ಇಂದು ಲೋಕಾರ್ಪಣೆ ಗೊಳ್ಳುವ ಪುಸ್ತಕ ಪರಿಚಯ
ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅವರ ಪ್ರಥಮ ಕವನ ಸಂಕಲನ
“ನಕ್ಕಿತು ತಲೆದಿಂಬು”
ಕಾವ್ಯ ಒಂದು ಸುಂದರ ಸೃಜನಶೀಲ ಬೌದ್ಧಿಕ ಕಲಾತ್ಮಕ ಪ್ರಪಂಚ . ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯ ಉತ್ಕೃಷ್ಟ ಅಭಿವ್ಯಕ್ತಿಯ ಪ್ರವಾಹ . ಕನ್ನಡ ಸಾಹಿತ್ಯವು ನವೋದಯ ನವ್ಯ ಬಂಡಾಯ ದಲಿತ ಮತ್ತು ಬಂಡಾಯೋತ್ತರ ಹೀಗೆ ಹತ್ತು ಮುಖ ಹಲವು ಧ್ವನಿಗಳನ್ನು ದಾಖಲಿಸಿ
ಜಗತ್ತಿನ ಸರ್ವ ಶ್ರೇಷ್ಠ ಸಾಹಿತ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಆಂಗ್ಲ ಸಾಹಿತ್ಯ ಪ್ರಚುರಕ್ಕೆ ಬರುವ ಮುನ್ನ ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಇನ್ನೂರ ಐವತ್ತಕ್ಕೂ ಅಧಿಕ ವಚನಕಾರರು ಸಾಹಿತ್ಯವನ್ನು ಪ್ರಮುಖ ಜನಪರ ವಾಹಿನಿಗೆ ತಂದರು. ಕನ್ನಡ ಜಾನಪದ ಸಾಹಿತ್ಯ ವಚನ ಸಾಹಿತ್ಯವು ಸಾಹಿತ್ಯ ಅಧ್ಯಯನಕಾರರಲ್ಲಿ ಆಳವಾದ ಜ್ಞಾನ ಆಸಕ್ತಿ ಅಭಿರುಚಿ ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ.
ಪ್ರೊ ವಿಜಯಲಕ್ಷ್ಮಿ ತಿರ್ಲಾಪುರ ( ಪುಟ್ಟಿ) ಇವರು ಬೆಳಗಾವಿಯ ಮರಾಠಾ ಮಂಡಳದ ಕಲಾ ವಾಣಿಜ್ಯ ವಿಜ್ಞಾನ ಮತ್ತು ಗೃಹ ವಿಜ್ಞಾನ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡವನ್ನು ಆಳವಾಗಿ ಓದಿಕೊಂಡು ಕವನ ಕಾವ್ಯ ಚುಟುಕು ಹರಟೆ ಭಾಷಣ ಸಂವಾದ ಹೀಗೆ ಹಲವು ರೀತಿಯ ಸಾಂಸ್ಕೃತಿಕ ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡವರು .
