ಸೃಷ್ಟಿಯ ರಚನೆ

ಸೃಷ್ಟಿಯ ರಚನೆ

ಸಹಜದಿಂದ ನಿರಾಲಂಬವಾಯಿತ್ತು. ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು. ನಿರವಯದಿಂದ ಆದಿಯಾಯಿತ್ತು. ಆದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ. ಆ ಸದಾಶಿವನ ಮೂರ್ತಿಯಿಂದ ಶಿವನಾದ. ಆ ಶಿವನ‌ಮೂರ್ತಿಯಿಂದ ರುದ್ರನಾದ. ಆ ರುದ್ರನಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮ ಮೂರ್ತಿಯಿಂದಲಾದವು ಸಕಲ ಜಗತ್ತು ಜೀವ ಜಂತುಗಳೆಲ್ಲ. ಇವರೆಲ್ಲ ನಮ್ಮ ಗುಹೇಶ್ವರಲಿಂಗದ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದವರು

ಈ ರೀತಿಯ ಸೃಷ್ಟಿಯ ಉಗಮವು ಒಂಬತ್ತು ತರಗತಿಗಳಲ್ಲಿ ಹಾಯ್ದು ವಿಶ್ವರೂಪಗೊಂಡಿದೆ ಎಂಬುದು ಶರಣರ ವಚನ ತತ್ವಾನುಭವವಾಗಿದೆ.

ಸಹಜ ಸ್ಥಲವನ್ನು ಅಣುಲಿಂಗವೆಂದು ಕರೆಯಲಾಗುವುದು. ತನ್ನ ಚಿತ್ ಶಕ್ತಿಯನ್ನೊಳಗೊಂಡು ಸಹಜ ಸ್ಥಿತಿಯಲ್ಲಿರುವದರಿಂದ ಇದನ್ನು ಸಹಜ ಸ್ಥಲವೆಂದು, ಅಣುಲಿಂಗವೆಂದು ಕರೆಯಲಾಗುವುದು. ಈ ಸಹಜವಾಗಿರುವ ಅಣುಲಿಂಗ ತತ್ವವು ಯಾವುದನ್ನು ಅವಲಂಬಿಸದೆ ಯಾವುದೇ ವಿಧದ ರಂಜನೆ ಇಲ್ಲದಿರಲು ಸರ್ವಶೂನ್ಯ ನಿರಾಲಂಬ, ನಿರಂಜನ ಲಿಂಗವೆಂದೆನಿಸಿಕೊಳ್ಳುವುದು. ಮುಂದೆ ನಿರಾಳ ಸ್ಥಲ. ಇಲ್ಲಿ ಯಾವ ಚಲನವಲನಗಳಿಲ್ಲ. ಉಲುಹು ನಲುವುಗಳಿಲ್ಲದ್ದರಿಂದ ನಿರಾಳಸ್ಥಳ. ನಿಶೂನ್ಯಲಿಂಗವೆನಿಸಿತ್ತು. ಇದರ ವಿಕಾಸವು ಮುಂದೆ ನಿರವಯ ಸ್ಥಲ. ನಿಕಲಲಿಂಗವಾಗಿದ್ದು ಮಹಾಲಿಂಗ ರೂಪಗೊಳ್ಳಲು ಕಾರಣವಾಗುತ್ತದೆ.


ನಿಕಲಲಿಂಗವೆಂಬ ಪರಶಿವ ತತ್ವದಿಂದ ಮೂಲ ಚಿತ್ತು (ಅಭಿಲಾಷೆ) ಉದಯವಾಗುತ್ತದೆ. ಈ ಮೂಲ ಚಿತ್ತಿನಿಂದಲೇ ಆಕಾರ, ಉಕಾರ, ಮಕಾರಗಳೆಂಬ ಅಕ್ಷರಗಳುದಿಸಿ ನಾದ ಬಿಂದುಕಳೆಗಳೆನೆಸುತ್ತವೆ. ಮೂಲ ಚಿತ್ತು ನಾದ ಬಿಙದು ಕಳೆಗಳೊಂದಿಗೆ ಸಮರಸವಾಗಿ ಬೆರೆದಲ್ಲಿ ಓಂಕಾರವೆಂಬ ಅಖಂಡ ಗೋಳಕಾರದ ಮಹಾಲಿಂಗವೆನಿಸುತ್ತದೆ.

