ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ

ಆದಿಯಾಧರವಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶೂನ್ಯವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ

ಸೃಷ್ಟಿ ರಚನೆಗೆ ಆದಿಸ್ಥಲವೆನಿಸುವ ಓಂಪ್ರಣಮ ಸ್ವರೂಪಿನ ಮಹಾಲಿಂಗ ಮತ್ತು ಆ ಮಹಾಲಿಂಗವೆಂಬ ಓಂಕಾರ ಪ್ರಣವಕ್ಕೆ ಮೂಲಧಾರವಾದ ಅಕಾರ ಉಕಾರ ಮಕಾರವೆಂಬ ನಾದ ಬಿಂದು ಕಳೆಗಳಿಲ್ಲಂದು, ಅಹಂ ಮಮ (ನಾನು ನನ್ನದು) ಎಂಬ ಹಮ್ಮು ಬಿಮ್ಮುಗಳಿಲ್ಲದಂದು, ಪರಾತ್ಪರ ಶಿವ ತತ್ವವು ಸುರಾಳ ಮತ್ತು‌ ನಿರಾಳಲಿಂಗವೆಂದಿನಸದಂದು, ಮತ್ತು ಶೂನ್ಯ ನಿಶೂನ್ಯ ಲಿಂಗವೆನಿಸದಂದು, ಚರ ಮತ್ತು ಅಚರವಾದ ಜೀವ ಜಗತ್ತು ರೂಪಗೊಳ್ಳದಂದು, ಹೇ ಪರಾತ್ಪರ ನಿಜ ಶಿವನೇ ಅಂದು ನೀನೊಬ್ಬನೇ ನಿನ್ನ‌ ಸಹಜ‌ ಸ್ಥಲದಲ್ಲಿ ಇಲ್ಲದಂತಿದ್ದೆ ಎಂಬುದೀ ವಚನ ತತ್ವಾನುಭವವು.

-ಶ್ರೀ ಸಿದ್ಧರಾಮೇಶ್ವರ ‌ಶರಣರು ಬೆಲ್ದಾಳ

Don`t copy text!