ಅವಾಂತರ

ಅವಾಂತರ

  ಕತೆ 


ಚೆನ್ಹೈನಿಂದ ಬೆಂಗಳೂರಿಗೆ ಟ್ರಾನ್ಸಫರ್ ಆಗಿ ಬಂದ ಮಗ ಮನೆ ತೆಗೆದುಕೊಂಡಿದ್ದೇನೆ ಬಾ ಎಂದು ಕರೆದಾಗ ಸಡಗರದಿಂದ ಮನೆಗೆ ಬೇಕಾದ ಕೆಲವು ಸಾಮಾನುಗಳನ್ನು ಜೊಡಿಸಿಕೊಂಡು ಹೊರಟಿದ್ದಳು ಸುಮಾ. ಬೆಳಿಗ್ಯೆ ಬೆಂಗಳೂರು ತಲುಪಿದಾಗ ಕಂಡಕ್ಟರ್ “ಅಮ್ಮಾ ನೀವು ಹೇಳಿದ ಸ್ಟಾಪ್ ಬಂದಿದೆ ಇಳಿಯಿರಿ’’ ಎಂದಿದ್ದನ್ನು ಕೇಳಿ ಬೇಗ ಬೇಗ ಇಳಿದು ಲಗೇಜೆಲ್ಲಾ ಇಳಿಸಿಕೊಂಡಳು. 6ಗಂಟೆಗೆ ಆ ಸ್ಟಾಪ್ ನಲ್ಲಿ ಕಾಯುತ್ತೇನೆ ಎಂದು ಹೇಳಿದ ಮಗ ಕಾಣದೇ ಫೋನ ಮಾಡಲು ಮೋಬೈಲ್ ತೆಗೆಯುವುದರಲ್ಲಿ ರಿಂಗ್ ಆಯಿತು. ಆ ಕಡೆಯಿಂದ ಮಗ “ಮಮ್ಮಿ ಇನ್ನೂ ಎಲ್ಲಿದ್ದೀ’’ ಎಂದು ಕೇಳಿದಾಗ ಗೊಂದಲಕ್ಕೀಡಾದಳು. –“ಜಯನಗರ ಸ್ಟಾಪ್‍ನಲ್ಲಿ ಇಳಿದಿದ್ದೇನೆ ನೀ ಎಲ್ಲಿದ್ದೀ’’? ಎಂದು ತಿರುಗಿ ಕೇಳಿದಾಗ ಅವನಿಗೆ ಎಲ್ಲೋ ಗೊಂದಲವಾಗಿದ್ದು ಗಮನಕ್ಕೆ ಬಂದಿತ್ತು. ಅಷ್ಟು ಪರಿಚಯವಿಲ್ಲದ ಜಾಗವಾÀದ್ದರಿಂದ ಎಲ್ಲಿದ್ದೇನೆ ಎಂದು ಹೇಳಲು ಇವಳಿಗೂ ತೊಂದರೆ. ಆತ “ಇರಲಿ ವಾಟ್ಸಪ್‍ನಲ್ಲಿ ನಿನ್ನ ಲೋಕೆಷನ್ ಕಳಿಸು. ನಾನು ಅಲ್ಲಿಗೇ ಬರುತ್ತೇನೆ’’ ಅಂದಾಗ ಸಮಾಧಾನದಿಂದ ವಾಟ್ಸಪ್ ತೆಗೆದು ಲೋಕೆಷನ್ ಕಳಿಸಿದಳು. 5 ನಿಮಿಷದಲ್ಲಿ ಅವನ ಕಾರು ಎದುರಿಗೆ ನಿಂತಿತ್ತು. ಆರಾಮಾಗಿ ಕಾರನಲ್ಲಿ ಕುಳಿತಾಗ ಈ ಮೊಬೈಲ್ ನಿಂದ ಜೀವನ ಎಷ್ಟು ಸುಲಭವಾಗಿದೆ ಎನಿಸಿ ಮನಸ್ಸು ಮುವತ್ತು ವರ್ಷಗಳ ಹಿಂದೆ ಓಡಿತ್ತು. ಮೋಬೈಲ್, ಫೋನ್ ಏನೂ ಇಲ್ಲದಾಗ ಅನುಭವಿಸಿದ ಗೊಂದಲ ನೆನಪಾಗಿತ್ತು.
ಆ ದಿನ ಪ್ರವಾಸದ ಆಯಾಸದಿಂದ ಮೈ ಭಾರವಾಗಿದ್ದರೂ ಸುಮಾಳ ಮನಸ್ಸು ಹಗುರಾಗಿತ್ತು. ಬಹುದಿನಗಳ ಕನಸಾದ ಆ ಪ್ರವಾಸ ಕೈಗೂಡಿ ನನಸಾದ ಸಾರ್ಥಕತೆ ಮನವನ್ನು ಮುದಗೊಳಿಸಿತ್ತು. ಬಹಳ ದಿನಗಳ ಹಿಂದೆ ಗೋಕರ್ಣ ಮುರ್ಡೇಶ್ವರಗಳ ದರ್ಶನಕ್ಕಾಗಿ ಅತ್ತೆಯವರು ತಮ್ಮ ಆಶೆಯನ್ನು ವ್ಯಕ್ತ ಪಡಿಸಿದಾಗಿನಿಂದ ಎದುರು ನೊಡುತ್ತಿದ್ದ ಪ್ರವಾಸ ಕೊನೆಗೂ ಕಾರ್ಯಗತವಾಗಲು ವರ್ಷವೇ ಕಳೆದಿತ್ತು. ಎಲ್ಲರೂ ಸೇರಿಯೇ ಹೊಗುವ ಕಟ್ಟು ನಿಟ್ಟಾದ ನಿರ್ಧಾರದಿಂದ ಅದು ಅನೇಕ ಸಲ ಮುಂದುಡಲ್ಪಟ್ಟು ಕೊನೆಗೆ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿ, ರಜೆಗಳು ಅನುವು ಮಾಡಿಕೊಟ್ಟಾಗ ಹೊರಟಾಗಿತ್ತು.