ಅವರ ನೀ ಬರುವೆಯಂದು ಎಂಬ ಕವನ ಸಂಕಲನದ ಕವನಗಳನ್ನು ನನ್ನ ಕೈಗೆ ಇಟ್ಟು ಇವುಗಳಿಗೆ ಮುನ್ನುಡಿ ಬರೆಯಲು ಹೇಳಿದ್ದು ನನ್ನ ಸಂತಸವೇ ಸರಿ . ಇದಕ್ಕೂ ಮುನ್ನ ಒಮ್ಮೆ ಇವುಗಳ ಮೇಲೆ ಕಣ್ಣಾಡಿಸಿ ಅಲ್ಲಲ್ಲಿ ಸಣ್ಣಪುಟ್ಟ ತಿದ್ದುಪಡಿ ಮಾಡಿದ ನಾನೇ ಇದಕ್ಕೆ ಮುನ್ನುಡಿ ಬರೆಯುವುದು ಆನಂದದ ಜೊತೆಗೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತು . ಇವರು ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ, ನ್ಯಾಕ ಸಂಯೋಜಕರು
ಹೀಗೆ ಸಾರ್ವಜನಿಕ ಬದುಕಿನಲ್ಲಿ ತಮ್ಮ ಆನುಪಮ ಸೇವೆಯೊಂದಿಗೆ ಗುರುತಿಸಿಕೊಂಡಿದ್ದಾರೆ .ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಇವರ ಒಟ್ಟು ಐವತ್ತನಾಲ್ಕು ಕವನಗಳು ಅತ್ಯಂತ ಪ್ರಭುದ್ಧ ಗುಣಾತ್ಮಕ ಆಳವಾದ ಭಾವಪೂರ್ಣ ಅಭಿವ್ಯಕ್ತಿ. ಎಲ್ಲ ಪ್ರಕಾರದ ಕವನಗಳನ್ನು ಪ್ರಯೋಗಿಸಿದ ಪ್ರೊ ವಿಜಯಲಕ್ಷ್ಮಿ ಕಾವ್ಯ ರಚನೆಯಲ್ಲಿ ತಮ್ಮ ಗಟ್ಟಿತನ ಶಿಸ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಕವನಗಳು ದೇಸಿ ಶೈಲಿಯಲ್ಲಿಯೇ ರಚನೆಗೊಂಡರೂ ಕಾವ್ಯಗಳಲ್ಲಿ ಹಾಸ್ಯ ವಿಡಂಬನೆ ಟೀಕೆ ಸ್ನೇಹ ಪ್ರೀತಿಗೆ ಸಂಬಂಧಪಟ್ಟ ಕವನಗಳು ಓದುಗರನ್ನು ಆಕರ್ಷಿಸುತ್ತವೆ .
ಜೀವವಾಣಿ ಎಂಬ ಕವನದಲ್ಲಿ ತನ್ನ ಗೆಳೆಯನ ಪ್ರೀತಿ ನೆನಪು ಬಿಚ್ಚಿಟ್ಟರೆ .ಗೆಳೆತನ ಎಂಬ ಕವನದಲ್ಲಿ ಅವನ ಅವಳ ಮಧುರ ಭಾವ ಕನಸಿನ ಗೋಪುರ ಕಾಣುವ ಜೀವನವನ್ನು ತೆರೆದಿಡುತ್ತದೆ. ಆರತಿ ಎಂಬ ಕವನದಲ್ಲಿ ಗೆಳೆತನವು ಎರಡು ಮನಸ್ಸು ಒಪ್ಪಿಕೊಂಡ ನಲುಮೆಯ ಒಲುಮೆಯ ಆರತಿ ಎಂದು ಕವಿಯಿತ್ರಿ ಹೇಳಿದ್ದಾರೆ. ಕವನದಲ್ಲಿ ತಂಟೆ ಕದನ ಜಗಳವನ್ನು ಸಂಪೂರ್ಣ ಧಿಕ್ಕರಿಸಿದ್ದಾರೆ ಪ್ರೊ ವಿಜಯಲಕ್ಷ್ಮಿ . ಪ್ರೀತಿಯನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಕ್ಷಣಕ್ಷಣಕ್ಕೂ ತನ್ನ ನಲ್ಲನೊಂದಿಗೆ ಕಳೆಯುವ ಸುಮಧುರವಾದ ಜೀವನದ ಕನಸು ಕಾಣುವ *ಬದುಕುವೆ* ಎನ್ನುವ ಕವಯಿತ್ರಿಯ ಕಾವ್ಯ ರಚನೆ ಮತ್ತು ಸಾಹಿತ್ಯ ಪ್ರಜ್ಞೆ ಅಮೋಘವಾದದ್ದು.
