ಪುಸ್ತಕ ಪರಿಚಯ
“ಅರಿವಿನ ಹರಿವು”
– ಸಣ್ಣ ಕಥೆಗಳು
ಕೃತಿ ಕರ್ತೃ :- ಅನೀಶ್ ಬಿ ಕೊಪ್ಪ
“ಬದುಕಿನ ಮೌಲ್ಯಗಳನ್ನು ಜಪಿಸುವ ಅರಿವಿನ ಹರಿವು”
ಸಣ್ಣ ಕಥೆಗಳನ್ನು ಬರೆಯಬೇಕೆಂದರೆ ವಿಶೇಷವಾಗಿ ಉತ್ತಮ ಸಾಹಿತ್ಯ ರಚನಾ ಕೌಶಲ ಇರಬೇಕು. ಒಂದು ವಿಷಯ ವಸ್ತುವನ್ನು ಆಯ್ದು ಅದಕ್ಕೆ ಒಂದು ಸೂಕ್ತವಾದ ಅಂತ್ಯವನ್ನು ಕೆಲವೇ ಪದಗಳಲ್ಲಿ ಕೊಡಬೇಕಾದರೆ, ಆ ಕಥೆಗಾರರಿಗೆ ಪದಗಳ ಹಿಡಿತ ಖಂಡಿತವಾಗಿಯೂ ಇರಬೇಕು. ವಿಸ್ತಾರವಾಗಿ ಪದ ಪೋಣಿಸುತ್ತಾ ಸರಳವಾಗಿ ಕಥೆ ಕಟ್ಟಿ ಬಿಡಬಹುದು, ಆದರೆ ಪುಟ್ಟದಾಗಿ ಚೊಕ್ಕವಾಗಿ ಅರ್ಥಪೂರ್ಣ ಕಥೆಯನ್ನು ರಚಿಸಲು ನಿಪುಣತೆ ಬೇಕು… ಅದು ಅನೇಕ ದಿಗ್ಗಜ ಸಾಹಿತಿಗಳಿಗೂ ಕಷ್ಟವಾಗುತ್ತದೆ. ಅಂತಹದ್ದರಲ್ಲಿ ಇಲ್ಲೊಬ್ಬ ಪುಟ್ಟ ಪೋರ, ಬಾಲ ಸಾಹಿತಿ “ಅನೀಶ್ ಬಿ ಕೊಪ್ಪ” ಅವರು ಸುಮಾರು 25 ಮಹತ್ವಾಂಶವುಳ್ಳ, ವಿಶೇಷ ಕಥಾವಸ್ತುಗಳನ್ನೊಳಗೊಂಡ ಮೌಲ್ಯಯುತ ಕಥೆಗಳನ್ನು, “ಅರಿವಿನ ಹರಿವು” ಎಂಬ ಸಣ್ಣ ಕಥೆಗಳ ಸಂಕಲನದಲ್ಲಿ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ.
ಸಾಹಿತ್ಯ ಲೋಕಕ್ಕೆ ಒಂದು ಉತ್ತಮ ಭವಿಷ್ಯವಾಗಿ ಅನೀಶ್ ಬಿ ಕೊಪ್ಪ ರೂಪತಾಳಿದ್ದಾರೆಂಬುದು ಹೆಮ್ಮೆಯ ವಿಷಯ. ಉತ್ತಮ ನಿರೂಪಣಾ ಶೈಲಿಯೊಂದಿಗೆ ಕಥೆಗಳನ್ನು ಹೆಣೆದಿದ್ದು; ವಿಶ್ವಾಸಪೂರ್ಣ ಕಥೆಗಳು ಈ ಕೃತಿಯಲ್ಲಿ ಓದಲು ಸಿಗುತ್ತವೆ. ಅನೇಕ ಸಾಮಾಜಿಕ ಕಳಕಳಿ, ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಆದರ್ಶಗಳನ್ನು ತಮ್ಮ ಕಥೆಯಿಂದ ಓದುಗರಿಗೆ ತಿಳಿಸಿಕೊಡುತ್ತಾರೆ, ಅನೀಶ್ ಬಿ ಕೊಪ್ಪ ಅವರು.