ಧಾರವಾಡದಲ್ಲಿದ್ದ ಸತೀಶ, ಸುಮಾ ಮತ್ತು ಮಕ್ಕಳು ಹಾಗೂ ಊರಿನಿಂದ ಅತ್ತೆ ಮಾವ ಮಧ್ಯವರ್ತಿಯಾದ ಹುಬ್ಬಳ್ಳಿಯ ಮೈದುನನ ಮನೆಗೆ ಬಂದು ಅಲ್ಲಿಂದ ಹೊರಡುವದೆಂದು ನಿಶ್ಚಯಿಸಲಾಗಿತ್ತು. ಪೂರ್ವ ನಿರ್ಧಾರದಂತೆ ಭಾಡಿಗೆಯ ಟಾಟಾ ಸುಮೋದಲ್ಲಿ ಹುಬ್ಬಳ್ಳಿಯಿಂದ ಹೊರಟು ಗೋಕರ್ಣಕ್ಕೆ ಹೋಗಿ, ಮುರುಡೇಶ್ವರ ದರ್ಶನ ಮಾಡಿಕೊಂಡು ಹಾಗೆ ಉಡುಪಿ ಮಂಗಳೂರು ಹೊರನಾಡು ಸುತ್ತಿ ಮಲೆನಾಡಿನ ಸೊಬಗನ್ನು ಸವಿಯುತ್ತ ಶೃಂಗೇರಿಯ ಶಾರದಾಂಬೆ ದರ್ಶನ ಮಾಡಿಕೊಂಡು ಮೂರನೇಯ ದಿನ ಹುಬ್ಬಳ್ಳಿಗೆ ವಾಪಸ ಬಂದು ತಲುಪಿದ್ದರು. ಗಂಡಸರು ಸೇರಿ ವಾಹನದ ಲೆಕ್ಕಾಚಾರ ತೀರಿಸುತ್ತಿದ್ದಂತೆ ಬಿಸಿ ಚಹಾ ತಯಾರಾಗಿತ್ತು. ದಣಿದ ಗಂಟಲುಗಳಿಗೆ ಚಹಾ ಇಳಿದ ನಂತರ ಎಲ್ಲರೂ ಸ್ವಲ್ಪ ಚುರುಕಾಗಿದ್ದರು. ಆಗಲೇ ಗಂಟೆ ಏಳಾಗಿತ್ತು. ಹೊರಗಡೆ ಮಬ್ಬುಗತ್ತಲೆ ಕವಿಯುತ್ತಾ ಇತ್ತು. ಆ ಕತ್ತಲೆಯಲ್ಲಿ ದಣಿದು ಹೆಣಭಾರವಾದ ಮೈ ಜೊತೆ ಲಗೆಜ್ ಮತ್ತು ಮಕ್ಕಳೊಂದಿಗೆ ಮತ್ತೆ ಧಾರವಾಡ ಬಸ್ ಹತ್ತಲು ಸುಮಳಿಗೆ ಬಹಳ ಬೆಸರವೆನಿಸಿತ್ತು.