ಸ್ತ್ರೀ ಶೋಷಣೆ ವಿರುದ್ಧ ಗುಡುಗುವ *ನಮ್ಮ ಜನ* ಎಂಬ ಕವನ ಅರ್ಥಪೂರ್ಣವಾಗಿದೆ. ಸಾಮಾಜಿಕ ಸ್ಥಾನಮಾನ ದೊರಕದೆ ಮಾನಸಿಕ ಹಿಂಸೆ ಅನುಭವಿಸುವ ಹೆಣ್ಣಿಗೆ ಧೈರ್ಯ ಮತ್ತು ಸ್ಥೈರ್ಯ ತುಂಬಾ ಗಟ್ಟಿಯಾದ ಕವನವು. ಗೆಳೆಯನ ಮನದ ಮೂಲೆಯಲ್ಲಿ ಒಂದು ಪುಟ್ಟ ಗುಡಿಸಿಲಿನಲ್ಲಿನೆಮ್ಮದಿಯ ಬದುಕನ್ನು ಬದುಕುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕವಿಯಿತ್ರಿ ತಮ್ಮ *ಗುಟ್ಟು* ಎಂಬ ಕವನದ ಮೂಲಕ ತಮ್ಮ ಪ್ರೀತಿಯನ್ನು ಅನಾವರಣಗೊಳಿಸಿದ್ದಾರೆ . ಗೆಳೆಯನ ಆಗಮನವನ್ನು ಭಾವ ಜೀವ ಎಂಬ ಕವನದಲ್ಲಿ ಚಕೋರ ಪಕ್ಷಿಗಳು ಚಂದ್ರನ ಆಗಮನಕ್ಕೆ ಸಂಭ್ರಮಿಸುವ ಹಾಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಸ್ನೇಹ ಪ್ರೀತಿಯ ರೀತಿಯನ್ನು ನಿರಂತರವಾಗಿ ಹುಡುಕಾಡುತ್ತಾ ಏಕಾಂಗಿತನವನ್ನು ಒಂಟಿತನವನ್ನು ದೂರಪಡಿಸುವ ಪ್ರಯತ್ನವನ್ನು ತಮ್ಮ *ಪ್ರೀತಿ* ಎಂಬ ಕವನದಲ್ಲಿ ಕಾಣಬಹುದು. ಪ್ರೊ ವಿಜಯಲಕ್ಷ್ಮಿಯವರ ಶೀರ್ಷಿಕೆಯ ಕವನವಾದ
*ನೀ ಬರುವೆಯೆಂದು* ಸ್ನೇಹ ಸಿಂಚರ ಸುರಿಸುವ ಘಳಿಗೆಗೆ ಚಾಮರವ ಬಿಸಿ ತುಂಬು ಕೊಡದ ಸ್ವಾಗತಕ್ಕೆ ಸಜ್ಜಾಗುತ್ತಾಳೆ ಕವಿಯಿತಿ.ಉತ್ತಮ ನಿವೇದನೆ ಸಂತಸವನ್ನು ವ್ಯಕ್ತಗೊಳಿಸುವ ಕಲಾತ್ಮಕ ಕವನ ಇದಾಗಿದೆ. ನಿನ್ನ ಸಾಂಗತ್ಯ ಎಂಬ ಕವನವು —
ಕಲ್ಲಿನಲ್ಲಿ ಮುಳ್ಳಿನಲ್ಲಿ
ನಡೆವ ಕಾಡ
ಕತ್ತಲೆಯಲ್ಲಿ
ಏಕೆ ಭಯ ಚಿಂತೆ ?
ನೀ ಎನ್ನ ಜೊತೆ ಇರಲು
ಚಿನ್ನ ನಾಣ್ಯ ಬೇಡೆನು
ನಿನ್ನ ಪ್ರೇಮದ ಹೊರತು.