“ಅರಿವಿನ ಹರಿವು” ವ್ಹಾ! ಎಂತಹ ಅರ್ಥಗರ್ಭಿತ ಶೀರ್ಷಿಕೆ. ನಮ್ಮೊಳಗಿನ ಅರಿವನ್ನು ಹರಿಯ ಬಿಟ್ಟಾಗಲೇ ಅದು ಪಕ್ವವಾಗುತ್ತದೆ. ಅದಕ್ಕೆ ಪೂರಕವಾಗಿ ಮೌಲ್ಯಯುತ ಮಾರ್ಗವನ್ನು ಸೃಷ್ಟಿಸಿಕೊಟ್ಟರೆ? ಹೌದು, ಆಗ ಪರಿಪೂರ್ಣ ಅರಿವು ನಮ್ಮದಾಗುತ್ತದೆ. ಇಂತಹ ಉತ್ಕೃಷ್ಟ ಚಿಂತನೆ ಬಾಲ್ಯದಲ್ಲಿಯೇ ತನ್ನದಾಗಿಸಿಕೊಂಡ ಅನೀಶ್; ನಿಜಕ್ಕೂ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಈ ಸಣ್ಣ ಕಥಾ ಸಂಕಲನವನ್ನು ಮಕ್ಕಳ ಕಥಾ ಸಂಕಲನ ಎಂದರೂ ತಪ್ಪಾಗಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ.
ಮೊದಲ ಕಥೆ “ಮಾಯಾ ಮಳೆ”ಯಲ್ಲಿಯೇ ಊಹಿಸಲಾರದ ಅಂತ್ಯವನ್ನು ಓದುಗರಿಗೆ ನೀಡಿ… ಹೀಗಾ !! ಇಲ್ಲಿಯವರೆಗೂ ಓದಿದ್ದೆಲ್ಲಾ ಕಥಾ ನಾಯಕನ ಕನಸಾ!!ಎಂದು ಆಶ್ಚರ್ಯ ಪಡುವಂತೆ ಮಾಡುತ್ತಾರೆ…
ಸ್ನೇಹಕ್ಕೆ ಮಿಗಿಲಾದ ಬಾಂಧವ್ಯವಿಲ್ಲ, ಸ್ನೇಹದಲ್ಲಿ ಎಂದಿಗೂ ನಾನು ಹೆಚ್ಚು, ನಾನು ಶ್ರೇಷ್ಠ ಎಂಬ ಅಹಂಕಾರ ಸುಳಿಯಬಾರದು. ಒಂದು ವೇಳೆ ಅಹಂಕಾರ ಪಟ್ಟರೆ ಯಾವ ಗತಿ ಬರುತ್ತದೆ ಎಂದು, ಆನೆ, ಮೊಲ, ಜಿಂಕೆಯನ್ನು ಬಳಸಿ “ಜಿಂಕೆಯ ಜಂಭ ಅಳಿದ ಮೇಲೆ” ಕಥೆಯಲ್ಲಿ ತಿಳಿಸಿ, ಉತ್ತಮವಾಗಿ ಮತ್ತು ಉಪಾಯವಾಗಿ ನಮ್ಮಲ್ಲಿರುವ ಅಹಂ ಅನ್ನು ತಾಕಿ ತಿಳಿಗೊಳಿಸುತ್ತಾರೆ.
