ಭಾವ ಮತ್ತು ಗಂಧ ಪರಿಮಳದ ಗಜಲ್‌ ಕಾವ್ಯ

ಪುಸ್ತಕ ಪರಿಚಯ

*ʻಭಾವಗಂಧಿʼ:

ಭಾವ ಮತ್ತು ಗಂಧ ಪರಿಮಳದ ಗಜಲ್ ಕಾವ್ಯ

ಕನ್ನಡ ಕಾವ್ಯಲೋಕವನ್ನು ಇಡಿಯಾಗಿ ಒಂದು ಸಾರಿ ಸಿಂಹಾವಲೋಕನ ಮಾಡಿದರೆ ಅದರ ಅಗಾಧತೆ ಸಾಹಿತ್ಯ ಬಲ್ಲವರಿಗೆ ಹೇಳುವ ಅಗತ್ಯವಿಲ್ಲ. ಶಾಂತರಸರಂತಹ ಗಜಲ್‌ ಕವಿಗಳಿಂದಾಗಿ ಕೆಲ ದಶಕಗಳ ಹಿಂದಷ್ಟೇ ಕನ್ನಡದಲ್ಲಿ ಬೆಳಕಿಗೆ ಬಂದ ಗಜಲ್‌ ಕಾವ್ಯ ಪರಂಪರೆಯನ್ನು ಕನ್ನಡದ ನೆಲೆಯಲ್ಲಿ ನೋಡುವುದಾದರೆ ಅದಕ್ಕೊಂದು ವಿಸ್ತಾರವಾದ ಇತಿಹಾಸವಿರಲಿಕ್ಕಿಲ್ಲ. ಆದರೆ ಇತರ ಕಾವ್ಯದಷ್ಟೇ ಸಮರ್ಥವಾಗಿ ಬೆಳೆಯುವ ಅಗಾಧತೆ, ವಿಸ್ತಾರತೆ, ವಿಪುಲತೆ ಕನ್ನಡ ಗಜಲ್ ಗಳಿಗೆ ಇದೆ.

ಆ ನಿಟ್ಟಿನಲ್ಲಿ ಮೊದಲ ಬಾರಿಗೆ ಪ್ರಯತ್ನಿಸಿದವರು ಶಾಂತರಸರು, ಅದಕ್ಕೆ ಅವರೊಂದು ಭದ್ರ ಬುನಾದಿ ಹಾಕಿಕೊಟ್ಟು ಕನ್ನಡ ಗಜಲ್‌ ಕಾವ್ಯ ಪರಂಪರೆಗೆ ನಾಂದಿ ಹಾಡಿದವರು. ಅವರಿಗೆ ಉರ್ದು ಭಾಷೆಯ ಓದು ಮತ್ತು ಅಲ್ಲಿನ ಸಾಹಿತ್ಯದಲ್ಲಿದ್ದ ಅಪರಿಮಿತ ಒಲವು ಅವರನ್ನು ಕನ್ನಡದಲ್ಲಿ ಗಜಲ್‌ ಬರೆಯಲು ಪ್ರೇರೇಪಿಸಿದ್ದು ಈಗ ಇತಿಹಾಸ.