ಚಿನ್ನ ಹೊನ್ನ ಕನಕವನ್ನು ಬಯಸದೆ ಆತ್ಮೀಯ ಸ್ನೇಹಪರ ಬದುಕನ್ನು ಆಪೇಕ್ಷಿಸುವ ಕವಿಯಿತ್ರಿಯ ನಿವೇದನೆ ಅರ್ಥಪೂರ್ಣ ಅಭಿವ್ಯಕ್ತಿಯಾಗಿದೆ. ಇದೆ ದಾಟಿಯಲ್ಲಿ ಬಯಕೆ ಭ್ರಮೆ ಕೊನೆಯವರೆಗೆ ಪ್ರೀತಿಯ ಸೊತ್ತು ಚಿತ್ತಭಾವ ಕೋಟೆ ನಿರೀಕ್ಷೆ ಪ್ರೀತಿಯೊಂದೇ ಆಸರೆ ಎಂಬ ಕವನಗಳಲ್ಲಿ ಸ್ನೇಹ ಪ್ರೀತಿ ಪ್ರೇಮ ಭಾವ ಭದ್ರತೆಯನ್ನು ಹೆಚ್ಚಿಸುವ ಅನುಸಂಧಾನ ಎಂಬ ಅಭಿಮತಕ್ಕೆ ಕವಿಯಿತ್ರಿ ಬಂದಂತಿದೆ.
ಮುಕ್ತಿಯು ಎಂಬ ಕವನವು
ಸ್ನೇಹ ಸಿಂಚರ
ಬಿರುಕು ನೆಲಕೆ
ತಂಪು ಮಳೆಯು
ಅಳಿದು ವೇದನೆ
ಹುಟ್ಟಿ ಬರಲಿ
ಪ್ರೇಮ ಗಾಥೆ
ನಮ್ಮ ಜೀವದ
ಮುಕ್ತಿಯು
ನಿಜ ಜೀವನದ ಮುಕ್ತಿಯ ಯಶೋಗಾಥೆಯನ್ನು ಹೇಳುವಂತಿದೆ.
ಬಂಡೇಳುತ್ತಿದೆ ಮನ* ಎಂಬ ಕವನವು ಪುರಾಣಿಕ ಪ್ರತಿಮೆಗಳನ್ನು ಬಳಸಿಕೊಂಡು ಇಂದಿನ ವಾಸ್ತವಿಕ ಜಗತ್ತಿನಲ್ಲಿ ಮಹಿಳೆಯ ಶೋಷಣೆಯ ವಿರುದ್ಧ ಎತ್ತಿದ ಕ್ರಾಂತಿಯ ಕಹಳೆಯಾಗಿದೆ ಕವನ .
ಸೀತೆ ತಾರಾ
ಮಂಡೋದರಿ
ಸಾವಿತ್ರಿ ಅಹಿಲ್ಯೇ
ಗಾಂದಾರಿ ಊರ್ಮಿಳೆ
ಏಕಿ ವನವಾಸ
ಅಗ್ನಿಪರೀಕ್ಷೆ ?
ಏಕೆ ಹೆಣ್ಣಿಗೆ
ಕ್ರೂರ ಶಿಕ್ಷೆ ?
ದ್ರೌಪದಿಯ ವಸ್ತ್ರ
ಕಳಚಿತು
ಕುಂತಿಯ
ವ್ಯರ್ಥ ಪ್ರಲಾಪ ಇಂತಹ ಮನೋಜ್ಞ ರಚನೆ ಅದ್ಭುತವಾಗಿವೆ ..
*ಅಪ್ಪ ಮುತ್ತಿನ ಚಿಪ್ಪ* ಮಗಳಿಗೆ ಅಪ್ಪ ಒಬ್ಬ ಉತ್ತಮ ಪ್ರಥಮ ಸ್ನೇಹಿತ ಬಂಧು. ಆತನಿಲ್ಲದ ಬಾಳನ್ನು ಕವಿಯಿತ್ರಿ ತಮ್ಮ ಕವನದಲ್ಲಿ ಚೆನ್ನಾಗಿ ಹೆಣೆದಿದ್ದಾರೆ.
ಅಪ್ಪನಿಲ್ಲದ ಬಾಳು
ಒಲುಮೆ ಇರದ ಹೋಳು
ಏನಿದ್ದರೇನು ?