ಬಾಲ್ಯದಲ್ಲಿ ನಾವು ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೊಡುತ್ತೇವೆಯೋ, ಅದೇ ರೀತಿ ಅವರು ಬೆಳೆಯುತ್ತಾರೆ ಇದಕ್ಕೆ ಉದಾಹರಣೆಯಾಗಿ ನಾವು ಎರಡು ಗಿಳಿಗಳ ಕಥೆ ಕೇಳಿದ್ದೇವೆ. ಇಲ್ಲಿ ಕೃತಿಕಾರರು “ಕಳ್ಳತನ ಬಿಟ್ಟ ವೀರಪ್ಪ” ಎಂಬ ಕಥೆಯಲ್ಲಿ ವೀರಪ್ಪ ಎಂಬಾತ ಬಾಲ್ಯದಲ್ಲಿ ತಾಯಿಯಿಂದ ದೂರವಾಗಿ, ಕಳ್ಳರ ಕೈಗೆ ಸಿಕ್ಕು, ಅದೇ ವೃತ್ತಿಯನ್ನು ಕಲಿತು, ದೊಡ್ಡವನಾದ ಮೇಲೆ ಒಂದು ಮನೆಗೇ ಕಳ್ಳತನಕ್ಕೆ ನುಗ್ಗುತ್ತಾನೆ. ನಂತರ ಮನೆಯಲ್ಲಿರುವ ಮುದುಕಿಯೇ ತನ್ನ ತಾಯಿ ಎಂದು ತಿಳಿದು ಹೊರಹೋಗುತ್ತಾನೆ. ನಂತರ ತಾನು ಮಾಡುತ್ತಿರುವ ಕಾರ್ಯ ತಪ್ಪು ಎಂದು ಅದನ್ನು ತ್ಯಜಿಸಿ ಉತ್ತಮ ನಾಗರೀಕನಾಗಿ ಬದಲಾಗುತ್ತಾನೆ. ತನ್ನ ತಾಯಿಯ ಮಡಿಲಲ್ಲಿ ಮತ್ತೆ ಮಗುವಾಗುತ್ತಾನೆ. ಈ ವಿಷಯವನ್ನು ಅನೀಶ್ ಅವರು ಬಹಳ ಸೊಗಸಾಗಿ ನಿರೂಪಿಸಿದ್ದಾರೆ.
ದುರಾಸೆಗೆ ಬಿದ್ದ ರಾಜ ರೈತನಿಗೆ ಸಿಕ್ಕ ಮಾಯಾ ಹಂಡೆಯನ್ನು ಒತ್ತಾಯದಿಂದ ಕಿತ್ತುಕೊಂಡು ಅರಮನೆಗೆ ಸಾಗಿಸುತ್ತಾನೆ. ಆ ಹಂಡೆಯೋ, ಒಂದು ಕಾಳು ಧಾನ್ಯ ಅದರೊಳಕ್ಕೆ ಹಾಕಿದರೆ ಅಕ್ಷಯ ಮಾಡಿ ತುಂಬಿಕೊಂಡು ಪೂರ್ಣವಾಗುತ್ತಿತ್ತು. ಇದನ್ನರಿತ ರಾಜ ಆ ಹಂಡೆಯೊಳಗೆ ಬಗ್ಗಿ ನೋಡಲು ಹೋಗಿ ತಾನೇ ಬಿದ್ದುಬಿಡುತ್ತಾನೆ. ಅದರಿಂದ ಸಾವಿರಾರು ರಾಜರು ಉದ್ಭವವಾಗಿ ಹಂಡೆಯಲ್ಲೇ ಸಿಂಹಾಸನಕ್ಕೆ ಕಾದಾಡುತ್ತಾರೆ. ರಾಜನ ದುರಾಸೆಯಿಂದ ಅರಾಜಕತೆ ಉಂಟಾಗಿ ರಾಜ್ಯ ಪತನಗೊಳ್ಳುತ್ತದೆ. “ದುರಾಸೆಯ ಹಂಡೆಗೆ ಬಿದ್ದ ರಾಜ” ಕಥೆ “ಅತಿ ಆಸೆ ಗತಿ ಗೇಡು” ಎಂಬುದನ್ನು ತಿಳಿಸಿಕೊಡುವ ಉತ್ತಮ ಕಥೆಯಾಗಿದೆ. ಇಂತಹ ವಿಭಿನ್ನ ಆಲೋಚನಾ ಶೈಲಿ ಈ ಚಿಕ್ಕ ವಯಸ್ಸಿನಲ್ಲಿ ಅನೀಶರಲ್ಲಿ ಕಾಣಸಿಕ್ಕಿರುವುದು ನಿಜಕ್ಕೂ ನನಗೆ ಸೋಜಿಗವೆನಿಸುತ್ತದೆ.
