವಾಗುತ್ತಿದ್ದುದು ಹೊಳೆಮ್ಮನ ಆಗಮನದೊಂದಿಗೆ. ಸೊಸೆಯಾಗಿ ಅತ್ತೆಯ ಮನೆ ಸೇರಿದ ಕೆಲವು ತಿಂಗಳಲ್ಲಿಯೇ ನನಗೂ ಹೊಳೆಮ್ಮ ಅಭ್ಯಾಸವಾಗಿ ಬಿಟ್ಟಿದ್ದಳು. ಮನೆಯಲ್ಲಿ ಏನೇ ವಿಶೇಷ ಕಾರ್ಯಕ್ರಮವಿದ್ದರೂ ಏಳುವ ಮೊದಲ ಪ್ರಶ್ನೆ “ಹೊಳೆಮ್ಮ ಬರ್ತಾಳಲ್ಲ?’’ ವಯಸ್ಸಿನಲ್ಲಿ ಚಿಕ್ಕವಳಾದರೂ ನನ್ನನ್ನು ಸಂಬೋಧಿಸುತ್ತಿದ್ದುದು ‘ಅಕ್ಕ’ ಎಂದು. ಸಂಬೋಧನೆಗಿಂತ ಅದರ ಜೊತೆಗೆ ಸ್ಫುರಿಸುತ್ತಿದ್ದ ಧ್ವನಿಯಲ್ಲಿಯ ಮಮತೆಯ ಭಾವ ಇನ್ನೂ ಮನದಲ್ಲಿ ಹಸಿಯಾಗಿದೆ.
ನಗರದಲ್ಲಿ ಬೆಳೆದು ನಾಜೂಕಾದ ವರ್ತನೆಯ ನಾನಂತೂ ಅವಳ ಕಣ್ಣಿಗೆ ಅಪ್ಸರೆಯೇ! ನಾನು ಏನು ಮಾಡಿದರೂ ಚೆಂದ! ನನ್ನ ಒಂದೊಂದು ಮಾತುಗಳನ್ನು ಕಣ್ಣರಳಿಸಿ ಕೇಳುತ್ತಿದ್ದಳು. ಯಾಕೋ ಗೊತ್ತಿಲ್ಲ ಹತ್ತಿರ ಬಂದಾಗಲೆಲ್ಲ ನನ್ನ ಸೊಂಟದ ಹತ್ತಿರದ ಸೆರಗನ್ನು ಮೇಲೆಳೆದು ನಾಲ್ಕು ಬೆರಳುಗಳನ್ನು ಕಾಣುವ ಸೊಂಟದ ಭಾಗವನ್ನು ಮುಚ್ಚುತ್ತಿದ್ದಳು. ಆಗೆಲ್ಲ ತಮಾಶೆ ಎನಿಸುತ್ತಿತ್ತು. ಕೇಳಿದರೆ “ಇಲ್ಲಿ ಮಂದಿ ಕಣ್ಣು ಸರಿ ಇರುದಿಲ್ಲರೀ, ನಿಮ್ಮ ನಡಾ ಬಾಳ ನಾಜೂಕ, ಕಡ್ಡಿ ಪೆಟ್ಟಿಗೆ ಅಂತಾ ನಡಾ, ದೃಷ್ಟಿಗಿಷ್ಟಿ ಆದೋತು”ಎನ್ನುತ್ತಿದ್ದಳು. ನಾನು ನಗುತ್ತ “ಮುಖಕ್ಕೆ ದೃಷ್ಟಿ ತಾಗುವುದಿಲ್ಲೇನು? ಹಂಗಾದ್ರ ಮುಸುಕ ಹಾಕಿಕೊಂಡ ಓಡಾಡಬೇಕಾತು”ಅಂದರೆ “ನಿಮಗೆಲ್ಲಾ ತಮಾಶಿ ಬಿಡ್ರಿ” ಎನ್ನುತ್ತಿದ್ದಳು. ನಂತರ ಅವಳನ್ನು ನೋಡಿದ ತಕ್ಷಣ ನನ್ನ ಕೈಗೆ ಸೊಂಟದ ಹತ್ತಿರದ ಪದರನ್ನು ಮೇಲೆ ಎಳೆದುಕೊಳ್ಳುವ ಅಭ್ಯಾಸವಾಗಿತ್ತು. ಪಾಪ ಅವಳಿಗೆ ಯಕೆ ಕಿರಿಕಿರಿ! ಒಂದು ಸಲ ಅವಳು ತಂದ ಬಾರಿ ಹಣ್ಣನ್ನು “ಎಷ್ಟು ರುಚಿ ಅದಾವ ಹೊಳೆಮ್ಮ.. ಇಂಥಾವು ನಮ್ಮೂರಾಗ ಸಿಗೂದಿಲ್ಲ” ಅಂದಿದ್ದೆ. ನಂತರ ಪ್ರತಿಸಲ ಹೂವಿನ ಬುಟ್ಟಿಯ ಜೊತೆ ಹಣ್ಣಿನ ಗಂಟು ಇರುತ್ತಿತ್ತು.