ಗಜಲ್ ನ ಮುಖ್ಯ ಸ್ಥಾಯಿಭಾವ ಒಲವು-ಪ್ರೀತಿ ಎಂದಿದ್ದರೂ ಕನ್ನಡದ ಗಜಲ್ ವಿಷಯಕ್ಕೆ ಬಂದಾಗ ಅದು ಕೇವಲ ಪ್ರೀತಿ, ಪ್ರೇಮ, ವಿರಹ, ಪ್ರೇಮಿಗಳ ಮಾತು, ಅಷ್ಟಕ್ಕೆ ಮಾತ್ರ ಸೀಮಿತವಾಗದೆ ಅದು ರಸಿಕತೆಯ ಮಾತಿನಿಂದ ಹಿಡಿದು ಪ್ರತಿಭಟನೆಯವರೆಗೂ ಬೆಳೆದಿರುವುದು ವಿಶೇಷ. ರಾಯಚೂರಿನ ನೆಲದಲ್ಲಿ ಬಂಡಾಯ ಕಾವ್ಯಕ್ಕೆ ಇರುವ ಕಾವಿನಂತೆ ಗಜಲ್‌ ಕಾವ್ಯದಲ್ಲೂ ಪ್ರೀತಿಯ ವಿಷಣ್ಣತೆ, ಪ್ರತಿರೋಧದ, ಬಂಡಾಯದ ಕಸಿಬಿಸಿಯನ್ನೂ ನೋಡಬಹುದಾಗಿದ್ದು ನೂರಾರು ವಿಭಿನ್ನ ಬಗೆಯ ಗಜಲ್‌ಗಳು, ಸಾವಿರಾರು ಗಜಲ್‌ಕಾರರು ಬರೆದಿದ್ದಾರೆ, ಬರೆಯುತ್ತಿದ್ದಾರೆ.
ಗಜಲ್ ಮೋಹಕ ಕಾವ್ಯ ಪ್ರಾಕಾರವಾದರೂ ಕವಿಯನ್ನು ಕಾಡಿಸಿ, ಪೀಡಿಸಿ, ಬರೆಯಲು ಹಚ್ಚುವ, ಮನದ ಬೇಗುದಿ, ತಳಮಳಗಳನ್ನು ಕಾವ್ಯವಾಗಿಸುವ ವಿಶಿಷ್ಟ ಬಗೆಯ ರಚನೆ. ಹಾಗಾಗಿ ಗಜಲ್ ಸೃಷ್ಟಿಕ್ರಿಯೆ ಸಂದರ್ಭದಲ್ಲಿ ಕವಿ ವಸ್ತು, ವಿಷಯದ, ಸಂದರ್ಭದ ಹಾಗೆ ಸೂಕ್ತ ಕಾಫಿಯಾ ಮತ್ತು ರದಿಫ್‌ಗಳ ಆಯ್ಕೆ, ಜೊತೆಗೆ ರೂಪಕಗಳ ಸಮರ್ಥ ಬಳಕೆ ಮತ್ತು ಕಾವ್ಯದ ಚೆಲುವಿಕೆಗೆ ಅಗತ್ಯ ಮಹತ್ವ ನೀಡಲೇಬೇಕು. ಛಂದೋಬದ್ಧ ಲಕ್ಷಣಗಳನ್ನಿಟ್ಟುಕೊಂಡು ಸೂತ್ರಬದ್ಧವಾದ ಚೌಕಟ್ಟಿನಲ್ಲಿ, ಆದರೆ ತೀರ ವಾಚ್ಯವಾಗಿ ಬರುತ್ತಿರುವ ಗಜಲ್‌ಗಳಾಗದೆ ಕಾವ್ಯದ ಹೂರಣದಿಂದ ಮೈದುಂಬಿಕೊಂಡ ಗಜಲ್‌ ಮೂಡಿಬರಬೇಕಿದೆ. ಗಜಲ್‌ ಚೆಲುವಿಕೆಗೆ ಅನಿವಾರ್ಯವಾದ ಕಾವ್ಯಗುಣದಿಂದ ವಂಚಿತವಾಗದಂತೆ ಎಚ್ಚರವಹಿಸುವುದು ಗಜಲ್ ಕವಿಯ ಆಶಯವಾಗಬೇಕು. ಗಜಲ್‌ಗೆ ಭಾವಪ್ರಪಂಚ ಎಷ್ಟು ಮುಖ್ಯವೋ ಅಷ್ಟೇ ಭಾವತೀವ್ರತೆ ಮತ್ತು ಕಾವ್ಯಾತೀವ್ರತೆಯ ಒಳಹರವೂ ಅನಿವಾರ್ಯ, ಆಗ ಗಜಲ್ ರುಚಿ ನೀಡೀತು. ಇರದಿದ್ದಲ್ಲಿ ಗಜಲ್‌ನ ಸೌಂದರ್ಯ ಕಾಣಲು ಸಾಧ್ಯವಾಗದು, ಅದು ಮನಸಿಗೆ ಲಗ್ಗೆ ಹಾಕದು.
ಇಷ್ಟೆಲ್ಲ ಮಾತು ಹೇಳಬೇಕಾಗಿ ಬಂದ ಪ್ರಮೇಯವೆಂದರೆ ವಿಜಯಪುರದ ಶ್ರೀಮತಿ ಪ್ರಭಾವತಿ ದೇಸಾಯಿಯವರು ತಮ್ಮ 70 ರ ಹರೆಯದಲ್ಲೂ ಕುಗ್ಗದ ಉತ್ಸಾಹದಲ್ಲಿ ʻಭಾವಗಂಧಿʼ ಸಂಕಲನದ ಮೂಲಕ 50 ಗಜಲ್‌ ಗಳಲ್ಲಿ ಜೀವಕಳೆ ತುಂಬಲು ಪ್ರಯತ್ನಿಸುತ್ತಿರುವ ಕಾರಣಕ್ಕೆ. ಈಗಾಗಲೇ ʻಮೌನ ಇಂಚರʼ, ʻನಿನಾದʼ ಮತ್ತು ʻಮಿಡಿತʼ ಹೀಗೆ ಮೂರು ಗಜಲ್‌ ಸಂಕಲನಗಳನ್ನು ಪ್ರಕಟಿಸಿರುವ ಪ್ರಭಾವತಿ ದೇಸಾಯಿಯವರ ನಾಲ್ಕನೆ ಗಜಲ್‌ ಸಂಕಲನ ʻಭಾವಗಂಧಿʼ. ಅನುಭವ ಮತ್ತು ಅನುಭಾವದಿಂದ ಮಾಗಿದ ದೇಹದಲಿ ಗಜಲ್‌ ಎಂಬ ಜೀವಸೆಲೆ ಹೇಗೆ ಚಿಮ್ಮುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಪ್ರಭಾವತಿ ದೇಸಾಯಿಯವರ ʻಭಾವಗಂಧಿʼ ಗಜಲ್‌ ಸಂಕಲನ ಸಾಕ್ಷಿಪ್ರಜ್ಞೆಯಾಗುತ್ತದೆ. ಹೆಸರೇ ಸೂಚಿಸುವಂತೆ ʻಭಾವಗಂಧಿʼ ಬಹುವಿಧದ ಭಾವಗಳನ್ನು ಸುಗಂಧ ದ್ರವ್ಯದಲ್ಲಿ ಅದ್ದಿ ತೆಗೆದಂತೆ ಈ ಗಜಲ್‌ ಗಳು ಪ್ರಕಟಗೊಂಡಿವೆ. ಇಲ್ಲಿನ ಎಲ್ಲ ಗಜಲ್‌ಗಳೂ ತಾಧ್ಯಾತ್ಮತೆಯ ಎಲ್ಲ ಲಕ್ಷಣಗಳನ್ನಿಟ್ಟುಕೊಂಡು ಬರೆದ ಕಾರಣದಿಂದ ಈ ಗಜಲ್‌ಗಳು ಮನದಾಳದಲ್ಲಿ ಉಳಿಯಲು ಸಾಧ್ಯವಿದೆ.


