ಹಿರೆ ಕಡಬೂರಿನಲ್ಲಿ ಶಾಸನ ಶಿಲ್ಪಗಳು ಪತ್ತೆ

ಹಿರೆ ಕಡಬೂರಿನಲ್ಲಿ ಶಾಸನ ಶಿಲ್ಪಗಳು ಪತ್ತೆ

ಮಸ್ಕಿ ತಾಲೂಕಿನ ಹಿರೇಕಡಬೂರಿನಲ್ಲಿ ಒಟ್ಟು ನಾಲ್ಕು ಅಪ್ರಕಟಿತ ಶಾಸನಗಳು, ವೀರಗಲ್ಲುಗಳು, ಗಣೇಶ,ಈಶ್ವರ, ನಂದಿ,ನಾಗವಿಗ್ರಹಗಳು ಮತ್ತು ಕ್ರಿ.ಶ.11-12 ನೇ ಶತಮಾನಕ್ಕೆ ಸೇರಿದ ದೇವಾಲಯದ ಅವಶೇಷಗಳಾದ ನವರಂಗದ ಸ್ತಂಭಗಳು ಹಾಗೂ ಬಿತ್ತಿಯ ಚಪ್ಪಡಿ ಕಲ್ಲುಗಳು ಮೊದಲಾದ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ಯವರು ಪತ್ತೆಮಾಡಿದ್ದಾರೆ. ಈ ಗ್ರಾಮದಲ್ಲಿ ಬಸವಣ್ಣ, ಹನುಮಂತ ದುರುಗಮ್ಮ,ತಾಯಮ್ಮ,ನಿರುಪಾದೆಯ್ಯತಾತ ಮೊದಲಾದ ದೇವಾಲಯಗಳಿವೆ. ಗ್ರಾಮದ ತಾಯಮ್ಮ ದೇವಾಲಯದಲ್ಲಿ ಒಂದು ಅಪ್ರಕಟಿತ ಶಾಸನ ಸಂಪೂರ್ಣ ಸವೆದು ಹೋಗಿದ್ದರೆ, ಚಿಕ್ಕಕಡಬೂರು ದಾರಿ(ರಸ್ತೆ) ಯಲ್ಲಿನ ತಿಪ್ಪೆಗುಂಡಿಯಲ್ಲಿ ಒಂದು ಕಪ್ಪು ಶಿಲೆಯ ಶಾಸನ ಮತ್ತು ವೀರಗಲ್ಲು ಶಿಲ್ಪಗಳು ಹೂತು ಹೋಗಿವೆ. ಇಲ್ಲಿನ ಈರಣ್ಣ ಕಟ್ಟೆಯಲ್ಲಿ ತಲಾ ಒಂದೊಂದು ವೀರಗಲ್ಲು, ನಂದಿವಿಗ್ರಹ, ಗಜಲಕ್ಷ್ಮಿ ಶಿಲ್ಪಗಳಿವೆ. ಹಾಗೆಯೇ ಗ್ರಾಮದ ಮಾರುತಿ ದೇವಾಲಯದ ಮುಂದೆ ಎರಡು ಅಪ್ರಕಟಿತ ಶಾಸನಗಳಿವೆ. ಇವುಗಳಲ್ಲಿ ಒಂದು ಕೆಂಪು ಕಣಶಿಲೆಯ ಶಾಸನವು ಕ್ರಿ.ಶ.11 ನೇ ಶತಮಾನಕ್ಕೆ ಸೇರುತ್ತಿದ್ದು, ನಾಲ್ಕೂವರೆ ಅಡಿಎತ್ತರ, ಒಂದೂವರೆ ಅಡಿ ಅಗಲವಿದೆ. ಇದು ಎರಡು ಬದಿಗಳಲ್ಲಿ ಬರೆಯಲ್ಪಟ್ಟಿದ್ದು, ಒಟ್ಟು 29 ಸಾಲುಗಳಿಂದ ರಚಿತಗೊಂಡಿದೆ.ಇದರಲ್ಲಿ ಕಲ್ಯಾಣ ಚಾಳುಕ್ಯ ವಂಶದ ಚಕ್ರವರ್ತಿ ಇಮ್ಮಡಿ ಜಯಸಿಂಹ (ಕ್ರಿ.