ಗಜಲ್
ಮನದ ಮರುಭೂಮಿಯಲಿ ಮತ್ತೆ ಮಳೆಯಾಗಿದೆ ಸಖಾ
ತನುವು ಸಿಂಚನದಿ ನಸುನಾಚಿ ನೀರಾಗಿದೆ ಸಖಾ
ಭಾವ ಬಿಂದಿಗೆಯಲ್ಲಿ ಪ್ರೇಮ ಧಾರೆಯದು ಸುರಿಯುತಿದೆ ನೋಡುವೆಯಾ
ಎದೆಯ ಬಟ್ಟಲೊಳು ಇಳಿದು ಮಧುವಾಗಿದೆ ಸಖಾ
ರೋಮ ರೋಮಗಳೆಲ್ಲ ಪುಳಕಗೊಂಡಿವೆ ನಲಿನಲಿದು
ತನುವ ಕಣಕಣವೂ ಹರುಷದ ಹೊನಲಾಗಿದೆ ಸಖಾ
ಮುಚ್ಚಿಕೊಂಡಿವೆ ಕಣ್ಣ ರೆಪ್ಪೆಗಳು ಉನ್ಮಾದದ ಅಲೆಯಲಿ
ಕಂಪಿಸುತ ಅಧರಗಳು ಬಿರಿದು ರಂಗಾಗಿದೆ ಸಖಾ
ಒಲವಕೋಡಿ ಹರಿದು ಹೋಗದ ಹಾಗೆ ಬಂದೊಮ್ಮೆ ಮನ ತಣಿಸುವೆಯಾ
ಬಿಸಿ ಅಪ್ಪುಗೆಯ ಆಲಿಂಗನ’ ಬೇಗಂ ‘ಗೆ ಬೇಕಾಗಿದೆ ಸಖಾ
–ಹಮೀದಾಬೇಗಂ. ದೇಸಾಯಿ, ಸಂಕೇಶ್ವರ.