ʻಲೋಕಜ್ಞಾನವಿಲ್ಲದೆ ಕಟ್ಟಿದ ಕಾವ್ಯ ಯಾರನ್ನೂ ಮೆಚ್ಚಿಸದುʼ ಎಂಬ ಅರ್ಥಪೂರ್ಣ ಮಾತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಚರ್ಚೆಗೆ ಬಂದಿದೆ. ಈ ಮಾತು ಪ್ರಭಾವತಿ ದೇಸಾಯಿಯವರ ಓದು, ಅನುಭವ, ತಿಳುವಳಿಕೆಯ ಆಳಕ್ಕೆ ಸರಿ ಹೊಂದುವ ಮಾತು. ಈ ಎಲ್ಲವನ್ನೂ ಮೈಗೂಡಿಸಿಕೊಂಡ ಅವರ ಈ ʻಭಾವಗಂಧಿʼ ಸುಕೋಮಲ ಕಾವ್ಯ ಗಜಲ್‌ ಗಳ ಮೂಲಕ ಕೆಲವೆಡೆ ಚಿಂತೆನೆಗೆ ಹಚ್ಚಿದರೆ, ಮತ್ತೊಂದೆಡೆ ತತ್ತ್ವಜ್ಞಾನದ ಪ್ರಶ್ನೆ ಎತ್ತುತ್ತವೆ. ಮತ್ತೂ ಕೆಲವೆಡೆ ಮನುಷ್ಯ ಸಹಜ ಒಲವಿನ ಕಚಗುಳಿಯಿಡುತ್ತವೆ.