ಶಬ್ದದ ಓಳು .
ಅವನಿರದ ಪ್ರತಿಕ್ಷಣವೂ .
ತೊಳಲಾಟ ಗೋಳು
ಅಪ್ಪನ ನೆನಪಿನಲಿ ಕವಿಯಿತ್ರಿ ಮನವು ಬಳಲಿದೆ.
*ಅಲ್ಲ ನಾನು* ಎಂಬ ಕವನ ಪೌರಾಣಿಕ ಮಹಿಳೆಯರ ಪ್ರತಿಮೆಗಳೊಂದಿಗೆ ಅಸಹಾಯಕತೆ ದಾರುಣ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಬರೆದಿದ್ದಾರೆ ಕವಿಯಿತ್ರಿ .
ಅಲ್ಲ ನಾನು
ಅಬಲೆ ಅಸಹಾಯಕಿ
ಅಲ್ಲ ನಾನು ಅಹಿಲ್ಯೆ.
ರಾಮನ ಆಗಮನಕೆ
ಕಾಯುವ ಕಲ್ಲು
ಅಲ್ಲ ನಾನು ಸೀತೆ
ಗಂಡನ ಬೆನ್ನು ಹತ್ತಿ
ಅಡವಿಯ ವನವಾಸ
ಅನುಭವಿಸಿದವಳು
ಯಮನ ಜೊತೆ
ಕಾದಾಡಿ ಗಂಡನ
ಬದುಕಿಸಿದ
ಸಾವಿತ್ರಿ .ಪುರಾಣಿಕ ಮಹಿಳೆಯರ ನೋವನ್ನು ಬಿಚ್ಚಿಡುವ ಸುಂದರ ಕವನವಾಗಿದೆ.
*ಬೇಕಿಲ್ಲ ಬೇಕಿಲ್ಲ* ಎಂಬ ಕವನವು ಜನರ ಉದಾಸೀನತೆ ಕನಿಕರ ಅನುಕಂಪ ಮುಂತಾದ ಭಾವಗಳನ್ನು ಬಿಚ್ಚಿಡುವ ಧೈರ್ಯಯುತವಾದ ಕವನವಾಗಿದೆ.
ಬೇಕಿಲ್ಲ ಬೇಕಿಲ್ಲ
ಬಂಧುಗಳೇ
ನಿಮ್ಮ ಸೌಜನ್ಯದ
ಪ್ರೀತಿ
ಬೇಡ ಬೇಡ
ನಿಮ್ಮ ಹಂಗಿನ
ಕೀರ್ತಿ
ಅಕ್ಕ ಎಂಬ ಕವನವು ಅಕ್ಕ ಮಹಾದೇವಿಯ ಕುರಿತದ್ದಾಗಿದ್ದು ಅಕ್ಕ ರಾಜ ವೈಭೋಗವನ್ನು ಬಿಟ್ಟು ಕಲ್ಯಾಣಕ್ಕೆ ಹೋದ ಚಿತ್ರಣವನ್ನು ಚೆನ್ನಾಗಿ ನಿರೂಪಿಸಿದ್ದಾರೆ ಕವಿಯಿತ್ರಿ.