ಶ.1015-1044) ನನ್ನು ಜಗದೇಕಮಲ್ಲ ನೆಂಬ ಬಿರುದಿನಿಂದ ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ದತ್ತಿ ನೀಡಿದ ಹಲವು ವಿಷಯಗಳೊಂದಿಗೆ,ಶಾಸನದ ಕೊನೆಯ ಭಾಗದಲ್ಲಿ ಎರಡು ಗೋವುಗಳ ಚಿತ್ರಗಳನ್ನು ಖಂಡರಿಸುವುದರೊಂದಿಗೆ ಅಂದಿನ ದಿನಗಳಲ್ಲಿ ಅರಸನು ಗೋದಾನ ನೀಡಿದುದನ್ನು ಸೂಚಿಸುತ್ತದೆ. ಹಿರೆಕಡಬೂರು ಗ್ರಾಮದೊಂದಿಗೆ ಜಯಸಿಂಹನು ಮಸ್ಕಿಯ ನೆಲೆವೀಡಿನಿಂದ ಕೆಲವು ಕಾಲ ರಾಜ್ಯಭಾರ ಮಾಡಿದ ಬಗ್ಗೆ ರಾಯಚೂರು ಜಿಲ್ಲೆಯ ಇನ್ನಿತರ ಪ್ರಕಟಿತ ಶಾಸನಗಳಿಂದ ತಿಳಿದುಬರುತ್ತದೆ.
ಮಾರುತಿ ಮಂದಿರದ ಮುಂಬದಿಯಲ್ಲಿರುವ ಇನ್ನೊಂದು ಶಾಸನವು ಕ್ರಿ.ಶ.13 ನೇ ಶತಮಾನಕ್ಕೆ ಸೇರುತ್ತದೆ.ಇದು ನಾಲ್ಕೂವರೆ ಅಡಿ ಎತ್ತರ, ಎರಡೂವರೆ ಅಡಿ ಅಗಲವಿದೆ. ಈ ಶಾಸನವು ಹದಿನೈದು ಸಾಲುಗಳಿಂದ ರಚಿತಗೊಂಡ್ಡಿದ್ದು, ಯಾದವ (ಸೇವುಣ) ವಂಶದ ಕೊನೆಯ ಚಕ್ರವರ್ತಿ ವೀರ ರಾಮಚಂದ್ರದೇವ (ಕ್ರಿ.ಶ.1271-1312) ನನ್ನು ಯಾದವ ನಾರಯಣ ಪ್ರತಾಪ ಚಕ್ರವರ್ತಿತೆಂದೇ ಉಲ್ಲೇಖಿಸುತ್ತದೆ. ಈತನು ಅಂದಿನ ದಿನಗಳಲ್ಲಿ ಬಹುವಿಸ್ತಾರವಾದ ಭೂಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದನು. ಈ ಸಮಯದಲ್ಲಿ ರಾಯಚೂರು ಜಿಲ್ಲೆಯ ಭೂ ಪ್ರದೇಶವು ಕೂಡ ಈತನ ನೇರ ಆಡಳಿತಕ್ಕೆ ಒಳಪಟ್ಟಿತ್ತೆಂಬ ಮಾಹಿತಿಯು ಈ ಶಾಸನದಲ್ಲಿದೆ.

ಈ ಮೇಲಿನ ಶಾಸನ ಶಿಲ್ಪಗಳ ಕ್ಷೇತ್ರ ಕಾರ್ಯದಲ್ಲಿ ಸ್ಥಳೀಯರಾದ ಬಸನಗೌಡ ಮಾಲಿಪಾಟೀಲ, ಚನ್ನಬಸವನಗೌಡ, ಶಿವನಗೌಡ, ಶಿವಶರಣಪ್ಪ, ಶಿವಬಸವನಗೌಡ, ಅಮರೇಶ, ರಾಜಪ್ಪ, ನಾಗಪ್ಪನವರೊಂದಿಗೆ, ಶ್ರೀಕಾಂತ ಚಿಕ್ಕಕಡಬೂರು, ಅಶೋಕನಾಯಕ ದಿದ್ದಿಗಿ, ಪರಪ್ಪ ಬಂಡಾರಿ ಹಂಚಿನಾಳ ಉದಯಕುಮಾರ ಅಮೀನಗಢ, ನರಸನಗೌಡ ಮ್ಯಾದರನಾಳ ಮೊದಲಾದವರು ನೆರವಾಗಿದ್ದರೆಂದು ಸಂಶೋದಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿಯವರು e – ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.

Don`t copy text!