ನಾಡಿನ ಬಗ್ಗೆ ತಿಳಿಯಲು ಕುತೂಹಲದಿಂದ ಬಂದ ಕಾಡು ಪ್ರಾಣಿಗಳು, ನಾಡಿನಲ್ಲಿನ ಅನಾಗರೀಕತೆ ಕಂಡು, ಕಾಡೇ ಚೆಂದ ಎಂದು ನಾಡಿಗೆ ಗುಡ್ ಬೈ ಹೇಳಿ ಮರಳುತ್ತವೆ. ಮನುಷ್ಯನ ನಡವಳಿಕೆಯನ್ನು ಕಂಡು ಪ್ರಾಣಿಗಳೇ ಬೇಸರಗೊಳ್ಳುತ್ತವೆ ಎಂದರೆ, ನಮ್ಮ ಅವಗುಣಗಳು ಎಷ್ಟಿರಬೇಕೆಂಬ ಪ್ರಶ್ನೆಯನ್ನು ಅನೀಶ್ ಓದುಗನ ಮನಸಿಗೆ ಹರಿಬಿಡುತ್ತಾರೆ. ಅಲ್ಲದೆ ಓದುಗರ ಮನದ ಕದ ತಾಕಿ ತಮ್ಮತನವನ್ನು ಅರಿಯುವಂತೆ ಮಾಡುತ್ತಾರೆ.
ಚೌಕಾಸಿ ಮಾಡುವವರನ್ನು ಕಂಡೇ ಕೃತಿಕಾರರು “ಬದಲಾದ ಜಿಪುಣ ರಂಗಣ್ಣ” ಕಥೆ ಬರೆದಿದ್ದಾರೆ. ನಾವು ಮಾಡುವ ಚೌಕಾಸಿ, ಬಡವರ ಒಂದ್ಹೊತ್ತಿನ ಊಟವನ್ನು ಕಡಿತಗೊಳಿಸುತ್ತದೆ ಎಂಬುದನ್ನು ಕಥೆಯಲ್ಲಿ ಮಾರ್ಮಿಕವಾಗಿ ತಿಳಿಸಿ ಮನ ಕರಗಿಸುತ್ತಾರೆ. ಅಂತೆಯೇ ರಂಗಣ್ಣನೂ ಕೊನೆಯಲ್ಲಿ ಚೌಕಾಸಿ ಮಾಡುವುದನ್ನು ಬಿಟ್ಟು, ಇಷ್ಟು ದಿನ ಮಾಡಿದ ಚೌಕಾಸಿತನಕ್ಕೆ ಬೇಸತ್ತು ವ್ಯಥೆ ಪಡುತ್ತಾನೆ. ಪೂರ್ಣ ಹಣ ಕೊಟ್ಟು ಕಲ್ಲಂಗಡಿ ಕೊಂಡು ಬರುತ್ತಾನೆ. ನಂತರ ಕೆಲವೇ ದಿನಗಳಲ್ಲಿ ಜಿಪುಣ ಎಂಬ ಅಡ್ಡ ಹೆಸರಿನಿಂದ ಮುಕ್ತವಾಗುತ್ತಾನೆ. ಹೌದಲ್ವಾ.. ಸಾವಿರಾರು ರೂಪಾಯಿ ಕೊಟ್ಟು ಹೋಟೆಲ್ ನಲ್ಲಿ ತಿಂಡಿ ತಿಂದು ಬರುವ ನಾವು ಹೊರಗಡೆ ಒಂದು ಬಾಳೇಹಣ್ಣಿಗೆ ಮೂರು ರೂಪಾಯಿ ಕೊಡುವುದಕ್ಕೆ ಚೌಕಾಸಿ ಮಾಡಿ ಎರಡು ರೂಪಾಯಿಗೆ ಒಂದು ಕೊಡಿ ಎನ್ನುತ್ತೇವೆ. ಇಂತಹ ಮನಸ್ಥಿತಿಯವರ ನಡೆಯನ್ನು ನೋಡಿದ ಕೃತಿಕಾರರು, ಕಥೆಯ ಮೂಲಕ ಪಾಠ ಕಲಿಸಿದ್ದಾರೆ, ಅರಿವಿನ ಹರಿವನ್ನು ನಮ್ಮೆಡೆಗೆ ಹರಿಸಿದ್ದಾರೆನ್ನಬಹುದು.