ತಿಂಡಿ ತಿಂದು ಹಾಲು ಕುಡಿದ ಇಬ್ಬರು ಮಕ್ಕಳು ಖಚಿತವಾಗಿ ಬಸ್‍ನಲ್ಲಿಯೇ ನಿದ್ದೆ ಮಾಡುವರು, ಅವರನ್ನು ಎಬ್ಬಿಸಿ ಮನೆ ತನಕ ಒಯ್ಯುವದೇ ಒಂದು ಸರ್ಕಸ್, ಡ್ರೈವರ್‍ಗೆ ಸ್ವಲ್ಪ ಹೆಚ್ಚಿಗೆ ದುಡ್ಡು ಕೊಟ್ಟು ಮನೆತನಕ ತಲುಪಿಸಲು ಹೇಳಿದ್ದರೆ ಚನ್ನಾಗಿತ್ತು ಎನಿಸಿತ್ತು. ಆದರೆ ಗಂಡನ ಲೆಕ್ಕಾಚಾರದ ಸ್ವಭಾವವನ್ನು ಅರಿತಿದ್ದ ಸುಮ ಅವನ ಪ್ರತಿಕ್ರಿಯೆಯನ್ನು ಊಹಿಸಿಯೇ ಮಾತುಗಳನ್ನು ಗಂಟಲಿನಲ್ಲಿಯೇ ತಡೆದಳು. ಸುಮ್ಮನೇ ಏನಾದರೂ ಕೊಂಕು ಮಾತುಗಳನ್ನು ಕೇಳಿ ಮನಸ್ಸಿನ ಮುದವನ್ನು ಕಳೆದುಕೊಳ್ಳಲು ಇಷ್ಟವಾಗಲಿಲ್ಲ. ಸುಮ್ಮನೆ ನಗುತ್ತ ಎಲ್ಲರಿಗೂ ವಿದಾಯ ಹೇಳಿ ಒಂದು ಕೈಯಲ್ಲಿ ಪ್ರವಾಸದಲ್ಲಿ ಸ್ನಾನ ಮಾಡಿ ಕೊಡಿಸಿಟ್ಟ ಮೈಲಿಗೆ ಬಟ್ಟೆಗಳ ಚೀಲ ಹಾಗೂ ಇನ್ನೊಂದು ಕೈಯಲ್ಲಿ ನಡೆಯಲು ಹಟ ಮಾಡುತ್ತ ಇದ್ದ ಎರಡುವರೆ ವರ್ಷದ ಸೌರಭವನ್ನು ಎಳೆಯುತ್ತ ಗಂಡನನ್ನು ಹಿಂಬಾಲಿಸಿದ್ದಳು. ಹತ್ತಿರದಲ್ಲಿಯೇ ಇದ್ದ ಬಸ್ ಸ್ಟ್ಯಾಂಡನ್ನು ತಲುಪಿದಾಗ ಆಗಲೇ ಕತ್ತಲಾಗಿ ಬಿಟ್ಟಿತ್ತು. ಅಜ್ಜ ಅಜ್ಜಿಯ ಜೊತೆ ಇರಲು ಹಟ ಮಾಡುತ್ತಿದ್ದ ಐದು ವರ್ಷದ ಮಗಳನ್ನು ಗದರಿಸುತ್ತ ಮುಂದೆ ಹೊರಟು ಬಿಟ್ಟಿದ್ದ ಸತೀಷ, ಅವನಿಗೆ ಯಾವಾಗಲೂ ಅವಸರ. ಹೊಸದಾಗಿ ಮದುವೆಯಾದಾಗ ಪೇಟೆಗೆ ಹೋಗಲಿ, ಸಿನಿಮಾಕ್ಕೆ ಹೋಗಲಿ ತನ್ನದೇ ವೇಗದಲ್ಲಿ ಮುಂದೆ ಮುಂದೆ ಹೊರಟು ಬಿಡುತ್ತಿದ್ದ. ಅದೇನು, ಬೇರೆ ಯಾರೂ ಹೆಂಗಸರ ಜೊತೆ ಹೊದ ಹಾಗೆ ವರ್ತಿಸುತ್ತಿರಿ, ಜೊತೆಗೆ ಬರಬಾರದೇ ಎಂದು ಮುನಿಸಿಕೊಂಡಾಗ ತನ್ನ ನಡಿಗೆಯ ಪರಿಯ ಅರಿವಾಗಿ ಎರಡು ಮೂರು ಹೆಜ್ಜೆ ಜೊತೆ ಜೊತೆಯಾಗಿ ಬಂದರೆ, ನಾಲ್ಕನೇ ಹೆಜ್ಜೆ ಮತ್ತೆ ಮುಂದಿರುತ್ತಿತ್ತು.

ಕೊನೆಗೆ ಬೇಸತ್ತ ಸುಮ ತಾನೇ ಅವನ ವೇಗಕ್ಕೆ ಹೊಂದಿಕೊಂಡಿದ್ದಳು. ನಡೆಯಲು ಅನ್ನುವದಕ್ಕಿಂತ ಓಡಲು ಕಲಿತ್ತಿದ್ದಳು ಅನ್ನ ಬಹುದು. ನೆನೆದು ನಗು ಬಂತು. ಆದರೆ ಈಗ ಹೆಗಲಿಗೆ ಬಟ್ಟೆಗಳ ಚೀಲ ಹೊತ್ತು ಕೈಯಲ್ಲಿ ಮಗನನ್ನು ಎಳೆಯುತ್ತ ಗಂಡನ ಸರಿ ಸಮವಾಗಿ ನಡೆಯುವದು ಅಸಾಧ್ಯವಾಗಿತ್ತು. ಧಾರವಾಡದ ಪ್ಲಾಟ ಫಾರ್ಮ ಹತ್ತಿರ ಬಂದಾಗ ಎರಡು ಮೂರು ಬಸ್‍ಗಳು ನಿಂತಿದ್ದವು, ಎಲ್ಲಕ್ಕಿಂತ ಮುಂದೆ ನಿಂತಿದ್ದ ಬಸ್ ತೊರಿಸಿ ಮುಂದಿನ ಬಾಗಿಲಿನಿಂದ ಬಸ್ ಏರಲು ಹೇಳಿದ ಸತೀಷ ಬೇರೆ ಗಂಡಸರೊಂದಿಗೆ ಹಿಂದಿನ ಬಾಗಿಲಿನತ್ತ ನಡೆದಿದ್ದ, ಬೇಗ ಬೇಗ ಹೋಗಿ ಬಸ್ ಏರಿದ್ದಳು ಸುಮ. ಡ್ರೈವರ್ ಆಗಲೇ ಎಂಜಿನ್ ಗುರ್ ಎನ್ನಿಸಿದ್ದ, ಬಸ್ ಜನರಿಂದ ತುಂಬಿ ತುಳುಕುತ್ತಾ ಇತ್ತು. ಕೂಡಲಂತೂ ಇಲ,್ಲ ಸರಿಯಾಗಿ ನಿಲ್ಲಲೂ ಜಾಗವಿರಲಿಲ.್ಲ ಆದರೂ ಹೇಗೊ ಸಾವರಿಸಿಕೊಂಡು, ಎರಡೂ ಕಾಲು ಊರಲು ಜಾಗ ಮಾಡಿಕೊಂಡಳು. ಯಾರೂ ಮಗವನ್ನು ಎಳಿದು ತೊಡೆಯ ಮೇಲೆ ಕೂಡಿಸಿಕೊಂಡಾಗ ಕಣ್ಣುಗಳಲ್ಲಿಯೇ ಧನ್ಯವಾದ ತುಳಿಕಿಸಿ ಸಮಾಧಾನದ ಉಸಿರು ಬಿಟ್ಟಳು, ಹಿಂದಿರುಗಿ ಗಂಡನನ್ನು ಹುಡುಕುವ ಪ್ರಯತ್ನ ಮಾಡಿದಳು. ಬರಿ ಜನರ ತಲೆಗಳೇ ಕಾಣಿಸಿದವು. ಅವರಲ್ಲಿ ಗಂಡನ ತಲೆ ಯಾವುದೆಂದು ಗುರುತಿಸಲಾಗಲಿಲ್ಲ. ತನಗೆ ಬಸ್ ಎರಲು ಹೇಳಿದವರು ಹಿಂದಿನ ಬಾಗಿಲಿನಿಂದ ಬಸ್ ಹತ್ತಿರುತ್ತಾರೆ ಎಂದು ಯೋಚಿಸಿ ಹೆಗಲಿನ ಚೀಲವನ್ನು ಸಾವರಿಸಿಕೊಳ್ಳುತ್ತ ತನ್ನ ಭಂಗಿಯನ್ನು ಸುಧಾರಿಸಿಕೊಳ್ಳುವದರಲ್ಲಿ ಮಗ್ನಳಾದಳು.

ಮಿದುಳು ಹೆಚ್ಚಿಗೆ ಯೋಚಿಸುವ ಸ್ಥಿತಿಯಲ್ಲಿ ಇರಲಿಲ. ಬಸ್ ಹೊರಟಾಗಿತು.್ತ ಪ್ರತಿಸಾರಿ ಬಸ್ ನಿಂತು ಜನ ಕೆಳಗಿಳಿದಾಗ ತಿರುಗಿ ಗಂಡನನ್ನು ಹುಡುಕುವ ಪ್ರಯತ್ನ ನಡೆದಿತ್ತು. ನವಲೂರಿಗೆ ಬರುವಷ್ಟರಲ್ಲಿ ಬಸ್ ಅರ್ಧ ಖಾಲಿಯಾಗಿತ್ತು. ಆದರೂ ಗಂಡನ ಮುಖ ಕಾಣದಿದ್ದಾಗ ಆತಂಕ ಮನವನ್ನು ಆವರಿಸಿತ್ತು. ಅಕಸ್ಮಾತ್ ಅವರು ಬಸ್ ಹತ್ತಿಲ್ಲದಿದ್ದರೆ ಏನು ಗತಿ! ಅಯ್ಯೋ ದೇವರೆ! ಹತ್ತಿರ ಮೈಲಿಗೆ ಬಟ್ಟೆಗಳ ಚೀಲ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಯಾವಾಗಲೂ ಗಂಡನ ಜೊತೆಗೆ ಹೋಗುವಾಗ ಪರ್ಸ ತೆಗೆದುಕೊಂಡು ಹೋಗುವ ಅಗತ್ಯತೆ ಕಂಡಿರಲಿಲ.್ಲ ಅಥವಾ ತನ್ನ ದುಡ್ಡು ಉಳಿಸುವ ಸ್ವಾರ್ಥವೂ ಇರಬಹುದು. ನಂಬಿಗೆಯೋ ಸ್ವಾರ್ಥವೋ ಏನೊ ಒಂದು, ಈಗ ಪೇಚಿಗೆ ಇಟ್ಟುಕೊಂಡಿತ್ತು.

ಕಂಡಕ್ಟರ ಟಿಕೆಟ್ ಕೇಳಿದಾಗ ಹಿಂದೆ ನಮ್ಮ ಯಜಮಾನರು ತೆಗೆದುಕೊಂಡಿದ್ದಾರೆ ಎಂದು ಹೇಳಿಯಾಗಿತ್ತು. ಈಗ ಹೆಚ್ಚಿಗೆ ಆತಂಕ ತೊರಿಸಿದರೆ ಅವನಿಗೆ ಸಂಶಯ ಬರಬಹುದು ಎನ್ನುವ ಇನ್ನೊಂದು ಆತಂಕ. ಮಧ್ಯದಲ್ಲಿಯೇ ಇಳಿಸಿಬಿಟ್ಟರೆ ! ಧಾರವಾಡವನ್ನು ಮುಟ್ಟಿದರೆ ಸಾಕೆನ್ನಿಸಿತು. ಮನವನ್ನು ಆವರಿಸಿದ ಆತಂಕ ಮುಖದಲ್ಲಿ ಹರಡುವದನ್ನು ತಡೆಯುವದೇ ದೊಡ್ಡ ಸಮಸ್ಯೆ ಎನಿಸಿತ್ತು. ಹೇಗೊ ಜೊರಾಗಿ ಹೊಡೆದು ಕೊಳ್ಳುತ್ತಿದ್ದ ಹೃದಯವನ್ನು ಒತ್ತಿ ಹಿಡಿದು ಕಿಡಕಿಯಿಂದ ಹೊರ ನೊಡುತ್ತ ಧಾರವಾಡದ ಪರಿಚಿತ ರಸ್ತೆಗಳನ್ನು ಗುರುತಿಸಿ ನಿಟ್ಟುಸಿರಿಟ್ಟಳು. ಇನ್ನು ಪರವಾಗಿಲ್ಲ ಏನಿಸಿತು. ಆದರೆ ಯಾರಿಗೂ ಗೊತ್ತಾಗಬಾರದು ! ಧಾರವಾಡ ಹೋಟೆಲ್ ಹತ್ತಿರದ ಸ್ಟಾಪನಲ್ಲಿ ಆಚೆ ಇಚೆ ನೊಡದೇ, ಸೌರಭನನ್ನು ಎಳೆಯುತ್ತ ಬಸ್ಸಿನಿಂದ ಕೆಳಗಿಳಿದಾಗ ಬಾಯಿಗೆ ಬಂದಿದ್ದ ಹೃದಯ ತನ್ನ ಪೂರ್ವ ಸ್ಥಾನಕ್ಕೆ ಸೇರಿತ್ತು. ಬೇಗ ಬೇಗ ಆಟೋ ಕಡೆಗೆ ಹೆಜ್ಜೆ ಹಾಕಿದಳು.