ಸಂದರ್ಭ ಬಂದಾಗ ಸೋತಂತೆ ಕಾಣುವ ಕವಿಮನಸು ತನ್ನೊಳಗೆ ತಾನು ಕುದಿಯುತ್ತದೆ. ಇಂತಹ ಪ್ರಮುಖ ಅಂಶವನ್ನು ಈ ಗಜಲ್‌ಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ʻಪ್ರಭೆʼ ಕಾವ್ಯನಾಮ ಪ್ರಭಾವತಿ ದೇಸಾಯಿಯರಿಗೆ ಮತ್ತು ಗಜಲ್‌ ಆಶಯಗಳಿಗೆ ಎಷ್ಟು ಹೊಂದಿಕೊಂಡ ಸೂಕ್ತ ಕಾವ್ಯನಾಮ ಎಂದರೆ, ಅದು ಪ್ರತಿ ಗಜಲ್‌ ಗೆ ಒಂದು ಹೊಸತನದ ಬೆಳಕನ್ನು ತೋರುವ ಒಂದು ಅಪೂರ್ವ ಮಾರ್ಗ ಸೂಚಿ ಎನಿಸದೆ ಇರದು. ಸದಾಹೊಸ ಕಾಫಿಯ ಮತ್ತು ರದೀಫ್‌ಗಳ ಸತತ ಹುಡುಕಾಟ, ಹೊಸ ಸಾಲುಗಳನ್ನು ಕಟ್ಟುವ ತುಡಿತದಲ್ಲಿ ಕಂಡುಬರುವ ʻಪ್ರಭೆʼಯ ಕುಂದದ ಉತ್ಸಾಹಕ್ಕೆ ಇಲ್ಲಿ ಹಲವು ಗಜಲ್‌ ಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ʻನೇಸರ ಕಸುವು ಕರಗಿಸಿ ಬೆವರುಂಡರೂ ಎವೆ ಮುಚ್ಚದ ಕಣ್ಣು
ಉಸಿರು ಉಸಿರಲಿ ಪಿಸುಮಾತಿನ ಪ್ರೀತಿಯ ಗಜಲ್‌ ಹಾಡಿದೆವು ಹಿಗ್ಗುತʼ (ಗಜಲ್‌-31)

– ಎಂದು ಗಜಲ್‌ ನ ಮಾತುಗಳು ಪ್ರೇಮಿಗಳ ಬಿಸುಪು ನುಡಿಯಂತೆ ಮಹತ್ವದ ನುಡಿ ಬೆಡಗಿನಂತೆ ಕಾಣುತ್ತದೆ. ಈ ಗಜಲ್‌ ನಲ್ಲಿ ಬಳಸಲಾದ ಹಾರಾಡಿದೆವು, ಬೆಳಕಾದೆವು, ಹಾಡಿದೆವು, ಕುಣಿದೆವು, ಓಡಿದೆವು, ಮರೆತೆವು…. ಈ ಕಾಫಿಯಾಗಳ ಮೂಲಕ ಒಲವಿನ ಅಂತರಾಳ ಪ್ರತಿಬಿಂಬಿತವಾಗಿದೆ. ಸಾಮಾನ್ಯ ಪದದಂತೆ ಕಂಡುಬರುವ ಇಲ್ಲಿನ ಕಾಫಿಯಾಗಳ ಸೂಕ್ತ ಬಳಕೆಯಿಂದಾಗಿ ಈ ಗಜಲ್‌ ಗೆ ಕಳೆ ಬಂದಿದೆ. ಮತ್ತೊಂದು ಗಜಲ್‌ ನಲ್ಲಿ ನೆನಪುಗಳ ತಾಕಲಾಟದಲ್ಲಿ ಗರಿಬಿಚ್ಚಿದ ಹಲವು ಭಾವಗಳು ಪ್ರಕಟಗೊಂಡಿದ್ದು, ಇಲ್ಲಿನ ಕೆಲ ರೂಪಕಗಳು ಸಶಕ್ತವಾಗಿ ಈ ಶೇರ್‌ಗಳಲ್ಲಿ ಇಣುಕಿವೆ:

ʻನೆನಪುಗಳ ಹಗೆಯ ಕೆದಕಲು ಹಳೆ ಗಾಯ ಹೊಸದಾಯಿತು
ಹುಣ್ಣು ಮಾಯಲು ಅಧರ ಮಧು ಲೇಪನ ಬೇಕಾಯಿತುʼ (ಗಜಲ-23)