“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬುದನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ, “ಚಿನ್ನದ ನಾಣ್ಯಗಳು” ಚಿಂತನಾಶೀಲವಾಗಿದೆ. ವಾಚಾಳಿಗಳಾಗಿದ್ದರೆ ಹೇಗೆ ಸಿಕ್ಕದ್ದನ್ನು ಕಳೆದುಕೊಳ್ಳುತ್ತೇವೆ ಎಂದು ಕೃತಿಕಾರರು ಉತ್ತಮವಾಗಿ ಈ ಕಥೆಯಲ್ಲೀ ಉದಾಹರಿಸಿದ್ದಾರೆ.
ಒಬ್ಬ ಭಿಕ್ಷುಕ ತನ್ನ ಉದಾತ್ತ ಚಿಂತನೆ ಮತ್ತು ಇಚ್ಛಾಶಕ್ತಿಯಿಂದ ಹೇಗೆ ಬೆಳೆಯಬಹುದು, ಹೇಗೆ ಸಿರಿವಂತನಾಗಬಹುದು ಎಂಬುದನ್ನು, ಅಚ್ಚುಕಟ್ಟಾಗಿ ಓದುಗರು ಹುಬ್ಬೇರಿಸುವಂತೆ ಬರೆದಿದ್ದಾರೆ. ಅಲ್ಲದೆ ಸೋಮಾರಿಗಳಿಗೆ ಹೇಳಲೇಬೇಕಾದ ಕಥೆ ಇದಾಗಿದೆ. ಶಾಲೆಯಲ್ಲೂ ಈ ಕಥೆಯನ್ನು ಹೇಳಿದರೆ, ಮಕ್ಕಳಲ್ಲಿ ಪರಿವರ್ತನೆಯನ್ನು ಕಾಣಬಹುದೆಂಬುದು ನನ್ನ ನಂಬಿಕೆ.
ಹೀಗೆ ‘ಹಕ್ಕಿಯ ಬುದ್ಧಿವಂತಿಕೆ’, ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ಮನೆಗೆಲಸದವನ ಕಥಾವಸ್ತು ಇರುವ ‘ಮರಕುಟಿಕ ಮತ್ತು ಧನಿಕ’ ಕಥೆಗಳು ಉತ್ತಮವಾಗಿವೆ.
ಜೀವನವೆಂಬುದು ಜಾತ್ರೆ, ನಮ್ಮ ಗುರಿಯನ್ನು ರಥದಂತೆ ನಾವೇ ಭಕ್ತರಾಗಿ ಎಳೆದು ಗುರಿ ತಲುಪಿಸಬೇಕೆಂಬ ಕಥೆ, “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ”. ಇದನ್ನು ಪ್ರಾಣಿಗಳ ಮೂಲಕ ತಿಳಿಸಿದ್ದಾರೆ. ಇದರಲ್ಲಿ ನಾವು ತಿಳಿಯಬೇಕಾದ ಆದರ್ಶ ಮತ್ತು ಕಲಿಯಬೇಕಾದ ಮೌಲ್ಯಗಳಿವೆ.