ಅಲ್ಲಿದ್ದಾಗ ನಡೆದ ಒಂದು ಘಟನೆ ಹೊಳೆಮ್ಮನ ವ್ಯಕ್ತಿತ್ವದ ವಿಶೇಷ ಆಯಾಮವನ್ನು ತೋರಿಸಿತ್ತು. ಮಂಗಳೂರಿನಲ್ಲಿದ್ದ ಮೈದುನನ ಕರೆಗೆ ಓಗೊಟ್ಟು ಮೂರು ದಿನದ ಪ್ರವಾಸದ ಯೋಜನೆ ತಯಾರಾದಾಗ ಪ್ರಶ್ನೆ ಎದ್ದಿದ್ದು, ತುಂಬಿದ ಮನೆ ಹೇಗೆ ಬಿಟ್ಟು ಹೋಗುವುದು? ಅತ್ತೆ ಹಿಂದೆ ಸರಿದು “ನಾ ಇರತೇನಿ ನೀವೆಲ್ಲ ಹೋಗಿ ಬರ್ರಿ” ಎಂದದ್ದು ಯಾರಿಗೂ ಒಪ್ಪಿಗೆಯಾಗದಾದಾಗ ಯಜಮಾನರ ಸಲಹೆ “ಹೊಳೆಮ್ಮನಿಗೆ ಮಗನ ಜೊತೆ ನಾಲ್ಕು ದಿನ ಇರಲಿಕ್ಕೆ ಹೇಳೋಣ” ಸರಿ ಹೊಳೆಮ್ಮನಿಗೆ ಸಂದೇಶ ಹೋಗಿತ್ತು. ಹೇಳಿದ ದಿನ ಸರಿಯಾಗಿ ತನ್ನ ಗಂಟನ್ನು ಹೊತ್ತ ಹೊಳೆಮ್ಮ ಹಾಜರಾಗಿದ್ದಳು. ಒಬ್ಬಳೇ ಬಂದ ಅವಳನ್ನು ನೋಡಿ ನಿನ್ನ ಮಗ ಯಾಕೆ ಬರಲಿಲ್ಲ ಎಂದು ಕೇಳಿದಾಗ “ತೋಟದ ಕಡೆ ಕೆಲಸ ಬಾಳ ಅದರಿ ಅದಕ್ಕ ಬರಲಿಲ್ಲ. ನಾ ಬಂದೇನಲ್ಲ ನೀವು ಕಾಳಜಿ ಬಿಟ್ಟ ಹೋಗಿ ಬರ್ರಿ” ಎಂದಳು. ಊರಿನಿಂದ ಸ್ವಲ್ಪ ದೂರದಲ್ಲಿ ದೊಡ್ಡ ಕಂಪೌಂq ಇದ್ದ ಒಂಟಿ ಮನೆಯಾಗಿದ್ದರಿಂದ ಸ್ವಲ್ಪ ಕಾಳಜಿಯಾಗಿತ್ತು.