ಈ ಅವಸರದ ಆವಾಂತರಕ್ಕೆ ತನ್ನನ್ನು ಬೈದುಕೊಳ್ಳಬೇಕೊ ಗಂಡನನ್ನು ಬಯ್ಯ ಬೇಕೊ ಗೊತ್ತಾಗದೇ ಯಾಂತ್ರಿಕವಾಗಿ ಅಟೊ ಏರಿ ಆಟೋದವನಿಗೆ ದುಡ್ಡು ಕೊಡಲು ಪಕ್ಕದ ಮನೆಯಲ್ಲಿದ್ದ ಮನೆ ಮಾಲಿಕರ ಬಾಗಿಲು ತಟ್ಟಬೇಕು. ಅವರು ಮಲಗಿದ್ದರೆ ಏನು ಮಾಡುವದು? ಅರ್ಜಂಟಿಗಿರಲಿ ಎಂದು ಅವರ ಮನೆಯಲ್ಲಿ ಇಟ್ಟಿರುತ್ತಿದ್ದ ಕೀಲಿಕೈ ಇದ್ದರೆ ಪರವಾಗಿಲ್ಲ, ಇಲ್ಲದಿದ್ದರೆ ಎನು ಮಾಡುವದು? ಎಂಬ ಯೋಚನಾ ಲಹರಿ ಹೊಸ ಆತಂಕಗಳನ್ನು ಹುಟ್ಟಿಸತೊಡಗಿತ್ತು. ಆಟೋ ಮನೆಯ ದಾರಿಯಲ್ಲಿ ಸಾಗಿದಂತೆ ತಿಳಿಯಾದ ಮನಸ್ಸು ಏನಾಗಿರಬಹುದು ಎಂದು ಕಾರಣ ಹುಡುಕಲು ಹೊರಟಿತ್ತು. ಗಂಡನಿಗೆ ಬಸ್‍ನಲ್ಲಿ ಜಾಗ ಸಿಕ್ಕಿರಲಿಕ್ಕಿಲ್ಲವೇ? ಹಾಗಿದ್ದಲ್ಲಿ ಮುಂದೆ ಬಂದು ತನಗೆ ಯಾಕೆ ಹೇಳಲಿಲ್ಲ? ಅವರು ಬಸ್ ಹತ್ತುವ ಮೊದಲೇ ಬಸ್ ಬಿಟ್ಟ ಸಾಧ್ಯತೆ ಇರಲಿಲ್ಲ. ಯಾಕೆಂದರೆ ತನಗೆ ನೆನಪಿದ್ದ ಮಟ್ಟಿಗೆ ತಾನು ಹತ್ತಿದ ಸುಮಾರು ನಿಮಿಷಗಳ ನಂತರ ಬಸ್ ಹೊರಟಿತ್ತು ಎನ್ನುವ ಯೋಚನಾ ಸರಣಿಯನ್ನು ಡ್ರೈವರನ ಪ್ರಶ್ನೆ ತುಂಡಾಗಿಸಿತು.