– ಪ್ರೀತಿ, ಪ್ರೇಮ, ವಿರಹ, ತೊಳಲಾಟ, ಕಾತರತೆ, ವಿಪ್ರಲಂಭನೆ, ತಳಮಳ, ಹೀಗೆ ಈ ವಿಭಿನ್ನ ವಿಷಯಗಳನ್ನು ತಮ್ಮ ಗಜಲ್‌ ಗಳಲ್ಲಿ ನೇರವಾಗಿ ಹೇಳಲು ಇಚ್ಛಿಸದ ಪ್ರಭಾವತಿ ದೇಸಾಯಿಯವರು ಅವುಗಳನ್ನು ಆಧ್ಯಾತ್ಮದ ಹಿನ್ನೆಲೆಯಲ್ಲಿ, ಅನುಭವದ ಮೂಸೆಯಲ್ಲಿ ನೋಡುವ ಬಗೆ ಕುತೂಹಲ ಮೂಡಿಸಿ, ಓದುಗರ ಮನ ಕೆಲಕ್ಷಣ ಯೋಚಿಸುವಂತೆ ಮಾಡುತ್ತವೆ. ಒಲವಿನ ಭಾವಗಳನ್ನು ಮುಕ್ತವಾಗಿ ಪ್ರಕಟಿಸದ ಒಂದು ವಿಭಿನ್ನ ಹಂಬಲತೆಯ ಗಜಲನ್ನು ಇಲ್ಲಿ ನೋಡಬಹುದು.

ʻಚೆಲುವ ಹೂತೋಟದ ಸುತ್ತಲೂ ಮುಳ್ಳಬೇಲಿ ಬಿಗಿಯಲಾಗಿದೆ
ಮನ ಕಾಡುವ ಬಯಕೆಗೆ ಲಕ್ಷ್ಮಣ ರೇಖೆ ಎಳೆಯಲಾಗಲಿಲ್ಲʼ (ಗಜಲ್‌-29)

– ಮನುಷ್ಯ ಸಹಜ ಮೋಹದ ಸೆಲೆಯಲಿ ಸಿಲುಕಿದ ಮನಸ್ಸು ಅದನ್ನು ಯಾರೊಂದಿಗೂ ಹಂಚಿಕೊಳ್ಳದ ತಳಮಳದ ತಾರ್ಕಿಕತೆ ಈ ಗಜಲ್‌ ನಲ್ಲಿ ವ್ಯಕ್ತವಾಗಿದ್ದು ಅದು ತನ್ನ ಲಕ್ಷ್ಮಣ ರೇಖೆಯನ್ನು ಬೆಳೆದು ನಿಂತ ಬಗೆ ಸಹಜವಾದದ್ದು ಎನ್ನುವುದರ ಮೂಲಕ ಪ್ರೇಮದ ಉತ್ಕಟತೆಯ ಭಾವ ಮೀರದ ತೊಳಲಾಟವಿದೆ. ಶಾಂತರಸರು ಸೇರಿದಂತೆ ಕನ್ನಡದ ಹಲವು ಗಜಲ್‌ಕಾರರ ಗಜಲ್‌ಗಳ ಓದಿನ ಪ್ರಭಾವವೂ ಪ್ರಭಾವತಿ ದೇಸಾಯಿಯವರ ಗಜಲ್‌ ರಚನಾ ಕ್ರಮದಲ್ಲಿ ಎದ್ದು ಕಾಣುತ್ತದೆ. ಹಿರಿಯ ಬರಹಗಾರರ ಈ ಓದುವಿಕೆಯ ಉತ್ಸಾಹವೇ ಅವರನ್ನು ಒಬ್ಬ ಗಂಭೀರ ಹಿರಿಯ ಗಜಲ್‌ಕಾರರ ಸಾಲಿನಲ್ಲಿ ನಿಲ್ಲಿಸಿದೆ ಮತ್ತು ಇಂತಹ ಅಧ್ಯಯನಶೀಲತೆ, ಗಜಲ್‌ ರಚನೆಯ ಹಿಂದಿನ ಉತ್ಸಾಹವನ್ನು ಇಮ್ಮಡಿಗೊಳಿಸಿ ಹೊಸ ಪೀಳಿಗೆಯ ಯುವ ಗಜಲ್‌ಕಾರರಿಗೆ ಮಾದರಿಯಾಗಿ ನಿಲ್ಲುವಂತೆ ಮಾಡಿದೆ.
ಪ್ರಭಾವತಿ ಅವರು ಪ್ರೀತಿ, ಒಲವನ್ನು ನೋಡವ ದೃಷ್ಟಿಕೋನ ಬೇರೆಯದ್ದೆ ಆಗಿದೆ. ಅಲ್ಲಲ್ಲಿ ಒಲವಿನ ಭಾವುಕತೆಗೆ ವಚನದ ಲೇಪನವೂ ಸಿಕ್ಕಿರುವುದರಿಂದ ಗಜಲ್‌ ಗಳು ಕೆಲವೆಡೆ ವಿಷಾದ ಭಾವದ ತೀವ್ರತೆಯಲ್ಲಿದ್ದರೆ, ಮತ್ತೂ ಕೆಲವೂ ಆಧ್ಯಾತ್ಮದ ತಳಹದಿಯಲ್ಲಿ, ಇನ್ನೂ ಕೆಲವು ಗಜಲ್‌ಗಳು ಆರ್ದ್ರತೆಯ ಭಾವಲೋಕದಲ್ಲಿ ತೇಲುತ್ತವೆ. ಒಲವನ್ನು ವಿಷಣ್ಣವಾಗಿ ನೋಡುವ ಭಾವವೂ ಅಲ್ಲಲ್ಲಿ ಕಂಡುಬರುತ್ತದೆ. ಆ ದೃಷ್ಟಿಯಿಂದ ಗಜಲ್‌ ನ ಈ ಸಾಲುಗಳನ್ನು ನೋಡಬಹುದು:

ʻಕೊಟ್ಟು ಪಡೆದ ಸುಖದ ನೆನಪುಗಳು ಸದಾ ಹೃದಯದಲಿ ಹಸಿರಾಗಿವೆʼ (ಗಜಲ್‌-42)
ʻಅವಳ ಗುಳಿಗಲ್ಲದ ಸುಳಿಯಲಿ ಸಿಲುಕಿದೆನೆಂದು ಹೇಗೆ ಹೇಳಲಿʼ (ಗಜಲ್‌-36)
ʻಹೃದಯ ಬಟ್ಟಲಿಗೆ ಮಾನವೀಯತೆ ತುಂಬಿ ಮನುಷ್ಯರಾಗಿ ಬಾಳಿರಿʼ (ಗಜಲ್‌-32)

– ಇಂತಹ ಸಾಲುಗಳು ಯಥೇಚ್ಛವಾಗಿ ಐವತ್ತೂ ಗಜಲ್‌ ಗಳ ಉದ್ದಕೂ ಬೆಳಗಿವೆ.
……..
ಮೇಲಿನ ಸಾಲಿನ ಜೊತೆ ಜೊತೆಗೆ ಈ ಕೆಳಗಿನ ಶೇರ್‌ಗಳನ್ನೂ ಕುತೂಹಲದ ಕಣ್ಣಿಂದ ನೋಡಬಹುದು:

ʻಲೋಕವನೆ ಮರೆತು ಕಣ್ಣ ನೋಟದಲಿ ಬಂದಿಯಾದ ಖೈದಿಗಳು
ಹೃದಯ ಒಂದಾಗಿಸಲು ಪ್ರೇಮ ಸೇತುವೆಯಾಗುತಾ ನಲಿದೆವುʼ (ಗಜಲ್‌-50)
……..
ʻಜಗವೆಲ್ಲ ಸುತ್ತಿದರೂ ನಿಸ್ವಾರ್ಥ ಪ್ರೀತಿ ಸಿಗಲಿಲ್ಲ
ಯಾವ ಸಂತೆಯಲ್ಲೂ ನಂಬಿಕೆ ಖರೀದಿಸಲಾಗಲಿಲ್ಲʼ (ಗಜಲ್-29)
……..
ಒಬ್ಬ ಮಹಿಳೆಯಾಗಿ ಸಹಜವಾಗೆ ಪ್ರಭಾವತಿ ದೇಸಾಯಿಯವರು ಮಹಿಳಾ ಪರ ಚಿಂತನೆಗಳಿಗೆ ಹಲವು ಮಜಲುಗಳಲ್ಲಿ ಇಲ್ಲಿನ ಗಜಲ್‌ ಗಳ ಮೂಲಕ ಸ್ಪಂದಿಸಿದವರು. ಆ ಮೂಲಕ ಮಹಿಳೆಯ ಹಲವು ಹೃದಯ ವಿದ್ರಾವಕ ಮುಖಗಳನ್ನು ಅನಾವರಣ ಮಾಡುಗ ಗಜಲ್‌ ತುಂಬಾ ಭಾವುಕವಾಗಿವೆ:

ʻಮೋಸದ ಮೋಹಕೆ ಬಲಿಯಾಗಿ ಪತಿಯ ಶಾಪದಲಿ ಶಿಲೆಯಾದೆ
ಕೀಚಕರ ಕಾಮ ಮದದ ನೀಚ ಕಾರ್ಯಕೆ ಶವವಾದೆʼ (ಗಜಲ್‌-5)

– ಈ ಗಜಲ್‌ ನಲ್ಲಿ ಪುರಾಣೇತಿಹಾಸದ ಕಾಲದಿಂದ ಹಿಡಿದು ಆಧುನಿಕ ಜಗತ್ತಿನಲ್ಲಿ ನಡೆಯುತ್ತಿರುವ ಹೆಣ್ಣಿನ ಶೋಷಣೆ, ದೌರ್ಜನ್ಯದ ದನಿಯಾಗಿ ನೋವಿನ ಕಥೆಯನ್ನು ನವಿರಾಗಿ ಕಾಣಿಸುತ್ತಾರೆ. ಇವು ಓದುಗರ ಕರುಳನ್ನು ಮೆಲ್ಲಗೆ ಹಿಸುಗುತ್ತವೆ.

ʻಒಲವಿಂದ ಮುಡಿಗೆ ಮಲ್ಲಿಗೆ ಮುಡಿಸುವಿರೆಂದು ಕಾದವಳು ಅವಳು
ಹೊಗೆ ಹಾಕಿ ತಲೆಗೆ ಹೂದಂಡೆ ಕಟ್ಟಿದರೇನು ಪ್ರಯೋಜನʼ (ಗಜಲ್‌-24)
…….
ಪ್ರಭಾವತಿಯವರ ಈ ಗಜಲ್‌ ಗಳನ್ನು ಓದಿದಾಗ ಶಾಂತರಸರು ನೆನಪಾಗುತ್ತಾರೆ:

ʻಉಸಿರು ಪ್ರೀತಿಯ ಮೋಹದ ಗಾಣದಲಿ ತಿರುಗಿ ಹಿಪ್ಪೆಯಾದೆ
ಜಗದ ಕಟ್ಟುಪಾಡುಗಳ ಮೀರಲಾರದೆ ನರಳುತಾ ಹೊರಟೆʼ (ಗಜಲ್‌-19)
….
ʻಕನಸಲಿ ತೇಲಾಡುತ ಕಾಮನ ಬಿಲ್ಲೇರಿದ ಜೀವಿಗಳಿಗೆಲ್ಲಿ ನೆಲೆ
ಮುಗಿಲ ನಕ್ಷತ್ರಗಳು ಮುಂಜಾವಿಗೆ ಒಲವ ವಿದಾಯ ಹೇಳಲೇ ಬೇಕಲ್ಲʼ (ಗಜಲ್‌-26)
……
ಅನೇಕ ಗಜಲ್‌ ಕಾರರಿಗೆ ʻಸಾಕಿʼಯ ಪಾತ್ರ ಸೃಷ್ಟಿಸಿ, ನಿಭಾಯಿಸುವುದೆ ಗಜಲ್‌ ನಲ್ಲಿ ಒಂದು ಸವಾಲು. ಆದರೆ ಸಾಕಿಯನ್ನು ತುಂಬಾ ಅರ್ಥಪೂರ್ಣವಾಗಿ ಪ್ರಭಾವತಿಯವರು ಧ್ವನಿಸಿದ್ದಾರೆ ಈ ಗಜಲ್‌ನಲ್ಲಿ. ಇದರ ಜೊತೆಗೆ ನೋವಿನ ಸಂಗತಿಗಳನ್ನು ಸಾಕಿಯೊಂದಿಗೆ ಹಂಚಿಕೊಂಡ ಭಾವವೂ ಅತ್ಯಂತ ನವುರಾಗಿ ಪ್ರಕಟಿಸಿದ್ದಾರೆ:

ʻಪ್ರೀತಿಸಬೇಕು ಲಜ್ಜೆ ಪರದೆ ಹರಿದು ತುಂಡಾಗುವವರೆಗೆ
ತನುಮನಗಳು ಹಗುರಾಗದೆ ಬದುಕಿಗೆ ನೆಮ್ಮದಿ ಸಿಗದು ಸಾಕಿʼ (ಗಜಲ್‌-18)
….
ಹಾಗೆ ಪ್ರೇಮೋತ್ಕಟೆತೆಗೆ ತೆರೆದು ನಿಲ್ಲುವ ಕೆಲವು ಗಜಲ್‌ಗಳ ಶೇರ್‌ ಗಳು ಎದೆಗೆ ಬಾಣವಾಗಿ ಇರಿಯುತ್ತವೆ. ಅದಕ್ಕೆ ಉದಾಹರಣೆ ಎನ್ನುವಂತೆ ಈ ಶೇರ್‌ಗಳನ್ನು ಗಮನಿಸಬಹುದು:

ʻಜಾಲಿಯ ಮುಳ್ಳಿಗಿಂತ ಗುಲಾಬಿ ಮುಳ್ಳು ಸುಂದರ ಮೃದುವೆನ್ನ ಬೇಡ
ಯಾವ ಮುಳ್ಳು ಚುಚ್ಚಿದರೂ ನೋವಾಗುವುದೆಂದು ಅವಳು ಬಲ್ಲಳುʼ (ಗಜಲ್‌-17)
….
ʻಕಳೆದು ಹೋದ ಪ್ರೀತಿಯ ಪಿಸುಮಾತು ಒಡೆದ ಮುತ್ತು ಮತ್ತೆ ಸಿಗದು
ಅಗಲಿಕೆಯ ತಾಪಕೆ ಉದುರಿದ ಹನಿಯೊಂದು ಆವಿಯಾಗಿ ಆರಿತುʼ (ಗಜಲ್‌-10)
….
ʻಒಲಿದ ಜೀವದಲಿ ಜೀವ ಬೆರೆಸಲು ಕಾತರದಲಿ ಕಾದೆ ನೋಡು
ಕಟ್ಟಿದಾ ಕನಸಿನ ಗೋಪುರ ನೆಲ ಕಚ್ಚಿತು ನೀ ಬಾರದೆʼ (ಗಜಲ್‌-3)
….
ಭಾವಪೂರ್ಣವಾದ ಈ ಎರಡೂ ಶೇರ್‌ಗಳು ನನ್ನನ್ನು ಕೊನೆಯಲ್ಲಿ ಕಾಡಿದ್ದು ಇದರಲ್ಲಿನ ತತ್ವಜ್ಞಾನದ ಅಂಶಗಳಿಂದಾಗಿ:

ʻಸಮಾನತೆ ಭಾವೈಕ್ಯತೆಯಲಿ ಮಿಂದು ಸಂತಸದಲಿ ಬದುಕಿವೆ ಜೀವ
ಮುಗ್ಧ ಮನಗಳಲಿ ವಿಷ ಬೀಜಗಳ ಬಿತ್ತನೆಯ ಮಾಡದಿರುʼ (ಗಜಲ್‌-2)
….
ʻಕೆಸರಲಿ ಜನಿಸಿದ ಕಮಲ ಕೆಸರಿಗಂಟದೆ ಬಾಳುವುದು ತಿಳಿ
ಸ್ವಾತಿ ಹನಿ ಮುತ್ತಾದರೂ ಕಡಲಲಿ ನೀರಾಗದು ತಿಳಿʼ (ಗಜಲ್-1)

ಕೆಲ ಗಜಲ್‌ಗಳಲ್ಲಿ ಮಾತ್ರ ಒಂದಷ್ಟು ವಾಚ್ಯತೆ ಬಿಟ್ಟರೆ ಉಳಿದಂತೆ ವಚನ ಸಾಹಿತ್ಯ, ಅನುಭಾವ, ತತ್ವಜ್ಞಾನ ಸೇರಿದಂತೆ ಕನ್ನಡ ಸಾಹಿತ್ಯದ ಅಪಾರ ಅಧ್ಯಯನದ ಮಗ್ಗುಲುಗಳನ್ನು ಅರಿತು ʻಭಾವಗಂಧಿʼ ಸಂಕಲನದಲ್ಲಿ ಪ್ರಭಾವತಿ ದೇಸಾಯಿಯವರು ತಮ್ಮ ಭಾವಪೂರ್ಣ ಗಂಧದ ಲೇಹ್ಯವನ್ನು ಗಜಲ್‌ ಓದುಗರಿಗೆ ಲೇಪಿಸಿ ಗಜಲ್‌ ಸುಗಂಧ ಬೀರುವ ಪ್ರಯತ್ನ ಮಾಡಿದ್ದಾರೆ.

ಮಂಡಲಗಿರಿ ಪ್ರಸನ್ನ*
9449140580
***

Don`t copy text!