ಆದರೂ ಲಗೇಜ ಎಲ್ಲಾ ಪ್ಯಾಕ ಮಾಡಿ ತಯಾರಾಗಿ ಕುಳಿತಿದ್ದವರಿಗೆ ಏನೂ ಮಾಡಲು ತೋಚದೆ ಹೊರಟಿದ್ದಾಯಿತು. ಮಂಗಳೂರು, ಉಡುಪಿ, ಧರ್ಮಸ್ಥಳ ದರ್ಶನದೊಂದಿಗೆ ಸವಾರಿ ಗದಗಿನ ಕಡೆಗೆ ಹೊರಟಿತ್ತು. ಪ್ರವಾಸದ ಸಡಗರದ ನಂತರ ಬಳಲಿಕೆಗಳೆಲ್ಲ ಮರೆತು ಹೋಗಿತ್ತು. ಊರು ಹತ್ತಿರ ಬರುತ್ತಿದ್ದಂತೆ ಮನೆ ಮತ್ತು ಒಬ್ಬಳೇ ಇರುವ ಹೊಳೆಮ್ಮ ನೆನಪಾಗಿದ್ದು! ಊರು ತಲುಪಿದಾಗ ರಾತ್ರಿಯಾಗಿತ್ತು. ಮನೆಗೆ ಹೊರಳುವ ತಿರುವಿನಲ್ಲಿ ವಾಚ್ ನೋಡಿಕೊಂಡೆ. ಆಗಲೇ 11:30. ಅತ್ತೆಯವರಿಗೆ ಮನೆ ಕಡೆ ಯೋಚನೆ ಜೋರಾಗಿಬಿಟ್ಟಿತ್ತು. “ಒಬ್ಬಳೇ ಹೊಳೆಮ್ಮ ಏನು ಮಾಡುತ್ತಿದ್ದಾಳೋ? ಮೊದಲೇ ತೋಟದ ಕಡೆ ಕೆಲಸ ಜಾಸ್ತಿ ಅಂತಿದ್ಲು. ನಾವು ಬರೇ ಎರಡು ದಿವಸ ಅಂತ ಹೇಳಿದ್ವಿ, ನಮ್ಮ ದಾರಿ ನೋಡಿ ಸಂಜಿ ಬಸ್ ಹಿಡದ ಬಿಟ್ಲ ಏನೋ ಯಾರಿಗೆ ಗೊತ್ತು. ಹೀಗೆ ಅತ್ತೆಯವರ ಚಿಂತನೆಗಳು ಮಾತಿನ ರೂಪದಲ್ಲಿ ಹರಿದು ಬರುತ್ತಿದ್ದವು. “ಹಂಗೇನು ಆಗಿರಲಿಕ್ಕಿಲ್ಲ, ನೀ ಸುಮ್ಮನ ಕಾಳಜಿ ಮಾಡ್ತಿ” ಎಂದು ಸಮಾಧಾನದ ಮಾವನವರ ಮಾತು ಅವರ ಕಿವಿ ತಲುಪಲಿಲ್ಲ. ಮನೆ ಹತ್ತಿರವಾದಂತೆ ಕತ್ತಲೆಯಲ್ಲಿ ಮನೆ ಆಕಾರ ಕಣ್ಣಿಗೆ ಬಿದ್ದಿತು.
ವರಾಂಡದಲ್ಲಿ ದೀಪ ಬೆಳಗುತ್ತಾ ಇತ್ತು. “ಹೊಳೆಮ್ಮ ಇನ್ನೂ ಇದ್ದಂಗಾತು”ಅಂದ ಅತ್ತೆಯವರು “ಅಯ್ಯೋ ಅದು ಯಾರು ಕಂಪೌಂಡದಾಗ” ಎಂದು ತೆಗೆದ ಉದ್ಘಾರ ಎಲ್ಲರನ್ನೂ ನಿದ್ದೆಗಣ್ಣಿನಿಂದ ಬಡಿದೆಬ್ಬಿಸಿತು. ತಕ್ಷಣ ಪತಿ ದೇವರು ಚುರುಕಾದರು. ಡ್ರೈವರ್‍ಗೆ ಸ್ವಲ್ಪ ನಿಧಾನಿಸು ಎಂದು ಆದೇಶಿಸಿದ್ದರು. ಬಿಳಿ ಲುಂಗಿ, ಶರ್ಟ ತೊಟ್ಟು ಕೈಯ್ಯಲ್ಲಿ ಉದ್ದ ಕೋಲನ್ನು ಹಿಡಿದ ವ್ಯಕ್ತಿ ಕಂಪೌಂಡನಲ್ಲಿ ಚಲಿಸಿದ್ದು ಕಾಣಿಸಿತು. ಯಾರೀ ವ್ಯಕ್ತಿ? ಹೊಳೆಮ್ಮ ಎಲ್ಲಿ? ಕಾಣದ ಭೀತಿ ಎಲ್ಲರನ್ನೂ ಆವರಿಸಿತು. ಗೇಟಿನಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ ನಮ್ಮ ರಾಯರು ಯಾರಿಗೂ ಇಳಿಯದಂತೆ ಆದೇಶ ನೀಡಿ “ನಾ ನೋಡಿ ಬರ್ತೇನಿ” ಎನ್ನುತಾ ಕಾರಿನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಜೋರಾಗಿ ಕೂಗು ಹಾಕಿದರು. “ಯಾರದು?” ಆಕಾರ ಧಾಪುಗಾಲು ಹಾಕುತಾ ಗೇಟಿನ ಕಡೆಗೆ ಬರಲು ಪ್ರಾರಂಭ ಮಾಡಿದಾಗ ಏನೂ ತೋಚದೇ ಇನ್ನೊಮ್ಮೆ ಕೂಗಿದ್ದರು. “ಹೊಳೆಮ್ಮಾ, ಹೊಳೆಮ್ಮಾ ಗೇಟ ತೆಗಿ” ಹೊಳೆಮ್ಮನ ಧ್ವನಿ ಕೇಳಿಸಿತು. “ಈಗ ಬಂದ್ರೇನ್ರಿ ಅಣ್ಣಾವ್ರ, ಯಾಕೋ ಬಾಳ ತಡಾ ಆತಲ್ಲ? ” ಆ ದಟ್ಟ ಕತ್ತಲಲ್ಲಿ ಧ್ವನಿಯ ಮೂಲ ಗುರುತಿಸುವುದು ಕಷ್ಟವಾಗಿತ್ತು. ಕೈಯಲ್ಲಿದ್ದ ಕೋಲನ್ನು ಪಕ್ಕಕ್ಕಿಟ್ಟು ಗೇಟ ತೆಗೆದ ಬಿಳಿ ಆಕಾರ ಮುಂದೆ ಬಂದಾಗ ಗೊತ್ತಾಗಿದ್ದು ಹೊಳೆಮ್ಮನ ಧ್ವನಿಯೇ ಅದು ಅಂತ. ಆ ವ್ಯಕ್ತಿಯಿಂದ ಗೊಂದಲಗೊಂಡ ರಾಯರು ಮತ್ತೆ ಕೇಳಿದರು “ಯಾರದು?” “ಯಾಕ್ರೀ ಅಣ್ಣಾವ್ರ ನಾ ಹೊಳೆಮ್ಮರ್ರಿ ಡ್ರೆಸ್ ನೋಡಿ ಗುರ್ತು ಹಿಡಿಲಿಲ್ಲೆನೋ” ಎಂದು ನಗುತ್ತಾ ತಲೆಗೆ ಸುತ್ತಿದ್ದ ಟಾವೆಲ್ ತೆಗೆದಳು. ಆವಾಗ ಕಂಡಿತ್ತು ಅವಳ ದೊಡ್ಡ ಕುಂಕುಮ ಮತ್ತು ಮೂಗುತಿ. ದಿಗ್‍ಭ್ರಾಂತರಾಗಿ ನೋಡುತ್ತಿದ್ದ ನಮಗೆಲ್ಲ ನಗಬೇಕೋ ಅಳಬೇಕೋ ತಿಳಿಯದಾಗಿತ್ತು.