ವಿಳಾಸ ಕೇಳುವ ಅವನಿಗೆ ಮನೆಯ ವಿಳಾಸ ತಿಳಿಸಿ ಮಲಗುತ್ತಿದ್ದ ಮಗನನ್ನು ಮನೆ ಬಂದಿತು ಎಳು ಎಂದು ಎಬ್ಬಿಸಿ ಕೂರಿಸಿದಳು. ಯೋಚನೆಗಳಿಗೆ ವಿರಾಮವಿಟ್ಟು ಆಟೋ ಡ್ರೈವರ್‍ಗೆ ಮನೆ ದಾರಿ ತೋರಿಸುತ್ತ ಮನೆ ಹತ್ತಿರ ಬಂದಾಗ ಮಾಲಿಕರ ಮನೆಯಲ್ಲಿ ದೀಪ ಉರಿಯುತ್ತಿದ್ದದನ್ನು ನೋಡಿ ಮನಸ್ಸಿಗೆ ನಿರಾಳವೆÉನಿಸಿತ್ತು. ಬೇಗ ಬೇಗ ಇಳಿದು ಬೆಲ್ಲ ಒತ್ತಿದಾಗ ಬಾಗಿಲ ತೆಗೆದ ಅವರು ಈಗ ಬಂದಿರಾ? ಎಂದು ಕುಶಲೋಪರಿ ಪ್ರಾರಂಭಿಸುವ ಮೊದಲೇ ಅವರಿಂದ ದುಡ್ಡು ಪಡೆದು ಅಟೋ ವಾಪಸ ಕಳುಹಿಸಿ ನಂತರ ಅವರ ಪ್ರಶ್ನೆಗಳಿಗೆ ಉತ್ತರಿÀಸಲು ಸಿದ್ದಳಾದಳು. ಒಬ್ಬಳೇ ಚೀಲ ಹಿಡಿದು ಇಳಿದ ಅವಳನ್ನು ನೋಡಿ ಮನೆಯ ಎಲ್ಲ ಸದಸ್ಯರೂ ಕುತೂಹಲದಿಂದ ಒಬ್ಬಬ್ಬರಾಗಿ ಬಂದು ಸುತ್ತುವರಿದರು.ಅವರಿಗೆಲ್ಲ ನಡೆದ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸಿದಳು. ತೂಕಡಿಸುತ್ತಿದ್ದ ಸೌರಭ ಮಂಚವೇರಿ ನಿದ್ರಿಸಿಬಿಟ್ಟ. ನಾಲ್ಕು ದಿನ ಬೀಗಹಾಕಿಟ್ಟ ಮನೆಯನ್ನು ಸ್ವಚ್ಛಗೊಳಿಸುವದರಲ್ಲಿ ನಿರತಳಾದ ಸುಮಾ ಗಂಡನನ್ನು ಮರೆತು ಬಿಟ್ಟಳು.

ಒಂದು ಕೈಯಲ್ಲಿ ಐರ್ ಬ್ಯಾಗ ಮತ್ತು ಇನ್ನೊಂದು ಕೈಯಲ್ಲಿ ಶೃತಿಯನ್ನು ಹಿಡಿದು ಸತೀಶ್ ಧಾರವಾಡ ಪ್ಲಾಟಫಾರಂ ತಲುಸಿದಾಗ ಬಸ್ಸು ತಯಾರಾಗಿ ನಿಂತಿತ್ತು. ಸುಮಾಳಿಗೆ ಬಸ್ ಎರಲು ಹೇಳಿ ಹಿಂದಿನ ಬಾಗಿಲಿನಿಂದ ಗುಂಪಿನಲ್ಲಿ ನುಸುಳಿ ಬಸ್ ಹತ್ತಲು ಪ್ರಯತ್ನಿಸುತ್ತಿದ್ದಾಗ. ಪಕ್ಕದಲ್ಲಿ ನಿಂತಿದ್ದ ಏಕ್ಸಪ್ರೆಸ್ ಬಸ್ ಕಡೆಗೆ ಗಮನ ಹರಿವಿತ್ತು. ಬೇಗನೆ ಧಾರವಾಡ ಸೇರುವ ತವಕದಲ್ಲಿ ಸುಮಾ ಸುಮಾ ಎಂದು ಹೆಂಡತಿಯನ್ನು ಕೂಗಿ ಬೇಗ ಬೇಗ ಹೋಗಿ ಬಸ್‍ನ್ನು ಹತ್ತಿದಾಗ ಖಾಲಿಯಿದ್ದ ಸೀಟ ನೋಡಿ ನಿರಾಳವಾಗಿ ಕುಳಿತುಹೋಗಬಹುದು ಎಂದು ಯೋಚಿಸುತ್ತ ತನ್ನ ಏರ್‍ಬ್ಯಾಗ ಇಟ್ಟು ಮಗಳನ್ನು ಕುಳಿತುಕೊಳ್ಳಲು ಹೇಳಿ. ಸುಮಾಳಿಗಾಗಿ ಬಾಗಿಲ ಕಡೆ ನೋಡಿದೆ. ಅವಳು ಕಾಣದಿದ್ದಾಗ ಬಾಗಿಲ ಕಡೆಗೆ ಬಂದು ನೋಡಿದರೆ ಅವಳ ಪತ್ತೆಯೇ ಇಲ್ಲ. ಆ ಗಡಿಬಿಡಿಯಲ್ಲಿ ಮುಂದೆ ಚಲಿಸಿದ ಇನ್ನೊಂದು ಬಸ್ ಅವನು ಗಮನಿಸಲಿಲ.್ಲ ಎಲ್ಲಿ ಹೋದಳು ಇವಳು ಎಂದುಕೊಳ್ಳುತ್ತ ಬಸ್ ಇಳಿದು ಒಂದು ಸುತ್ತು ಹಾಕಿದರೂ ಹೆಂಡತಿ ಮಗನ ಸುಳಿವೇ ಇಲ್ಲ.

