ಭೂ-ನಕ್ಷತ್ರ
ಚಕ್ರವರ್ತಿ ಅಂದು ದಿಗಂಬರ
ಗೊಮ್ಮಟನಾಗಿ ವೈರಾಗ್ಯ ದಿಂದ
ಸ್ನಿಗ್ಧ ನೋಟದ ನಿಷ್ಕಲ್ಮಷ ಕಂದನಿಲ್ಲಿ
ಬೆತ್ತಲಾಗಿಹನಿಂದು ಮುಗ್ಧತೆಯಿಂದ
ಸಹಸ್ರ ಜಲ ಕುಂಭಾಭಿಷೇಕ
ಚಂದನ ಕೇಸರ ಪುಷ್ಪ ವೃಷ್ಟಿ ದಧಿ ಘೃತ
ಕ್ಷೀರಾಭಿಷೇಕ ಚಿನ್ಮಯಮೂರ್ತಿಗೆ
ಚೊಂಬು ನೀರಿನ ಮಜ್ಜನ ಈ ಕೂಸಿಗೆ..
ಶಿಲೆಯಾಗಿ ನಿಂತಿಹನವ ಅಲ್ಲಿ
ಜೀವಸೆಲೆಯ ರೂಪನಿವ ಇಲ್ಲಿ
ಮೋಹ ಮಮಕಾರ ಅಳಿದಿಹುದಲ್ಲಿ
ಮಾತೃವಾತ್ಸಲ್ಯ ಬುಗ್ಗೆ ಚಿಮ್ಮಿದಿಹುದಿಲ್ಲಿ..
ಬಯಲಲಿ ಬಯಲಾಗಿ ಬೆಳಗಿದನವ
ಬಯಲೊಳಗೊಂದಾಗಿ ನಲಿವನಿವ
ತ್ಯಾಗದ ಧ್ರುವತಾರೆ ಆ ಗೊಮ್ಮಟ
ಚೈತನ್ಯದ *ಭೂ-ನಕ್ಷತ್ರ* ಈ ಗೊಮ್ಮಟ..!
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ.
ಇಬ್ಬರು ಬಾಹುಬಲಿಯರ ನಡುವಿನ ಹೋಲಿಕೆ ಬಹು ಸೊಗಸಾಗಿದೆ ರಿ. ಆ ದಿಗಂಬರ ಎಲ್ಲ ಅನುಭವಿಸಿ ಅದರಲ್ಲಿ ಹುರುಳಿಲ್ಲ ಎಂದರಿತು ಬಂದು ನಿಂತ. ಇವನು ಭವಿಷ್ಯದ ಯಾವ ಕೌತುಕಗಳ ಕಲ್ಪನೆ ಇಲ್ಲದೆ ನಿಂತಿದ್ದಾನೆ. ಆ ಗೊಮ್ಮಟ ಧೃವತಾರೆ, ಈ ಗೊಮ್ಮಟ ಭೂ ನಕ್ಷತ್ರ ಎಂದಿರುವುದು, ಈ ಪೀಳಿಗೆಗೆ ಕೊಡಬೇಕಾದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಅಭಿನಂದನೆಗಳು ರಿ.. ಸೂಪರ್ …