ಮಹಾಂತರು

ಮಹಾಂತರು

ಬರೀ ಹೋಳಿಗೆ ಬಯಸದೇ
ಜೋಳಿಗೆ ಹಿಡಿದರು
ಬಾಳಿನ ಗೋಳು ಹರಿಯಲೆಂದು
ಜಗಕೆ ಅಂಟಿದ ಕೊಳೆಯ
ತೊಳೆಯುತ ನಡೆದರು
ಜೀವವು ಸದಾ ನಕ್ಕು ನಲಿಯಲೆಂದು …

ಅಯ್ಯ-ಹೊಲೆಯ ಜಾತಿಯ
ಜರೆಯುತ ಇದು ಎಲ್ಲಾ
ಜೊಳ್ಳು ಜೊಳ್ಳು ಎಂದು
ಹೆಣ್ಣು-ಗಂಡು ಅನ್ಯವಲ್ಲ
ಎಲ್ಲವೂ ಒಂದೇ ಒಂದೇ ಎಂದು…

ಕಲ್ಲು-ಮರವು ದೈವವಾದರೆ
ದುಡಿವವನಲ್ಲೇಕೆ ಭೇದ?
ಮೂರ್ತಿಯ ಕೆತ್ತಲು
ಒಪ್ಪುವ ನಿಯಮ
ಅವನಿಗೆ ಪೂಜೆಗೇಕೆ ಇಲ್ಲ….?

ಗುಡಿಯ ಕಟ್ಟಲು ಬೇಕು
ಮೂರ್ತಿಯ ಕೆತ್ತಲು ಬೇಕು
ಒಳಗಡೆ ಹೋಗಲು ಏಕಿಲ್ಲ
ಆ ದೇವನ ಕಾಣಲು ಏಕಿಲ್ಲ…..?

ಅಪ್ಪ ಬಸವನ ಹಿಂದೆಯು
ಈಗ ನಮ್ಮ ಮುಂದೆಯು
ಇದುವೇ ಇದೆಯಲ್ಲ…..
ಅಪ್ಪನ ಅಪ್ಪಣೆ ಅಂದಿನಂತೆ
ಇಂದೂ ನಾವು ಕೇಳಬೇಕಲ್ಲ
ಇಲ್ಲಿ ಭೇದವು ಹೋಗಲೇಬೇಕಲ್ಲ…..

ಎಲ್ಲರೂ ಬನ್ನಿರಿ ತಪ್ಪದೇ ಕೇಳಿರಿ
ಬಸವ ತಂದೆಯ ವಚನವನು
ಆತನ ಲಿಂಗವ ಧರಿಸಿರಿ
ಕೇಡೆಲ್ಲವನಳಿಯಿರಿ
ಎಲ್ಲರೂ ದೇವರೂಪರೆನಿಸಿರಿ….
ಬಾಳನು ಕೆಡಿಸುವ ಹಾಳು
ವ್ಯಸನಗಳನು ನೀಡಿ
ಕಲ್ಯಾಣದ ಹಿರಿಮೆಗೆ
ಸಿರಿಯಾಗಿರಿ….

ಬನ್ನಿರಿ ಬನ್ನಿರಿ ಮಠಕೆ ಬನ್ನಿರಿ
ಮನದ ಮೈಲಿಗೆಯಳಿದು ಹಸನಾಗಿರಿ
ಬಂದೆನು ಬಂದೆನು ನಿಮ್ಮಯ
ಮನೆಗೆ ಜೋಳಿಗೆ ತಂದೆನು
ದುರ್ಗುಣಗಳ ಹಾಕಿ ತುಂಬಿರಿ
ಜಗಕೆಲ್ಲಾ ನಗುವನು ಹಂಚಿರಿ…..

ಆರು ವೈರಿಗಳ ಹರಿದು ಏರಿದರು
ಭುವಿಗೆ ಮಹಂತ ಮಹಾಂತ ಎಂದು
ಬಸವ-ಅಲ್ಲಮರ ಈಗಲೂ ಕಾಣಿರಿ
ವಚನದ ರಸ ಉಂಡು….
ಎಂದು ಸಾರುತ ನಡದೇ ನಡೆದರು
ಈ ನೆಲವು ಕಲ್ಯಾಣವಾಗಲೆಂದು…..

-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!