ಗುರುವಂದನೆ ಅಭಿನಂದನೆ
ಮಲಪ್ರಭೆಯ ತಟದಲ್ಲಿ
ಸುಂದರ ಸೌಗಂಧಿಪುರದಲ್ಲಿ
ಕೆ ಎಲ್ ಇ ಹೆಮ್ಮರದಡಿಯಲಿ
ಕಾಡಶಿದ್ಧೇಶ್ವರ ಪ್ರೌಢಶಾಲೆಯು
ಹೆಮ್ಮೆಯಿಂದ ಬೀಗುತಿಹುದು ||
ಅಕ್ಕರೆಯಿಂದ ಅಕ್ಷರ ಕಲಿಸಿದ
ಸಕ್ಕರೆಯಂತಹ ಶಿಕ್ಷಕವೃಂದಕೆ
ನಕ್ಕು ನಲಿಯುತ ಹಾಡಿ ಪಾಡುತ
ಕಕ್ಕುಲತೆಯ ಕರುಣಾಮೂರ್ತಿಗೆ
ಗುರುವಂದನೆ ಅಭಿನಂದನೆ ||
ಅಜ್ಞಾನದ ಅಂಧಕಾರವನೊಡಿಸಿ
ಸುಜ್ಞಾನ ಸುಧೆಯ ಧಾರೆಯೆರೆವ
ಶಕ್ತಿಯುತ ಸಾತ್ವಿಕ ತತ್ವವೇ ಗುರು
ಅಂತಹ ಗುರುವಿಗೆ ಗೌರವಪೂರ್ವಕ
ಗುರುವಂದನೆ ಅಭಿನಂದನೆ ||
ಅಕ್ಷರ ಕಲಿಸಿದ ಶಿಕ್ಷಕರು
ಅಕ್ಕರೆಯಿಂದ ಜೀನವನ ರೂಪಿಸಿ
ಚೆಂದದ ಬದುಕಿನ ಅಂದವ ಹೆಚ್ಚಿಸಿ
ಭವ್ಯ ಬದುಕಿಗೆ ನಾಂದಿಹಾಡಿದ ಶಿಲ್ಪಿಗೆ
ಗುರುವಂದನೆ ಅಭಿನಂದನೆ ||
ಹೆಜ್ಜೆ ಹೆಜ್ಜೆಗೂ ಅರಿವು ನೀಡಲು
ಸದ್ಗುರುವಿನಾ ಕರುಣೆ ಬೇಕು
ಕೈಯಹಿಡಿದು ಎಡುವದಂತೆ
ಮಾರ್ಗತೋರಿದ ಮರ್ಗದರ್ಶಕರಿಗೆ
ಗುರುವಂದನೆ ಅಭಿನಂದನೆ ||
ನನ್ನ ಗುರುವೆ ನನ್ನ ನಾಯಕ
ಕಲಿಸಿದರೆಮಗೆ ಜಯಿಸುವ ಕಾಯಕ
ದಡವ ಸೇರಿಸೊ ನಾವಿಕ
ಮಮತೆ ತೋರಿದ ಮಾಂತ್ರಿಕರಿಗೆ
ಗುರುವಂದನೆ ಅಭಿನಂದನೆ ||
ಮಾತೃ ಹೃದಯದಾ ಪಿತೃ ಭಕ್ತಿಯಾ
ದೈವಸ್ವರೂಪದ ದೇವಪುರುಷರು
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗೆ
ನಮೋ ನಮೋ ಗುರುವೆ
ಗುರುವಂದನೆ ಅಭಿನಂದನೆ ||
–ಸವಿತಾ ಮಾಟೂರು ಇಲಕಲ್ಲ