ಇದು ಸೃಷ್ಡಿಯ ಕಾರಣಕ್ಕೆ ಆದಿ ಸ್ಥಲವೆನಿಸುತ್ತದೆ. ಇದನ್ನೀ ಆತ್ಮ ಶರಣನೆಂದು ಕರೆಯುತ್ತಾರೆ. ಆದಿ ಶರಣ (ಆತ್ಮ)ನಿಂದ ಸದಾಶಿವ (ಆಕಾಶ). ಸದಾಶಿವನಿಂದ ಶಿವ (ವಾಯು). ಶಿವನಿಂದ ರುದ್ರ (ಅಗ್ನಿ) ರುದ್ರನಿಂದ ವಿಷ್ಣು ( ಜಲ ). ವಿಷ್ಣುವಿನಿಂದ ಬ್ರಹ್ಮ ( ಪೃಥ್ವಿ). ಬ್ರಹ್ಮನಿಂದ ಸಕಲ ಚರಾಚರ ಜಗತ್ತು. ಜೀವಜಂತುಗಳು ಉತ್ಪತ್ತಿ ಯಾದವು. ಈ ಎಲ್ಲಕ್ಕೂ ಮೂಲ ಕಾರಣವಾದುದು ಆ ಸರ್ವಶೂನ್ಯ ನಿರಾಲಂಬ ನಿರಂಜನಲಿಂಗ ತತ್ವವೇ ಎಂಬುದನ್ನು ಮರೆಯಬಾರದು. ಈ ರೀತಿ ಒಂಬತ್ತು ತರಗತಿಗಳಲ್ಲಿ ಹಾಯ್ದು ಒಂದು ಸೃಷ್ಟಿ ರಚನೆಯಾಗಿದೆ ಎಂಬುದು ಶರಣರ ಸಂದೇಶ. ಅದರ ಮೂಲ ವಚನ ತತ್ವಾನುಭವದಲ್ಲಿ ಅರಿಯಬೇಕು.
ವಚನ ತತ್ವಾನುಭವದಂತೆ ನಿಃಕಲ ಪರಶಿವ ತತ್ವದಿಂದ ಮೂಲ ಚಿತ್ತು (ಅಭಿಲಾಷೆ) ಉದಯವಾಯಿತು. ಅಭಿಲಾಷೆಯ ಉದ್ದೇಶ ಸ್ವಲೀಲಾನಂದಕ್ಕಾಗಿ.

ಮೂಲ ಚಿತ್ತಿನಿಂದಲೇ ಚಿನ್ನಾದ , ಚಿದ್ ಬಿಂದು ಚಿತ್ ಕಳೆಗಳುದಯ. ಚಿನ್ನಾದ ಚಿದ್ಬಿಂದು ಚಿತ್ ಕಳೆಗಳನ್ನು ಅಕಾರ ಉಕಾರ ಮಕಾರಗಳೆಂದು ಕರೆಯುವರು. ಅ,ಉ,ಮ ಗಳೆಂಬ ಮೂಲ‌ ಪ್ರಣಮಗಳು ಮೂಲ ಚಿತ್ತಿನೊಡನೆ ಬೆರೆದಲ್ಲಿ ಓಂಕಾರ ಪ್ರಣವವೆಂಬ ಮಹಾಲಿಂಗದುತ್ಪತ್ತಿಯಾಗುತ್ತದೆ. ಮಹಾಲಿಂಗವೇ ಸೃಷ್ಟಿಯ ಉಗಮಕ್ಕೆ ಆದಿಸ್ಥಲವೆನಿಸುತ್ತದೆ. ಓಂಕಾರ ಮಹಾಲಿಂಗದಿಂದ ಸೃಷ್ಟಿ ರಚನೆಗೆ ಬೇಕಾದ ಸಾಮಾಗ್ರಿಗಳೆನಿಪ ಯಕಾರ, ವಕಾರ, ಶಿಕಾರ, ಮಕಾರ, ನಕಾರಗಳೆಂಬ ಪಂಚ ಪ್ರಣಮಗಳುತ್ಪತ್ತಿ. ಮತ್ತು ಮಹಾಸಾದಖ್ಯ, ಶಿವಸಾದಖ್ಯ, ಅಮುರ್ತಿ ಸಾದಖ್ಯ, ಮೂರ್ತಿ ಸಾದಖ್ಯ, ಕರ್ತೃ ಸಾದಖ್ಯ, ಕರ್ಮ ಸಾದಖ್ಯಗಳೆಂಬ ಪಂಚ ಸಾದಖ್ಯಗಳುತ್ಪತ್ತಿ. ಮತ್ತು ಶಾಂತ್ಯಾತೀತೊತ್ತರಾ, ಶಾಂತ್ಯಾತೀತ, ಶಾಂತಿ, ವಿದ್ಯಾ, ಪ್ರತಿಷ್ಠಾ, ನಿವೃತ್ತಿಗಳೆಂಬ ಪಂಚಕಲೆಗಳುತ್ಪತ್ತಿ. ಚಿತ್ ಶಕ್ತಿ, ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಗಳೆಂಬ ಪಂಚಶಕ್ತಿಗಳುತ್ಪತ್ತಿ. ಆಕಾಶ, ವಾಯು, ಅಗ್ನಿ, ಅಪ್ಪು, ಪೃಥ್ವಿಗಳೆಂಬ ಪಂಚ ಮಹಾಭೂತಗಳುತ್ಪತ್ತಿ.