“ದುರಹಂಕಾರಕ್ಕೆ ಉದಾಸೀನವೇ ಮದ್ದು” ಎಂಬುದನ್ನು “ದುರಹಂಕಾರಿ ಬೈಕ್” ಕಥೆಯಲ್ಲಿ ನಿರೂಪಿಸಿದ್ದು ಓದಲು ಆಸಕ್ತಿದಾಯಕವಾಗಿದೆ.
“ಉಪಾಯದಿಂದ ಅಪಾಯ ಮಾಯ!” ಎಂಬುದರಲ್ಲಿ ಚಾಣಾಕ್ಷ ಮಂಗ ತನ್ನ ಬುದ್ಧಿವಂತಿಕೆಯಿಂದ ಇಡೀ ಪ್ರಾಣಿ ಸಂಕುಲವನ್ನು ಹುಲಿಯಿಂದ ಸಂರಕ್ಷಿಸಿದ ಪರಿ ವಿಶೇಷವಾಗಿದೆ.
ನಾವು ಕಾಡುಗಳನ್ನು ನಾಶ ಮಾಡುವುದರಿಂದಲೇ, ಕಾಡು ಪ್ರಾಣಿಗಳು ನಾಡಿಗೆ ಬಂದು ನಮ್ಮ ಹೊಲ ಗದ್ದೆ ಬೆಳೆಗಳನ್ನು ನಾಶ ಮಾಡುತ್ತವೆ. ಹಾಗಾಗಿ ನಾವು ಕಾಡನ್ನು ಅವನತಿಗೀಡು ಮಾಡಬಾರದೆಂಬುದನ್ನು ಆನೆಯ ಮೂಲಕ ತಿಳಿಸಿಕೊಡುತ್ತಾರೆ. ಹೀಗೆ ‘ತಾಳ್ಮೆಯ ಫಲ’, ‘ಮಕ್ಕಳ ಕಾಳಜಿ’, ತರಕಾರಿಗಳ ಸಂಭಾಷಣೆಯಿರುವ ‘ರೈತ ಮತ್ತು ತರಕಾರಿಗಳು’ ಮೀನು ಮಾರುವ ಅಂಕಲ್ ತರಕಾರಿ ಮಾರುವವನಾಗಿ ಬದಲಾದ ಕಥೆ ‘ಅಂಕಲ್ ಕಲಿಸಿದ ಜೀವನ ಪಾಠ’ ಓದುಗರ ಮೆಚ್ಚುಗೆಯನ್ನು ಪಡೆಯುತ್ತವೆ.
ಯಾವಾಗ, ಯಾರು, ಹೇಗೆ ಮರಣ ಹೊಂದುತ್ತಾರೆ? ಯಾರಿಗೂ ತಿಳಿಯದು. ಉತ್ತಮ ಆರೋಗ್ಯ ಇದ್ದವರೇ ಇದ್ದಕ್ಕಿದ್ದಂತೆ ಅಸುನೀಗುತ್ತಾರೆ, ಹಾಗೆಯೇ ಸಮೃದ್ಧಿಯಾಗಿ ಬೆಳೆದ ಮರವನ್ನು ಕಡಿದು ಬಿಡುತ್ತಾರೆ ನಮ್ಮ ಜನ. ಇದನ್ನು ಕಂಡ ‘ಸೊರಗಿದ ಮರ’ ನಾನು ಈ ಸ್ಥಿತಿಯಲ್ಲಿರುವುದರಿಂದಲೇ ನನ್ನ ಜೀವ ಉಳಿಯಿತು ಎಂದು ನಿಟ್ಟುಸಿರು ಬಿಡುತ್ತದೆ. ತನ್ನನ್ನು ಬೋಳು ಮರ ಎಂದು ಹೀಯಾಳಿಸಿದ ಸುಂದರವಾದ ಮರಗಳು ಕೊಡಲಿಯ ಪೆಟ್ಟಿಗೆ ಬಲಿಯಾದವು ಎಂಬ ಸೊರಗಿದ ಮರದ ಸ್ವಗತವನ್ನು ತಿಳಿಸಿ, ದೇವರ ಇಚ್ಛೆಯಂತೆ ನಾವು ಬದುಕಬೇಕು, ಬದುಕಲ್ಲಿ ಜೀವನೋತ್ಸಾಹ ಇರಬೇಕೆಂದು ಹೃದಯಸ್ಪರ್ಶಿಯಾಗಿ ತಿಳಿಸಿಕೊಡುತ್ತಾರೆ ಅನೀಶ್ ಬಿ ಕೊಪ್ಪ ಅವರು.