ಡ್ರೈವರ್ ಬಂದು,ಬಸ್ ಹೊರಟುನಿಂತಾಗ ಎನು ಮಾಡಲು ತೋಚದೇ ಬ್ಯಾಗನೊಂದಿಗೆ ಶೃತಿಯನ್ನು ಇಳಿಸಿಕೊಂಡು ತನ್ನ ಹುಡುಕಾಟ ಮುಂದುವರಿಸಿದ. ಮಗನಿಗೆ ಬಿಸ್ಕತ್ತು ಕೊಡಿಸಲು ಅಂಗಡಿಗೆ ಹೋಗಿರಬಹುದೇ? ಯಾರಾದರೂ ಸಿಕ್ಕು ಮಾತನಾಡುತ್ತ ನಿಂತಿರ ಬಹುದೇ? ಮಾತನಾಡುತ್ತ ನಿಂತರೇ ಜಗತ್ತನೇ ಮರೆಯುವ ಸ್ವಭಾವದವಳು. ಎಷ್ಟು ಸಾರಿ ಹಾಲು ಉಕ್ಕಿಸಿಲ್ಲ? ಅನ್ನ ಹೊತ್ತಿಸಿಲ್ಲ ? ಆದರೆ ಬಸ್ ಸ್ಟ್ಯಾಂಡಿನಲ್ಲಿ ಈ ರೀತಿ ವರ್ತಿಸುವದೇ !! ಸ್ವಲ್ಪ ಜವಾಬ್ದಾರಿ ಬೇಡವೇ!! ಕೊಪದ ಸೂಚ್ಯಾಂಕ ಎರತೊಡಗಿತ್ತು, ಹುಡುಕಾಟ ಫಲ ನೀಡದಿದ್ದಾಗ ಯೋಚನೆ ಬೇರೆ ದಿಕ್ಕಿಗೆ ಹೊರಳಿತು. ಎನಾಗಿರಬಹುದು? ಸಿಟ್ಟಿನಲ್ಲಿ ಬೇರೆ ಯಾವುದಾದರೂ ಬಸ್ ಹಿಡಿದು ಹೋಗಿರಬಹುದೇ? ಸಿಟ್ಟು ಬರುವಂಥ ಯಾವುದೇ ಘಟನೆ ನೆನಪಿಗೆ ಬರಲಿಲ್ಲ. ಮದುವೆಯಾದ ಹೊಸದರಲ್ಲಿ ಯಾವುದೊ ಸಣ್ಣ ವಿಷಯಕ್ಕೆ ಸಿಟ್ಟು ಬಂದು ಏನೂ ಹೇಳದೆ ಎದ್ದು ಬಸ್‍ಸ್ಟ್ಯಾಂಡಿಗೆ ಬಂದು, ತವರಿನ ಬಸ್ ಹತ್ತಿ ಕುಳಿತಿದ್ದು ನೆನಪಾಗಿ ಎದೆÉ ಹೊಡೆದು ಕೊಳ್ಳತೊಡಗಿತು. ಅದು ಬಹಳ ಹಿಂದಿನ ಮಾತಾದರೂ ಕೆಂಗೆಟ್ಟ ಮನಸ್ಸು ಎನೇಲ್ಲ ಯೊಚನೆಯಲ್ಲಿ ತೊಡಗಿ ಏನು ಮಾಡಲು ತೊಚದಾಯಿತು. ತನ್ನನ್ನು ಕಾಣದೇ ವಾಪಸ್ ಮನೆಗೆ ಹೋಗಿರಬಹುದು ಎನಿಸಿದಾಗ ಸ್ವಲ್ಪ ಸಮಾಧಾನವಾಗಿ ತಕ್ಷಣ ಅಟೋ ಹಿಡಿದು ಮನೆಗೆ ಹೋಗಿ ನೋಡಿದಾಗ, ಅಲ್ಲಿಯೂ ಇಲ್ಲ ! ಪ್ರವಾಸದ ದಣಿವನ್ನು ಆರಿಸಿಕೊಳ್ಳುತ್ತಿದ್ದವರೆಲ್ಲ ಎದ್ದು ಕುಳಿತರು. ಸಲಹೆಗಳ ಸುರಿಮಳೆ ಶುರು ಆಯಿತು. ಯಾರೋ ಬೇರೆ ಬಸ್ ಹಿಡಿದು ಧಾರವಾಡಕ್ಕೆ ಹೋಗಿರಬಹುದು ಎಂದಿದ್ದು ಕೇಳಿಸಿತು. ಅರೇ ನನಗೆ ಯಾಕೆ ಈ ಯೋಚನೆ ಬರಲಿಲ್ಲ ಎನಿಸಿ ವಾಪಸ ಹೊರಟಾಗ ಆ ಘಾಬರಿಯಲ್ಲಿ ಅಳುತ್ತಿದ್ದ ಶೃತಿಯ ನೆನಪಾಯಿತು. ಮಗನ ಗಲಿಬಿಲಿಯನ್ನು ನೋಡಿದ ತಾಯಿ ಶೃತಿ ಯನ್ನು ತಮ್ಮ ಹತ್ತಿರ ಇಟ್ಟುಕೊಂಡಾಗ ಹೆಚ್ಚು ಯೋಚನೆ ಮಾಡದೇ ತಮ್ಮನೊಂದಿಗೆ ಮನೆ ಹತ್ತಿರದ ಟ್ಯಾಕ್ಸಿ ಸ್ಟಾಂಡಿನಿಂದ ಧಾರವಾಡಕ್ಕೆ ಹೊರಟ ಸತೀಷನ ತಲೆ ಗೊಂದಲದ ಗೂಡಾಗಿತ್ತು.