ಇವೆಲ್ಲವೂ ಓಂಕಾರ ಸ್ವರೂಪಿ ಗೋಳಾಕಾರದ ಮಹಾಲಿಂಗದಿಂದಲೆ ಹೊರ ಹೊಮ್ಮಿರುವದರಿಂದ ಸೃಷ್ಟಿ ರಚನೆಯ ರೂಪುಗೊಳ್ಳಲು ಮಹಾಲಿಂಗವೇ ಆದಿ‌ ಸ್ಥಲವೆನಿಸುತ್ತದೆ.
ಯಾವ ನಿಃಕಲ ಪರಶಿವ ತತ್ವದಿಂದ ತನ್ನನ್ನೊಳಗೊಂಡ ಇಡೀ ಸೃಷ್ಟಿಯ ರಚನೆಗೊಂಡಿದಿಯೋ, ಅದೇ ವಸ್ತುವಿನಲ್ಲಿ ಪುನಹ ತನ್ನಲ್ಲಿ ತಾನು ಬೆರೆಯುವ ನಿಜಾನುಭವವೇ ಲಿಂಗಾಗ ಸಾಮರಸ್ಯವೆನಿಸುವುದು. ಮಾನವನ ತನು ಮನ ಭಾವ ಸಹಿತ ಆ ಪರಶಿವ ತತ್ವಸ್ವರೂಪವೆಯಾಗಬೇಕಾಗಿದೆ. ಪರಶಿವನಿಂದುದಿಸಿದ ಸೃಷ್ಟಿಯು ಪರಶಿವ ಸ್ವರೂಪವೇ ಆಗಿದೆ.

ಇಲ್ಲಿ ಯಾವ ವಸ್ತುವು ತ್ಯಾಜ್ಯವಲ್ಲ. ಎಲ್ಲವೂ ಪೂಜ್ಯವಾಗಿದೆ. ತನು ಮನ ಭಾವ ಅಲ್ಲದೇ ವಿಶ್ವದ ಸಮಸ್ತ ಪದಾರ್ಥಗಳನ್ನೆಲ್ಲ ಪ್ರಸಾದಿಕರಿಸಿ ಭೋಗಿಸುವುದೆ ಲಿಂಗಲೀಲಾ ವಿಲಾಸ. ಅರ್ಥಾತ ಸ್ವಲೀಲಾನಂದ ಭಕ್ತಿಯೆನಿಸುವುದು. ಇದೇ ವಚನ ತತ್ವಾನುಭವದ ನಿಜದ ಗುಟ್ಟು.

-ಶ್ರೀ ಸಿದ್ಧರಾಮೇಶ್ವರ ಶರಣರು ಬೆಲ್ದಾಳ

Don`t copy text!