— ಒಟ್ಟಿನಲ್ಲಿ ವಿದ್ಯಾರ್ಥಿಯಾದ ಅನೀಶ್ ಬಿ ಕೊಪ್ಪ ಅವರು, ಅನೇಕ ಗಾದೆ ಮಾತು, ನಾಣ್ಣುಡಿಗಳ ಬಗ್ಗೆ ತಮ್ಮ ಚಿಂತನೆಯನ್ನು ಹರಿಬಿಟ್ಟು ಅರಿವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗೆ ಆ “ಅರಿವಿನ ಹರಿವ”ನ್ನು ನಮ್ಮ ಓದಿಗೆ ನೀಡಿದ್ದಾರೆ. ಪ್ರತಿಯೊಂದು ಸ್ಥಿತಿಯನ್ನು, ತಮ್ಮ ತೀಕ್ಷ್ಣ ನೋಟದಿಂದ ಅವಲೋಕಿಸುವ ಅನೀಶ್, ಎಲ್ಲದಕ್ಕೂ ತಮ್ಮದೇ ಆದ ಕಾಲ್ಪನಿಕ ಕಥೆಯ ಮೂಲಕ ಅರ್ಥೈಸಿರುವುದು ಅವರ ಪ್ರತಿಭೆಯನ್ನು ತೋರಿಸುತ್ತದೆ.
ಮತ್ತೆ ಅವರ ಎಲ್ಲ ಆಲೋಚನೆಗಳಿಗೆಲ್ಲ ಅಕ್ಷರ ರೂಪ ಕೊಟ್ಟು, ಸಾಹಿತ್ಯದ ಸ್ಪರ್ಶವನ್ನು ನೀಡಲು ಪ್ರಯತ್ನಿಸಿದ್ದು ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಮತ್ತು ಅನೀಶ್ ಬಿ ಕೊಪ್ಪ ಅವರದ್ದು ಇದು ಎರಡನೇಯ ಸಂಕಲನ ಎಂಬುದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆ ಅನಿಸುವ ಸಂಗತಿಯಾಗಿದೆ.
ಅನೀಶ್ ಬಿ ಕೊಪ್ಪ ಅವರ ಸಾಹಿತ್ಯಿಕ ಪಯಣ ಹೀಗೆ ಯಶಸ್ವಿಯಾಗಿ ಸಾಗಲಿ. ಮತ್ತಷ್ಟು ಕೃತಿಗಳು ಅವರಿಂದ ಹೊರಬರಲಿ. ಒಬ್ಬ ಮೇರು ಕೃತಿಯ ಕರ್ತೃವಾಗಿ ನಮ್ಮ ಮುಂದೆ ಬೆಳೆಯಲಿ ಎಂದು ಆಶಿಸುತ್ತಾ ನನ್ನ ಮಾತನ್ನು ಮೊಟಕುಗೊಳಿಸುತ್ತೇನೆ.
– ವರದೇಂದ್ರ ಕೆ ಮಸ್ಕಿ
9945253030
ಕೃತಿಗಳಿಗಾಗಿ ಸಂಪರ್ಕಿಸಿ
– ಅನೀಶ್ ಬಿ ಕೊಪ್ಪ
9108131041