ತನ್ನ ಹಿಂದೆಯೇ ಇದ್ದ ಸುಮಾ ಕ್ಷಣಮಾತ್ರದಲ್ಲಿ ಎಲ್ಲಿ ಮಾಯವಾದಳು, ಯಾರಾದರೂ ಮಗುವಿನೊಂದಿಗೆ ಕಿಡನ್ಯಾಪ್ ಮಾಡಿರಬಹುದೇ? ಅಥವಾ ಮಗು ಕಳೆದು, ಅವನನ್ನು ಹುಡುಕುತ್ತ ಅಲಿಯುತ್ತಿರಬಹುÀದೇ? ಎನಾಗಿರಬಹುದು? ದೇವರೇ ಎನೂ ತೊಂದರೆಯಾಗದೇ ಧಾರವಾಡ ಮುಟ್ಟಿದರೆ ಸಾಕು ತಿರುಪತಿಗೆ ಹೋಗಿ ಮುಡಿಕೊಟ್ಟು ಬರುವೆ, ಮನಸ್ಸಿನಲ್ಲೆ ಹರಕೆ ಹೊತ್ತಿದ್ದು ಆಯ್ತು. ತನ್ನ ಅವಸರಕ್ಕೆ ಸುಮಾ ಯಾವಾಗಲೂ ಮುನಿಸಿಕೊಳ್ಳುತ್ತಿದ್ದುದು ನೆನಪಾಗಿ ಇನ್ನು ಯವತ್ತೂ ಎಲ್ಲಿಹೋದರೂ ಕೈ ಹಿಡಿದುಕೊಂಡೆ ಹೋಗುತ್ತೇನೆ. ಇವತ್ತು ಎನೂ ಅನಾಹುತ ಆಗಿಲ್ಲದಿದ್ದರೆ ಸಾಕು. ಯೋಚನೆಗಳ ಸರಣಿ ಹರಿದಿತು.್ತ ಇವನ ಮನಸ್ಥಿತಿಯನ್ನು ಅರಿತ ತಮ್ಮ ಗಿರೀಷ ತಾನೇ ಡ್ರೈವರಿಗೆ ಸೂಚನೆಗಳನ್ನು ನೀಡುತ್ತ ಟ್ಯಾಕ್ಸಿ ಮನೆಯ ಎದುರಿಗೆ ನಿಂತಾಗ ಮನೆಯಲ್ಲಿ ಉರಿಯುತ್ತಿದ್ದ ದೀಪವನ್ನು ನೋಡಿ ಎದೆಯ ತಳವಳ ನಿಂತು ನಿರಾಳವಾಗಿತ್ತು.

ಬೇಗ ಬೇಗ ಟಾಕ್ಸಿ ಇಳಿದು ಕಂಪೌಂಡ ಬಾಗಿಲು ತೆಗೆಯುವಾಗ ಕಂಡಿದ್ದು ಸುಮಾ ಒಗೆದ ಬಟ್ಟೆಯನ್ನು ಒಣಗಲು ಹರಡುತ್ತಾ ಇರುವುದು. ತನ್ನನ್ನು ಬಸ್ಸಿನಲ್ಲಿ ಕಳುಹಿಸಿ ತಾನು ಟಾಕ್ಸಿಯಲ್ಲಿ ಮೈದುನನ ಜೊತೆ ಬಂದ ಗಂಡನನ್ನು ಕಂಡು ಸುಮಾ ಗಲಿಬಿಲಿ ಗೊಂಡಳು. ಒಳಗೆ ಬಂದ ಸತೀಷ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದ.್ದ ಅವನಿಗೆ ಉತ್ತರಿಸುತ್ತ ನಡೆದ ಪ್ರಸಂಗದ ನಿಜ ಸ್ವರೂಪ ತಿಳಿಯವಷ್ಟರಲ್ಲಿ ಶೃತಿ ಗಂಡನ ಜೊತೆಗೆ ಇಲ್ಲದ್ದು ಗಮನಕ್ಕೆ ಬಂದಿತ್ತು. ಸುಮ್ಮನೇ ಘಾಬರಿಯಾಗಿ ಇಷ್ಟು ಗೊಂದಲ ಹಿಡಿಸಿದ್ದ ಗಂಡನ ಅವಸರಕ್ಕೆ ನಗಬೇಕೊ ಅಳಬೇಕೊ ತಿಳಿಯದಾಯಿತು. ಸತೀಷ ಮತ್ತೆ ಅದೇ ಟ್ಯಾಕ್ಸಿಯಲ್ಲಿಯೇ ವಾಪಸ ಹೋಗಿ ಮಗಳನ್ನು ಕರೆದುಕೊಂಡು ಬಂದಾಗ ಘಂಟೆ ಹನ್ನೊಂದಾಗಿತ್ತು. ಲೆಕ್ಕಾಚಾರದ ಗಂಡನ ಜೇಬಿನಿಂದ ಟ್ಯಾಕ್ಸಿಗೆ ಎರಡು ಪಟ್ಟು ಹಣ ಹೋಗಿದ್ದಲ್ಲದೇ ಎನೇಲ್ಲ ಗೊಂದಲ, ಮಾನಸಿಕ ಒತ್ತಡ ಅನುಭವಿಸಬೇಕಾಯ್ತು. ಬಹುದಿನದ ಕನಸಾದ ಪ್ರವಾಸದ ಮಧುರ ನೆನಪುಗಳ ಜೊತೆಗೆ ಉಪ್ಪಿನ ಕಾಯಿಯಂತೆ, ಆತಂಕದ ಈ ಪ್ರಸಂಗ ಸೇರಿ ಪ್ರವಾಸದ ಅನುಭವವನ್ನು ಮರೆಯಲಾಗದಂತೆ ಮಾಡಿತು.


-ರಾಜನಂದ ಘಾರ್ಗಿ, ಬೆಳಗಾವಿ

Don`t copy text!