ವೆಚ್ಚ ಎಂಬ ಕವನವು ಭಯ ಕೋಪ ತಾಪ ತೊಡಕು ಹೊರತುಪಡಿಸಿದ ನೆರೆ ಮನೆಯ ದುಃಖಕ್ಕೆ ಮೆಚ್ಚನು ಎಂಬ ಅಣ್ಣ ಬಸವಣ್ಣನವರ ವಚನದಂತೆ ಕವನ ಓದಲು ಇಲ್ಲ ಯಾವ ವೆಚ್ಚ ಎಂದು ವ್ಯಂಗ್ಯವಾಡಿದ್ದಾರೆ ಪ್ರೊ ವಿಜಯಲಕ್ಷ್ಮಿ .ಎಲ್ಲಿ ಹುಡುಕಲಿ ? ಎಂಬ ಕವನದಲ್ಲಿ ಜಗದ ಶ್ರೇಷ್ಠ ದಾರ್ಶನಿಕ ಬಸವಣ್ಣನವರನ್ನು ಎಲ್ಲಿ ಹುಡುಕೋದು. ಈ ಹುಡುಕಾಟ ಶರಣರ ಆಶಯಗಳನ್ನು ಸಂಪೂರ್ಣ ಕಡೆಗಣಿಸಿ ಆಷಾಡಭೂತಿಗಳ ಕೃತ್ಯವನ್ನು ನಯಾ ನಾಜೂಕಿನಿಂದ ಟೀಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. .ಪೋರಿ ನಾರಿಯಾಗುವ ಮುನ್ನ ಎಂಬ ಕವನವು ಪುಟ್ಟ ಬಾಲಕಿಯು ಕೈಗೆ ಕಂಕಣವನ್ನು ಕಟ್ಟಿಕೊಂಡು ಕೊರಳಿಗೆ ತಾಳಿಯನ್ನು ಕಟ್ಟಿಕೊಳ್ಳಲು ಕೊರಳೊಡ್ಡುವ ಧಾರುಣ ಸ್ಥಿತಿಯನ್ನು ತುಂಬಾ ಸೊಗಸಾಗಿ ನಿರೂಪಿಸಿದ್ದಾರೆ.
ತೆಲೆದಿಂಬು ಎಂಬ ಕವನವು ಭಾವನೆಗಳ ಅಭಿವ್ಯಕ್ತಿಯ ತಳಕಾಟಕ್ಕೆ ಭೌತಿಕ ಆಸರೆಯನ್ನು ಪಡೆದು ಅವುಗಳ ಜೊತೆ ತಮ್ಮ ಭಾವನೆಗಳನ್ನು ಅನಾವರಣಗೊಳಿಸುವ ಸುಂದರ ಪ್ರಯೋಗವನ್ನು ಕವಿಯಿತ್ರಿ ಮಾಡಿದ್ದಾರೆ. ನೋಡಲಾಗದ ಸೂಕ್ಶ್ಮ ರೇಷ್ಮೆಯ
ಬಂಧನ .
ನಿನ್ನ ನೆನಹುವಿನಲಿ
ನಾನು ಅತ್ತೆ
ನಕ್ಕಿತು ತೆಲೆದಿಂಬು
ಪ್ರೊ ವಿಜಯಲಕ್ಷ್ಮಿ ಪುಟ್ಟಿ ಬೆಳಗಾವಿ ಇವರ ಈ ಕವನವು ಯಾವ ಓದುಗರನ್ನಾದರೂ ಭಾವ ಪರವಶ ಮಾಡಬಲ್ಲದು.
ಮಣ್ಣಾದಳು ಎಂಬ ಕವನವು ತನ್ನ ಗೆಳತೀ ಸುತ್ತಲಿನ ಪ್ರಪಂಚಕ್ಕೆ ಆಕರ್ಷಗೊಂಡು ತಳಕು ಬಳುಕಿನ ಒನಪು ವಯ್ಯಾರ ಶಿಂಗಾರ ಜೊತೆಗೆ ಸಮಾಜದ ಕಾಮುಕರ ಜೊತೆಗೆ ಲಲ್ಲೆ ಹೊಡೆದು ಕೊನೆಗೆ ರೋಗಪೀಡಿತಳಾಗಿ ಮಣ್ಣಾದಳು ಎಂಬ ನೋವಿನ ಕಾವ್ಯಚಿತ್ರಣವನ್ನು ರಚಿಸಿದ್ದಾರೆ ವಿಜಯಲಕ್ಷ್ಮಿ . ಅತ್ಯಂತ ವಿಶಿಷ್ಟವಾದ ಗಾಂಧಾರಿಯ ನ್ಯಾಯ ? ಎಂಬ ಕವನವು ಕುರುಡು ಗಂಡ ಧೃತರಾಷ್ಟ್ರಗೆ ಹೇಗೆ ನ್ಯಾಯ ಒದಗಿಸುವಳು ಎಂದು ಪ್ರಶ್ನೆ ಮಾಡಿದ್ದಾರೆ ಕವಿಯಿತ್ರಿ .