ಅತ್ತೆ ಗಡಬಡಿಸಿ ಕಾರಿನಿಂದ ಇಳಿದು ಬಂದು “ಅಯ್ಯೋ ಹೊಳೆಮ್ಮ ಇದೇನ ನಿನ್ನ ಅವತಾರ?”ಎಂದಾಗ “ಏನ್ ಮಾಡೋದರಿ ಅವ್ವಾ, ಮನ್ಯಾಗ ಗಂಡಸರಿಲ್ಲ ಅಂತ ಯಾರಿಗೂ ಗೊತ್ತಾಗೋದು ಬ್ಯಾಡಾ ಅಂತ ಸುಮ್ಮನ ರಾತ್ರಿ ಒಂದ ತಾಸ್ ಹಿಂಗ ಶರ್ಟ ಮತ್ತ ಲುಂಗಿ ಸಿಗಿಸಿಕೊಂಡು ಎರಡ ಸುತ್ತ ಹಾಕತಿದ್ನಿ ನೋಡ್ರಿ, ಇವತ್ತ ನೀವ ಬರತೀರಿ ಅಂತ ದಾರಿ ನೋಡಾಕ ಹತ್ತಿದ್ನಿ. ತಡಾ ಆತು ನನಗೂ ಸ್ವಲ್ಪ ಕಾಳಜಿ ಆಗಿತ್ತು”ಎನ್ನುತ್ತಾ ಹೋಗಿ ಬಾಗಿಲು ತೆಗೆದು ಒಳಗಡೆ ದೀಪ ಬೆಳಗಿಸಿದ್ದಳು. ಆವಾಗ ಸ್ಪಷ್ಟವಾಗಿ ಕಂಡ ಅವಳ ವೇಷ ನೋಡಿ ಉಕ್ಕಿದ ನಗು ಎರಡು ದಿನಗಳವರೆಗೆ ನಿಂತು ನಿಂತು ನಮ್ಮನ್ನು ನಗೆ ಕಡಲಲ್ಲಿ ಮುಳುಗಿಸಿತ್ತು. ಅವಳ ವಿಲಕ್ಷಣವಾದ ಕಾಳಜಿ ಮನವನ್ನು ತಟ್ಟಿತ್ತು. ಊರು ಬಿಟ್ಟು ಬಂದ ನಂತರವೂ ಬಹಳ ವರ್ಷಗಳವರೆಗೆ ಹೊಳೆಮ್ಮ ನೆನಪಾಗುತ್ತಿದ್ದಳು.
ಕಾಲಚಕ್ರ ಉರುಳಿದಂತೆ ನೆನಪು ಮಸಕಾಗಿತ್ತು. ಅತ್ತೆ ಮಾವ ತೀರಿಹೋದ ನಂತರ ಗದಗಗೆ ಹೋಗುವ ಸಂದರ್ಭಗಳು ಕಡಿಮೆಯಾಗುತ್ತ ಹೋಗಿದ್ದವು. ಈಗ ಗೆಳತಿಯ ಬೇಡಿಕೆ ಮತ್ತೆ ನೆನಪುಗಳಿಗೆ ಜೀವ ತುಂಬಿತ್ತು. ಆವತ್ತೇ ಸಾಯಂಕಾಲ ಸಹಜವೆಂಬಂತೆ ಗದಗನಲ್ಲಿಯೇ ಇದ್ದ ಕಿರಿಯ ಓರಗಿತ್ತೆಗೆ ಫೋನ ಮಾಡಿ ಸ್ನೇಹಿತೆಯೊಂದಿಗೆ ಬರುವ ವಿಷಯ ತಿಳಿಸುತ್ತ ಕೊನೆಗೆ ಕೇಳಿದ್ದೆ “ಹೊಳೆಮ್ಮಂದು ಏನ್ ಸುದ್ದಿ” ಅದಕ್ಕೆ “ಯಾವ ಹೊಳೆಮ್ಮ” ಎಂದು ರಾಗ ಎಳೆದು ನಂತರ “ ಆಕೀನ.. ಆಕಿ ತೀರಿ ಹೋಗಿ 4-5 ವರ್ಷÀ ಆಯ್ತಲ್ಲ! ಆಕಿ ಮಗ ಇವರಿಗೆ ಯಾವಾಗಲಾದರೂ ಭೆಟ್ಟಿ ಆಗತಿರ್ತಾನಂತ. ಆದರ ಮನಿ ಕಡೆ ಯಾರೂ ಬಂದಿಲ್ಲ” ಎನ್ನುತ್ತಾ ಮಾತನ್ನು ಬದಲಾಯಿಸಿದಳು. ಯಾಕೋ ಮಾತಿನಲ್ಲಿ ಆಸಕ್ತಿ ಕರಗಿತ್ತು. ಎದೆಯಲ್ಲಿ ಎಂಥದೋ ಉಮ್ಮಳ. ಮತ್ತೆಂದೂ ಹೋಗಿ ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ ಎಂಬ ಅಪರಾಧಿ ಭಾವ ಮನದಲ್ಲಿ ಚುಚ್ಚತೊಡಗಿತ್ತು. ಕಣ್ಣು ತನಗರಿವಿಲ್ಲದೇ ತೇವವಾಗಿತ್ತು.
-ಪ್ರೋ.ರಾಜನಂದ ಗಾರ್ಘಿ ಬೆಳಗಾವಿ
Interesting characterization