*ವೀರ ವನಿತೆ* ಎಂಬ ಕವನವು ಪುರುಷ ಪ್ರಧಾನವಾದ ಸಮಾಜದಲ್ಲಿನ ಮಹಿಳೆಗೆ ನೀಡುವ ಹಿಂಸೆ ಕಷ್ಟಗಳ ವಿರುದ್ಧ ಧ್ವನಿ ಎತ್ತಿದ್ದಾರೆ ಪ್ರೊ ವಿಜಯಲಕ್ಷ್ಮಿ
ರಕ್ಕಸರೆ ಮೃಗಗಳೇ
ಕಾಮ ಪಿಸಾಚಿಗಳೆ
ರಸ್ತೆ ಬದಿಯ
ಕಾಮಣ್ಣರೆ
ಒಂಟಿ ಹೆಣ್ಣಿಗೆ
ಪೀಡಿಸಿ ಕಾಡಿಸಿ
ಆಸಿಡ್ ಹಾಕುವ
ಭೂಪರೆ . ಎಚ್ಚರ . ಇಂತಹ ಕಟುಕರನ್ನು ಅಟ್ಟಿಸಿ ಮೆಟ್ಟುವ ಕರೆಯನ್ನು ಸ್ತ್ರೀ ಕುಲಕ್ಕೆ ಕೊಟ್ಟಂತಿದೆ ಕವಿಯಿತ್ರಿ .
ಕವಯಿತ್ರಿ ಆಗಿಬಿಟ್ಟೆ ಎಂಬ ಕವನವು ಹಾಸ್ಯ ಮಿಶ್ರೀತ ವ್ಯಂಗ್ಯ ವಿಡಂಬನೆಯೊಂದಿಗೆ ಮಧ್ಯಮ ವರ್ಗದ ಮಹಿಳೆಯ ಅಸಹಾಯಕತೆಯನ್ನು ಅನಾವರಣಗೊಳಿಸಿದಂತಿದೆ.
ಒಟ್ಟಾರೆ ಪ್ರೊ ವಿಜಯಲಕ್ಷ್ಮಿಯವರ ಕವನಗಳು ಕನ್ನಡ ಸಾರಸ್ವತ ಲೋಕದಲ್ಲಿ ಬಹು ಕಾಲ ಜನರ ಮನಸ್ಸಿನಲ್ಲಿ ಉಳಿಯಲಿ. ಬೆಳಗಾವಿಯಂತಹ ಗಡಿನಾಡು ಕರ್ನಾಟಕದಲ್ಲಿ ಇವರ ಕವನಗಳು ಇನ್ನು ಹೆಚ್ಚು ಪ್ರಕಟಗೊಳ್ಳಲಿ. ಇವರ ಪ್ರಥಮ ಕವನ ಸಂಕಲನವು ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬೌದ್ಧಿಕ ಸಂಚಲನದ ಜೊತೆಗೆ ಒಂದು ಸೃಜನಾತ್ಮಕ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸಿ ನನ್ನ ಮೇಲೆ ಗೌರವವಿಟ್ಟು ನನಗೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟ ಅವರಿಗೆ ಅವರ ಪತಿ ಶ್ರೀ ಮಹಾಂತೇಶ ಪುಟ್ಟಿ ಮಕ್ಕಳಾದ ಆಕಾಶ ಮತ್ತು ಅಭಿಲಾಷ ಇವರೆಲ್ಲರ ಜೊತೆಗೆ ಎಲ್ಲ ಓದುಗರಿಗೆ ನನ್ನ ಹೃದಯಪೂರ್ವಕ ವಂದನೆಗಳು
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ -9552002338